Sunday, 14 January 2018

THE IGNORANCE OF MAAGANDIA ಅಜ್ಞಾನ - ಮಾಗಂಡಿಯಳ ಪ್ರಸಂಗ

                                ಅಜ್ಞಾನ - ಮಾಗಂಡಿಯಳ ಪ್ರಸಂಗ


ಒಮ್ಮೆ ಬುದ್ಧ ಭಗವಾನರು ಶ್ರಾವಸ್ಥಿಯ ಜೇತವನ ವಿಹಾರದಲ್ಲಿ ತಂಗಿದ್ದರು. ಅಂದು ಬೆಳಿಗ್ಗೆ ಮಹಾಕರುಣಾ ಸಮಾಧಿಯಲ್ಲಿ ತಮ್ಮ ದಿವ್ಯ ಚಕ್ಷುಗಳಿಂದ ಯಾರಿಗೆ ಸಹಾಯ ಮಾಡಬೇಕೆಂದು ಗಮನಿಸಿದಾಗ ಅವರಿಗೆ ಮಾಗಂಡಿ ಬ್ರಾಹ್ಮಣ ಹಾಗು ಆತನ ಪತ್ನಿಯು ಕಾಣಿಸಿದರು. ಆ ಬ್ರಾಹ್ಮಣರು ಕಮ್ಮಸದಮ್ಮ ಹಳ್ಳಿಯಲ್ಲಿ ಕುದನ್ ಪ್ರಾಂತ್ಯದಲ್ಲಿ ವಾಸವಾಗಿದ್ದರು. ಅವರಿಬ್ಬರು ಅರಹಂತರಾಗುವ (ವಿಮುಕ್ತಿಯ ಪರಮಹಂತ) ಲಕ್ಷಣಗಳು ಕಾಣಿಸಿತು. ಆದ್ದರಿಂದ ಭಗವಾನರು ಶ್ರಾವಸ್ತಿಯಿಂದ ಕಮ್ಮಸದಮ್ಮ ಹಳ್ಳಿಗೆ ಹೊರಟರು. ಹಾಗು ಅಲ್ಲಿ ಮರಗಳ ತೋಪಿನಲ್ಲಿ ತಂಗಿದರು. ನಂತರ ಭಗವಾನರು ತಮ್ಮ ಸಹಜ ತ್ವಚೆ ವರ್ಣವಾದ ಸುವರ್ಣವನ್ನು ಇನ್ನಷ್ಟು ಪ್ರಕಾಶಿಸಿದರು. ಅದೇ ಸಮಯದಲ್ಲಿ ಬ್ರಾಹ್ಮಣ ಮಾಗಂಡಿಯು ಹೊಳೆಯಲ್ಲಿ ಬೆಳಗಿನ ಸ್ನಾನಕ್ಕೆ ಬಂದಿದ್ದನು. ಆತನಿಗೆ ಬಂಗಾರದ ಕಿರಣಗಳು ದಟ್ಟವಾಗಿ ಮರಗಳ ಮಧ್ಯೆ ಪ್ರಕಾಶಿಸುತ್ತಿದ್ದದನ್ನು ಕಂಡು ಹತ್ತಿರ ಬಂದಾಗ ಆ ಪ್ರಭೆಯರಾಶಿ ತಥಾಗತರೇ ಆಗಿದ್ದನ್ನು ಕಂಡನು. ಆತನಿಗೆ ಆನಂದವಾಯಿತು.
ಆ ಬ್ರಾಹ್ಮಣನು ಹೀಗೆ ಆಲೋಚಿಸಿದನು: ಅನೇಕ ಕ್ಷತ್ರಿಯ ರಾಜಕುಮಾರರು ನನ್ನ ಸುವರ್ಣ ವರ್ಣದ ಕುಮಾರಿಯನ್ನು ಪಡೆಯಲು ಬಂದಿದ್ದರು. ಆದರೆ ನಾವು ಅವರನ್ನೆಲ್ಲರನ್ನು ತಿರಸ್ಕರಿಸಿದೆವು. ಆದರೆ ಈಗ ನನ್ನ ಮಗಳನ್ನು ಈ ಶ್ರಮಣನಿಗೆ ಕೊಡುವೆನು. ಇವರಲ್ಲಿ ಮಾತ್ರ ಅಂತಹ ಶ್ರೇಷ್ಠ ವರ್ಣಕಾಂತಿಯಿದೆ ಎಂದು ಯೋಚಿಸಿ ಬೇಗ ತನ್ನ ಪತ್ನಿಯನ್ನು ಕರೆದು ಹೀಗೆ ಹೇಳಿದನು: ನಾನು ನಮ್ಮ ಸುಪುತ್ರಿಗೆ ಸಾಮ್ಯವಾಗುವ, ಅದಕ್ಕಿಂತಲೂ ಮಿಗಿಲಾದ ವರ್ಣದ ಮಾನವನಿಗೆ ನೋಡಿದ್ದೇನೆ. ಆದ್ದರಿಂದ ಬೇಗ ಪುತ್ರಿಯನ್ನು ವಸ್ತ್ರಾಭರಣಗಳಿಂದ ಸಿದ್ಧಪಡಿಸು, ಆಕೆಯನ್ನು ಆತನಿಗೆ ನೀಡಿ ವಿವಾಹ ಮಾಡಿಸೋಣ ಎಂದನು. ಇದನ್ನು ಕೇಳಿದ ಆ ಪತ್ನಿಯು ಆನಂದಿತಳಾಗಿ ಪುತ್ರಿಗೆ ಸುಗಂಧಿತ ನೀರಿನಲ್ಲಿ ಸ್ನಾನ ಮಾಡಿಸಿ, ಅತ್ಯಂತ ಆಕಷರ್ಿತವಾಗಿ ಅಲಂಕರಿಸಿದಳು.
ಭಗವಾನರು ಆಹಾರಕ್ಕಾಗಿ ಒಂದು ಸುತ್ತು ತಿರುಗಿ ಮತ್ತೆ ಅದೇ ಸ್ಥಳಕ್ಕೆ ಬಂದರು. ಮಾಗಂಡಿ ಹಾಗು ಪತ್ನಿ, ಪುತ್ರಿಯು ಆ ಸ್ಥಳಕ್ಕೆ ಬಂದಾಗ ಭಗವಾನರು ಹುಲ್ಲು ಹರಡಿದ ಆಸನದಲ್ಲಿ ಕುಳಿತಿದ್ದರು. ಬ್ರಾಹ್ಮಣನು ಲಕ್ಷಣ ಶಾಸ್ತ್ರಜ್ಞಳಾದ ತನ್ನ ಪತ್ನಿಯನ್ನು ಭಗವಾನರ ಪಾದದ ಮುದ್ರೆಯನ್ನು ಗಮನಿಸಿ ಅದರ ವಿಶೇಷ ಅರ್ಥವನ್ನು ಕೇಳಿದಾಗ, ಆಕೆ ಸೂಕ್ಷ್ಮವಾಗಿ ಗಮನಿಸಿ ಹೀಗೆ ಹೇಳಿದಳು:
ಓಹ್! ಈ ಪಾದದ ಚಿಹ್ನೆಯ ಮುದ್ರೆ ಇರುವ ವ್ಯಕ್ತಿ ತನ್ನ ಜೀವಮಾನದಲ್ಲಿ ಗೃಹಸ್ಥನಾಗಿ ಕಾಲ ಕಳೆಯಲಾರ. ಆಕೆ ಲಕ್ಷಣ ಶಾಸ್ತ್ರದಲ್ಲಿ ಅಪಾರ ಪ್ರಭುತ್ವವಿತ್ತು. ನಂತರ ಭಗವಾನರ ಶರೀರದಲ್ಲಿ ಕಾಣುವ ಇನ್ನಿತರ ಮಹಾಪುರುಷ ಲಕ್ಷಣಗಳನ್ನು ಗಮನಿಸಿ ಹೀಗೆ ಮತ್ತೆ ಹೇಳಿದಳು: ಚೆನ್ನಾಗಿ ಅರಿತುಕೊಳ್ಳಿ, ನಾವು ಬಂದ ಕಾರ್ಯ ಸಿದ್ಧಿಯಾಗುವುದಿಲ್ಲ, ಇವರು ಎಂದಿಗೂ ಗೃಹಸ್ಥರಾಗುವುದಿಲ್ಲ ಎಂದು ದೃಢವಾಗಿ ಹೇಳಿದಳು.
ಆದರೂ ಬ್ರಾಹ್ಮಣನು ಮಿಥ್ಯಾ ದೃಷ್ಟಿಯಿಂದ ತಮ್ಮ ಸುಕುಮಾರಿಯನ್ನು ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಲ್ಲಿ ನೀರು ತುಂಬಿದ ಪಾತ್ರೆಯನ್ನು ಹಿಡಿದುಕೊಂಡು ಭಗವಾನರ ಸಮೀಪ ಬಂದನು ಹಾಗು ಈ ರೀತಿ ಹೇಳಿದನು: ಪೂಜ್ಯ ಸಮಣರೇ, ನಿಮ್ಮ ಶರೀರದ ಹೊನ್ನ ಕಾಂತಿಯು ನನ್ನ ಮಗಳ ಶರೀರದ ವರ್ಣಕ್ಕೆ ಸಾಮಿಪ್ಯವಾಗಿದೆ. ಆದ್ದರಿಂದ ನಿಮಗೆ ಈ ಕೆ ಸರಿಯಾದ ಆಯ್ಕೆ (ಜೋಡಿ) ಯಾಗುತ್ತಾಳೆ. ಈ ಕ್ಷಣದಿಂದ ಈಕೆಯನ್ನು ನಿಮ್ಮ ಪತ್ನಿಯಾಗಿ ಸ್ವೀಕರಿಸಿ ಎಂದು ಹೇಳಿ ಇಬ್ಬರ ಕೈ ಬೆರೆಸಲು ಹಾಗು ನೀರು ಹಾಕಲು ಸಿದ್ಧನಾದನು.
ಆದರೆ ವಿರಾಗ್ಯ ಸ್ವರೂಪರಾದ ಬುದ್ಧರು ಅತ್ಯಂತ ತಾತ್ಸರದಿಂದ ಮತ್ತು ಕರುಣೆಯಿಂದ ಹೀಗೆ ನುಡಿದರು: ನಾನು ಗಯಾದಲ್ಲಿ ಬೋಧಿವೃಕ್ಷದ ಕೆಳಗೆ ಕುಳಿತಿದ್ದಾಗ ಮಾರನು ಮೂರು ಅಸಮಾನ್ಯ ಅದ್ವಿತೀಯ ಸುಂದರ ಕನ್ಯೆಯರನ್ನು ನನಗೆ ಚಂಚಲನನ್ನಾಗಿ ಮಾಡಲು ಕಳುಹಿಸಿದನು. ಆದರೆ ಅವರು ನನಗೆ ಕ್ಷಣಮಾತ್ರವೂ ಹಾಗೆ ಮಾಡಲು ಅಸಫಲರಾಗಿ ಹಿಂದಿರುಗಿದರು. ಆ ಅಪ್ಸರೆಯರಿಗೆ ಹೋಲಿಸಲು ಹೋದರೆ ಈ ಯುವತಿಯು ಮಲದ ರಾಶಿಯಂತೆ ಕಾಣುತ್ತಾಳೆ. ನಾನು ಇಂತಹವನ್ನು ನನ್ನ ಕಾಲಿನಿಂದಲೂ ಸ್ಪಶರ್ಿಸಲು ಅಸಹ್ಯಿಸುತ್ತೇನೆ. ಆದ್ದರಿಂದ ನಾನು ನೀವು ಹೇಳುವಂಥ ಕಾರ್ಯ ಹೇಗೆ ಮಾಡಲಿ.
ಆಗ ಬ್ರಾಹ್ಮಣನು ತನ್ನ ಎಲ್ಲಾ ನಂಬಿಕೆಯನ್ನು, ಭರವಸೆಯನ್ನು ಕಳೆದುಕೊಂಡನು, ಅತಿ ನಿರಾಶನಾದನು. ನಂತರ ಆತನಿಗೆ ಅರಿವಾಯಿತು, ಏನೆಂದರೆ ಅಜ್ಞಾನದಿಂದ ಯಾವುದೂ ಪ್ರಾಪ್ತಿಯಾಗುವುದಿಲ್ಲವೋ ಅದರ ತೀವ್ರ ಬಯಕೆ ಪಡುತ್ತೇವೆ, ಅದರ ಅಪ್ರಾಪ್ತತೆಯಿಂದ ದುಃಖಿತರಾಗುತ್ತೇವೆ.
ನಂತರ ಬುದ್ಧ ಭಗವಾನರು ಶ್ರೇಷ್ಠ ಬೋಧನೆ (ಮಾಗಂಡಿಯ ಸುತ್ತ) ಮಾಡಿದರು. ಪರಿಣಾಮವಾಗಿ ಸತಿಪತಿಯರಿಬ್ಬರೂ ಅರಹಂತ ಪ್ರಾಪ್ತಿ ಮಾಡಿದರು.
- ಖುದ್ದಕ ನಿಕಾಯ ಅಟ್ಠಕಥಾ

No comments:

Post a Comment