Tuesday 12 November 2019

ಸಾರಿಪುತ್ತರ ಮಹಾ ಪರಿನಿಬ್ಬಾಣಕ್ಕೆ ಪಯಣ THE LAST DAY OF GREAT SARIPUTTA

9. ಸಾರಿಪುತ್ತರ ಮಹಾ ಪರಿನಿಬ್ಬಾಣಕ್ಕೆ ಪಯಣ


9.1 ಸಾರಿಪುತ್ತರ ಸಿಂಹನಾದ

ಒಮ್ಮೆ ಭಗವಾನರು ನಳಂದದ ಪಾವರಿಕನ ಅಮ್ರವನದಲ್ಲಿದ್ದಾಗ ಸಾರಿಪುತ್ತರು ಭಗವಾನರಿಗೆ ಗೌರವೂರ್ವಕವಾಗಿ ವಂದಿಸಿ ಒಂದೆಡೆ ಕುಳಿತು ಹೀಗೆ ನುಡಿದರು: ಭಗವಾನ್, ತಮ್ಮಂತಹ ಪರಮಶ್ರೇಷ್ಠರಾಗಲಿ, ತಮ್ಮಂತಹ ಜ್ಞಾನಿಯಾಗಲಿ ಹಿಂದೆ ಇರಲಿಲ್ಲ, ಮುಂದೆ ಬರಲಾರರು. ಈಗಲೂ ಸಹಾ ತಮ್ಮ ಹೊರತು ಮತ್ಯಾರೂ ಇಲ್ಲ. ಭಗವಾನ್, ಈ ಬಗೆಯ ಶ್ರದ್ಧೆಯನ್ನು ನಾನು ಹೊಂದಿದ್ದೇನೆ.
ಸಾರಿಪುತ್ತ, ಈ ಬಗೆಯ ಸಿಂಹನಾದ ಮಾಡುವ ಮುನ್ನ ಹಿಂದಿನ ಸಮ್ಮಾಸಂಬುದ್ಧರ ಶೀಲ ಹೀಗಿತ್ತು, ಅವರ ಸಮಾಧಿ ಹೀಗಿತ್ತು, ಅವರ ಪ್ರಜ್ಞಾ ಹೀಗಿತ್ತು ಅಥವಾ ಧ್ಯಾನಗಳ ನೆಲೆಸುವಿಕೆ ಇಂತಹ ಅವಸ್ಥೆಯಲ್ಲಿತ್ತು ಮತ್ತು ಅವರ ವಿಮುಕ್ತಿಯು ಈ ಬಗೆಯಲ್ಲಿತ್ತು ಎಂದು ತಿಳಿದಿದೆಯೇ?
ಇಲ್ಲ ಭಗವಾನ್.
ಹೋಗಲಿ ಸಾರಿಪುತ್ತ, ಮುಂದೆ ಬರುವಂತಹ ಸಮ್ಮಾಸಂಬುದ್ಧರ ಶೀಲ ಹೀಗಿರುವುದು, ಅವರ ಸಮಾಧಿಯು ಹೀಗಿರುವುದು, ಇಂತಹ ಸಮಾಧಿಯ ಸ್ಥಿತಿಗಳಲ್ಲಿ ಇರುವರು ಎಂಬುದು ತಿಳಿದಿದೆಯೇ, ಅವರ ಪ್ರಜ್ಞಾ ಹೀಗಿರುವುದು ಮತ್ತು ಅವರ ವಿಮುಕ್ತಿಯು ಈ ಬಗೆಯಲ್ಲಿರುವುದು ಎಂಬುದು ತಿಳಿದಿದೆಯೇ?
ಇಲ್ಲ ಭಗವಾನ್.
ಹೋಗಲಿ ಸಾರಿಪುತ್ತ, ಈಗಿರುನ ನನ್ನ ಬಗ್ಗೆಯಾಗಲಿ, ನನ್ನ ಶೀಲ ಹೀಗಿದೆ, ನನ್ನ ಸಮಾಧಿ ಹೀಗಿದೆ, ನನ್ನ ಪ್ರಜ್ಞಾ ಹೀಗಿದೆ, ನನ್ನ ವಿಮುಕ್ತಿ ಹೀಗಿರುವುದು ಎಂದು ನೇರವಾದ ಅಭಿಜ್ಞಾ ಜ್ಞಾನದಿಂದ ಅರಿತಿರುವೆಯಾ?
ಇಲ್ಲ ಭಗವಾನ್.
ಹಾಗಾದರೆ ಸಾರಿಪುತ್ತ, ಹಿಂದಿನ, ಈಗಿನ ಅಥವಾ ಮುಂದಿನ ಬುದ್ಧರ ಬಗ್ಗೆ ಅಭಿಜ್ಞಾ ಜ್ಞಾನ ಇಲ್ಲದೆ ಈ ಬಗೆಯ ಸಿಂಹನಾದ ಮಾಡುತ್ತಿರುವೆ?
ಭಗವಾನ್, ನನಗೆ ಅಭಿಜ್ಞಾ ಜ್ಞಾನವಿಲ್ಲದೆ ಇರಬಹುದು. ಆದರೂ ನೇರವಾದ ವೈಯಕ್ತಿಕಾನುಭವದಿಂದ ಹಾಗು ತಮ್ಮ ಧಮ್ಮದ ಅರಿವಿರುವುದರಿಂದಾಗಿ ನಾನು ಈ ಬಗೆಯ ಸಿಂಹನಾದವನ್ನು ಮಾಡುತ್ತಿದ್ದೇನೆ. ಸರಿ ಭಗವಾನ್, ಹಿಂದಿನ, ಮುಂದಿನ ಹಾಗು ಇಂದಿನ ಬುದ್ಧ ಭಗವಾನರೆಲ್ಲರೂ ಸಹಾ ಪಂಚನೀವರಣಗಳನ್ನು ದಾಟಿ, ನಾಲ್ಕು ಸತಿಪಟ್ಠಾಣದಲ್ಲಿ ನೆಲೆಸಿ, ಸಪ್ತಬೋಧಿ ಅಂಗಗಳಲ್ಲಿ ವೃದ್ಧಿಸಿ, ಸಮ್ಮಾಸಂಬುದ್ಧರಾಗಿದ್ದಾರೆ ಎಂಬುದನ್ನು ಬಲ್ಲೆನು ಎಂದರು.

9.2 ಪರಿನಿಬ್ಬಾಣಕ್ಕೆ ಪಯಣ

ನಾವೀಗ ಭಗವಾನರ ಪರಿನಿಬ್ಬಾಣದ ವರ್ಷಕ್ಕೆ ಬಂದಿರುವೆವು. ಆ ಸಮಯದಲ್ಲಿ ಭಗವಾನರು ವೈಶಾಲಿಯ ಬೆಲುವಾಗಾಮದಲ್ಲಿ ವರ್ಷವಾಸ ಕಳೆದರು. ನಂತರ ಭಗವಾನರು ಅಲ್ಲಿಂದ ಶ್ರಾವಸ್ತಿಗೆ ಹಿಂದಿರುಗಿದರು. ಆಗ ಅಲ್ಲಿ ಸಾರಿಪುತ್ತರು ಭಗವಾನರಿಗೆ ವಂದಿಸಿ ಅಲ್ಲಿಂದ ಹೊರಟು, ಅರಹಂತಫಲ ಸಮಾಪತ್ತಿಯಲ್ಲಿ ವಿಹರಿಸಿದರು. ನಿಗದಿತ ಕಾಲದ ನಂತರ ಧ್ಯಾನದಿಂದ ಮೇಲೆದ್ದ ಸಾರಿಪುತ್ತರಿಗೆ ಪ್ರಶ್ನೆಯೊಂದು ಉಂಟಾಯಿತು: ಪರಿನಿಬ್ಬಾಣವನ್ನು ಮೊದಲು ಭಗವಾನರು ಪಡೆಯುವರೋ ಅಥವಾ ಅಗ್ರಶ್ರಾವಕರು ಪಡೆಯುವರೋ? ಆಗ ಅವರಿಗೆ ಧ್ಯಾನದಲ್ಲಿ ಮೊದಲು ಅಗ್ರಶ್ರಾವಕರೇ ಪರಿನಿಬ್ಬಾಣವನ್ನು ಪಡೆಯುವರೆಂಬುದು ತಿಳಿಯಿತು. ನಂತರ ಅವರು ತಮ್ಮ ಶೇಷ ಆಯುವನ್ನು ವೀಕ್ಷಿಸಿದಾಗ ಕೇವಲ ವಾರ ಮಾತ್ರ ಉಳಿದಿರುವುದು ಗೋಚರವಾಯಿತು. ಆಗ ಅವರು ತಾವು ಎಲ್ಲಿ ಪರಿನಿಬ್ಬಾಣವನ್ನು ಪಡೆದರೆ ಸಮಂಜಸವೆಂದು ತಕರ್ಿಸತೊಡಗಿದರು. ರಾಹುಲರು ತಾವತಿಂಸ ಲೋಕದಲ್ಲಿ ನಿಬ್ಬಾಣ ಪಡೆದಿದ್ದಾರೆ, ಅಜ್ಞಕೊಂಡಞ್ಞರು ಹಿಮಾಲಯದ ಛದ್ದಂತ ಸರೋವರದಲ್ಲಿ ಪಡೆದಿದ್ದಾರೆ, ನಾನೆಲ್ಲಿ ಪಡೆಯಲಿ? ಆಗ ಅವರಿಗೆ ತಮ್ಮ ತಾಯಿಯ ನೆನಪು ಉಂಟಾಯಿತು. ಓಹ್ ನನ್ನ ತಾಯಿಯು ಏಳು ಜನ ಅರಹಂತರಿಗೆ ಮಾತೆಯಾಗಿಯೂ ಸಹಾ ತ್ರಿರತ್ನದಲ್ಲಿ ಇನ್ನೂ ಶ್ರದ್ಧೆ ಉಂಟಾಗಲಿಲ್ಲವಲ್ಲ! ಆಕೆಯ ಶ್ರದ್ಧೆಗೆ ಸಹಾಯಕ ಅಂಶಗಳು ಇವೆಯಾ? ಅಥವಾ ಇಲ್ಲವೇ? ಹೀಗೆ ಯೋಚಿಸಿ ಆಕೆಯಲ್ಲಿ ಸೋತಪತ್ತಿ ಪ್ರಾಪ್ತಿಗೆ ಸಹಾಯಕವಾಗುವ ಪಂಚೇಂದ್ರಿಯಗಳು, ಪಂಚಬಲಗಳು ಇತ್ಯಾದಿ ಸಹಾಯಕ ಸ್ಥಿತಿಗಳು ಇವೆಯೇ ಎಂದು ಪರೀಕ್ಷಿಸಿದಾಗ ಇವೆಯೆಂದು ತಿಳಿಯಿತು. ನಂತರ ಯಾರ ನಿದರ್ೆಶನದಂತೆ, ಬೋದನೆಯಂತೆ ಆಕೆಯು ಸತ್ಯವನ್ನು ಗ್ರಹಿಸಬಹುದು ಎಂದು ವಿಶ್ಲೇಷಿಸಿದಾಗ ಅದಕ್ಕೆ ತಕ್ಕವರು ತಾವು ಮಾತ್ರವೇ ಎಂದು ಸಾರಿಪುತ್ತರಿಗೆ ತಿಳಿಯಿತು. ನಂತರ ಅವರು ಹೀಗೆ ತಮ್ಮ ಯೋಚನೆ ಮುಂದುವರೆಸಿದರು: ನಾನೇನಾದರೂ ಈಗ ತಟಸ್ಥಭಾವದಲ್ಲಿದ್ದುಬಿಟ್ಟರೇ ಜನರು ಹೀಗೆ ನುಡಿಯಬಲ್ಲರು: ಸಾರಿಪುತ್ತರು ಬಹಳಷ್ಟು ಜನರಿಗೆ ಸಹಾಯ ಮಾಡಿರುವರು. ಒಂದೇ ದಿನದಲ್ಲಿ ಅವರು ದೇವತೆಗಳಿಗೆ ಸಮಚಿತ್ತ ಸುತ್ತವನ್ನು ಬೋಧಿಸಿ ಅಸಂಖ್ಯಾತ ದೇವತೆಗಳಿಗೆ ಅರ್ಹತ್ವವನ್ನು ಗಳಿಸಲು ಸಹಾಯ ಮಾಡಿದವರು, ಉಳಿದ ದೇವತೆಗಳನ್ನು ಅನಾಗಾಮಿ, ಸಕದಾಗಾಮಿ ಹಾಗು ಸೋತಪತ್ತಿ ಫಲಗಳಲ್ಲಿ ಪ್ರತಿಷ್ಠಾಪಿಸುವಂತೆ ಮಾಡಿದವರು ಆಗಿದ್ದಾರೆ. ಅಷ್ಟೇ ಅಲ್ಲ, ಸಾವಿರಾರು ಕುಟುಂಬಗಳು ದೇವತೆಗಳಲ್ಲಿ ಉಗಮಿಸಿ ಅಲ್ಲಿಯೂ ತ್ರಿರತ್ನದಲ್ಲಿ ಅಪಾರ ಶ್ರದ್ಧೆಯಿಟ್ಟು ಪಾಲನೆಯಲ್ಲಿ ಸ್ಥಿರರಾಗಿದ್ದಾರೆ. ಹೀಗೆಲ್ಲಾ ಮಾಡಿದ್ದರೂ ಸಹಾ ತಮ್ಮ ತಾಯಿಯ ಮಿಥ್ಯಾದೃಷ್ಟಿಗಳನ್ನು ತೆಗೆದುಹಾಕಲು ಅವರಿಂದ ಸಾಧ್ಯವಾಗಲಿಲ್ಲ. ಹೀಗೆ ಜನರು ನುಡಿಯುವ ಕಾರಣದಿಂದಾಗಿ, ನನ್ನ ಈಗಿನ ಆದ್ಯ ಕರ್ತವ್ಯ ನನ್ನ ತಾಯಿಯ ಮಿಥ್ಯಾದೃಷ್ಟಿಗಳನ್ನು ತೆಗೆಯುವುದು. ಆಕೆಯನ್ನು ಸೋತಪತ್ತಿ ಫಲದಲ್ಲಿ ನಾನು ಹುಟ್ಟಿದ ಕೋಣೆಯಲ್ಲೇ ಪರಿನಿಬ್ಬಾಣ ಪಡೆಯುವೆನು ಎಂದು ನಿರ್ಧರಿಸಿದರು.

9.3 ಭಗವಾನರಿಗೆ ಅಂತಿಮ ನಮನ

ಈ ರೀತಿ ನಿರ್ಧರಿಸಿದ ನಂತರ ಹೀಗೆ ತೀಮರ್ಾನಿಸಿದರು: ಈ ದಿನವೇ ನಾನು ಭಗವಾನರ ಒಪ್ಪಿಗೆ ಪಡೆದು ನಾಲಕಕ್ಕೆ ಹೊರಡುವೆನು. ನಂತರ ಥೇರ ಚುಂದರವರನ್ನು ಕರೆದು ಆಯುಷ್ಮಂತ ಚುಂದ, ನಮ್ಮ 500 ಭಿಕ್ಷು ಬಳಗಕ್ಕೆ ಸಿದ್ಧರಾಗಿರಲು ಹೇಳು, ನಾನು ನಾಲಕಕ್ಕೆ ಹೊರಡುವವನಿದ್ದೇನೆ. ಚುಂದರು ಹಾಗೆಯೇ ಏಪರ್ಾಡು ಮಾಡಿದರು. ಭಿಕ್ಷುಗಳು ಸಿದ್ಧರಾಗಿ ಸಾರಿಪುತ್ತರ ಎದುರಿಗೆ ನಿಂತರು. ನಂತರ ಆ ಸ್ಥಳವನ್ನು ಬಿಡುವ ಮುನ್ನ ಹೆಬ್ಬಾಗಿಲ ಬಳಿ ನಿಂತು ಈ ರೀತಿ ಯೋಚಿಸಿದರು: ಇದೇ ನನ್ನ ಕೊನೆಯ ನೋಟ. ಇನ್ನೂ ಹಿಂತಿರುಗುವ ಅವಶ್ಯಕತೆಯೇ ಇಲ್ಲ.
ನಂತರ 500 ಭಿಕ್ಷುಗಳೊಂದಿಗೆ ಭಗವಾನರನ್ನು ದಶರ್ಿಸಿ ನಮನ ಸಲ್ಲಿಸಿದರು. ನಂತರ ಸಾರಿಪುತ್ತರು ಹೀಗೆ ನುಡಿದರು: ಓ ಭಗವಾನ್, ಒಪ್ಪಿಗೆ ನೀಡಿ, ತಥಾಗತರು ಅನುಮತಿ ನೀಡುವಂತಾಗಲಿ, ಪರಿನಿಬ್ಬಾಣದ ಕಾಲ ಸನ್ನಿಹಿತವಾಗಿದೆ, ನಾನು ಜೀವಬಲವನ್ನು ತೊರೆಯುವವನಿದ್ದೇನೆ ಎಂದು ನುಡಿದು ಹೀಗೆಂದರು:
ಸರ್ವಲೋಕಾಧಿಪತಿಯಾದ ಓ ಮಹಾನ್ ಋಷಿಯೇ, ಶೀಘ್ರವೇ ನಾನು ಬಿಡುಗಡೆಯಾಗಲಿರುವೆ, ಜೀವದಿಂದ ಇನ್ನೂ ಹೋಗುವಿಕೆ, ಮರಳುವಿಕೆ ಇನ್ನಿಲ್ಲ. ಇದೇ ನನ್ನ ಅಂತಿಮ ಪೂಜೆಯಾಗಿದೆ ಪ್ರಭು! ನನಗೆ ಜೀವನವು ಈಗ ಇನ್ನೂ ಅತಿ ಅಲ್ಪವಾಗಿದೆ; ಏಳು ದಿನಗಳ ನಂತರ ತೊರೆಯುವೆನು ಈ ಶರೀರವ, ಹೊರೆಯನ್ನು ಇಳಿಸಲಿದ್ದೇನೆ. ಓ ಭಗವಾನ್, ಆದ್ದರಿಂದ ಅನುಮತಿಸಿ ಬುದ್ಧ ಭಗವಾನ್! ಕೊನೆಗೂ ನನ್ನ ನಿಬ್ಬಾಣವು ಸನ್ನಿಹಿತವಾಯಿತು. ಈಗ ನಾನು ಜೀವಿಸುವ ಇಚ್ಛೆಯನ್ನು ತೊರೆದೆನು.
ಆಗ ಭಗವಾನರು ಹೀಗೆ ಪ್ರಶ್ನಿಸಿದರು: ಸಾರಿಪುತ್ತ, ಎಲ್ಲಿ ಪರಿನಿಬ್ಬಾಣ ಪಡೆಯಬೇಕೆಂದು ನಿರ್ಧರಿಸಿರುವೆ?
ಭಗವಾನ್, ಮಗಧದಲ್ಲಿ ಇರುವಂತಹ ನನ್ನ ಹುಟ್ಟೂರಾದ ನಾಲಕಹಳ್ಳಿಯಲ್ಲಿ ನಾನು ಹುಟ್ಟಿದಂತಹ ಕೋಣೆಯಲ್ಲೇ ಪರಿನಿಬ್ಬಾಣ ಪಡೆಯಬೇಕೆಂದು ನಿರ್ಧರಿಸಿರುವೆ.
ಸರಿ ಸಾರಿಪುತ್ತ, ನಿನಗೆ ಯಾವುದು ಸಮಯೋಚಿತವಾದುದು ಎನಿಸುವುದೋ ಹಾಗೆಯೇ ಮಾಡು. ಆದರೆ ನಿನ್ನಂಥಹ ಹಿರಿಯ ಥೇರ ಭಿಕ್ಷು ಸಂಘಕ್ಕೆ ಮತ್ತೊಮ್ಮೆ ಕಾಣಸಿಗಲಾರರು. ಆದ್ದರಿಂದಾಗಿ ಅವರಿಗೆ ಕೊನೆಯದಾಗಿ ಧಮ್ಮ ಪ್ರವಚನವನ್ನು ನೀಡುವಂತಾಗು.

9.4 ಅಂತಿಮ ಧಮ್ಮ ಪ್ರವಚನ

ನಂತರ ಸಾರಿಪುತ್ತರು ಅಲ್ಲಿ ತಮ್ಮ ಅದ್ಭುತವಾದ ಪ್ರಜ್ಞಾಬಲವನ್ನು ಪ್ರದಶರ್ಿಸಿದರು. ಅಪ್ರತಿಮವಾಗಿ ಜ್ಞಾನವನ್ನು ಪ್ರಕಾಶಿಸಿದರು. ಪರಮಾರ್ಥ ಸತ್ಯಗಳ ಉನ್ನತಶಿಖರಕ್ಕೆ ಏರಿ, ಹಾಗೆಯೇ ಪ್ರಾಪಂಚಿಕ ವ್ಯವಹಾರಿಕ ಸತ್ಯಗಳವರೆವಿಗೂ ಇಳಿದು, ಧಮ್ಮವನ್ನು ನೇರವಾಗಿ ಉಪಮೆಗಳ ಮೂಲಕ ಅತಿ ಸುಂದರವಾಗಿ ಹಾಗೆಯೇ ಅತ್ಯಂತ ಪರಿಣಾಮಾತ್ಮಕವಾಗಿ ಘೋಷಿಸಿದರು.
ನಂತರ ಸಾರಿಪುತ್ತರು ಭಗವಾನರ ಕಾಲುಗಳನ್ನು ಅಪ್ಪಿಕೊಂಡರು ಹಾಗು ಹೀಗೆ ನುಡಿದರು: ಈ ಪಾದಗಳನ್ನು ಪೂಜಿಸಲು ನಾನು ಒಂದು ಅಸಂಖ್ಯೆಯ ಹಾಗು ಲಕ್ಷ ಕಲ್ಪಗಳ ಕಾಲ 10 ಪಾರಮಿಗಳನ್ನು ಪರಿಪೂರ್ಣಗೊಳಿಸಬೇಕಾಯಿತು. ನನ್ನ ಹೃದಯಕ್ಕೆ ಸಂಪೂರ್ಣ ಸಂತೃಪ್ತಿಯಿದೆ. ಈಗಿನ ನಂತರ ಸಂಪರ್ಕವಾಗಲಿ ಅಥವಾ ಭೇಟಿಯಾಗಲಿ ಇರುವುದಿಲ್ಲ. ಅಂತಹ ಮಧುರವಾದ ಬಾಂಧವ್ಯದ ಬೆಸುಗೆಯು ಇಲ್ಲಿಗೆ ಬೇರ್ಪಡೆಯಾಗುತ್ತದೆ. ನಾನು ಬಹುಬೇಗನೆ ನಿಬ್ಬಾಣ ನಗರಿಯನ್ನು ಪ್ರವೇಶಿಸಲಿದ್ದೇನೆ. ಅದು ಅಜರಾ, ಅಮರ, ಶಾಂತ, ಕ್ಷೇಮ ಹಾಗು ಪರಮಸುಖಕರವಾಗಿದೆ. ಅದು ಲಕ್ಷಾಂತರ ಬುದ್ಧರು ಪ್ರವೇಶಿಸಿರುವಂತಹದ್ದಾಗಿದೆ. ಓ ಭಗವಾನ್, ನನ್ನ ಯಾವುದಾದರೂ ನುಡಿಯಾಗಲಿ ಅಥವಾ ಕಾರ್ಯವಾಗಲಿ ತಮಗೆ ಮೆಚ್ಚಿಸದಿದ್ದರೆ ಕ್ಷಮಿಸಿ, ಇದು ನನ್ನ ಹೊರಡುವ ಸಮಯ.
ಸಾರಿಪುತ್ತ, ನಿನ್ನ ಕಾರ್ಯವಾಗಲಿ ಅಥವಾ ಮಾತುಗಳಾಗಲಿ ಎಂದಿಗೂ ನನಗೆ ಅಪ್ರಿಯವಾಗಿಲ್ಲ. ಏಕೆಂದರೆ ನೀನು ಸಾರಿಪುತ್ತ, ಪರಮಪ್ರಜ್ಞಾ ವಿಸ್ತಾರವಾದ ಜ್ಞಾನಾಚರಣೆಯುಳ್ಳವನು ಆಗಿದ್ದೀಯೆ, ಶೀಘ್ರವಾಗಿ ಗ್ರಹಿಸುವಂತಹವನು. ಹರಿತವಾದ ಮೇಧಾಶಕ್ತಿಯವನು ಆಗಿದ್ದೀಯೇ, ಹಾಗೆಯೇ ನಾನು ಸದಾ ಕ್ಷಮಾಶೀಲನೇ ಆಗಿದ್ದೇನೆ. ನಿನ್ನ ಒಂದು ನುಡಿಯಾಗಲಿ ಅಥವಾ ಒಂದು ಸಣ್ಣ ಕಾರ್ಯವೇ ಆಗಲಿ, ನನ್ನಲ್ಲಿ ಅಪ್ರಿಯವನ್ನುಂಟುಮಾಡಲಿಲ್ಲ. ಸಾರಿಪುತ್ತ ನಿನಗೆ ಸಮಯೋಚಿತ ಹಾಗು ಸಮಂಜಸವೆನಿಸಿದ್ದನ್ನು ಮಾಡುವಂತಾಗು.

9.5 ನಾಲಕದೆಡೆಗೆ ಪಯಣ :

ಭಗವಾನರಿಂದ ಹೀಗೆ ಒಪ್ಪಿಗೆ ಸಿಕ್ಕ ನಂತರ ಸಾರಿಪುತ್ತರು ಮೇಲೆದ್ದರು. ಆಗ ಇಡೀ ಪೃಥ್ವಿಯೇ ಕಂಪಿಸಿತು, ಆಕಾಶದಲ್ಲೆಲ್ಲಾ ಮಿಂಚು ಹಾಗು ಸಿಡಿಲುಗಳ ಆರ್ಭಟಗಳು ಆರಂಭವಾಯಿತು. ಮಹಾ ಮಳೆಯೇ ಆಗಮಿಸಿತು.
ಆಗ ಭಗವಾನರು ಹೀಗೆ ಯೋಚಿಸಿದರು: ನಾನು ಈಗ ಧಮ್ಮಸೇನಾನಿಗೆ ಹೊರಡಲು ಒಪ್ಪಿಗೆ ಸೂಚಿಸಲೇ ಬೇಕು. ನಂತರ ಭಗವಾನರು ಧಮ್ಮಾಸನದಿಂದ ಮೇಲೆದ್ದು ಗಂಧಕುಟಿಯತ್ತ ನಡೆದರು. ಅಲ್ಲಿ ರತ್ನಫಲಕದ ಮೇಲೆ ನಿಂತರು. ಆಗ ಸಾರಿಪುತ್ತರು ಮೂರುಬಾರಿ ಭಗವಾನರಿಗೆ ತಮ್ಮ ಬಲಗಡೆಯಿಂದ ಪ್ರದಕ್ಷಿಣೆ ಮಾಡಿದರು. ನಂತರ ಹೀಗೆ ಯೋಚಿಸಿದರು: ಒಂದು ಅಸಂಖ್ಯೆಯ ಹಾಗು ಲಕ್ಷ ಕಲ್ಪಗಳ ಹಿಂದೆ ಭಗವಾನ್ ಅನೊಮದಸ್ಸಿ ಬುದ್ಧರ ಪಾದದಡಿಗೆ ಪೂಜಿಸಿ, ತಮ್ಮನ್ನು ಕಾಣಲೆಂದು ಹೀಗೆ ಧಮ್ಮಸೇನಾನಿಯಾಗಲು ಸಂಕಲ್ಪಿಸಿದೆನು. ಆ ಸಂಕಲ್ಪವು ಸಾಕ್ಷಾತ್ಕಾರವಾಯಿತು. ತಮ್ಮನ್ನು ದಶರ್ಿಸಿದೆನು. ಪ್ರಥಮ ಭೇಟಿಯಲ್ಲಿ ತಮ್ಮನ್ನು ದಶರ್ಿಸಿದಂತೆಯೇ ಈಗ ಇದುವೇ ಕೊನೆ ಭೇಟೆಯಾಗಿದೆ ಹಾಗು ಭವಿಷ್ಯದಲ್ಲಿ ಯಾವುದು ಸಂಭವಿಸದು. ಹಾಗೆಯೇ ಜೋಡಿಸಿದ ಕೈಗಳಿಂದಲೇ ಸಾರಿಪುತ್ತರು ಮುಮ್ಮುಖವಾಗಿ ಅಲ್ಲಿಂದ ಹಿಂದಕ್ಕೆ ಹೊರಟರು. ಭಗವಾನರು ಕಣ್ಣಿಗೆ ಕಾಣುವವರೆಗೂ ಹೀಗೆಯೇ ನಡೆದರು. ಆಗ ಮತ್ತೊಮ್ಮೆ ಭೂಮಿಯು ಕಂಪಿಸಿತು.
ಆಗ ಭಗವಾನರು ಭಿಕ್ಷುಗಳನ್ನು ಉದ್ದೇಶಿಸಿ ಹೀಗೆಂದರು: ಹೋಗಿ ಭಿಕ್ಷುಗಳೇ, ನಿಮ್ಮ ಹಿರಿಯ ಸಹೋದರನೊಂದಿಗೆ ಜೊತೆಯಲ್ಲಿ ಸಾಗಿ. ಇದನ್ನು ಆಲಿಸಿದಂತಹ ನಾಲ್ಕು ಸಭಾಗಣಗಳು ಭಗವಾನರನ್ನು ಒಂಟಿ ಬಿಟ್ಟು ಜೇತವನದಿಂದ ಹೊರಕ್ಕೆ ಹೋದವು. ಈ ವಿಷಯವು ಶ್ರಾವಸ್ತಿಯ ನಿವಾಸಿಗಳಿಗೆ ತಿಳಿಯುತ್ತಿದ್ದಂತೆಯೇ ಅವರು ಪೂಜಾ ಸಾಮಗ್ರಿಗಳೊಂದಿಗೆ, ಹೂಗಳಿಂದ, ಗಂಧಗಳಿಂದ ಕೂಡಿ, ಒದ್ದೆ ತಲೆಯಿಂದಲೇ ಅಳುತ್ತಾ ಆಶ್ರುಮುಖವಾಗಿ ಧಾವಿಸಿ, ಸಾರಿಪುತ್ತರನ್ನು ಹಿಂಬಾಲಿಸಿದರು....
ಆಗ ಸಾರಿಪುತ್ತರು ಆ ಇಡೀ ಗುಂಪಿಗೆ ಹೀಗೆ ನುಡಿದರು: ಈ ರಸ್ತೆಯನ್ನು ಯಾರು ಸಹಾ ತಡೆಯಲು ಪ್ರಯತ್ನಿಸಬಾರದು ಎಂದು ಹೇಳಿ ಅವರನ್ನು ಹಿಂದಕ್ಕೆ ಹೋಗಲು ವಿನಂತಿಸಿದರು. ನಂತರ ಭಿಕ್ಷುಗಳತ್ತ ತಿರುಗಿ ಹೀಗೆ ನುಡಿದರು: ನೀವು ಕೂಡ ಹಿಂತಿರುಗಿ, ಭಗವಾನರನ್ನು ಅಲಕ್ಷಿಸಬೇಡಿ.
ಹೀಗೆ ಅವರನ್ನು ಕಳುಹಿಸಿಕೊಟ್ಟು ತಮ್ಮ ಶಿಷ್ಯರ ಗುಂಪಿನೊಂದಿಗೆ ನಾಲಕದತ್ತ ಪ್ರಯಾಣಿಸಿದರು. ಆದರೂ ಸಹಾ ಕೆಲವು ಉಪಾಸಕರು ಹಿಂಬಾಲಿಸುತ್ತಾ ಹೀಗೆ ಪ್ರಲಾಪಿಸಿದರು: ಹಿಂದೆ ಈ ಶ್ರೇಷ್ಠ ಭಿಕ್ಷುವು ತಮ್ಮ ಪ್ರಯಾಣದಿಂದ ಹಿಂತಿರುಗುತ್ತಿದ್ದರು. ಆದರೆ ಈಗಿನ ಪ್ರಯಾಣದಲ್ಲಿ ಹಿಂತಿರುಗುವುದಿಲ್ಲವಲ್ಲ! ಆಗ ಸಾರಿಪುತ್ತರು ಅವರಿಗೆ ಹೀಗೆ ಸಮಾಧಾನಿಸಿದರು: ಎಚ್ಚರವುಳ್ಳವರಾಗಿ ಮಿತ್ರರೇ, ಎಲ್ಲಾ ಆಗುಹೋಗುಗಳ ಸ್ವಭಾವವೇ ಹೀಗೆ ರಚಿತವಾಗುತ್ತದೆ, ಹಾಗೆಯೇ ವಿಯೋಗ ಹೊಂದುತ್ತವೆ. ಹೀಗೆ ಸಮಾಧಾನಿಸಿ ಅವರನ್ನು ಹಿಂತಿರುಗುವಂತೆ ಮಾಡುತ್ತಿದ್ದರು. ಹೀಗೆಯೇ ಸಾರಿಪುತ್ತರು ಸಾಗುತ್ತಾ ರಾತ್ರಿಯಾದಾಗ ಅಲ್ಲೇ ತಂಗುತ್ತಾ, ಪುನಃ ಹಗಲಲ್ಲಿ ನಡೆಯುತ್ತಿದ್ದರು. ಹೀಗೆಯೇ ವಾರದ ಕಾಲ ಜನರಿಗೆಲ್ಲಾ ದರ್ಶನವಿತ್ತರು. ನಂತರ ನಾಲಕವೆಂಬ ಹಳ್ಳಿಗೆ ಸಂಜೆಗೆ ಹೊರಟರು. ಆ ಹಳ್ಳಿಯ ದ್ವಾರದಲ್ಲಿರುವ ಆಲದ ಮರದ ಕೆಳಗೆ ನಿಂತರು. ಆಗ ಸಾರಿಪುತ್ತರ ಸೋದರಳಿಯನಾದ ಉಪರೇವತನು ಥೇರರನ್ನು ಕಂಡನು. ತಕ್ಷಣ ಸಾರಿಪುತ್ತರ ಬಳಿಗೆ ಬಂದು ವಂದಿಸಿ, ಗೌರವಯುತವಾಗಿ ಒಂದೆಡೆ ನಿಂತನು.
ನಿನ್ನ ಹಿರಿಯಜ್ಜಿಯು ಮನೆಯಲ್ಲಿರುವಳೇ?
ಹೌದು ಭಂತೆ.
ಹಾಗಾದರೆ ನನ್ನ ಬರುವಿಕೆಯನ್ನು ಆಕೆಗೆ ಹೋಗಿ ತಿಳಿಸು. ಆಗ ಆಕೆಯು ಏತಕ್ಕಾಗಿ ಬಂದೆನೆಂದು ಕೇಳುತ್ತಾಳೆ. ಆಗ ಈ ಹಳ್ಳಿಯಲ್ಲಿ ಒಂದು ರಾತ್ರಿ ಮಾತ್ರ ತಂಗುತ್ತಾರಂತೆ ಎಂದು ನುಡಿದು, ನನ್ನ ಹುಟ್ಟು ಕೋಣೆಯನ್ನೇ ನನಗಾಗಿ ಸಿದ್ಧಪಡಿಸಿ, ಉಳಿದ 500 ಭಿಕ್ಷುಗಳಿಗೂ ರಾತ್ರಿ ನೆಲೆಸಲು ವ್ಯವಸ್ಥೆ ಮಾಡಲು ತಿಳಿಸು ಎಂದರು.
9.6 ಏಳು ಅರಹಂತರ ತಾಯಿಗೆ ಪರಿವರ್ತನೆ:
ಉಪರೇವತನು ಹಿರಿಯಜ್ಜಿಯ ಬಳಿಗೆ ಹೋಗಿ: ಅಜ್ಜಿ ಸೋದರಮಾವನು ಬಂದಿಹನು ಎಂದು ತಿಳಿಸಿದನು.
ಆತನು ಎಲ್ಲಿದ್ದಾನೆ?
ಹಳ್ಳಿಯ ಹೆಬ್ಬಾಗಿಲಿನ ಬಳಿಯಲ್ಲಿ.
ಒಂಟಿಯಾಗಿ ಬಂದಿಹನೆ ಅಥವಾ ಜೊತೆಯಲ್ಲಿ ಯಾರಾದರೂ ಇರುವರೇ?
ಆತನ ಜೊತೆಯಲ್ಲಿ 500 ಭಿಕ್ಷುಗಳು ಇರುವರು.
ಆತನೇಕೆ ಬಂದಿಹನು? ಏತಕ್ಕಾಗಿ ಇಷ್ಟು ಭಿಕ್ಷುಗಳಿಗೆ ವ್ಯವಸ್ಥೆ ಮಾಡಬೇಕು? ಯೌವ್ವನದಲ್ಲೇ ಭಿಕ್ಖುವಾದ ಆತನು ಈ ವಯಸ್ಸಿನಲ್ಲಿ ಗೃಹಸ್ಥನಾಗಲು ಬಯಸುತ್ತಿರುವನೇ? ಎಂದು ಗೊಣಗಿದರೂ ಆಕೆಯು ಭಿಕ್ಷುಗಳಿಗೆ ಇರಲು ವ್ಯವಸ್ಥೆ ಮಾಡಿ, ಸಾರಿಪುತ್ತರ ಹುಟ್ಟು ಕೋಣೆಯನ್ನು ಸ್ವಚ್ಛಗೊಳಿಸಿ ಬೆಳಕಿನ ವ್ಯವಸ್ಥೆ ಮಾಡಿ, ಸಾರಿಪುತ್ತರನ್ನು ಕರೆಸಿದಳು.
ನಂತರ ಸಾರಿಪುತ್ತರವರು ಭಿಕ್ಷುಗಳೊಂದಿಗೆ ಆ ಮನೆಯ ಮಾಳಿಗೆಗೆ ಹೋಗಿ ಅಲ್ಲಿಂದ ತಮ್ಮ ಹುಟ್ಟು ಕೋಣೆಗೆ ಪ್ರವೇಶಿಸಿದರು. ಅಲ್ಲಿ ಕುಳಿತು ಭಿಕ್ಷುಗಳಿಗೆ ತಮ್ಮ ಕೋಣೆಗಳಿಗೆ ಹೋಗಿ ನೆಲೆಸಿ ಎಂದು ಕೇಳಿಕೊಂಡರು. ಅವರೆಲ್ಲರೂ ಭಾರವಾದ ಹೃದಯದಿಂದ ಅಲ್ಲಿಂದ ಹೊರಟರು. ನಂತರ ಸಾರಿಪುತ್ತರಿಗೆ ಅತಿಯಾದ ನೋವು ಕಾಡಿ, ಬೇಧಿ ಆರಂಭವಾಯಿತು, ನಂತರ ತುಸು ಸುಧಾರಿಸಿಕೊಂಡರು. ತಾಯಿಗೂ ಸಹಾ ತನ್ನ ಮಗನ ಆರೋಗ್ಯ ಕೆಟ್ಟಿದೆ ಎಂದು ಭಾಸವಾಯಿತು.
ನಂತರ ಚತುಮಹಾರಾಜಿಕ ದೇವತೆಗಳಿಗೆ ಸಾರಿಪುತ್ತರ ಸ್ಥಿತಿಯು ಅರಿವಾಗಿ ಕೊನೆಯ ದರ್ಶನಕ್ಕಾಗಿ ಬಂದರು. ಹಾಗೆಯೇ ಅವರ ಶುಶ್ರೂಷೆ ಮಾಡಲು ಮುಂದಾದರು. ಆದರೆ ಸಾರಿಪುತ್ತರು ಇಲ್ಲಿ ಶುಶ್ರೂಷೆಗೆ ಶಿಷ್ಯನಿದ್ದಾನೆ ಎಂದು ತಿಳಿಸಿ, ಅವರಿಗೆ ಹೋಗಲು ಅನುಮತಿಯಿತ್ತರು.
ಅವರು ಹೋದನಂತರ, ದೇವತೆಗಳ ಒಡೆಯನಾದ ಸಕ್ಕ ಬಂದನು. ನಂತರ ಮಹಾಬ್ರಹ್ಮನು ಸಹಾ ಸಾರಿಪುತ್ತರ ದರ್ಶನಕ್ಕೆ ಹಾಗು ಸೇವೆಗೆ ಮುಂದಾದರು. ಆದರೆ ಸಾರಿಪುತ್ತರು ಪ್ರತಿಯೊಬ್ಬರಿಗೂ ಹಿಂದಿನಂತೆ ತಿಳಿಸಿ, ಅವರಿಗೆ ಹಿಂತಿರುಗಲು ಅನುಮತಿ ನೀಡಿದರು.
ಈ ಎಲ್ಲಾ ದೃಶ್ಯಗಳನ್ನು ಸಾರಿಪುತ್ತರ ತಾಯಿಯು ಗಮನಿಸಿದಳು. ನನ್ನ ಮಗನಿಗೆ ಸಂದಶರ್ಿಸಿ, ಬೀಳ್ಕೊಡುಗೆ ನೀಡುತ್ತಿರುವ ಈ ದಿವ್ಯ ಜೀವಿಗಳಾರು? ಎಂದು ಆಕೆಗೆ ಕುತೂಹಲವಾಯಿತು. ನಂತರ ಆಕೆಯು ಬಾಗಿಲಲ್ಲಿದ್ದ ಥೇರ ಚುಂದನನ್ನು ತನ್ನ ಮಗನ ಬಗ್ಗೆ ಕೇಳಿದಳು. ಆತನು ಆಕೆಯನ್ನು ಧಮ್ಮಸೇನಾನಿಯ ಬಳಿಗೆ ಕರೆದೊಯ್ದನು.
ಅಮ್ಮಾ ಈ ಅವೇಳೆಯಲ್ಲಿ ಇಲ್ಲಿ ಏತಕ್ಕಾಗಿ ಬಂದಿರುವೆ?
ಮಗು, ನಿನ್ನ ನೋಡಲೆಂದು. ಅದಿರಲಿ ನಿನ್ನನ್ನು ಮೊದಲು ನೋಡಲು ಇಂದು ರಾತ್ರಿ ಬಂದಿದ್ದವರ್ಯಾರು?
ನಾಲ್ಕು ಮಹಾದಿವ್ಯ ದೇವರಾಜರುಗಳು.
ಹಾಗಾದರೆ ನೀನು ಅವರಿಗಿಂತ ಶ್ರೇಷ್ಠನೇ?
ಓ! ಅವರು ಚೈತ್ಯದ (ದೇವಾಲಯದ) ಸೇವಕರಂತೆ, ನಮ್ಮ ಭಗವಾನರು ಹುಟ್ಟಿದಾಗಿನಿಂದ ಕೈಯಲ್ಲಿ ಕತ್ತಿಯನ್ನು ಹಿಡಿದು ಸದಾ ರಕ್ಷಿಸುತ್ತಿರುತ್ತಾರೆ.
ಹಾಗಾದರೆ ನಂತರ ಬಂದವರ್ಯಾರು?
ಓ ಅವರೇ ಸಕ್ಕ, ದೇವತೆಗಳ ಒಡೆಯ.
ಹಾಗಾದರೆ ನೀನು ಅವರಿಗಿಂತ ಶ್ರೇಷ್ಠನೇ?
ಓ ಅವರಂತು ಭಿಕ್ಖುವಿನ ಪರಿಕರಗಳನ್ನು ಹೊರುವ ಸಾಮಣೇರನಂತೆ; ನಮ್ಮ ಭಗವಾನರು ತಾವತಿಂಸ ದೇವಲೋಕದಿಂದ ಹಿಂತಿರುಗುವಾಗ, ಭಗವಾನರ ಚೀವರ ಹಾಗು ಪಿಂಡಪಾತ್ರೆಯನ್ನು ಆತನು ಕೈಯಲ್ಲಿಯೇ ಹಿಡಿದುಕೊಂಡು ಇಳಿದಿದ್ದನು.
ಹಾಗಾದರೆ ನಂತರ ಬಂದಂತಹ ಅತ್ಯಂತ ಪ್ರಕಾಶಮಾನರು ಯಾರು?
ಉಪಾಸಿಕಾ, ನೀನು ಆರಾಧಿಸುವಂತಹ ಮಹಾ ಬ್ರಹ್ಮನೇ ಆಗಿದ್ದಾನೆ.
ಏನು! ಹೌದೇ? ಹಾಗಾದರೆ ಮಗು ನೀನು ನನ್ನ ಆರಾಧ್ಯ ದೈವ ಮಹಾಬ್ರಹ್ಮನಿಗಿಂತಲೂ ಶ್ರೇಷ್ಠನೇ?
ಹೌದು ಉಪಾಸಿಕಾ, ಯಾವಾಗ ನಮ್ಮ ಭಗವಾನರು ಜನಿಸಿದರೋ ಆಗ ಮಹಾಬ್ರಹ್ಮರೇ ದಿವ್ಯವಾದ ಜಾಲದಲ್ಲಿ ಮೊದಲು ಸ್ವೀಕರಿಸಿದರು ಎಂದು ಹೇಳಲಾಗಿದೆ.
ಇದನ್ನು ಆಲಿಸಿದ ಬ್ರಾಹ್ಮಣಿಯು ಹೀಗೆ ಯೋಚಿಸಿದಳು: ನನ್ನ ಮಗನ ಬಲವು, ಸಾಮಥ್ರ್ಯವು ಹೀಗೆ ಇರಬೇಕಾದರೆ, ಇನ್ನೂ ಆತನ ಗುರುವಾದ ಭಗವಾನ್ ಬುದ್ಧರ ಸಾಮಥ್ರ್ಯವೂ, ದಿವ್ಯತೆಯು ಹೇಗಿರಬೇಕು?! ಎಂದು ಇದೇರೀತಿ ಚಿಂತನೆ ಮಾಡುತ್ತಾ ಆಕೆಯ ಇಡೀ ಶರೀರವೆಲ್ಲಾ ಆನಂದ ಹಾಗು ಸುಖದಿಂದ ಆವೃತವಾಯಿತು.
ಆಗ ಸಾರಿಪುತ್ತರು ಹೀಗೆ ಯೋಚಿಸಿದರು: ಈಕೆಯಲ್ಲಿ ಈಗ ಶ್ರದ್ಧೆಯು ಉದಯವಾಗಿದೆ. ಆಕೆಯ ಇಡೀ ಶರೀರವು ಆನಂದ ಹಾಗು ಸುಖದಿಂದ ಆವೃತವಾಗಿರುವುದರಿಂದ ಈಗ ಧಮ್ಮ ಬೋಧನೆಗೆ ಸಕಾಲವಾಗಿದೆ. ನಂತರ ಅವರು ಹೀಗೆ ಕೇಳಿದರು: ಏನು ಯೋಚಿಸುತ್ತಿರುವೆ ಉಪಾಸಿಕೆ?
ನನ್ನ ಮಗನ ಶೀಲವು ಹಾಗು ಸಾಮಥ್ರ್ಯವು ಹೀಗಿರಬೇಕಾದರೆ ಇನ್ನು ಆತನ ಗುರುಗಳ ಶೀಲವು ಹಾಗು ಸಾಮಥ್ರ್ಯವು ಹೇಗಿರಬೇಕು?
ಅಮ್ಮಾ ಆಲಿಸುವಂತಾಗು, ನಮ್ಮ ಭಗವಾನರ ಜನ್ಮ ಕಾಲದಲ್ಲಿ ಅವರ ಗೃಹತ್ಯಾಗದ ಕಾಲದಲ್ಲಿ, ಅವರ ಜ್ಞಾನೋದಯ ಕಾಲದಲ್ಲಿ ಮತ್ತು ಅವರ ಧಮ್ಮಚಕ್ರ ಪ್ರವಚನ ಕಾಲದಲ್ಲಿ ಹತ್ತು ಸಹಸ್ರ ಲೋಕಧಾತುಗಳು ಕಂಪಿಸಿವೆ, ನಡುಗಿವೆ. ಭಗವಾನರ ಶೀಲದಲ್ಲಾಗಲಿ, ಅವರ ಸಮಾಧಿಯಲ್ಲಾಗಲಿ, ಅವರ ಪ್ರಜ್ಞಾಶೀಲತೆಯಲ್ಲಾಗಲಿ, ಅವರ ವಿಮುಕ್ತಿಯಲ್ಲಾಗಲಿ ಮತ್ತು ಅವರ ವಿಮುಕ್ತಿ ಜ್ಞಾನ ದರ್ಶನದಲ್ಲಾಗಲಿ ಯಾರು ಸಹಾ ಸರಿಸಮಾನರಿಲ್ಲ.... ಅವರೇ ಸರ್ವ ಜೀವಿಗಳಿಗೂ ಪರಮಶ್ರೇಷ್ಠರಾಗಿದ್ದಾರೆ. ಭಗವಾನರು ಅರಹಂತರಾಗಿದ್ದಾರೆ, ಸಮ್ಯಕ್ಸಂಬುದ್ಧರು, ವಿದ್ಯಾಚರಣಸಂಪನ್ನರು, ಸುಗತರು, ಲೋಕವಿಧರು, ಅನುತ್ತರ ಪುರುಷದಮ್ಮ ಸಾರಥಿಯು, ದೇವತೆಗಳಿಗೆ ಹಾಗು ಮಾನವರಿಗೆ ಪರಮಶಾಸ್ತರು, ಬುದ್ಧರು ಹಾಗು ಭಗವಾನರಾಗಿದ್ದಾರೆ...
ಹೀಗೆ ತ್ರಿರತ್ನಗಳ ಬಗ್ಗೆ ಧಮ್ಮ ಪ್ರವಚನ ಮಾಡಿದರು. ಅವರ ಧಮ್ಮ ಪ್ರವಚನದ ಅಂತ್ಯಕ್ಕೆ ಬರುತ್ತಿದ್ದಂತೆಯೇ ಆಕೆಯು ಸೋತಾಪತ್ತಿ ಸ್ಥಿತಿಯ ಫಲದಲ್ಲಿ ಪ್ರತಿಷ್ಠಾಪಿತಳಾದಳು. ನಂತರ ಆಕೆಯು ಮಗನನ್ನು ಹೀಗೆ ಕೇಳಿದಳು: ಮಗು, ಉಪತಿಸ್ಸ, ಏಕೆ ಹೀಗೆ ಮಾಡಿದೆ, ಇಷ್ಟು ವರ್ಷಗಳ ತನಕ ಇಂತಹ ಅನುಪಮವಾದ ಅಮರತ್ವದ ಜ್ಞಾನವನ್ನು ನನಗೆ ಏಕೆ ನೀಡಲಿಲ್ಲ?
ಅಮ್ಮ ಇಂದೇ ಇದಕ್ಕೆ ಸಕಾಲವಾಗಿತ್ತು, ಇರಲಿ, ಇನ್ನೂ ಮಾಡಬೇಕಾದ್ದು ಬಹಳವಿದೆ. ಅಮ್ಮಾ ನೀನು ಹೊರಡುವಂತಾಗು. ಆಕೆಯು ಭಕ್ತಿಯಿಂದ ವಂದಿಸಿ ನಿರ್ಗಮಿಸಿದಳು.
ಸಾರಿಪುತ್ತರಿಗೆ ತನ್ನ ಮಾತೃ ಋಣವನ್ನು ತೀರಿಸಿದಂತಹ ಸಂತೃಪ್ತಿಯಾಯಿತು.

9.7 ಧಮ್ಮಸೇನಾನಿಯ ಮಹಾಪರಿನಿಬ್ಬಾಣ

ಸಾರಿಪುತ್ತರು ಚುಂದನಿಗೆ ಈಗ ವೇಳೆ ಎಷ್ಟು? ಎಂದು ಕೇಳಿದರು.
ಭಂತೆ, ಬೆಳಗಿನ ಜಾವವು ಸಮೀಪಿಸುತ್ತಿದೆ.
ಭಿಕ್ಷು ಸಂಘದ ಸಭೆ ಸೇರಿಸು.
ಆಗಲಿ ಭಂತೆ ಎಂದು ನುಡಿದು ಚುಂದನು ಅಲ್ಲಿಂದ ಹೊರಟನು.
ಅಲ್ಲಿಯೇ ಭಿಕ್ಷುಗಳು ಸಭೆ ಸೇರಿದರು. ಅನಾರೋಗ್ಯದಿಂದಿದ್ದ ಸಾರಿಪುತ್ತರು ಚುಂದನಿಗೆ ಹೇಳಿದರು: ಚುಂದ, ನನಗೆ ಸರಿಯಾಗಿ ಕುಳ್ಳರಿಸುವಂತಾಗು. ಚುಂದ ಹಾಗೆಯೇ ಮಾಡಿದನು. ನಂತರ ಸಾರಿಪುತ್ತರು ಭಿಕ್ಷು ಸಂಘಕ್ಕೆ ಹೀಗೆ ಹೀಗೆ ಹೇಳಿದರು: ಓಹ್ ಭಿಕ್ಷು ಬಾಂಧವರೇ, ನಿಮ್ಮೊಂದಿಗೆ ನಾನು 44 ವರ್ಷ ಕಳೆದಿಹೆನು. ವಾಚಾದಲ್ಲಾಗಲಿ ಅಥವಾ ಕ್ರಿಯೆಯಿಂದಾಗಲಿ ನಿಮ್ಮೊಂದಿಗೆ ಅಪ್ರಿಯವಾಗಿ ನಡೆದುಕೊಂಡಿದ್ದರೆ ನನನ್ನು ಕ್ಷಮಿಸಿ.
ಅದನ್ನು ಆಲಿಸಿದಂತಹ ಭಿಕ್ಷುಗಳು ಹೀಗೆ ನುಡಿದರು: ಪೂಜ್ಯ ಭಂತೆಯವರೇ, ನೀವು ನಮಗೆ ಎಳ್ಳಷ್ಟು ಅಪ್ರಿಯ ವರ್ತನೆ ಮಾಡಿಲ್ಲ ಹಾಗು ನುಡಿದಿಲ್ಲ. ನಾವು ನಿಮ್ಮೊಂದಿಗೆ ನೆರಳಿನಂತೆ ಇದ್ದೆವು, ನಮ್ಮಿಂದ ಹೇರಳವಾದ ತಪ್ಪುಗಳು ನಡೆದಿರುತ್ತವೆ, ಇದಕ್ಕಾಗಿ ನೀವೇ ನಮ್ಮನ್ನು ಕ್ಷಮಿಸಬೇಕು.
ಮೌನವಾಗಿ ಸಮ್ಮತಿಸಿದ ಸಾರಿಪುತ್ತರು ಎಲ್ಲರನ್ನು ಮೈತ್ರಿಭಾವದಿಂದ ವೀಕ್ಷಿಸಿದರು. ನಂತರ ವಿಶಾಲವಾದ ಚೀವರವನ್ನು ತಮ್ಮ ಸುತ್ತಲು ಸರಿಯಾಗಿ ಧರಿಸಿಕೊಂಡರು. ಬಲಗಡೆ ಸಿಂಹಶಯ್ಯಾಸನದಲ್ಲಿ ಮಲಗಿದರು. ನಂತರ ಮುಂದೆ ಭಗವಾನರು ಮಹಾಪರಿನಿಬ್ಬಾಣವನ್ನು ಪಡೆಯುವಂತಹ ರೀತಿಯಲ್ಲೇ ಅವರು ಒಂದರ ನಂತರ ಒಂಭತ್ತು ಸಮಾಪತ್ತಿಗಳಲ್ಲಿ ಏರಿದರು. ನಂತರ ಪುನಃ ಇಳಿಕೆ ಕ್ರಮದಲ್ಲಿ ಪ್ರಥಮ ಸಮಾಧಿಗೆ ಮರಳಿದರು. ನಂತರ ಪುನಃ ಪ್ರಥಮ ಸಮಾಧಿಯಿಂದ ಚತುರ್ಥ ಸಮಾಧಿಯವರೆಗೂ ಏರಿಕೆ ಕ್ರಮದಲ್ಲಿ ಸಮಾಧಿ ಸ್ಥಿತಿಯೇರಿದರು. ಅವರು ಚತುರ್ಥ ಸಮಾಧಿಯನ್ನು ಪ್ರವೇಶಿಸಿದಾಗ ಅದೇವೇಳೆ ಸೂರ್ಯನು ಉದಯಿಸತೊಡಗಿದನು. ಅದೇ ಕ್ಷಣದಲ್ಲಿ ಸಾರಿಪುತ್ತರು ಶೇಷರಹಿತ ನಿಬ್ಬಾಣಧಾತುವಿನಲ್ಲಿ ನೆಲೆಸಿದರು. ಅವರು ಪರಿನಿಬ್ಬಾಣವನ್ನು ಹೀಗೆ ಪಡೆದರು.
(ಅದು ಕಾತರ್ಿಕ ಮಾಸದ ಹುಣ್ಣಿಮೆಯಾಗಿತ್ತು. ಆದ್ದರಿಂದ ಕಾತರ್ಿಕ ಹುಣ್ಣಿಮೆಯನ್ನು ಸಾರಿಪುತ್ತರ ನೆನಪಿನಿಂದಾಗಿ ಆಚರಿಸಲಾಗುತ್ತಿದೆ. ಅದು ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ಮಾಸದ ಹುಣ್ಣಿಮೆಯಂದು ಬರುವುದು.)
9.8 ಪರಿನಿಬ್ಬಾಣದ ನಂತರ:
ಇತ್ತ ಬ್ರಾಹ್ಮಣ ಸ್ತ್ರೀಯು ತನ್ನ ಕೋಣೆಯಲ್ಲಿ ಹೀಗೆ ಚಿಂತನೆ ಮಾಡತೊಡಗಿದಳು: ನನ್ನ ಮಗನು ಈಗ ಹೇಗಿದ್ದಾನೆ? ನನ್ನ ಬಗ್ಗೆಯೇ ಅತನು ಏನನ್ನೂ ಹೇಳಲಿಲ್ಲ? ನಂತರ ಆಕೆಯು ಎದ್ದು ಸಾರಿಪುತ್ತರ ಕೋಣೆಯನ್ನು ಪ್ರವೇಶಿಸಿದಳು ಆಕೆಯಲ್ಲಿ ವಾತ್ಸಲ್ಯಮಿಶ್ರಿತ ಭಕ್ತಿಯು ಆವರಿಸಿತು. ಆಕೆಯು ಸಾರಿಪುತ್ತರ ಕಾಲುಗಳನ್ನು ಒತ್ತಿದಳು. ನಂತರ ಆಕೆಗೆ ಸಾರಿಪುತ್ತರು ಇನ್ನಿಲ್ಲವೆಂದು ಅರಿವಾಯಿತು. ಆ ಪಾದಗಳ ಅಡಿಯಲ್ಲೇ ಆಕೆಯು ಕುಸಿದಳು. ಗಟ್ಟಿಯಾಗಿ ಪ್ರಲಾಪಿಸಿದಳು: ಓ ಮಗನೇ, ಇದಕ್ಕೆ ಮುಂಚೆ ಕಡೇಪಕ್ಷ ನಿನ್ನ ಶೀಲದ ಬಗ್ಗೆಯು ಅರಿಯದೆ ಹೋದೆ, ಹೀಗಾಗಿಯೇ ನೂರಾರು ಭಿಕ್ಷುಗಳಿಗೆ ದಾನ ಮಾಡುವ ಹಾಗು ಹಾಗೆ ಮಾಡಿ ಮಹಾಭಾಗ್ಯ ಪಡೆಯುವ ಅವಕಾಶವನ್ನು ಕಳೆದುಕೊಂಡೆನು. ವಿಹಾರಗಳನ್ನು ಸಹಾ ಕಟ್ಟಿಸದೆ ಹೋದೆನು ಎಂದು ಕೆಲವು ಸಮಯ ಪ್ರಲಾಪಿಸಿದಳು.
ನಂತರ ಆಕೆಯು ತನ್ನ ಕರ್ತವ್ಯಗಳನ್ನು ನೆನೆದು ಮಹಾ ಅಕ್ಕಸಾಲಿಗರಿಗೆ ಕರೆಯಿಸಿದಳು. ಅವರೊಂದಿಗೆ ಆಕೆಯು ತನ್ನೆಲ್ಲ ಐಶ್ವರ್ಯ ಇದ್ದಂತಹ ನಿಧಿ ಕೋಣೆಗೆ ಹೋಗಿ ಬೃಹತ್ ಪಾತ್ರೆಗಳಲ್ಲಿದ್ದ ಚಿನ್ನವೆಲ್ಲವನ್ನು ತೂಕ ಹಾಕಿಸಿದಳು. ಹಾಗು ಶವ ಸಂಸ್ಕಾರಕ್ಕೆ ಶೀಘ್ರವಾಗಿ ಚಿನ್ನದ ಆಭರಣಗಳನ್ನು ಸಿದ್ಧಪಡಿಸಿದಳು. ಸ್ತಂಭಗಳನ್ನು ಹಾಗು ಕಮಾನುಗಳನ್ನು ನಿಲ್ಲಿಸಿದರು. ಆ ಹಳ್ಳಿಯ ಮಧ್ಯಭಾಗದಲ್ಲಿ ಭವ್ಯ ಮಂಟಪವನ್ನು ನಿಮರ್ಿಸಿದಳು. ಆ ಭವ್ಯ ಮಂಟಪದ ಮಧ್ಯದಲ್ಲಿ ಚಂದಾಯದ ಆಕೃತಿಯನ್ನು (ತ್ರಿಕೋನ) ನಿಲ್ಲಿಸಿದರು. ಅದರ ಸುತ್ತಲು ಎತ್ತರದ ಸ್ವರ್ಣದ ಸ್ತಂಭಗಳನ್ನು ಹಾಗು ಕಮಾನುಗಳನ್ನು ನಿಮರ್ಿಸಿ, ನಂತರ ಪವಿತ್ರ ಸಮಾರಂಭವನ್ನು ಆರಂಭಿಸಿದರು. ಆ ಸಮಾರಂಭದಲ್ಲಿ ಮಾನವರಷ್ಟೇ ಅಲ್ಲದೆ ದೇವೆತೆಗಳು ಸಹಾ ಸೇರಿದ್ದರು.
ಅಂತಿಮ ದರ್ಶನದ ಈ ಸಮಾವೇಶವು ಇಡೀ ವಾರದಕಾಲ ನಡೆಯಿತು. ಶ್ರೀಗಂಧವಷ್ಟೇ ಅಲ್ಲದೆ ಇನ್ನಿತರ ಸುಗಂಧಮಯ ಕಟ್ಟಿಗೆಗಳನ್ನು ಬಳಸಿ, ಸಾರಿಪುತ್ತರ ಶರೀರದ ಸುತ್ತಲು ಗಂಧ, ಶ್ರೀಗಂಧ, ರಕ್ತಚಂದನ ಇತ್ಯಾದಿ ಸುಗಂಧಿತ ಮರದ ತುಂಡುಗಳು ಹಾಗು ಸುವಾಸನೆಭರಿತ ಬೇರು ತುಂಡುಗಳನ್ನು ಇಟ್ಟು, ಅಗ್ನಿಸ್ಪರ್ಶ ಆರಂಭಿಸಿದರು. ಇಡೀರಾತ್ರಿ ಈ ಸಮಾರಂಭ ನಡೆಯಿತು. ಧಮ್ಮಪ್ರವಚನಗಳು ಸಹಾ ನಡೆದವು. ನಂತರ ಪೂಜ್ಯ ಅನುರುದ್ಧ ಥೇರರು ಸುಗಂಧಮಯ ಜಲದಿಂದ ಆ ಜ್ವಾಲೆಗಳನ್ನು ಆರಿಸಿದರು. ನಂತರ ಪೂಜ್ಯ ಚುಂದರವರು ಆ ಅವಶೇಷಗಳನ್ನು ಒಗ್ಗೂಡಿಸಿ ಶುದ್ಧಿಕರಿಸುವ ವಸ್ತ್ರದಲ್ಲಿಟ್ಟರು.
ಆಗ ಚುಂದರವರು ಹೀಗೆ ಯೋಚಿಸಿದರು: ನಾನಿನ್ನು ನಿಧಾನ ಮಾಡಲಾರೆ, ಮಹಾ ಧಮ್ಮಸೇನಾನಿಯು ಮಹಾಪರಿನಿಬ್ಬಾಣ ಹೊಂದಿದ ಸುದ್ದಿಯನ್ನು ನಾನು ಕೂಡಲೇ ಭಗವಾನರಿಗೆ ತಿಳಿಸುವೆನು ಎಂದು ನಿರ್ಧರಿಸಿ ಅವರು ಸೋಸುವ ವಸ್ತ್ರದಲ್ಲಿದ್ದ ಅವಶೇಷ ಮತ್ತು ಸಾರಿಪುತ್ತರ ಚೀವರ ಹಾಗು ಪಿಂಡಪಾತ್ರೆ ತೆಗೆದುಕೊಂಡು ಶ್ರಾವಸ್ತಿಯೆಡೆಗೆ ಹೊರಟರು. ಪ್ರತಿ ಹಂತದಲ್ಲೂ ರಾತ್ರಿ ಮಾತ್ರ ನಿದ್ದೆಗೆ ಉಳಿಯುತ್ತಿದ್ದರು, ಮಿಕ್ಕೆಲ್ಲಾ ಸಮಯ ಕೇವಲ ಪ್ರಯಾಣವೇ ಆಗಿತ್ತು.
9.9 ಚುಂದಸುತ್ತ (ಸಂಕ್ಷಿಪ್ತವಾಗಿ):
ಆಗ ಭಗವಾನರು ಶ್ರಾವಸ್ತಿಯಲ್ಲಿನ ಜೇತವನದ ಅನಾಥಪಿಂಡಿಕಾರಾಮದಲ್ಲಿದ್ದರು. ಅಲ್ಲಿಗೆ ಚುಂದನು ಸಾರಿಪುತ್ತರ ಚೀವರ, ಪಿಂಡಪಾತ್ರೆ ಹಾಗು ಅಸ್ಥಿ ಅವಶೇಷಗಳೊಂದಿಗೆ ಆವೃತವಾಗಿದ್ದ ಸೂಸುವ ವಸ್ತ್ರಗಳೊಂದಿಗೆ ಮೊದಲು ಆನಂದವರಿಗೆ ನಮಸ್ಕರಿಸಿ ಭೇಟಿಮಾಡಿ ಹೀಗೆ ನುಡಿದರು: ಭಂತೆ, ಪೂಜ್ಯ ಸಾರಿಪುತ್ತರು ಇನ್ನಿಲ್ಲ, ಅವರು ಪರಿನಿಬ್ಬಾಣ ಪಡೆದರು. ಇವು ಅವರ ಪಿಂಡಪಾತ್ರೆ ಹಾಗು ಚೀವರ.
ಆಗ ಆನಂದರವರು ಆತನನ್ನು ಭಗವಾನರೆಡೆಗೆ ಕರೆದೊಯ್ದರು. ಅಲ್ಲಿ ಅವರು ಭಗವಾನರಿಗೆ ವಿಷಯವೆಲ್ಲಾ ತಿಳಿಸಿದರು. ಭಗವಾನ್, ಈ ವಿಷಯ ಕೇಳಿ ನನ್ನ ಶರೀರವು ಬಳ್ಳಿಯಂತೆ ದುರ್ಬಲವಾಯಿತು. ನನ್ನ ಸುತ್ತಲಿನ ಎಲ್ಲವೂ ಮಂಜಾಯಿತು ಹಾಗು ವಸ್ತುಗಳು ಸ್ಪಷ್ಟವಾಗಿ ಗೋಚರಿಸದೆ ಹೋಯಿತು.
ಆಗ ಭಗವಾನರು ಆನಂದರಿಗೆ ಹೀಗೆ ಸಮಾಧಾನಿಸಿದರು: ಆನಂದ, ಎಲ್ಲವೂ ನಮ್ಮಿಂದ ವಿಯೋಗ ಹೊಂದುವಂತಹವೇ, ಇದು ಹೇಗೆ ಆನಂದ, ಸಾರಿಪುತ್ತರು ಪರಿನಿಬ್ಬಾಣದ ನಂತರ ನಿನ್ನ ಪಾಲಿನ ಶೀಲವಾಗಲಿ, ಸಮಾಧಿಯಾಗಲಿ, ಪ್ರಜ್ಞಾವಾಗಲಿ, ವಿಮುಕ್ತಿಯಾಗಲಿ ಅಥವಾ ಜ್ಞಾನವನ್ನಾಗಲಿ ತೆಗೆದುಕೊಂಡು ಹೋದರೆ?
ಇಲ್ಲ ಭಗವಾನ್, ಹಾಗೇನು ಇಲ್ಲ. ಆದರೆ ಪೂಜ್ಯ ಸಾರಿಪುತ್ತರು ನನ್ನ ಗುರುಗಳು, ಶಾಸ್ತರು, ನಿದರ್ೆಶಕರು, ಪ್ರೇರಣಶಕ್ತಿಯು, ಸ್ಫೂತರ್ಿದಾಯಕರು, ಧಮ್ಮದಾಯಕರು ಸಹ ಭಿಕ್ಷುಗಳಿಗೆ ಅಪಾರ ಸಹಾಯ ಮಾಡಿದವರು. ಅವರ ಧಮ್ಮ ಬೋಧನೆಯು ಎಷ್ಟೊಂದು ಶಕ್ತಿದಾಯಕವೂ, ಆನಂದದಾಯಕವೂ ಹಾಗು ಸಹಾಯಕವು ಎಂದು ನಾವು ಸ್ಮರಿಸುತ್ತೇವೆ.
ಆನಂದ, ನಾನು ಈಗಾಗಲೇ ಕ್ಷಣಿಕತ್ವವನ್ನು ಬೋಧಿಸಿದ್ದೇನೆ. ಎಲ್ಲಾ (ವ್ಯಕ್ತಿಗಳು, ವಸ್ತುಗಳು) ವಿಷಯಗಳು ನಮ್ಮಿಂದ ಬೇರ್ಪಡುವುದು ಸಹಜ ಹಾಗು ನಿತ್ಯಧರ್ಮವಾಗಿದೆ. ಯಾವುದೆಲ್ಲವೂ ಉದಯಿಸುವುದೋ (ಹುಟ್ಟುವುದೋ) ಅವೆಲ್ಲವೂ ಅಳಿದುಹೋಗುವುದು. ವಿಯೋಗವಾಗದಿರಲಿ ಎಂದು ಹೇಳಿದರೆ ಅವೆಲ್ಲಾ ಹೇಗೆ ಸಾಧ್ಯ! ಬೃಹತ್ ವೃಕ್ಷಗಳೇ ಮುರಿದುಹೋಗುವುವು. ಅದೇರೀತಿಯಾಗಿ ಈ ಬೃಹತ್ ಭಿಕ್ಖು ಸಮೂಹದಿಂದ ಸಾರಿಪುತ್ತರವರು ವಿಯೋಗ ಹೊಂದಿರುವರು. ನಿಜವಾಗಿಯೂ ಆನಂದ ಯಾವುದೆಲ್ಲವೂ ಜನಿಸುವುದೋ, ಅಸ್ತಿತ್ವಕ್ಕೆ ಬರುವುದೋ ಅವೆಲ್ಲವೂ ವಿಯೋಗ ಧಮ್ಮವನ್ನು ಹೊಂದಿರುತ್ತವೆ. ಅವೆಲ್ಲವನ್ನು ವಿಯೋಗವಾಗಬಾರದೆಂದರೆ ಹೇಗೆ ಸಾಧ್ಯ! ಹಾಗೆಲ್ಲಾ ಆಗುವುದು ಸಾಧ್ಯವಿಲ್ಲ.. ಆದ್ದರಿಂದ ಆನಂದ, ನಿನಗೆ ನೀನೇ ದ್ವೀಪವಾಗಿ ನಿನ್ನನ್ನೇ ಶರಣು (ಅವಲಂಬನೆ) ಮಾಡಿಕೊ. ಧಮ್ಮ(ಜ್ಞಾನ)ವನ್ನೇ ನಿನ್ನ ದ್ವೀಪವೆನ್ನಿಸಿ (ಆಶ್ರಯತಾಣ) ಬೇರ್ಯಾವ ಶರಣು  (ಆಶ್ರಯ) ಬೇಡ.

9.10 ಭಗವಾನರ ಕೊನೆಯ ಪ್ರಶಂಸೆ:

ಭಗವಾನರು ಸೂಸಿದ ವಸ್ತ್ರದಲ್ಲಿದ್ದ ಸಾರಿಪುತ್ತರ ಅಸ್ಥಿಅವಶೇಷ ತೆಗೆದುಕೊಂಡರು ಹಾಗು ಭಿಕ್ಷುಗಳೊಂದಿಗೆ ಹೀಗೆ ನುಡಿದರು:
ಓ ಭಿಕ್ಷುಗಳೇ, ಈ ಶಂಕುವಿನ ವರ್ಣದ ಅಸ್ಥಿಅವಶೇಷಗಳು, ನನ್ನಲ್ಲಿ ಪರಿನಿಬ್ಬಾಣಕ್ಕಾಗಿ ಅನುಮತಿ ಕೋರಿಕೊಂಡಂತಹ ಸಾರಿಪುತ್ತನದು. ಈ ಸಾರಿಪುತ್ತನು ಒಂದು ಅಸಂಖ್ಯೆಯ ಹಾಗು ಲಕ್ಷ ಕಲ್ಪಗಳವರೆಗೆ ಹತ್ತು ಪಾರಮಿಗಳನ್ನು ಪರಿಪೂರ್ಣಗೊಳಿಸಿದವನು. ಇದು ಅಂತಹ ಮಹಾನ್ ಭಿಕ್ಖುವಿನದು. ನನ್ನಿಂದ ಪ್ರಥಮವಾಗಿ ಚಾಲಿತವಾದ ಧಮ್ಮಚಕ್ರವನ್ನು ನಂತರ ಚಾಲನೆ ಮಾಡಿದ ಭಿಕ್ಷುವಿನದು. ಈತನು ನನ್ನ ಅನಂತರ ಅಗ್ರಪೀಠಕ್ಕೆ ಅತ್ಯಂತ ಅರ್ಹನಾದ ಮಹಾಭಿಕ್ಷುವು. ಇಡೀ ಲಕ್ಷಾಂತರ ಲೋಕಗಳಲ್ಲಿ ನನ್ನ ಹೊರತು ಯಾರೂ ಸಹಾ ಈತನ ಜ್ಞಾನಕ್ಕೆ ಸಮವಾಗಲಾರರು, ಸಾರಿಸಾಟಿಯಾಗಲಾರರು. ಅಂತಹ ಮಹೋನ್ನತ ಜ್ಞಾನ ಹೊಂದಿದ ಭಿಕ್ಖುವಾಗಿದ್ದನು. ಸಾರಿಪುತ್ತನು ಅಂತಹ ವಿಸ್ತಾರಪ್ರಾಜ್ಞತೆ, ಹೊಳಪುಳ್ಳ ಜ್ಞಾನ ಪ್ರಕಾಶತೆ, ಕ್ಷಿಪ್ರ ಪ್ರಜ್ಞಾಶೀಲತೆ, ಹರಿತವಾದ ಬುದ್ಧಮತ್ತತೆ ಹೊಂದಿದಂತಹ ಭಿಕ್ಷುವಾಗಿದ್ದರು. ಅತ್ಯಲ್ಪ ಕೋರಿಕೆಗಳನ್ನು ಉಳ್ಳಂತಹ ಸಂತೃಪ್ತವಾದಂತಹ, ಏಕಾಂತಪ್ರಿಯ. ಜೊತೆಗಳಲ್ಲಿ ಆನಂದಿಸದ, ಉತ್ಸಾಹಪೂರಿತ ಪರಿಶ್ರಮಿ. ಸಹಭಿಕ್ಷುಗಳಲ್ಲಿ ಸುಚಾಲನೆ ನೀಡುವಂತಹ, ಪಾಪಪರಿತ್ಯಜಿತ ಭಿಕ್ಖುವು ಇನ್ನೋರ್ವನಿಲ್ಲ. ಹಿಂದಿನ 500 ಜನ್ಮಗಳ ಪುಣ್ಯದಿಂದಾ, ಅಪಾರ ಐಶ್ವರ್ಯವಂತರಾಗಿದ್ದರು ಅದನ್ನೆಲ್ಲಾ ತ್ಯಜಿಸಿ ಗೃಹರಹಿತನಾದವನು (ಭಿಕ್ಖುವಾದವ). ನನ್ನ ಶಾಸನದಲ್ಲಿ ಪೃಥ್ವಿಯಂತಹ ಕ್ಷಮಾಶೀಲನು ಇದ್ದಿದ್ದರೆ ಅದು ಸಾರಿಪುತ್ತನೇ ಆಗಿದ್ದಾನೆ. ಕೊಂಬಿಲ್ಲದ ಹೋರಿಯಂತೆ ಯಾರಿಗೂ ತೊಂದರೆ ನೀಡದವನು. ಬಾಲಕನಂತೆ ಅತಿ ವಿಧೇಯನು, ವಿನಮ್ರನು ಆಗಿದ್ದಂತಹವನು.
ನೋಡಿ ಭಿಕ್ಷುಗಳೇ, ಈ ಅವಶೇಷಗಳು ಅಂತಹ ಮಹಾನ್ ಪ್ರಜ್ಞಾಶೀಲ, ವಿಶಾಲದೃಷ್ಟಿ ಹೊಂದಿರುವಂತಹವನ, ಪ್ರಕಾಶಮಾನವಾದ ಅರಿವುಳ್ಳವರನು, ಕ್ಷಿಪ್ರಮತಿಯು, ಹರಿತವಾದ ಮೇಧಾಶಕ್ತಿಯುಳ್ಳವನು ಮತ್ತು ಭೇದಕ ವಿಶ್ಲೇಷಣಾ ಪ್ರಾಜ್ಞನದು ಆಗಿದೆ. ಅತ್ಯಂತ ಅಲ್ಪ ಕೋರಿಕೆಯುಳ್ಳ, ಸಂತೃಪ್ತನ, ಏಕಾಂತದಲ್ಲೇ ಲೀನನಾದವನ, ಜೊತೆಗಳಲ್ಲಿ ಆನಂದಿಸದವನ, ಅಪಾರ ಯತ್ನಶಾಲಿಯಾದಂತಹವನ ಈ ಅವಶೇಷಗಳನ್ನು ನೋಡಿ, ಅವರು ಸದಾ ಸಹವತರ್ಿಗಳಿಗೆ ಪ್ರೇರಕನು ಹಾಗು ಪಾಪವಜ್ರ್ಯನೂ ಆಗಿದ್ದಂತಹವನು ಎಂದು ನುಡಿದ ಭಗವಾನರು ಗಾಥೆಗಳಲ್ಲಿ ಹೀಗೆ ನುಡಿದರು:
ಯಾರು 500 ಜನ್ಮಗಳಲ್ಲಿ ಗೃಹತೊರೆದು
ಅನಗಾರಿಕನಾಗಿ, ಸುಖಗಳನ್ನು ಪರಿತ್ಯಜಿಸಿ
ಭಾವೋದ್ರೇಕರಹಿತನೋ, ಇಂದ್ರಿಯ ನಿಯಂತ್ರಿತನೋ
ಅಂತಹ ನಿಬ್ಬಾಣ ಪಡೆದ ಸಾರಿಪುತ್ತನಿಗೆ ಈಗ ನಮಿಸಿ!
ಯಾರ ಕ್ಷಮೆಯು ಪೃಥ್ವಿಯಂತಹುದ್ದೋ
ಯಾರು ಚಿತ್ತವನ್ನು ಪೂರ್ಣವಾಗಿ ಪ್ರಭುತ್ವಗಳಿಸಿದ್ದವರೋ
ಅಂತಹ ಕರುಣಾಕರ, ಪ್ರಶಾಂತ, ಶೀತಲ
ಹಾಗೆಯೇ ಮಹಾಪೃಥ್ವಿಯಂತಹ ದೃಢನಾಗಿದ್ದ
ಅಂತಹ ನಿಬ್ಬಾಣ ಪಡೆದ ಸಾರಿಪುತ್ತನಿಗೆ ಈಗ ನಮಿಸಿ.
ಬಾಲಕನಂತೆ ವಿನಮ್ರನೂ, ನಗರಗಳಲ್ಲಿ
ನಿಧಾನವಾಗಿ ದೃಢವಾಗಿ ನೇರವಾಗಿ ನಡೆಯುವಂತಹವನು
ಆಹಾರಕ್ಕಾಗಿ ಮನೆಯಿಂದ ಮನೆಗೆ ನಡೆಯುವವನು
ಅಂತಹ ನಿಬ್ಬಾಣ ಪಡೆದ ಸಾರಿಪುತ್ತನಿಗೆ ಈಗ ನಮಿಸಿ.
ನಗರದಲ್ಲಿಯಾಗಲಿ, ಕಾನನದಲ್ಲಿಯಾಗಲಿ
ಯಾರಿಗೂ ನೋಯಿಸದ, ಕೊಂಬಿಲ್ಲದ ಅಹಿಂಸಕ ವೃಷಭನು
ಅಂತಹ ಸ್ವಪ್ರಭುತನೂ ಸಾರಿಪುತ್ತನು;
ನಿಬ್ಬಾಣ ಪಡೆದ ಅಂತಹ ಸಾರಿಪುತ್ತರಿಗೆ ಈಗ ನಮಿಸಿ.

No comments:

Post a Comment