Sunday, 14 January 2018

THE CONSEQUENCES OF FEAR ಭಯ - ರಾಜನ ಅಡುಗೆ ಭಟ್ಟನ ಪ್ರಸಂಗ

                            ಭಯ - ರಾಜನ ಅಡುಗೆ ಭಟ್ಟನ ಪ್ರಸಂಗ


ಒಂದು ಕಾಲದಲ್ಲಿ ಬ್ರಹ್ಮದತ್ತನು ಬನಾರಸನ್ನು ಆಳುತ್ತಿದ್ದನು. ಆತನು ಮಾಂಸವಿಲ್ಲದೆ ಅಡುಗೆಯನ್ನೇ ಮುಟ್ಟುತ್ತಿರಲಿಲ್ಲ. ಆದ್ದರಿಂದಾಗಿ ಅಡುಗೆ ಭಟ್ಟನು ಉಪೋಸಥದ (ಹುಣ್ಣಿಮೆಯ ಶುದ್ಧ ದಿನದಂದು ಮಾಡುವ ಇಂದ್ರಿಯ ನಿಗ್ರಹ ಹಾಗು ಉಪವಾಸ) ಹಿಂದು-ಮುಂದಿನ ದಿನದಂದು ಸಹಾ ಮಾಂಸವನ್ನು ಹಾಕಬೇಕಿತ್ತು. ಒಂದು ಅಂತಹ ದಿನದಂದು ಭಟ್ಟನು ಅಡುಗೆ ಮನೆಯಲ್ಲಿ ಇಲ್ಲದಿದ್ದಾಗ ರಾಜನ ನಾಯಿಗಳು ಮಾಂಸವನ್ನು ತಿಂದುಹಾಕಿದ್ದವು. ಇದರಿಂದ ಭಯಭೀತನಾದ ಭಟ್ಟನು ಹಿಡಿಯಷ್ಟು ಚಿನ್ನದ ನಾಣ್ಯಗಳನ್ನು ಹಿಡಿದು ಎಲ್ಲೆಲ್ಲಿ ಮಾಂಸವನ್ನು ಹುಡುಕಿದರೂ ಸಫಲನಾಗಲಿಲ್ಲ. ಭಟ್ಟನಿಗೆ ಈಗ ಭಯವಾಯಿತು, ಏಕೆಂದರೆ ಮಾಂಸರಹಿತ ಅಡುಗೆಯಿಂದ ರಾಜನು ಕೋಪಿಸಿ ಶಿಕ್ಷಿಸುವನೆಂದು ಭೀತಿವುಳ್ಳವನಾದನು. ಕೊನೆಗೆ ಅವನಿಗೆ ಒಂದು ಉಪಾಯ ಹೊಳೆಯಿತು.
ಸ್ಮಶಾನಕ್ಕೆ ಹೋಗಿ ಶವದ ತೊಡೆಯ ಭಾಗವನ್ನು ಕತ್ತರಿಸಿ ಹಿಂದಿರುಗಿದನು. ನಂತರ ಹಿಂದಿನ ದಿನಗಳಂತೆಯೇ ಅಡುಗೆ ಮಾಡಿ ಎಂದಿನಂತೆ ರಾಜನಿಗೆ ಬಡಿಸಿದನು. ರಾಜನು ಸ್ವಲ್ಪ ಮಾಂಸವನ್ನು ರುಚಿ ನೋಡಿದನು. ಅದರ ರುಚಿಯು ಆತನಿಗೆ ಅತಿ ಮಧುರವೆನಿಸಿತು, ಆತನ ನರಗಳು ಅತ್ಯಂತ ಪ್ರಚೋದಿತವಾಯಿತು. ರಾಜನಿಗೆ ಈ ಮಾಂಸ ಅತ್ಯಂತ ಪ್ರಿಯವಾಯಿತು. ಏಕೆಂದರೆ ಆತನು ಹಿಂದಿನ ಜನ್ಮದಲ್ಲಿ ಮಾನವ ಮಾಂಸ ಭಕ್ಷಿಸುವ ಯಕ್ಷನಾಗಿದ್ದನು. ಈಗ ಆ ಭಾವೋದ್ರೇಕವು ಈತನಲ್ಲಿ ಅತ್ಯಂತ ಪ್ರಚೋದಿತವಾಯಿತು. ರಾಜನಿಗೆ ಅಂತಹ ಮಾಂಸವನ್ನು ಪ್ರತಿನಿತ್ಯವು ತಿನ್ನಬೇಕೆನಿಸಿತು. ಆದರೂ ಅದನ್ನು ತಿರಸ್ಕರಿಸುವ ರೀತಿಯಲ್ಲಿ ಉಗಿದು ಎಸೆದನು. ಇಂತಹ ಕೆಟ್ಟ ಮಾಂಸವನ್ನು ಎಲ್ಲಿಂದ ತಂದುಹಾಕಿದೆ ಎಂದು ಪ್ರಶ್ನಿಸಿದನು. ಅದಕ್ಕೆ ಪ್ರತಿಯಾಗಿ ಭಟ್ಟನು ಇದು ಹಿಂದಿನಂತೆಯೇ ಬಡಿಸಿದ ಮಾಂಸಾಹಾರ, ಆದರೆ ಅದಕ್ಕೆ ತಯಾರಿಸಿದ ರೀತಿ ಬೇರೆಯದು ಎಂದು ಉತ್ತರಿಸಿದನು. ಅದಕ್ಕೆ ರಾಜನು ಸತ್ಯ ಹೇಳಬೇಕು, ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದು ಬೆದರಿಸಿದನು. ಭಯಭೀತನಾದ ಭಟ್ಟ ವೃತ್ತಾಂತವನ್ನೆಲ್ಲಾ ಇದ್ದಹಾಗೆ ತಿಳಿಸಿದನು. ಆದಾದನಂತರ ರಾಜನು ಹೀಗೆ ಆಜ್ಞೆ ಮಾಡಿದನು. ಏನೆಂದರೆ ತನಗೆ ಮಾನವ ಮಾಂಸವನ್ನು ಸದಾ ಅಡುಗೆ ಮಾಡಿ ನೀಡಬೇಕು, ಅರಮನೆಯ ಇತರರಿಗೆ ಹಿಂದೆ ಮಾಡುತ್ತಿದ್ದ ಪ್ರಾಣಿ ಮಾಂಸವನ್ನೇ ನೀಡಬೇಕು ಎಂದು ಆಜ್ಞಾಪಿಸಿದನು. ಈ ಆಜ್ಞೆಯನ್ನು ಭಟ್ಟನು ನೆರವೇರಿಸುತ್ತಿದ್ದನು. ಕೆಲಕಾಲದ ನಂತರ ಭಟ್ಟನು ರಾಜನಿಗೆ ದಿನವೂ ಮಾನವ ಮಾಂಸ ಭಕ್ಷವನ್ನು ನೀಡಲು ಅಸಾಧ್ಯ ಎಂದು ವಿನಂತಿಸಿಕೊಂಡನು. ಆಗ ರಾಜನು ಭಟ್ಟನಿಗೆ ಸೆರೆಮನೆಯಲ್ಲಿನ ಖೈದಿಗಳನ್ನು ದಿನವೂ ಕೊಂದು ಅಡುಗೆ ಮಾಡಲು ಆಜ್ಞಾಪಿಸಿದನು. ಈ ಆಜ್ಞೆಯನ್ನು ಪಾಲಿಸಿದ ಕೆಲವು ದಿನಗಳಲ್ಲೇ ಅಪರಾಧಿಗಳ ಸಂಖ್ಯೆಯು ಕಡಿಮೆಯಾಗಿ ಅಪರಾಧಿಗಳು ಇಲ್ಲದೇ ಹೋದರು. ಆಗ ರಾಜನು ಡಕಾಯಿತರನ್ನು ಬಂಧಿಸಿ, ಕೊಲ್ಲಲು ಆಜ್ಞಾಪಿಸಿದನು. ಇದಾದ ನಂತರ ಡಕಾಯಿತರು ಇಲ್ಲದೇ ಹೋದರು. ಈ ಘಟನೆಯ ನಂತರ ಅಡಿಗೆ ಭಟ್ಟನು ಸಂಜೆಯ ವೇಳೆಯಲ್ಲಿ ಅಡಗಿ ಕಾಯುತ್ತಿದ್ದನು. ಮಾರುಕಟ್ಟೆಯಿಂದ ಹಿಂದಿರುಗುತ್ತಿದ್ದ ಜನರನ್ನು ಕೊಂದು ಅಡುಗೆ ಮಾಡುತ್ತಿದ್ದನು. ಜನರಿಗೆ ಇದು ಯಾವುದೋ ಮನುಷ್ಯನ ಕೈವಾಡ ಎಂದು ತಿಳಿದು ರಾಜನಿಗೆ ವಿಷಯ ತಿಳಿಸಿ, ಇದನ್ನು ತಡೆಗಟ್ಟಬೇಕೆಂದು ತಿಳಿಸಿದರು.
ಆಗ ಉಪರಾಜನು ಜನರಿಗೆ ಸಮಾಧಾನಿಸಿದನು, ಅವರಿಗೆ ಅಪರಾಧಿಯನ್ನು ಹಿಡಿದು ಶಿಕ್ಷಿಸುತ್ತೇನೆ ಎಂದು ತಿಳಿಸಿ ಭರವಸೆ ನೀಡಿದನು. ಇದಾದ ನಂತರ ಉಪರಾಜನು ಅತಿ ಗಂಭೀರವಾದ ವಾತಾವರಣ ಏರ್ಪಡಿಸಿದನು. ಆಗ ಒಬ್ಬ ಭಟನು ಒಬ್ಬ ವ್ಯಕ್ತಿಯನ್ನು ಪತ್ತೆಹಚ್ಚಿದನು. ಏನೆಂದರೆ ಆತನು ಮಹಿಳೆಯ ಶವದ ಮಾಂಸವನ್ನು ಕತ್ತಿಯಿಂದ ಕತ್ತರಿಸುತ್ತಿದ್ದನು. ಹಾಗು ಮಾಂಸವನ್ನು ಬುಟ್ಟಿಯಲ್ಲಿ ಹಾಕುತ್ತಿದ್ದನು. ಭಟರ ಗುಂಪೊಂದು ಆ ವ್ಯಕ್ತಿಯನ್ನು ಬಂಧಿಸಿ ಉಪರಾಜನ ಬಳಿ ಕರೆತಂದರು. ಆತನು ರಾಜ ಭಟ್ಟನೇ (ಅಡುಗೆಯವನು) ಆಗಿದ್ದ. ಆತನಿಗೆ ಉಪರಾಜನು ಪ್ರಶ್ನಿಸಿದಾಗ ಆತನು ಇಡೀ ವೃತ್ತಾಂತ ತಿಳಿಸಿದನು. ಅಡಿಗೆಯವನ ಮಾತನ್ನು ಪತ್ತೆಹಚ್ಚಲು ಕೆಲವರನ್ನು ಕಳುಹಿಸಿದನು. ನಂತರ ಅಡಿಗೆಯವನಿಗೆ ರಾಜನ ಮುಂದೆಯೂ ಸಹಾ ಹೇಳಲು ಕೇಳಿದಾಗ ಆತನು ಒಪ್ಪಿದನು. ನಂತರ ಉಪರಾಜನು ರಾಜ್ಯದ ಮಂತ್ರಿಗಳನ್ನು, ನಾಗರಿಕರನ್ನು ಹಾಗು ಸೈನಿಕರೊಂದಿಗೆ ಅಪರಾಧಿಯನ್ನು ಹಿಡಿದು ಹಾಕಿದನು.
ಆ ರಾತ್ರಿ ರಾಜನಿಗೆ ಅಡುಗೆ ಭಟ್ಟನನ್ನು ಹಿಡಿದುದರಿಂದ ಆಹಾರ ಸಿಗದೇ ಹೋಯಿತು. ಮಾರನೆಯದಿನ ಕಿಟಕಿಯಲ್ಲಿ ಆತನ ಪ್ರತೀಕ್ಷೆಯಲ್ಲಿರುವಾಗ ಭಾರಿ ಗುಂಪು ಬರುತ್ತಿರುವುದು ಕಂಡುಬಂದಿತು. ಆಗ ರಾಜನು ಸಿಂಹಾಸನದಲ್ಲಿ ಆಸೀನನಾದನು. ಆಗ ಉಪರಾಜನು ಅಡಿಗೆಯವನ ಪ್ರಸ್ತಾಪ ಮಾಡಿ ಈ ವಿಷಯ ನಿಜವೇ ಎಂದು ಪ್ರಶ್ನಿಸಿದಾಗ ಅದು ಸತ್ಯವೇ ಎಂದು ರಾಜನು ಒಪ್ಪಿದನು. ಅದಕ್ಕಾಗಿ ಅಡುಗೆ ಭಟ್ಟನಿಗೆ ಏಕೆ ಕಿರುಕುಳ ಕೊಡುತ್ತಿದ್ದೀಯೇ ಎಂದು ಪ್ರಶ್ನಿಸಿದನು. ಆಗ ಉಪರಾಜನು ರಾಜನಿಗೆ ಈ ನರಭಕ್ಷಣೆ ನಿಲ್ಲಿಸಲು ಕೇಳಿಕೊಂಡನು. ಇಲ್ಲದಿದ್ದರೆ ಆತನ ಜೀವನ ಹಾಗು ರಾಜಪಟ್ಟ ಸುರಕ್ಷಿತವಲ್ಲ ಎಂದು ಕೇಳಿಕೊಂಡನು. ಆಗಲೂ ಸಹಾ ರಾಜನು ನರಭಕ್ಷಣೆ ನಿಲ್ಲಿಸಲು ಅಸಾಧ್ಯ ಎಂದು ತಿಳಿಸಿದನು. ಆಗ ಬೇರೆ ಮಂತ್ರಿಗಳು ಹಾಗು ನಾಗರಿಕರಿಗೆ ಕೋಪವುಂಟಾಗಿ ರಾಜನಿಗೆ ಕಿರೀಟ ತ್ಯಾಗಮಾಡಿ ರಾಜ್ಯವನ್ನು ಬಿಟ್ಟು ಹೊರಡುವಂತೆ ಒತ್ತಾಯಿಸಿದರು. ಆಗಲೂ ಸಹಾ ಉಪರಾಜನು ರಾಜನಿಗೆ ಮತ್ತೆ ವಿನಂತಿಸಿಕೊಂಡನು. ಆದರೆ ರಾಜನು ಮಾಂಸ ತ್ಯಾಗಕ್ಕೆ ಸಿದ್ಧನಿರಲಿಲ್ಲ.
ಆನಂತರ ರಾಜನಿಗೆ ಸಿಂಹಾಸನ ಕಿರೀಟ ಕಿತ್ತುಕೊಂಡು ಗಡಿಪಾರು ಮಾಡಿದರು. ಇದೆಲ್ಲವೂ ಸಹಾ ಅಡಿಗೆ ಭಟ್ಟನ ಭಯದಿಂದಲೇ ಆಯಿತು. ಆತನು ಮೊದಲೇ ಇಂದು ಮಾಂಸ ಸಿಗಲಿಲ್ಲ ಎಂದು ಹೇಳಿದ್ದರೆ ಮುಂದಾಗುವ ಅನೇಕ ಅಮಾನವೀಯ ಘಟನೆಗಳನ್ನು ತಡೆಯಬಹುದಿತ್ತು. ಎಷ್ಟು ಕ್ರೂರ ಹತ್ಯೆಯನ್ನು ರಾಜ್ಯ ನಷ್ಟವನ್ನು ತಡೆಯಬಹುದಿತ್ತು.
- ಧಮ್ಮಪದ ಅಟ್ಠಕಥಾ

No comments:

Post a Comment