Tuesday 5 November 2019

ಅತಿಯಾಚನೆ ಕೂಡದು


 ಅತಿಯಾಚನೆ ಕೂಡದು


ಬಹುಕಾಲದ ಹಿಂದೆ ಬೋಧಿಸತ್ವರು ವಾರಾಣಸಿಯಲ್ಲಿ ಬ್ರಾಹ್ಮಣನ ಮನೆಯಲ್ಲಿ ಹುಟ್ಟಿದರು. ಕೆಲವರ್ಷಗಳ ನಂತರ ಅವರಿಗೆ ಒಬ್ಬ ತಮ್ಮನು ಹುಟ್ಟಿದನು. ಈ ಅಣ್ಣ-ತಮ್ಮಂದಿರು ಹಿರಿಯರಾದ ಮೇಲೆ ತಂದೆ-ತಾಯಿಯರು ಮೃತರಾಗಿದ್ದರಿಂದಲೇ ಅವರು ಪಬ್ಬಜ್ಜ ಪಡೆದು ಗಂಗಾ ತೀರದಲ್ಲಿ ಒಂದೊಂದು ದಡದಲ್ಲಿ ಪ್ರತ್ಯೇಕವಾಗಿ ವಾಸಿಸಲಾರಂಭಿಸಿದರು.
ಅವರ ತಮ್ಮ ವಾಸಿಸುತ್ತಿದ್ದ ದಡದಲ್ಲಿ ಒಮ್ಮೆ ಮಣಿಕಂಠನೆಂಬ ದಿವ್ಯ ನಾಗರಾಜನು ಬ್ರಹ್ಮಚಾರಿಯ ವೇಷದಲ್ಲಿ ಬಂದು ಅವರ ತಮ್ಮನ (ಕಿರಿಯ ತಪಸ್ವಿ) ಬಳಿಗೆ ಬಂದು ಸ್ನೇಹ ಬೆಳೆಸಿದನು. ಕಾಲನಂತರ ಸ್ನೇಹವು ಗಾಢವಾದ ಮೇಲೆ ನಾಗರಾಜ ತನ್ನ ನಿಜಸ್ಥಿತಿ ತಿಳಿಸಿ ನಾಗರೂಪವನ್ನು ತೋರಿಸಿದನು. ಅಷ್ಟೇ ಅಲ್ಲ, ಸಖ್ಯಭಾವದಿಂದ ಕಿರಿಯ ತಪಸ್ವಿಯ ದೇಹಕ್ಕೆ ಸುತ್ತಿಕೊಂಡು ವಿರಮಿಸುತ್ತಿದ್ದನು. ಕಿರಿಯ ತಪಸ್ವಿಗೆ ಮೊದಲಿನಿಂದಲೂ ನಾಗಗಳು ಕಂಡರೆ ಭಯವಿತ್ತು. ಈಗ ಮಣಿಕಂಠನು ನಾಗರೂಪದಲ್ಲಿ ಬಂದು ಈ ರೀತಿ ದೇಹ ಸುತ್ತುವುದರಿಂದ ಆತನು ಭಯದಿಂದ ಕೂಡಿಕೊಂಡನು. ಇದು ಪುನರಾವರ್ತನೆಯಾಗಿ ಅತನು ದುರ್ಬಲನಾಗಿ, ಒಣಗಿಕೊಂಡು, ರೋಗಿಯಾದನು.
ಆ ಸಮಯದಲ್ಲಿ ಅಣ್ಣನು ತಮ್ಮನ ಈ ಸ್ಥಿತಿಯನ್ನು ಕಂಡು ವಿಚಾರಿಸಿದಾಗ ವಿಷಯವೆಲ್ಲ ತಿಳಿದನು. ನಂತರ ತಮ್ಮನಿಗೆ ಹೀಗೆ ಕೇಳಿದನು: ನಾಗರಾಜನು ಆಭರಣಗಳನ್ನು ಧರಿಸಿ ಬರುವನೇ?
ಹೌದು, ಮಣಿರತ್ನ ಧರಿಸಿ ಬರುವನು.
ಈಗ ಹಿರಿಯ ತಪಸ್ವಿಗಳಾದ ಬೋಧಿಸತ್ವರು ಪ್ರಜ್ಞಾಶೀಲತೆಯಿಂದ ಯೋಚಿಸಿ ಈಗ ಪಾರಾಗಲು ಉಪಾಯವೊಂದನ್ನು ತಿಳಿಸಿದರು. ಮಾರನೆಯದಿನ ನಾಗರಾಜ ಎಂದಿನಂತೆ ಪರ್ಣಕುಟೀರಕ್ಕೆ ಬಂದು ನಿಲ್ಲುತ್ತಲೇ ಕಿರಿಯ ತಪಸ್ವಿಯು ನಾಗರಾಜನಲ್ಲಿ ಹೀಗೆ ಯಾಚಿಸಿದನು: ಓ ನಾಗರಾಜ, ನಿನ್ನ ಮಣಿರತ್ನ ನನಗೆ ಚೆನ್ನಾಗಿ ಹಿಡಿಸಿದೆ, ನನಗೆ ಅದನ್ನು ನೀಡು. ಇದನ್ನು ಆಲಿಸುತ್ತಲೇ ನಾಗರಾಜ ಅಲ್ಲಿರಲಾರದೆ ಕೆಲಸವಿದೆ ಎಂದು ಹೇಳಿ ಹೊರಟುಹೋದನು. ಮಾರನೆಯ ದಿನ ಆಶ್ರಮವನ್ನು ನಾಗರಾಜ ಇನ್ನೇನು ಪ್ರವೇಶಿಸಬೇಕು, ತಕ್ಷಣ ಕಿರಿಯ ತಪಸ್ವಿಯು ನೆನ್ನೆ ನೀವು ಆಭರಣ ನೀಡಲಿಲ್ಲ, ಇಂದಾದರೂ ಮಣಿರತ್ನವನ್ನು ನೀಡಿ ಎಂದು ಯಾಚಿಸಿದನು. ಆಗಲೂ ನಾಗರಾಜ, ಒಳಬರಲಾರದೆ ಹಾಗೆಯೇ ಹೊರಟುಹೋದನು. ಮಾರನೆಯ ದಿನ ನಾಗರಾಜನು ನೀರಿನಿಂದ ಹೊರಬರುತ್ತಿದ್ದಂತೆ ಕಿರಿಯ ತಪಸ್ವಿಯು ಆ ಮಣಿರತ್ನ ಎಂದು ಕೇಳುತ್ತಿದ್ದಂತೆ ನೀರಿನಲ್ಲಿ ನಾಗರಾಜ ಮುಳುಗುತ್ತ ಹೀಗೆ ಹೇಳಿದನು:
ಇನ್ನೊಬ್ಬರಿಗೆ ಪ್ರಿಯವಾಗಿರುವ ವಸ್ತುವನ್ನು ಎಂದಿಗೂ ಯಾಚಿಸಬಾರದು, ಅತಿಯಾಗಿ ಯಾಚಿಸುವುದರಿಂದ ಅವರು ಪ್ರಿಯರಾಗಲಾರರು. ಈ ಮಣಿಯು ನನ್ನ ಸರ್ವಸ್ವ, ನೀನು ಅತಿ ಯಾಚಕನಾಗಿರುವೆ, ಇದನ್ನು ನಾನು ನಿನಗೆ ನೀಡಲಾರೆ, ನಿನ್ನ ಬಳಿಗೂ ಬರಲಾರೆ, ಇದನ್ನೇ ಯಾಚಿಸುತ್ತ ತೊಂದರೆ ನೀಡಿ, ಹೆದರಿಸುತ್ತಿದ್ದೀಯೆ, ನಿನ್ನಲ್ಲಿಗೆ ಬರಲಾರೆ ಎಂದು ಹೇಳಿ ನಾಗರಾಜನು ಮುಳುಗಿಹೋದನು.
ಆದರೆ ನಾಗರಾಜನ ಸ್ನೇಹಹೀನತೆಯಿಂದ ಕಿರಿಯ ತಪಸ್ವಿ ಚಿಂತಿತನಾದನು. ಆದರೆ ಹಿರಿಯ ತಪಸ್ವಿಯ ಬೋಧನೆಯಿಂದ ಅವನು ಸರಿಹೋದನು. ಮುಂದೆ ಇಬ್ಬರೂ ಸಹಾ ಧ್ಯಾನ ಲಾಭ ಪಡೆದರು.


No comments:

Post a Comment