Wednesday 30 September 2015

the 4 noble truths in kannada /ಮಹಾನ್ ನಾಲ್ಕು ಆರ್ಯಸತ್ಯಗಳು

ಮಹಾನ್ ನಾಲ್ಕು ಆರ್ಯಸತ್ಯಗಳು

ನಾಲ್ಕು ಮಹಾನ್ ಆರ್ಯಸತ್ಯಗಳೆಂದರೆ :
1.            ದುಃಖ ಸತ್ಯ
2.            ದುಃಖ ಸಮುದಯ (ಉದಯ/ಕಾರಣ) ಸತ್ಯ
3.            ದುಃಖದ ನಿರೋಧ (ನಿಲ್ಲುವಿಕೆ/ಅಂತ್ಯ/ಉದಯಿಸದಿರುವಿಕೆ) ಸತ್ಯ
4.            ದುಃಖ ನಿರೋಧಕ್ಕೆ ಕೊಂಡೊಯ್ಯುವ ಆರ್ಯ ಅಷ್ಠಾಂಗ ಅಥವಾ ಮಧ್ಯಮ ಮಾರ್ಗ.
                ಇವು ನಾಲ್ಕು ಇರುವುದರಿಂದ ಇದಕ್ಕೆ ನಾಲ್ಕು ಎನ್ನುವೆವು. ಇವು ಮಹತ್ತರವಾದುದ್ದರಿಂದ ಇದಕ್ಕೆ ಮಹಾನ್ ಎಂದೂ ಇವು ಸತ್ಯವಾದುದರಿಂದ, ಮಿಥ್ಯವಲ್ಲದ್ದರಿಂದ, ಸಿದ್ಧಾಂತವಲ್ಲದ್ದರಿಂದ, ದೃಷ್ಠಿಕೋನವಲ್ಲದ್ದರಿಂದ, ತರ್ಕವಲ್ಲದ್ದರಿಂದ, ಸುಳ್ಳಲ್ಲದ್ದರಿಂದ ಇವು ಸತ್ಯವೆಂವು ಕರೆಯಲ್ಪಟ್ಟಿವೆ. ಇವಕ್ಕೆ ಆರ್ಯವೆಂದು ಏಕೆ ಕರೆಯುತ್ತೇವೆ ಎಂದರೆ ಇವು ಆರ್ಯರಿಂದ (ಶ್ರೇಷ್ಠ ಮಹಾಪುರುಷರಿಂದ) ಬೋಧಿಸಲ್ಪಟ್ಟಿದೆ. ಹಾಗು ಇವು ಅತ್ಯಂತ ಶ್ರೇಷ್ಠ ಸಂಶೋಧನೆಯಾಗಿದೆ, ಸಮ್ಮಾ ಸಂಬುದ್ಧರಿಂದ ಪ್ರಕಾಶಿಲ್ಪಟ್ಟಿದೆ. ಹಾಗು ಇವು ಸತ್ಯಗಳಾಗಿವೆ. ಆದ್ದರಿಂದ ಇವನ್ನು 4 ಆರ್ಯಸತ್ಯಗಳೆಂದು ಕರೆಯುತ್ತಾರೆ.
1.ದುಃಖ ಸತ್ಯ :
ಇದೇ ದುಃಖ ಸತ್ಯ, ಓ ಭಿಕ್ಷುಗಳೇ :
                ಜನ್ಮವು ದುಃಖಕರ, ಮುಪ್ಪು ದುಃಖಕರ, ರೋಗ ದುಃಖಕರ, ಮರಣವು ದುಃಖಕರ, ಅಪ್ರಿಯರೊಡನೆ (ಅಪ್ರಿಯವಾದುದರಲ್ಲಿ) ಮಿಲನ ದುಃಖಕರ, ಪ್ರಿಯರ ವಿಯೋಗ (ಪ್ರಿಯವಾದುದರ ವಿಯೋಗ) ದುಃಖಕರ, ಬಯಸಿದ್ದು ಈಡೇರದಿದ್ದಾಗ ದುಃಖಕರ, ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಪಂಚಖಂಧಗಳ (ದೇಹ ಮತ್ತು ಮನಸ್ಸಿನ) ಅಂಟು (ಸ್ನೇಹ) ದುಃಖಕರ.
                ಇದರಲ್ಲಿ ಶರೀರಕ್ಕೆ ಸಂಬಂಧಪಟ್ಟಂತೆ ನಾಲ್ಕು ದುಃಖಗಳಿವೆ. ಅಂದರೆ ಹುಟ್ಟುವಾಗ ದುಃಖ, ಯೌವ್ವನದಿಂದ ವಿಮುಖವಾಗಿ ವೃದ್ಧಾಪ್ಯಕ್ಕೆ ಸಾಗುವ ದುಃಖ, ಆರೋಗ್ಯ ಕ್ಷೀಣಿಸಿ ರೋಗಕ್ಕೆ ಈಡಾಗುವ ದುಃಖ, ಜೀವನದಿಂದ ಮೃತ್ಯುವಿಗೆ ವಶವಾಗುವ ದುಃಖ. ಈ ನಾಲ್ಕು ದುಃಖಗಳು ಬಹುಪಾಲು ಶಾರೀರಿಕವಾಗಿವೆ.
                ಉಳಿದ ಮೂರು ಬಹುಪಾಲು ಮನಸ್ಸಿನ ದುಃಖವಾಗಿದೆ. ಅಂದರೆ ಅಪ್ರಿಯರ ಅಥವಾ ಅಪ್ರಿಯವಾದುದರ ಸಮಾಗಮ ದುಃಖ, ಹೇಗೆಂದರೆ ನಾವು ಕೆಲವು ವ್ಯಕ್ತಿಗಳನ್ನು, ನಷ್ಟವನ್ನು, ಸೋಲನ್ನು, ನಿಂದೆಯನ್ನು, ರೋಗವನ್ನು, ಮುಪ್ಪನ್ನು, ಮರಣವನ್ನು ಇಷ್ಟಪಡುವುದಿಲ್ಲ. ಆದರೂ ಇವುಗಳ ಸಂಪರ್ಕ ನಿಶ್ಚಿತವಾಗುತ್ತದೆ. ಹಾಗು ನಾವು ದುಃಖಪಡುವೆವು.
                ಹಾಗೆಯೇ ಪ್ರಿಯರ ವಿಯೋಗ ಅಥವಾ ಪ್ರಿಯವಾದುದರ ವಿಯೋಗವಾಗುತ್ತದೆ. ಅಂದರೆ ನಾವು ಇಷ್ಟಪಡುವಂತಹ ವ್ಯಕ್ತಿಗಳು ನಮ್ಮಿಂದ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ  ದೂರವಾಗಬಹುದು. ಅಥವಾ ನಮ್ಮ ಜಯ, ಯಶಸ್ಸು, ಲಾಭ, ಕೀತರ್ಿ, ಆರೋಗ್ಯ, ಯೌವ್ವನ ಮತ್ತು ಜೀವನ ನಮ್ಮಿಂದ ವಿಯೋಗ ಆಗಬಹುದು. ಆಗ ನಾವು ದುಃಖ ಪಡುವೆವು.
                ಹಾಗೆಯೇ ನಾವು ಬಹಳಷ್ಟು ಬಯಸುತ್ತೇವೆ. ಅವು ಈಡೇರುವುದಿಲ್ಲ. ಆಗ ನಾವು ದುಃಖಿಸುತ್ತೇವೆ. ಉದಾಹರಣೆಗೆ ಕುರೂಪಿಯು ಸೌಂದರ್ಯವನ್ನು, ದರಿದ್ರನು ಧನವನ್ನು, ರೋಗಿಯು ಬಲಿಷ್ಠತೆಯನ್ನು, ವೃದ್ಧನು ಯೌವ್ವನವನ್ನು, ಮೃತ್ಯು ಶಯ್ಯೆಯಲ್ಲಿರುವವನು ಜೀವನವನ್ನು, ಸಾಧಾರಣವಾಗಿ ಬಹುಪಾಲು ಜನರು ಧನ ಹಾಗು ಸಂಗಾತಿಯನ್ನು ಬಯಸಿ ಈಡೇರದಿದ್ದಾಗ ದುಃಖಿಸುವರು.
                ಹೀಗೆ ಒಟ್ಟಾರೆ ಶಾರೀರಿಕ ಮತ್ತು ಮಾನಸಿಕ ದುಃಖ ಸೇರಿಸಿದಾಗ ಸಂಕ್ಷಿಪ್ತವಾಗಿ ಈ ದೇಹ ಮನಸ್ಸಿನ ನಂಟು ಅಥವಾ ಅಂಟು ನಮಗೆ ದುಃಖಕರವಾಗಿದೆ.
2.ದುಃಖಕ್ಕೆ ಕಾರಣ (ಸಮುದಯ) ಸತ್ಯ :
ಇದೇ ದುಃಖಕ್ಕೆ ಕಾರಣವಾದ ಸತ್ಯ
                ಭಿಕ್ಷುಗಳೇ -
                ಅದೆಂದರೆ (ದಾಹ) ತೀವ್ರ ಬಯಕೆ. ಇದರಿಂದಲೇ ಪುನರ್ಜನ್ಮ ಲಭಿಸುತ್ತದೆ. ಜನ್ಮದಿಂದ ಜನ್ಮಕ್ಕೆ ಬೀಳುತ್ತಿರುತ್ತಾನೆ. ಇಂದ್ರೀಯಾಸಕ್ತಿಯ ತೀವ್ರ ಬಯಕೆ (ಕಾಮತನ್ಹಾ), ಶಾಶ್ವತವಾಗಿ ಇರಬೇಕೆನ್ನುವ ತೀವ್ರ ಬಯಕೆ (ಭವತನ್ಹಾ) ನಾಶವಾಗಿ ಹೋಗಬೇಕು ಎನ್ನುವ (ವಿಭವ ತನ್ಹಾ) ತೀವ್ರ ಬಯಕೆ.
                ನಾವು ಬಹಳಷ್ಟು ಬಯಸುವೆವು. ಅವುಗಳಲ್ಲಿ ಬಹುಪಾಲು ಈಡೇರುವುದಿಲ್ಲ ಆಗ ನಾವು ದುಃಖಿಸುವೆವು. ಸಾಮಾನ್ಯವಾಗಿ ನಾವು ಈಡೇರದಿದ್ದುದಕ್ಕಾಗಿ ಅದೇ ದುಃಖಕ್ಕೆ ಕಾರಣ ಎನ್ನುತ್ತೇವೆ. ಆದರೆ ಅದಕ್ಕೆ ಮೂಲ ಆ ಬಯಕೆಯೇ ಆಗಿದೆ.
                ಕೆಲವೊಮ್ಮೆ ನಮ್ಮ ಬಯಕೆಗಳ ತರಹವೇ ಜೀವನ ನಡೆಯುತ್ತದೆ. ಆದರೆ ವರ್ತಮಾನ ಎಷ್ಟೇ ಚೆನ್ನಾಗಿದ್ದರೂ ಭವಿಷ್ಯ ನಂಬುವಂತಿಲ್ಲ. ನಾವು ಏನೆಲ್ಲವನ್ನು ಪ್ರಿಯವೆಂದು ಭಾವಿಸಿದ್ದೇವೋ ಅವೆಲ್ಲವೂ ವಿಯೋಗವಾಗಿ ಹೋಗುತ್ತದೆ.
                ಉದಾ:- ಯೌವ್ವನ, ಆರೋಗ್ಯ, ಜೀವನ, ಸಂಗಾತಿ, ಮಕ್ಕಳು, ಸ್ನೇಹ, ಐಶ್ವರ್ಯ, ಕೀತರ್ಿ, ಅಧಿಕಾರಿ ಇತ್ಯಾದಿ ವಿಯೋಗವಾಗುತ್ತದೆ, ಆಗ ದುಃಖವಾಗುತ್ತದೆ. ನಾವು ಶಾಶ್ವತವಾಗಿ ಜೀವಿಸಬೇಕು (ಭವತನ್ಹಾ) ಎಂದು ಭಾವಿಸುತ್ತೇವೆ. ಆದರೆ ಹಾಗೆ ಆಗುವುದಿಲ್ಲ. ಸತ್ತಮೇಲೆಯಾದರೂ ಶಾಶ್ವತವಾಗಿ ನೆಲೆಸಬೇಕೆಂದು ನಾನಾ ಕಸರತ್ತುಗಳನ್ನು ನಡೆಸುತ್ತೇವೆ. ಅಥವಾ ಜೀವನದಲ್ಲಿ ಜಿಗುಪ್ಸೆ ಹೊಂದಿ ಇರಲೇಬಾರದು (ವಿಭವತನ್ಹಾ) ಎಂದು ಹಾತೊರೆಯುತ್ತೇವೆ. ಆತ್ಮಹತ್ಯೆಗೆ ಯತ್ನಿಸುತ್ತೇವೆ. ಜನ್ಮವೇ ಬೇಡವೆಂದು ದ್ವೇಷಿಸುತ್ತೇವೆ. ಇವೆಲ್ಲಾ ತೀವ್ರ ಬಯಕೆಗಳಾಗಿವೆ (ತನ್ಹಾ) ಆಗಿದೆ. ಇದೇ ದುಃಖಕ್ಕೆ ತತ್ಕ್ಷಣದ ಕಾರಣವಾಗಿದೆ.
                ಎಂದೂ ನಾವು ಬಯಕೆಗಳನ್ನು ಹೊಂದಿರುವುದಿಲ್ಲವೋ ಆಗ ನಾವು ನಿಜಕ್ಕೂ ಶಾಂತವಾಗಿ ಸುಖವಾಗಿ ಇರುತ್ತೇವೆ. ಆದರೆ ಹಿಂದಿನ ಪ್ರವೃತ್ತಿಗಳಿಂದಾಗಿ ಮತ್ತು ಇಂದಿನ ಉದ್ರೇಕಭರಿತ ಸನ್ನಿವೇಶಕ್ಕೆ ಬಲಿಯಾಗಿ ನಾವು ತೀವ್ರ ಬಯಕೆ ಪಡುತ್ತಿದ್ದೇವೆ. ಹಾಗೆ ದುಃಖ ಅನುಭವಿಸುತ್ತಿದ್ದೇವೆ. ಬಯಕೆಗಳೇ ದುಃಖದ ಕಾರಣವಾಗಿದೆ. ಏಕೆಂದರೆ ಬಯಕೆಯು ಎಂದಿಗೂ ಪೂರ್ಣವಾಗಿ ತೃಪ್ತಿಹೊಂದಲಾರವು. ಬಯಕೆಗಳಿಂದಲೇ ದುಃಖವು, ಶೋಕವೂ, ಚಿಂತೆಯು, ಭಯವು, ಕೋಪವು, ಕಶ್ಮಲಗಳು ಉದಯಿಸುತ್ತದೆ. ಯಾರಿಗೆ ಬಯಕೆಗಳಿಲ್ಲವೋ ಅವರಿಗೆ ಬಂಧನವಿಲ್ಲ, ದುಃಖವಿಲ್ಲ, ಶೋಕವಿಲ್ಲ, ಭಯವಿಲ್ಲ, ಚಿಂತೆಯಿಲ್ಲ, ಕೋಪವಿಲ್ಲ, ಕಶ್ಮಲಗಳು ಇರುವುದಿಲ್ಲ.
                ಯಾವುದೆಲ್ಲವೂ ಪರರನ್ನು ಅವಲಂಬಿಸಿದೆಯೋ ಅದೆಲ್ಲವೂ ದುಃಖಕರ ಸ್ವ-ಪ್ರಭುವಾಗುವುದೇ ಸುಖಕರವಾಗಿದೆ.
       3.ದುಃಖ ನಿರೋಧ ಸತ್ಯ : ಇದೇ ಓ ಭಿಕ್ಷುಗಳೇ ದುಃಖ ನಿರೋಧ ಸತ್ಯವಾಗಿದೆ.
                ತನ್ಹಾದಿಂದ (ತೀವ್ರ ಬಯಕೆಯಿಂದ) ಪೂರ್ಣವಾಗಿ ಪ್ರತ್ಯೇಕವಾಗುವುದೇ, ತೊಡೆದುಹಾಕುವುದೇ, ಬಿಡುಗಡೆ ಪಡೆಯುವುದೇ, ಅಂತ್ಯ ಮಾಡುವುದೇ, ನಿಲ್ಲಿಸುವುದೇ, ನಿರೋಧಿಸುವುದೇ ನಿಬ್ಬಾಣವಾಗಿದೆ.
                ಪ್ರಿಯ ಬಯಕೆ ಇಲ್ಲದವನು ದುಃಖರಹಿತನಾಗುತ್ತಾನೆ. ಯಾರಿಗೆ ಯಾವ ಪ್ರಿಯ ಬಯಕೆಗಳಿಲ್ಲವೋ ಅವರಿಗೆ ಯಾವ ದುಃಖವು ಇಲ್ಲ. ಯಾರಲ್ಲಿ ಉದ್ರೇಕ ಹಾಗು ವಿಷಾದವಿಲ್ಲವೋ ಅವರಿಗೆ ಶೋಕರಹಿತ ಎನ್ನುತ್ತೆವೆ. ಹೇಗೆ ಮುಳ್ಳಿನಿಂದ ಚುಚ್ಚಿಕೊಂಡ ವ್ಯಕ್ತಿ ಸರ್ವ ದಿಕ್ಕುಗಳಲ್ಲಿ ಓಡುವನೋ ಅದೇ ಮುಳ್ಳು ತೆಗೆದ ನಂತರ ಆತನು ಓಡುವುದು ಇಲ್ಲ, ಮುಳುಗುವುದು ಇಲ್ಲ, ಹೀಗೆ ಎಲ್ಲವನ್ನೂ ಪೂರ್ಣವಾಗಿ ಅರಿತವರು ಯಾವುದರಲ್ಲಿಯೂ ರಮಿಸದೆ ಅವರು ದುಃಖವೆಲ್ಲದರಿಂದ ಮುಕ್ತರಾಗುತ್ತಾರೆ.
                ನಾವು ದುಃಖದಿಂದ ವಿಮುಕ್ತರಾಗಬೇಕಾದರೆ ಕಾಮತನ್ಹಾ, ಭವತನ್ಹಾ, ವಿಭವತನ್ಹಾ ಮೂರರಿಂದಲೂ ಮುಕ್ತರಾಗಬೇಕಾಗಿದೆ.
                ಕಾಮತನ್ಹಾದಲ್ಲಿ ನಾವು ಇಂದ್ರಿಯಾಸಕ್ತಿ, ಬಂಧು ಮಿತ್ರಾಸಕ್ತಿ, ಸತಿಪುತ್ರಾಸಕ್ತಿ, ಐಶ್ವರ್ಯ ಕೀತರ್ಿ ಅಧಿಕಾರಗಳ ಆಸಕ್ತಿ ಪೂರ್ಣವಾಗಿ ತೊಡೆಯಬೇಕಾಗುತ್ತದೆ. ಏಕೆಂದರೆ ಎಲ್ಲಿಯವರೆಗೆ ಆಸಕ್ತಿ ಇರುವುದೋ ಅಲ್ಲಿಯವರೆಗೆ ಅವುಗಳಿಂದ ಉದಯಿಸುವ ದುಃಖದಿಂದ ಪಾರಾಗಲು ಸಾಧ್ಯವಿಲ್ಲ. ಅಪಾರವಾಗಿ ಅಂಟಿಕೊಂಡರೆ ಅಪಾರ ದುಃಖ, ಅಲ್ಪವಾಗಿ ಅಂಟಿದ್ದರೆ ಅಲ್ಪ ದುಃಖ, ಲವಲೇಶವು ಅಂಟದಿದ್ದರೆ ಲವಲೇಶ ದುಃಖವು ಇಲ್ಲ.
                ಹಾಗೆಯೇ ಭವ, ವಿಭವ ತನ್ಹಾ ತೊರೆಯಲು ನಮ್ಮ ದೇಹ ಮನಸ್ಸಿನ ಬಗ್ಗೆ ತೀವ್ರ ಬಯಕೆ ಪಡಬಾರದು. ಇರಬೇಕು ಅಥವಾ ಇರಬಾರದು ಇವ್ಯಾವುವು ಇರಬಾರದು.
                ಹೊಸದಾದ ಯಾವ ಬಂಧನವು ಉದಯಿಸಲು ಅವಕಾಶ ನೀಡಬಾರದು. ಹಳೆಯ ಬಂಧನಗಳನ್ನು ಕ್ಷಯಿಸಬೇಕು. ಇದೇ ವಿಮುಕ್ತಿಯ ಹಾದಿಯಾಗಿದೆ. ಇವರ ಪೂರ್ಣ ವಿವರಣೆ ಮುಂದೆ ನಿಬ್ಬಾಣ ಅಧ್ಯಾಯದಲ್ಲಿ ಬರುತ್ತದೆ.
.               4.ದುಃಖನಿರೋಧ ಗಾಮಿನೀ ಪಟಿಪದಾ (ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ):
                ಈಗ ಇದೇ ಓ ಭಿಕ್ಷುಗಳೇ, ದುಃಖ ನಿರೋಧಕ್ಕೆ ಕೊಂಡೊಯುವ ಮಾರ್ಗವಾಗಿದೆ. ಅದೆಂದರೆ ಆರ್ಯ ಅಷ್ಠಾಂಗ ಮಾರ್ಗ.
                ಇದು ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗವಾಗಿದೆ. ಇದಕ್ಕೆ ಆರ್ಯ ಅಷ್ಠಾಂಗ ಮಾರ್ಗ ಎನ್ನುತ್ತಾರೆ. ಇದು ಶ್ರೇಷ್ಠರಿಂದ (ಆರ್ಯರಿಂದ) ಬೋಧಿಸಲ್ಪಟ್ಟಿದ್ದರಿಂದಾಗಿ ಮತ್ತು ಶ್ರೇಷ್ಠತ್ವದ ಅಂಶಗಳಿಂದ ಕೂಡಿ ಮಹತ್ತರವಾದ್ದರಿಂದ ಆರ್ಯ ಎನಿಸುತ್ತದೆ. ಇವು ಎಂಟು ಅಂಗಗಳಿಂದ ಕೂಡಿರುವುದರಿಂದ ಇದಕ್ಕೆ ಅಷ್ಠಾಂಗ ಮಾರ್ಗ ಎನ್ನುತ್ತಾರೆ.
                ಇದು ಇಂದ್ರಿಯಭೋಗ ಹಾಗು ದೇಹದಂಡನೆಗಳ ಅತಿರೇಕ ಮೀರಿರುವುದರಿಂದ ಇದಕ್ಕೆ ಮಧ್ಯಮ ಮಾರ್ಗ ಎನ್ನುತ್ತಾರೆ.
                ಇಂದ್ರೀಯ ಭೋಗವನ್ನು ನಾವು ಏಕೆ ಮೀರಬೇಕೆಂದರೆ ಅದು ತುಚ್ಛವಾದುದು, ಅಸಭ್ಯವಾದುದು, ಪ್ರಾಪಂಚಿಕವಾದುದು, ಶ್ರೇಷ್ಠವಲ್ಲದ್ದು ಮತ್ತು (ಲಾಭರಹಿತವಾದುದು) ಅನರ್ಥಕಾರಿಯಾದದ್ದು.
                ದೇಹದಂಡನೆಗಳು ನಾವು ಏಕೆ ಮೀರಬೇಕೆಂದರೆ ಅದು ದುಃಖಕಾರಿ (ನೋವು), ಶ್ರೇಷ್ಠವಲ್ಲದ್ದು ಮತ್ತು ಅನರ್ಥ (ಲಾಭರಹಿತವಾದುದು)ಕಾರಿಯಾಗಿದೆ.
                ಇಂದ್ರಿಯ ಭೋಗ ಮತ್ತು ದೇಹದಂಡನೆ ಇವುಗಳನ್ನು ಮೀರಿದ ಈ ಆರ್ಯ ಅಷ್ಠಾಂಗದಿಂದ ನಾವು ಪಡೆಯತಕ್ಕಂತಹ ಲಾಭ ಏನೆಂದರೆ - ಯೋಗ್ಯ ದೃಷ್ಟಿಕೋನ, ಜ್ಞಾನ, ಶಾಂತತೆ, ಅಭಿಜ್ಞಾ (ಶ್ರೇಷ್ಠ ಸಮಾಧಿ ಲಾಭದ ಜ್ಞಾನ), ಸಂಬೋಧಿ (ಜ್ಞಾನೋದಯ ಮತ್ತು ನಿಬ್ಬಾಣ (ದುಃಖರಹಿತತೆ ಪ್ರಾಪ್ತಿ).
                ಮೊದಲನೆಯ ಸತ್ಯವನ್ನು ಅರಿಯಬೇಕಾಗುತ್ತದೆ, ಎರಡನೆಯ ಸತ್ಯವನ್ನು ಅಂದರೆ ಕಾರಣವನ್ನು ಪೂರ್ಣವಾಗಿ ತೆಗೆಯಬೇಕಾಗುತ್ತದೆ. ಮೂರನೆಯ ಸತ್ಯವನ್ನು (ನಿಬ್ಬಾಣ) ಸಾಕ್ಷಾತ್ಕರಿಸಬೇಕಾಗುತ್ತದೆ ಮತ್ತು ನಾಲ್ಕನೆಯ ಸತ್ಯವನ್ನು ಅಭಿವೃದ್ಧಿಗೊಳಿಸಿ ಪೂರ್ಣರಾಗಬೇಕಾಗುತ್ತದೆ. ಆಗ ಅವರು ದುಃಖ ಮುಕ್ತರಾಗುತ್ತಾರೆ.
ಆರ್ಯ ಅಷ್ಠಾಂಗ ಮಾರ್ಗ
1.            ಸಮ್ಮಾ ದಿಟ್ಟಿ (ಯೋಗ್ಯವಾದ ದೃಷ್ಟಿಕೋನ)
2.            ಸಮ್ಮಾ ಸಂಕಪ್ಪ (ಯೋಗ್ಯವಾದ ಸಂಕಲ್ಪ / ಯೋಚನೆ)
3.            ಸಮ್ಮಾ ವಾಚಾ (ಯೋಗ್ಯವಾದ ಸಂಭಾಷಣೆ)
4.            ಸಮ್ಮಾ ಕಮ್ಮಂತ (ಯೋಗ್ಯವಾದ ಕರ್ಮ)
5.            ಸಮ್ಮಾ ಅಜೀವೋ (ಯೋಗ್ಯವಾದ ಜೀವನೋಪಾಯ)
6.            ಸಮ್ಮಾ ವಾಯಾಮೋ (ಯೋಗ್ಯವಾದ ವ್ಯಾಯಾಮ / ಪ್ರಯತ್ನಶೀಲತೆ)
7.            ಸಮ್ಮಾ ಸತಿ (ಯೋಗ್ಯವಾದ ಸ್ಮೃತಿ)
8.            ಸಮ್ಮಾ ಸಮಾಧಿ (ಯೋಗ್ಯವಾದ ಸಮಾಧಿ / ಏಕಾಗ್ರತೆ)
                ಇದರಲ್ಲಿ ಸಮ್ಮಾ ದೃಷ್ಟಿಕೋನ ಮತ್ತು ಸಮ್ಮಾ ಸಂಕಲ್ಪ ಇವು ಸೇರಿ ಪ್ರಜ್ಞಾ ಎನಿಸುತ್ತದೆ.
                ಸಮ್ಮಾ ವಾಚಾ, ಸಮ್ಮಾ ಕರ್ಮ ಮತ್ತು ಸಮ್ಮಾ ಅಜೀವೋ ಇವು ಸೇರಿ ಶೀಲ ಆಗುತ್ತದೆ.
                ಸಮ್ಮಾ ವ್ಯಾಯಾಮೋ, ಸಮ್ಮಾ ಸತಿ ಮತ್ತು ಸಮ್ಮಾ ಸಮಾಧಿ ಇವು ಸೇರಿ ಸಮಾಧಿ ಆಗುತ್ತದೆ.
               
. ನಿಮಗೆ ನೀವೇ ಶ್ರಮಿಸಬೇಕು, ತಥಾಗತರು ಕೇವಲ ಮಾರ್ಗವನ್ನು ಮಾತ್ರ ತೋರಿಸುತ್ತಾರೆ, ಮಾರ್ಗಗಲ್ಲಿ ಅಷ್ಠಾಂಗ ಮಾರ್ಗವೇ ಶ್ರೇಷ್ಠ, ಯಾರು ಈ ಮಾರ್ಗದಲ್ಲಿ ಹೋಗುತ್ತಾರೋ ಅವರು ಬುದ್ಧರ ಬೋಧನೆಯಂತೆ ನಡೆದು ದುಃಖಮುಕ್ತರು ಆಗುತ್ತಾರೆ.

(ಧಮ್ಮಪದ 276)

more paths for nibbana/ಅರಹತ್ವಕ್ಕೆ (ನಿಬ್ಬಾಣಕ್ಕೆ) ಹಲವು ಹಾದಿಗಳು

ಅರಹತ್ವಕ್ಕೆ (ನಿಬ್ಬಾಣಕ್ಕೆ) ಹಲವು ಹಾದಿಗಳು

                ಒಮ್ಮೆ 4 ಭಿಕ್ಷುಗಳು ಬುದ್ಧ ಭಗವಾನರ ಬಳಿ ಧ್ಯಾನದ ವಿಷಯ ವಸ್ತು ಕೇಳಿದರು. ಭಗವಾನವರು ಅವರವರ ಪ್ರಚ್ಚನ್ನತೆಗೆ ತಕ್ಕಂತೆ ಅವರಿಗೆ (ಪರಿಕಮ್ಮ ನಿಮಿತ್ತ) ಧ್ಯಾನ ವಿಷಯ ವಸ್ತು ತಿಳಿಸಿದರು. ಅವರು ಅದನ್ನು ಪಡೆದು ಹಗಲು-ರಾತ್ರಿ ಪರಿಶ್ರಮಿಸಿದರು. ಅವರಲ್ಲಿ ಒಬ್ಬ 4 ಮಹಾಭೂತವನ್ನು ಮತ್ತೊಬ್ಬ 18 ಧಾತುಗಳನ್ನೇ ವಿಷಯವಸ್ತುವಾಗಿ ಪಡೆದುಕೊಂಡರು. ಮಗದೊಬ್ಬ ಪಂಚಖಂಧವನ್ನು ಮತ್ತು ಕೊನೆಯವನು ಆರು ಆಯತನವನ್ನು ಧ್ಯಾನ ವಸ್ತುವಾಗಿ ಪಡೆದುಕೊಂಡನು. ಅವರೆಲ್ಲರೂ ಅರಹಂತರಾದರು. ಅವರೆಲ್ಲರೂ ತಮ್ಮ ಧ್ಯಾನವಸ್ತು ಭಿನ್ನ, ಆದರೆ ನಿಬ್ಬಾಣ ಮಾತ್ರ ಒಂದೇ. ಇದು ಹೇಗೆ ಎಂಬ ಅನುಮಾನ ಮೂಡಿ ಭಗವಾನರಲ್ಲಿ ಬಂದು ಈ ವಿಷಯವನ್ನು ಕೇಳಿದರು. ಆಗ ಭಗವಾನರು ಅವರಿಗೆ ಭಿಕ್ಷುಗಳೇ ನಿಮಗೆ ಕಿಂಶುಕ ವೃಕ್ಷವನ್ನು ನೋಡಿದ ಸೋದರರಿಗೆ ಉಂಟಾಗಿದ್ದ ಸಂಶಯ ಬಂದಿತೇ?
                ಆ ವಿಷಯ ತಿಳಿಸುವಂತೆ ಭಿಕ್ಷುಗಳು ಪ್ರಾಥರ್ಿಸಿದರು.
                ಭಗವಾನವರು ಆಗ ಹಿಂದಿನ ಜಾತಕದ ಕಥೆ ತಿಳಿಸಿದರು. ಹಿಂದಿನ ಜನ್ಮದಲ್ಲಿ ಭಗವಾನರು ವಾರಾಣಾಸಿಯ ರಾಜರಾಗಿದ್ದರು. ಆಗ ಈಗಿನ ಈ ನಾಲ್ಕು ಭಿಕ್ಷುಗಳೇ ಹಿಂದಿನ ಜನ್ಮದಲ್ಲಿ ಅವರಿಗೆ ಮಕ್ಕಳಾಗಿದ್ದರು. ಒಮ್ಮೆ ಈ ನಾಲ್ಕು ಮಕ್ಕಳು ತಂದೆಯ ಬಳಿಗೆ ಬಂದು ತಾವು ಕಿಂಶುಕ ವೃಕ್ಷವನ್ನು ನೋಡಬೇಕೆಂದು ತಿಳಿಸಿದರು. ರಾಜರು ಆಗ ಸಾರಥಿಗೆ ಈ ಕಾರ್ಯ ಒಪ್ಪಿಸಿದರು. ಆತನು ಹಿರಿಯ ಮಗನಿಗೆ ಬೋಳಾಗಿದ್ದ ಕಿಂಶುಕ ವೃಕ್ಷವನ್ನು, ಎರಡನೆಯವನಿಗೆ ಸಣ್ಣ ಚಿಗುರು ಕಿಂಶುಕ ವೃಕ್ಷವನ್ನು, ಮೂರನೆಯವನಿಗೆ ಹೂಗಳು ತುಂಬಿದ ಕಿಂಶುಕ ವೃಕ್ಷ ತೋರಿಸಿದನು. ಈ ನಾಲ್ಕು ರಾಜಕುಮಾರರು ತಮ್ಮ ಅನುಭವ ಹಂಚಿಕೊಂಡಾಗ ಅವರಲ್ಲಿ ಭಿನ್ನಾಭಿಪ್ರಾಯ ಮೂಡಿ ಮತ್ತೆ ರಾಜರ ಬಳಿಗೆ  ಬಂದರು. ಆಗ ಮಹಾರಾಜರು ಕಿಂಶುಕ ವೃಕ್ಷದ ವಿವಿಧ ಅವಸ್ಥೆ ತಿಳಿಸಿ ಅವರ ಸಂದೇಹ ನೀಗಿಸಿದರು.
                ನಂತರ ಭಗವಾನರು ಅವರಿಗೆ ಇದು ಸಹ ಇದೇ ಬಗೆಯಾದ ಸಂದೇಹವೆಂದು ತಿಳಿಸಿ, ಇವೆಲ್ಲವೂ ನಿಬ್ಬಾಣಕ್ಕೆ, ಅರಹತ್ವಕ್ಕೆ, ವಿವಿಧ ಮಾರ್ಗಗಳೆಂದು ತಿಳಿಸಿ ಅವುಗಳನ್ನು ವಿಶ್ಲೇಷಿಸಿ ವಿವರಿಸಿದಾಗ ಅವರಿಗಿದ್ದ ಸಂದೇಹ ನಿವಾರಣೆಯಾಯಿತು.
                ಹೀಗೆಯೇ ಇದೇ ರೀತಿಯಲ್ಲಿ ಬುದ್ಧ ಭಗವಾನರು ವಿವಿಧ ರೀತಿಯಲ್ಲಿ ತಮ್ಮ ಬೋಧನೆಯನ್ನು ಪ್ರಕಟಪಡಿಸಿದ್ದಾರೆ. ಈ ಬೋಧನೆಯ ಬೋಧಿಯ ಹಾದಿಯನ್ನು ನಾವು ಆಲಿಸಿದಾಗ ನಮ್ಮ ಮಿಥ್ಯಾದೃಷ್ಠಿಯು ತೊಡೆದು ಹೋಗಿ ಸಮ್ಮಾದೃಷ್ಟಿಯ ತಳಹದಿಯ ಮೇಲೆ ನಾವು ನಿಲ್ಲುವೆವು. ಆದ್ದರಿಂದ ಪ್ರಾಥಮಿಕವಾಗಿ ನಾವು ಧ್ಯಾನ ಸಾಧನೆಗೆ ಮುನ್ನ ಬೋಧನೆಯನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಬುದ್ಧ ಭಗವಾನರು ತಮ್ಮ ಬೋಧನೆಯನ್ನು ಅಥವಾ ಧ್ಯಾನ ವಿಧಾನಗಳನ್ನು ಈ ರೀತಿಗಳಲ್ಲಿ ವಿವರಿಸಿದ್ದಾರೆ:
1.            ನಾಲ್ಕು ಆರ್ಯಸತ್ಯಗಳು ಮತ್ತು ಆರ್ಯ ಅಷ್ಠಾಂಗ ಮಾರ್ಗ.
2.            ಅವಲಂಬನೆಯಿಂದ ಉದಯಿಸುವಿಕೆ (ಪಟಿಚ್ಚ ಸಮುಪ್ಪಾದ).
3.            ಕುಶಲ ಮತ್ತು ಅಕುಶಲವನ್ನು ಹಾಗು ಅವುಗಳ ಮೂಲವನ್ನು ಅರಿಯುವಿಕೆ.
4.            ಇಂದ್ರೀಯಗಳ ಪೂರ್ಣ ಸ್ವರೂಪ ಅರಿಯುವಿಕೆ.
5.            ಧಾತುಗಳನ್ನು ಅರಿಯುವಿಕೆ.

6.            ಪಂಚಖಂಧ (ಐದು ಸ್ಕಂದ) (ದೇಹ ಮತ್ತು ಮನಸ್ಸು) ಅರಿಯುವಿಕೆ ಇತ್ಯಾದಿ...

samma ditthi(the right view/ಸಮ್ಮಾದಿಟ್ಠಿ (ಸಮ್ಯಕ್ ದೃಷ್ಟಿಕೋನ)

ಸಮ್ಮಾದಿಟ್ಠಿ (ಸಮ್ಯಕ್ ದೃಷ್ಟಿಕೋನ)
                ಸಮ್ಯಕ್ ದೃಷ್ಟಿಕೋನ (ಸಮ್ಮಾದಿಟ್ಟಿ) ಅಂದರೆ ಯೋಗ್ಯವಾದ (ಸರಿಯಾದ) ರೀತಿಯಲ್ಲಿ ಅರಿಯುವಿಕೆ. ಅಂದರೆ ನಾಲ್ಕು ಆರ್ಯಸತ್ಯಗಳ ಯತಾರ್ಥ ಜ್ಞಾನ. ಯಾರು ಆರ್ಯ ಅಷ್ಟಾಂಗ ಮಾರ್ಗವನ್ನು ಸಾಧಿಸುವನೋ ಆತನು ನಿಬ್ಬಾಣವನ್ನು ಸಾಧಿಸುತ್ತಾನೆ. ಇದೇ ಸಮ್ಮಾದಿಟ್ಟಿಯಾಗಿದೆ. ಬುದ್ಧ ಭಗವಾನರು ಇದನ್ನು ಒಂದನೆಯ ಮೆಟ್ಟಿಲಾಗಿಸಿದ್ದಾರೆ. ಅಂದರೆ ಆರ್ಯ ಅಷ್ಟಾಂಗ ಮಾರ್ಗದಲ್ಲಿ ಮೊದಲನೆಯದೇ ಸಮ್ಮಾದಿಟ್ಟಿ. ಏಕೆಂದರೆ ಮೊದಲು ನಮಗೆ ಯೋಗ್ಯ ತಿಳುವಳಿಕೆಯಾದರೆ ಮಾತ್ರ ಮುಂದೆ ಅದನ್ನು ಸಿದ್ಧಿಸಲು ಸಂಕಲ್ಪಿಸುವೆವು. ಹಾಗೆಯೇ ಕಾರ್ಯಗತ ಮಾಡಿ ಅದನ್ನು ಸಿದ್ಧಿಸುವೆವು.
                ಸಮ್ಮಾದಿಟ್ಟಿಯು ಮಹಾನಿಧಿಗೆ ಭೂಪಟವಿಚಿದ್ದಂತೆ. ಸಮ್ಮಾದಿಟ್ಟಿಯು ನಿಬ್ಬಾಣ ಮಾರ್ಗಕ್ಕೆ ಮಹಾ ದಾರಿದೀಪವಿದ್ದಂತೆ. ಯಾವಾಗ ಸಾಧಕನು ಮತ್ತು ಆರ್ಯಸತ್ಯಗಳನ್ನು ಯತಾರ್ಥವಾಗಿ ತನ್ನ ಪ್ರಜ್ಞಾಶೀಲತೆಯಿಂದ ಅರಿಯುತ್ತಾನೋ, ನಿಬ್ಬಾಣವನ್ನು ಗುರಿಯಾಗಿಸುತ್ತಾನೋ ಆಗ ಆತನಲ್ಲಿ ಅಜ್ಞಾನದ ಪ್ರವೃತ್ತಿ ನಾಶವಾಗುತ್ತದೆ. ಇದೇ ಸಮ್ಮಾದೃಷ್ಟಿಯಾಗಿದೆ.
                ಸಮ್ಮಾದೃಷ್ಟಿಯ ಲಕ್ಷಣವೇನೆಂದರೆ ಯತಾರ್ಥವಾಗಿ ಅಂದರೆ (ಸತ್ಯ) ಅದು ಇರುವಂತೆಯೇ ಕಾಣುವುದು. ತೋರಿಕೆಯ ಸತ್ಯ ಮೀರಿ ಯತಾರ್ಥ ಸತ್ಯ ಅರಿಯುವುದು. ಸಮ್ಮಾದಿಟ್ಟಿಯ ಕ್ರಿಯೆ ಏನೆಂದರೆ ಸತ್ಯವನ್ನು ಪ್ರಕಾಶಿಸುವುದು. ಇದು ಅಜ್ಞಾನದ ಅಥವಾ ಮಿಥ್ಯಾದೃಷ್ಟಿಯ ನಾಶದಿಂದ ಸ್ಥಾಪಿತವಾಗುತ್ತದೆ.
                ಯಾವಾಗ ಆತನಲ್ಲಿ ಸಮ್ಮಾದಿಟ್ಟಿಯು ಸ್ಥಾಪಿತವಾಗವುದೋ ಆಗ ಆತನ ಮನಸ್ಸು ನಿಬ್ಬಾಣದೆಡೆಗೆ ಕೇಂದ್ರಿಕೃತವಾಗುತ್ತದೆ.
                ಆಗ ಆತನು ಮಿಥ್ಯ ಸಂಕಲ್ಪ (ಯೋಚನೆ) ತೊರೆಯುತ್ತಾನೆ.
                ಆಗ ಆತನು ಮಿಥ್ಯ ವಾಚಾದಿಂದ ವಿಮುಕ್ತನಾಗುತ್ತಾನೆ.
                ಆಗ ಆತನು ಮಿಥ್ಯ ಕರ್ಮದಿಂದ ವಿಮುಕ್ತನಾಗುತ್ತಾನೆ.
                ಆಗ ಆತನು ಮಿಥ್ಯ ಜೀವನೋಪಾಯ ವಿಮುಕ್ತನಾಗುತ್ತಾನೆ.
                ಆಗ ಆತನು ಸೋಮಾರಿತನ ತ್ಯಜಿಸಿ ಮಿಥ್ಯ ಪ್ರಯತ್ನದಿಂದ ವಿಮುಕ್ತನಾಗುತ್ತಾನೆ.
                ಆಗ ಆತನು ಅಲಕ್ಷ ಹಾಗು ಮಿಥ್ಯ ಎಚ್ಚರಿಕೆಯಿಂದ ವಿಮುಕ್ತನಾಗುತ್ತಾನೆ.
                ಆಗ ಆತನು ಲೋಭ, ದ್ವೇಷ ಮತ್ತು ಮೋಹದ ಮಿಥ್ಯಾ ಸಮಾಧಿಯಿಂದ ವಿಮುಕ್ತನಾಗುತ್ತಾನೆ.
                ಈ ರೀತಿಯಾಗಿ ಆತನು ಸಮ್ಮಾದಿಟ್ಟಿಯಿಂದ ಉಳಿದ 7 ಅಂಗಗಳಾದ ಸಮ್ಮಾಸಂಕಲ್ಪ, ಸಮ್ಮಾವಾಚಾ, ಸಮ್ಮಾಕರ್ಮ, ಸಮ್ಮಾಅಜೀವ, ಸಮ್ಮಾ ವ್ಯಾಯಾಮ, ಸಮ್ಮಾ ಸ್ಮೃತಿ, ಸಮ್ಮಾ ಸಮಾಧಿಗಳನ್ನು ಅಭಿವೃದ್ಧಿಗೊಳಿಸುತ್ತಾನೆ.
                ಯಾವಾಗ ಒಬ್ಬನಲ್ಲಿ ಸಮ್ಮಾದಿಟ್ಟಿ ವೃದ್ಧಿಯಾಗುವುದು, ಆಗ ಆತನಲ್ಲಿ ಪ್ರಜ್ಞಾ ಪ್ರಬಲವಾಗಿ ಅಕುಶಲಗಳ ಸಮೂಹವನ್ನೇ ಕತ್ತರಿಸಿ ಹಾಕುವೆವು.

                ಎಲ್ಲಿಯವರೆಗೆ ಮಾನವ ದುಃಖ, ಅದರ ಕಾರಣ, ಅದರ ನಿರೋಧ (ನಿಬ್ಬಾಣ) ಮಧ್ಯಮ ಮಾರ್ಗ ಅರಿಯುವುದಿಲ್ಲವೋ ಅಲ್ಲಿಯವರೆಗೆ ಆತ ದುಃಖದಿಂದ ಮುಕ್ತನಾಗಲಾರ.