Wednesday 19 February 2020

ಮಾಘ ಹುಣ್ಣಿಮೆಯ ಪ್ರಾಶಸ್ತ್ಯತೆ



ಮಾಘ ಹುಣ್ಣಿಮೆಯ ಪ್ರಾಶಸ್ತ್ಯತೆ


1. ಇಂದು ಬುಧ್ಧಭಗವಾನರು 1250 ಅರಹಂತ ಭಿಕ್ಖುಗಳಿಗೆ ಈ ಕೆಳಕಂಡ ಬೋಧನೆಯನ್ನು ಮಾಡಿದ ಮಹಾ ಸುದಿನವಾಗಿದೆ. ಈ ಘಟನೆಯು ಮಘಾ ಹುಣ್ಣಿಮೆಯಂದು ಬರುವುದು. ಈ ಬೋಧನೆಯಲ್ಲಿ ಅವರ ಸರ್ವ ಬೋಧನೆಯು ಅಡಕವಾಗಿದೆ.

2. ಹಾಗೂ ಇದೇ ದಿನದಂದು ಸಾರಿಪುತ್ತ ಹಾಗೂ ಮೊಗ್ಗಲಾನರನ್ನು ಅಗ್ರ ಶ್ರಾವಕರಾಗಿ ನೇಮಕ ಮಾಡಿದರು.

3. ಇದೇ ದಿನದಂದು ಸಂಘ ದಿನ ಅಥವಾ ಸಂಘ ಪುರ್ಣಿಮೆ ಎಂದು ಕರೆಯುತ್ತಾರೆ.

4. ಹಾಗೂ ಇದೇ ದಿನದಂದು ಮಹಾಪರಿನಿಬ್ಬಾಣದ ದಿನವನ್ನು ನಿಶ್ಚಯಿಸಿ ಘೋಷಿಸಿದ್ದರು.

5. ಇಂದು ಉಪೋಸಥ ದಿನವೂ ಆಗಿದೆ.

ಈ ಹಬ್ಬವನ್ನು ಜಗತ್ತಿನ ಸರ್ವ ಬೌಧ್ಧರು ಆಚರಿಸುತ್ತಾರೆ.


ಬುಧ್ಧಭಗವಾನರು ಇಂದು ಬೋಧಿಸಿದ ಒವಾದ ಪಾತಿಮೊಕ್ಖ


183.

ಸಬ್ಬಪಾಪಸ್ಸ ಅಕರಣಂ, ಕುಸಲಸ್ಸ ಉಪಸಮ್ಪದಾ [ಕುಸಲಸ್ಸೂಪಸಮ್ಪದಾ (ಸ್ಯಾ॰)]।
 ಸಚಿತ್ತಪರಿಯೋದಪನಂ [ಸಚಿತ್ತಪರಿಯೋದಾಪನಂ (?)], ಏತಂ ಬುದ್ಧಾನ ಸಾಸನಂ॥

“ಸರ್ವರೀತಿಯ ಪಾಪವನ್ನು ಮಾಡದಿರುವಿಕೆ,
ಒಳ್ಳೆಯತನವನ್ನೇ (ಕುಶಲವನ್ನೇ) ಮಾಡುವಿಕೆ (ಸಂಪಾದಿಸುವಿಕೆ, ವೃದ್ಧಿಸುವಿಕೆ)
  ತನ್ನ ಚಿತ್ತವನ್ನು (ಸ್ವಚಿತ್ತವನ್ನು) ಪರಿಶುದ್ಧಗೊಳಿಸುವಿಕೆ                  - ಇದೇ ಬುದ್ಧರ ಶಾಸನವಾಗಿದೆ.”               (183)

184.

ಖನ್ತೀ ಪರಮಂ ತಪೋ ತಿತಿಕ್ಖಾ, ನಿಬ್ಬಾನಂ [ನಿಬ್ಬಾಣಂ (ಕ॰ ಸೀ॰ ಪೀ॰)] ಪರಮಂ ವದನ್ತಿ ಬುದ್ಧಾ।
 ನ ಹಿ ಪಬ್ಬಜಿತೋ ಪರೂಪಘಾತೀ, ನ [ಅಯಂ ನಕಾರೋ ಸೀ॰ ಸ್ಯಾ॰ ಪೀ॰ ಪಾತ್ಥಕೇಸು ನ ದಿಸ್ಸತಿ] ಸಮಣೋ ಹೋತಿ ಪರಂ ವಿಹೇಠಯನ್ತೋ॥

“ಕ್ಷಾಂತಿಯೇ (ಸಹನೆಯೆ) ಪರಮ ತಪಸ್ಸಾಗಿದೆ (ತಪಸ್ಸುಗಳಲ್ಲಿ ಉತ್ತಮ),
  ನಿಬ್ಬಾಣವೇ ಪರಮಶ್ರೇಷ್ಠಕರ” ಎಂದು ಬುದ್ಧರು ಹೇಳುತ್ತಾರೆ.
ಪರರನ್ನು ಹಿಂಸಿಸುವವನು ಪಬ್ಬಜಿತನಲ್ಲ, ಪರರನ್ನು ಹಾನಿಗೊಳಿಸುವವನು ಸಮಣನಲ್ಲ.”     (184)

185.

ಅನೂಪವಾದೋ ಅನೂಪಘಾತೋ [ಅನುಪವಾದೋ ಅನುಪಘಾತೋ (ಸ್ಯಾ॰ ಕ॰)], ಪಾತಿಮೋಕ್ಖೇ ಚ ಸಂವರೋ।
 ಮತ್ತಞ್ಞುತಾ ಚ ಭತ್ತಸ್ಮಿಂ, ಪನ್ತಞ್ಚ ಸಯನಾಸನಂ।
 ಅಧಿಚಿತ್ತೇ ಚ ಆಯೋಗೋ, ಏತಂ ಬುದ್ಧಾನ ಸಾಸನಂ॥

“ನಿಂದಿಸದಿರುವುದು, ಹಿಂಸಿಸದಿರುವುದು, ಪಾತಿಮೋಕ್ಖದಂತೆ ಸಂಯಮ ದಿಂದಿರುವುದು,
ಆಹಾರದಲ್ಲಿ ಮಿತಿಯಿರುವುದು, ಏಕಾಂತವಾಸಿಯಾಗಿರುವುದು,
ಧ್ಯಾನದಂತಹ ಉನ್ನತ ಚಿತ್ತಾವಸ್ಥೆಯಲ್ಲಿ ಸ್ಥಿರವಾಗಿರುವುದು - ಇವೇ ಬುದ್ಧರ ಶಾಸನವಾಗಿದೆ.”      185