ಕೊಲ್ಲುವಿಕೆ - ಮೂವರು ಭಿಕ್ಷುಗಳ ಘಟನೆ
ಅವರು ದಾರಿಯಲ್ಲಿ ಒಂದು ಹಳ್ಳಿಗೆ ಆಹಾರಕ್ಕೆ ಹೊರಟಿದ್ದರು. ಹಳ್ಳಿಯವರು ಅವರನ್ನು ಸ್ವಾಗತಿಸಿ ಅವರ ಪಿಂಡಪಾತ್ರೆಗಳನ್ನು ತೆಗೆದುಕೊಂಡು ಒಂದು ವಿಶಾಲವಾದ ಭೋಜನಾಯಲದಲ್ಲಿ ಕುಳ್ಳಿರಿಸಿ ಅವರಿಗೆ ಗಂಜಿ ಮತ್ತು ಸಿಹಿತಿಂಡಿಗಳನ್ನು ಕೊಟ್ಟು, ಅವರು ಆಹಾರ ತಿಂದು ಮುಗಿಸುವುದನ್ನು ಕಾಯುತ್ತಿದ್ದರು. ಭಿಕ್ಷುಗಳು ಮಧ್ಯಾಹ್ನದ ಭೋಜನ ಮುಗಿಸಿ, ಜನರಿಗೆ ಧಮ್ಮವನ್ನು ಉಪದೇಶಿಸಿದರು. ಅಲ್ಲಿ ಒಬ್ಬ ಹೆಣ್ಣು ಅಡಿಗೆಯನ್ನು ಮಾಡುತ್ತಿದ್ದಳು. ಆಕೆ ಮಡಿಕೆಯಲ್ಲಿ ಒಂದು ತಿಂಡಿಯನ್ನು ಮಾಡುತ್ತಿದ್ದಳು. ಆ ಮಡಿಕೆ ಬೆಂಕಿಯಿಂದ ಆವೃತವಾಗಿ ಅದರ ಜ್ವಾಲೆಗಳು ಚಾವಣಿಗೆ ತಗಲಿ, ಅಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡಿತು. ಜ್ವಾಲೆಗಳು ಆಕಾಶಕ್ಕೆ ಏರತೊಡಗಿದವು. ಅದೇ ವೇಳೆಯಲ್ಲಿ ಒಂದು ಕಾಗೆಯು ಆ ಮನೆಯ ಮೇಲೆ ಹಾರತೊಡಗಿತು. ಉರಿಯುತ್ತಿದ್ದ ಬೆಂಕಿಯ ಹುಲ್ಲು ಕಾಗೆಯ ಕತ್ತಿಗೆ ಸುತ್ತಿಕೊಂಡಿತು. ನಂತರ ಕಾಗೆಯು ಸತ್ತು ನೆಲದಮೇಲೆ ಬಿದ್ದಿತು. ಈ ಘಟನೆಯು ಊರ ಮಧ್ಯೆ ನಡೆಯಿತು. ಇದನ್ನು ಭಿಕ್ಷುಗಳು ಗಮನಿಸಿದರು. ನಂತರ ಹೀಗೆ ಹೇಳಿಕೊಂಡರು: ಓಹ್! ಇದು ಅತ್ಯಂತ ದುಃಖಭರಿತ ಘಟನೆ. ಈ ಬಡಪಾಯಿ ಪಕ್ಷಿಗೆ ಇಂತಹ ದುರ್ಘಟನೆ ಏಕೆ ನಡೆಯಿತು? ಇದನ್ನು ಬುದ್ಧರಲ್ಲದೆ ಬೇರಾರು ಹೇಳಲಾರರು. ಏತಕ್ಕಾಗಿ ಆ ಕಾಗೆಯ ಪರಿಣಾಮ ಹೀಗಾಯಿತು. ಇದನ್ನು ಬುದ್ಧರಿಂದ ಪ್ರಶ್ನಿಸುತ್ತವೆ, ಅವರು ಹೇಳಿದ್ದನ್ನು ಅಥರ್ೈಸಿಕೊಳ್ಳುತ್ತೇವೆ. ಎಂದುಕೊಂಡು ಅವರು ಹೊರಟರು.
ಕೆಲವು ಬೇರೆ ಭಿಕ್ಷುಗಳು ದೂರದ ಸ್ಥಳದಿಂದ ಭಗವಾನರಿಗೆ ವಂದಿಸಲು ಹಡಗಿನಿಂದ ಪ್ರಯಾಣ ಬೆಳೆಸಿ ಬರುತ್ತಿದ್ದರು. ಮಾರ್ಗದಲ್ಲಿ ಸಮುದ್ರದ ಮಧ್ಯೆ ಹಡಗು ನಿಂತುಕೊಂಡಿತು. ಆಗ ಅಲ್ಲಿದ್ದವರು ತಮ್ಮಲ್ಲೇ ಈ ರೀತಿ ಮಾತಾಡಿಕೊಂಡರು: ನಮ್ಮಲ್ಲಿ ಯಾರೋ ದುರಾದೃಷ್ಟಶಾಲಿಯು ಇದ್ದಾನೆ, ಆದಕಾರಣ ಹಡಗು ನಿಂತಿದೆ. ನಾವು ಆತನನ್ನು ಹುಡುಕೋಣ. ಅದನ್ನು ನಾವು ಚೀಟಿಗಳಲ್ಲಿ ಬರೆದು ಪರೀಕ್ಷಿಸೋಣ ಎಂದು ಮಾತನಾಡಿದಾಗ ನೌಕಾಧಿಪತಿಯು ಅದಕ್ಕೆ ಒಪ್ಪಿದನು. ಹಡಗಿನ ಮೇಲ್ಭಾಗದಲ್ಲಿ ನೌಕಾಧಿಪತಿಯ ಪತ್ನಿಯಿದ್ದಳು. ಆಕೆ ಅತ್ಯಂತ ಸುಂದರಿಯಾದ ಯುವತಿಯಾಗಿದ್ದಳು. ಸುಶೀಲೆಯು ಹಾಗು ಅತಿ ಆಕರ್ಷಕ ರೂಪವು ಮತ್ತು ಸಿಹಿಯಾದ ಮಾತು ಆಡುವವಳಾಗಿದ್ದಳು. ಒಪ್ಪಂದದಂತೆ ಎಲ್ಲರೂ ತಮ್ಮ ಹೆಸರನ್ನು ಬರೆದು ಸಮುದ್ರದ ಮೇಲೆ ಎಸೆದರು. ಆಗ ಆಶ್ಚರ್ಯವಾಯಿತು. ಏಕೆಂದರೆ ನೌಕಾಧಿಪತಿಯ ಪತ್ನಿಯ ಹೆಸರನ್ನು ಹೊಂದಿದ್ದ ಚೀಟಿಯು ಮುಳುಗಲಾರಂಭಿಸಿತು, ಇನ್ನಿತರ ಎಲ್ಲರ ಚೀಟಿಗಳು ತೇಲಲಾರಂಭಿಸಿತು. ಆದರೆ ಯಾರೂ ಇದನ್ನು ನಂಬಲಿಲ್ಲ. ಎರಡನೆಯಬಾರಿ ಅವರೆಲ್ಲರೂ ಹೆಸರನ್ನು ಬರೆದು ಮತ್ತೆ ಸಮುದ್ರಕ್ಕೆ ಎಸೆದರು. ಈ ಬಾರಿಯೂ ನೌಕಾಧಿಪತಿಯ ಪತ್ನಿಯ ಹೆಸರನ್ನೊಳಗೊಂಡ ಚೀಟಿಯು ಮುಳುಗಲಾರಂಭಿಸಿತು. ಈ ಬಾರಿಯೂ ನಂಬದೆ ಮೂರನೆಯಬಾರಿ ಹೀಗೆಯೇ ಪ್ರಯತ್ನಿಸಿದರು. ಆಗಲೂ ಸಹಾ ಹಿಂದಿನಂತೆಯೇ ಆಯಿತು. ಆಗ ಹಡಗಿನಲ್ಲಿದ್ದವರು ನೌಕಾಧಿಪತಿಯನ್ನು ಈಗ ಏನು ಮಾಡುವುದು ಎಂದು ಕೇಳಿದರು. ಅದಕ್ಕೆ ನೌಕಾಧಿಪತಿಯು ಈ ರೀತಿ ಉತ್ತರಿಸಿದನು: ನಾವು ಒಬ್ಬರಿಗಾಗಿ ಎಲ್ಲರೂ ಜೀವ ತೊರೆಯುವುದು ಬೇಡ, ಆಕೆಯನ್ನು ನೀವು ಸಮುದ್ರದಲ್ಲಿ ಎಸೆಯಿರಿ ಎಂದನು.
ಆಗ ಅವರು ಈ ರೀತಿ ಚಿಂತಿಸಿದರು: ಆಕೆಯನ್ನು ಹಿಡಿದು ನೀರಿಗೆ ಎಸೆದರೆ ಆಕೆ ಭಯಗೊಂಡು ಕಿರುಚಾಡಬಹುದು, ಆಕೆಯ ಎಲ್ಲಾ ಆಭರಣಗಳನ್ನು ತೆಗೆದುಕೊಂಡು ಕೇವಲ ಒಳ ಉಡುಪಿನಲ್ಲೇ ಆಕೆಗೆ ನೀರಿನಲ್ಲಿ ಎಸೆಯೋಣ ಎಂದು ನಿರ್ಧರಿಸಿದರು. ನಂತರ ನೌಕಾಧಿಪತಿಯು ಮತ್ತೆ ಹೀಗೆ ನುಡಿದನು: ನಾನು ಆಕೆ ಈ ರೀತಿ ನೀರಿನಲ್ಲಿ ಒದ್ದಾಡುವುದನ್ನು ನೋಡಲಾರೆ, ಸಹಿಸಲಾರೆ. ಆಕೆಯನ್ನು ಯಾವುದಾದರೂ ರೀತಿಯಲ್ಲಿ ಮುಳುಗಿಸಿ ನನ್ನ ಕಣ್ಣಿಗೆ ಕಾಣದಂತೆ ಮಾಡಿ ಆಕೆಯ ಕುತ್ತಿಗೆಗೆ ಮಣ್ಣು ತುಂಬಿರುವ ಮಡಿಕೆಯನ್ನು ಕಟ್ಟಿ ಆಕೆಯನ್ನು ಎಸೆಯಿರಿ ಎಂದನು. ಅವರು ಹಾಗೆಯೇ ಮಾಡಿದರು. ಆಕೆಯನ್ನು ಸಮುದ್ರದಲ್ಲಿ ಎಸೆದ ಕ್ಷಣದಲ್ಲೇ ಮೀನುಗಳು ಆಕೆಯನ್ನು ತಿಂದು ಮುಗಿಸಿದವು.
ಇದನ್ನು ಸಾಕ್ಷಿಯಾಗಿ ವೀಕ್ಷಿಸಿದ ಭಿಕ್ಷುಗಳು ಈ ರೀತಿ ಚಿಂತಿಸಿದರು. ಬುದ್ಧರ ಹೊರತು ಮತ್ಯಾರು ಸಹಾ ಆಕೆಯು ಈ ದುಃಖಕ್ಕೆ ಒಳಗಾದ ಕಾರಣವನ್ನು ಹೇಳಲಾರರು, ನಾವು ಭಗವಾನರನ್ನು ಈ ಬಗ್ಗೆ ಕೇಳಿ ತಿಳಿಯುವೆವು ಎಂದು ನಿರ್ಧರಿಸಿದರು. ನಂತರ ಆ ಹಡಗು ಚಲಿಸಿತು. ತಲುಪವೇಕಾದ ಸ್ಥಳಗಳಲ್ಲಿ ಪ್ರಯಾಣಿಕರು ಇಳಿದು, ತಮ್ಮ ಹಾದಿ ಹಿಡಿದರು.
ಇನ್ನೊಂದು ಕಡೆ ಏಳು ಭಿಕ್ಷುಗಳು ಬುದ್ಧ ಭಗವಾನರನ್ನು ಕಾಣಲು ಬರುತ್ತಿದ್ದರು. ಮಾರ್ಗದಲ್ಲಿಯೇ ಸಂಜೆಯಾದ ಕಾರಣ ಅಲ್ಲಿ ಒಂದು ವಿಹಾರದಲ್ಲಿ ರಾತ್ರಿ ಇರಲು ಸ್ಥಳವನ್ನು ಕೇಳಿದರು. ಅಲ್ಲಿ ವಾಸವಾಗಿದ್ದ ಭಿಕ್ಷುಗಳು ಸಮೀಪದಲ್ಲಿದ್ದ ಗುಹೆಯನ್ನು ತೋರಿಸಿದರು. ಅಲ್ಲಿ ಏಳು ಹಾಸಿಗೆಗಳು ಇದ್ದವು. ಈ ಏಳು ಭಿಕ್ಷುಗಳು ರಾತ್ರಿ ನಿದ್ರಿಸಲಾರಂಭಿಸಿದರು. ಅವರು ನಿದ್ರಿಸುವಾಗ ಮನೆಯಷ್ಟು ಗಾತ್ರದ ದೊಡ್ಡ ಬಂಡೆಯು ಉರುಳಿ ಗುಹೆಯ ದ್ವಾರವನ್ನು ಮುಚ್ಚಿಕೊಂಡಿತು. ಅಲ್ಲಿದ್ದ ಭಿಕ್ಷುಗಳು ಇದನ್ನು ಗಮನಿಸಿ ದುಃಖಿತರಾದರು. ಅವರು ಹಳ್ಳಿಗರನ್ನು ಕೂಡಿಹಾಕಿ ಗುಹೆಗೆ ಮುಚ್ಚಿಕೊಂಡಿದ್ದ ಬಂಡೆಯನ್ನು ಜರುಗಿಸಲು ಪ್ರಯತ್ನಿಸಿದರು. ಆದರೆ ಸಫಲರಾಗಲಿಲ್ಲ. ಅವರು ಏಳು ದಿನಗಳ ಕಾಲ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಮತ್ತು ಗುಹೆಯಲ್ಲಿದ್ದ ಭಿಕ್ಷುಗಳು ಅಲ್ಲಿಯವರೆಗೂ ಏನನ್ನೂ ತಿನ್ನಲಿಲ್ಲ ಹಾಗು ಕುಡಿಯಲೂ ಇಲ್ಲ. ಆ ಸಮಯದಲ್ಲಿ ಅವರು ಆಹಾರ ಇಲ್ಲದೆ ಬಹಳ ನೋವನ್ನು ಅನುಭವಿಸಿದರು. ಏಳು ದಿನಗಳ ನಂತರ ಆ ಬಂಡೆಯು ತಾನಾಗಿಯೇ ತನ್ನ ಸ್ಥಳದಲ್ಲಿ ನಿಂತಿತು. ದುಃಖಿತ ಭಿಕ್ಷುಗಳು ಈಗ ಹೊರಬಂದರು. ಹೀಗೆ ಯೋಚಿಸಿದರು: ಬುದ್ಧ ಭಗವಾನರ ಹೊರತು ಮತ್ಯಾರು ತಮ್ಮ ಈ ದುಃಖ ಅನುಭವಕ್ಕೆ ಕಾರಣವನ್ನು ಹೇಳಲಾರರು ಎಂದು ಭಾವಿಸಿ ಭಗವಾನರನ್ನು ಕಾಣಲು ಬಂದರು.
ಎಲ್ಲಾ ಮೂರು ಗುಂಪುಗಳು ದಾರಿಯಲ್ಲಿ ಒಂದುಗೂಡಿದರು. ಮತ್ತು ಒಟ್ಟಾಗಿಯೇ ಭಗವಾನರನ್ನು ಕಂಡರು ಹಾಗು ವಂದನೆ ಅಪರ್ಿಸಿದರು. ಗೌರವದಿಂದ ಒಂದೆಡೆ ಕುಳಿತರು. ಪ್ರತಿಯೊಂದು ಗುಂಪು ಸಹಾ ಭಗವಾನರಿಗೆ ತಮ್ಮ ಘಟನೆಗಳನ್ನು ವಿವರಿಸಿ ಅದಕ್ಕೆ ಕಾರಣವನ್ನು ಕೇಳಿದರು. ಅದಕ್ಕೆ ಪ್ರತಿಯಾಗಿ ಭಗವಾನರು ಈ ರೀತಿ ವಿವರಿಸಿದರು:
ಭಿಕ್ಷುಗಳೇ, ಯಾವ ಆ ಕಾಗೆ ಈ ರೀತಿ ದುಃಖದಿಂದ ಮರಣಿಸಿತೋ ಅದಕ್ಕೆ ಕಾರಣ ಅದರ ಹಿಂದಿನ ಜನ್ಮದ ಕರ್ಮವೇ ಆಗಿದೆ. ಹಿಂದೆ ಬನಾರಸ್ದಲ್ಲಿ ಒಬ್ಬ ಧನದಾಹಿಯು ಒಂದು ಗೂಳಿಯನ್ನು ಪಳಗಿಸಲು ಪ್ರಯತ್ನಿಸಿದನು, ಆದರೆ ಸಫಲನಾಗಲಿಲ್ಲ. ಆ ಗೂಳಿಯು ಸ್ವಲ್ಪ ಅಂತರದಲ್ಲಿ ಹೋಗಿ ಬಿದ್ದುಕೊಂಡಿತು. ಆತನು ಅದನ್ನು ಎಬ್ಬಿಸಲು ಪ್ರಯತ್ನಿಸಿದನು. ಅದು ಸ್ವಲ್ಪ ದೂರ ಕ್ರಮಿಸಿ ಮತ್ತೆ ಬಿದ್ದುಕೊಂಡಿತು. ಆತನ ಸರ್ವ ಪ್ರಯತ್ನಗಳು ಪಳಗಿಸುವಲ್ಲಿ ವಿಫಲವಾದವು. ಆಗ ಆತನಿಗೆ ಕ್ರೋಧವುಂಟಾಗಿ ಆ ಗೂಳಿಯ ಮೂಳೆಗಳು ಪುಡಿಪುಡಿಯಾಗುವ ಹಾಗೆ ಹೊಡೆದನು. ಗೂಳಿಯ ಸುತ್ತಲೂ ಹುಲ್ಲನ್ನು ಸುತ್ತಿ ಬೆಂಕಿಯಿಟ್ಟನು. ಅದರ ಪರಿಣಾಮವಾಗಿ ಆ ಗೂಳಿಯು ಅತಿ ಘೋರ ವೇದನೆಯಿಂದ ನರಳಿ ಮರಣಿಸಿತು. ಭಿಕ್ಷುಗಳೇ, ಈ ಪಾಪಕೃತ್ಯದ ಪರಿಣಾಮದಿಂದ ಆ ಧನದಾಹಿಯು ಮೊದಲು ಅವೀಚಿ ನರಕದಲ್ಲಿ ಹುಟ್ಟಿದನು. ಅಲ್ಲಿ ದುಃಖಪೂರಿತ ಅನುಭವ ಅನುಭವಿಸಿ ಅಲ್ಲಿಂದ ಕಾಗೆಯಾಗಿ ಏಳು ಜನ್ಮ ಎತ್ತಿದನು. ಅದೇರೀತಿಯಾಗಿ ಪ್ರತಿಸಲವೂ ಅದೇರೀತಿ ದುಃಖ ಅನುಭವಿಸಿ ಸತ್ತನು.
ನೌಕಾಧಿಪತಿಯ ಪತ್ನಿಯು ಸಹಾ ಅಷ್ಟೇ. ಆಕೆಯ ಹಿಂದಿನ ಜನ್ಮದ ಪಾಪದ ಪರಿಣಾಮವಾಗಿ ಆಕೆ ದುಃಖ ಅನುಭವಿಸಿದಳು. ಬಹುಕಾಲದ ಹಿಂದೆ ಬನಾರಸ್ನಲ್ಲಿ ಒಬ್ಬ ಗೃಹಸ್ಥನ ಪತ್ನಿಯಾಗಿದ್ದಳು. ಆಗ ಆಕೆಯ ಕೆಲಸ ಭತ್ತ ಕುಟ್ಟುವುದು, ನೀರು ತರುವುದು ಮತ್ತು ಸೌದೆ ಹೊಡೆಯವುದು ಆಗಿತ್ತು. ಆಕೆ ಅಂತಹ ಕೆಲಸವನ್ನು ಮಾಡುವಾಗ ಆಕೆಯ ನಾಯಿಯು ಆಕೆಗೆ ಸದಾ ನೋಡುತ್ತಿತ್ತು, ಆಕೆಯನ್ನು ಬಿಟ್ಟು ಅದು ಇರುತ್ತಿರಲಿಲ್ಲ. ಆಕೆ ತನ್ನ ಯಜಮಾನನಿಗೆ ಭೋಜನವನ್ನು ಗದ್ದೆಗಳಿಗೆ ತೆಗೆದುಕೊಂಡು ಹೋಗುವಾಗ ಅಥವಾ ಕಟ್ಟಿಗೆಗಳಿಗೆ ಅಡವಿಗೆ ಹೋಗುವಾಗ ಸದಾ ನಾಯಿಯು ಆಕೆಯ ನೆರಳಿನಂತೆ ಇರುತ್ತಿತ್ತು. ಇದನ್ನು ಗಮನಿಸಿದ ಕೆಲವು ಹುಡುಗರು ಓ ನೋಡಿ, ಇಲ್ಲಿ ಸ್ತ್ರೀ ಬೇಟೆಗಾತಿ ಹೋಗುತ್ತಿರುವಳು, ಆಕೆ ಬೇಟೆಯಾಡಿ ಇಂದು ಮಾಂಸದ ಭೋಜನ ಹಾಗು ಉತ್ತಮ ಭೋಜನ ಸಿದ್ಧವಾಗುತ್ತದೆ ಎಂದೆಲ್ಲಾ ಗೇಲಿ ಮಾಡುತ್ತಿದ್ದರು. ಆಗ ಆಕೆಗೆ ಅವಮಾನವಾದಂತೆ ಆಕೆ ಆ ನಾಯಿಯನ್ನು ದೂರಮಾಡಲು ಪ್ರಯತ್ನಿಸಿದಳು. ಅದನ್ನು ಹುಲ್ಲಿನಿಂದ, ಕೋಲಿಯಿಂದ ಹೊಡೆಯುತ್ತಿದ್ದಳು. ಆ ನಾಯಿ ಸ್ವಲ್ಪದೂರ ಹೋದಂತೆ ವತರ್ಿಸಿ ಮತ್ತೆ ಆಕೆಯ ಹಿಂದೆಯೇ ಬರುತ್ತಿತ್ತು. ಅದಕ್ಕೂ ಕಾರಣವಿತ್ತು, ಆ ನಾಯಿಯು ನಿರಂತರ ಮೂರು ಜನ್ಮಗಳ ಹಿಂದೆ ಆಕೆಯ ಪತಿಯಾಗಿತ್ತು. ಇದರಿಂದಾಗಿ ಅದು ಆಕೆಯನ್ನು ತೊರೆಯಲು ಆಗುತ್ತಿರಲಿಲ್ಲ. ಪ್ರಬಲವಾಗಿ ಆಕೆಯನ್ನು ಪ್ರೀತಿಸುತ್ತಿತ್ತು. ಹೊಸ ಜನ್ಮ ಸಿಕ್ಕನಂತರ ಯಾರೂ ಹಿಂದಿನ ಜನ್ಮದ ಪತಿ ಅಥವಾ ಪತ್ನಿ ಎಂದು ತಿಳಿಯುವುದು ಅತಿ ಕಷ್ಟವಾಗುತ್ತದೆ. ಅದರಿಂದಾಗಿ ಆ ನಾಯಿಯನ್ನು ಆಕೆಯಿಂದ ದೂರ ಮಾಡಲು ಆಗುತ್ತಿರಲಿಲ್ಲ. ಒಂದು ಬೆಳಿಗ್ಗೆ ಆಕೆ ತನ್ನೊಂದಿಗೆ ಮೊಸರನ್ನು ಕೊಂಡೊಯ್ದಳು, ಅದನ್ನು ತನ್ನ ಬಟ್ಟೆಯಿಂದ ಮುಚ್ಚಿಕೊಂಡು ಹಾಗೇ ಗಂಜಿಯನ್ನು ತೆಗೆದುಕೊಂಡು ಹೊಲದ ಕಡೆಗೆ ಪತಿಗಾಗಿ ಹೊರಟಳು. ತನ್ನ ಪತಿಗೆ ಈ ಆಹಾರ ನೀಡಿದ ಬಳಿಕ ಆಕೆ ನೀರಿಗಾಗಿ ಮಡಿಯೊಂದಿಗೆ ಬಾವಿಯ ಬಳಿ ಬಂದಳು. ಆಕೆ ಬರುವಾಗ ದಾರಿಯಲ್ಲಿ ಮಡಿಕೆಯಲ್ಲಿ ಮರಳನ್ನು ತುಂಬಿದಳು. ಸುತ್ತಲೂ ನೋಡಿ ನಾಯಿಯನ್ನು ಕರೆದಳು. ನಾಯಿಯು ಅತಿ ಸಂತೋಷದಿಂದ ಆಕೆಯ ಹತ್ತಿರ ಬಾಲವಾಡಿಸುತ್ತಾ ಬಂದಿತು. ಆಕೆ ನಾಯಿಯನ್ನು ಹಿಡಿದು ಅದನ್ನು ಹಗ್ಗದಿಂದ ಕಟ್ಟಿ, ಇನ್ನೊಂದು ತುದಿಯಲ್ಲಿ ಮಡಿಕೆಯನ್ನು ಕಟ್ಟಿ ಅದನ್ನು ನಾಯಿಯ ಕುತ್ತಿಗೆಗೆ ಕಟ್ಟಿ ಆ ಬಾವಿಯ ನೀರಿಗೆ ನಾಯಿಯನ್ನು ಮಡಿಕೆ ಸಹಿತ ಎಸೆದಳು. ಆ ನಾಯಿಯು ಕೆಟ್ಟ ರೀತಿಯಲ್ಲಿ ತನ್ನ ಅಂತ್ಯವನ್ನು ಕಂಡಿತು. ಈ ಹೀನ ಕೃತ್ಯದಿಂದ ಆಕೆ ನರಕದಲ್ಲಿ ಹಲವಾರು ಜನ್ಮವೆತ್ತಿದಳು. ಮಾನವಳಾಗಿಯೂ ಸಹಾ ಆಕೆಯು ನೂರುಸಲ ಇದೇರೀತಿ ಮರಳಿನ ಮಡಿಕೆಯೊಂದಿಗೆ ಮುಳುಗಿದ್ದಳು.
ಭಿಕ್ಷುಗಳೇ ನೀವು ಸಹಾ ಈ ರೀತಿಯಾಗಿ ದುಃಖವನ್ನು ಅನುಭವಿಸಿದ್ದು ನಿಮ್ಮ ಹಿಂದಿನ ಜನ್ಮದ ಪಾಪಕೃತ್ಯದಿಂದಾಗಿಯೇ ಆಗಿತ್ತು. ಬಹುಕಾಲದ ಹಿಂದೆ ನೀವು ಏಳು ಜನರು ಬನಾರಸ್ನ ದನಗಾಹಿಗಳಾಗಿದ್ದಿರಿ. ಆಗ ಅವರುಗಳು ಹಸುಗಳನ್ನು ಏಳುದಿನಗಳ ವರೆಗೆ ಹುಲ್ಲು ಮೇಯಿಸಿಕೊಂಡು ಇದ್ದರು. ಆಗ ಅವರು ಒಂದು ಉಡವನ್ನು ಕಂಡರು. ಅದನ್ನು ಬೆನ್ನತ್ತಿದರು. ಹಾಗು ಅದು ಬಿದಿರಿಯಲ್ಲಿ ಅವಿತಿತು. ಆ ಬಿದಿರಿಗೆ ಏಳು ರಂಧ್ರಗಳಿತ್ತು. ಅದನ್ನು ಹಿಡಿಯಲು ಆಗಲಿಲ್ಲ. ನಾಳೆ ಹಿಡಿಯುವ ಉದ್ದೇಶದಿಂದ ಆ ಏಳು ರಂಧ್ರಗಳನ್ನು ಮುಚ್ಚಿದರು. ಮುಂದಿನ ದಿನ ಅವರು ಹಸುಗಳನ್ನು ಹೊಡೆದುಕೊಂಡು ಹೋದರು. ಅದನ್ನು ಮರೆತೇಬಿಟ್ಟರು. ಏಳು ದಿನದ ನಂತರ ಅವರು ಆ ಬಿದಿರಿನ ಕಡೆ ಧಾವಿಸುವಾಗ ಅವರಿಗೆ ಉಡದ ನೆನಪು ಬಂದು, ತಾವು ಮುಚ್ಚಿದ್ದ ಕೊಂಬೆಗಳು ಮತ್ತು ಎಲೆಗಳನ್ನು ತೆಗೆದರು. ಅಲ್ಲಿ ಆ ಉಡವು ಏಳುದಿನ ಕಾಲ ಆಹಾರವಿಲ್ಲದೆ ಅಸ್ತಿಪಂಜರದಂತೆ ಆಗಿತ್ತು. ಅತಿ ಕಷ್ಟದಿಂದ ಅದು ಮೇಲೆ ಬರಲು ಯತ್ನಿಸುತ್ತಿತ್ತು. ಇದನ್ನು ನೋಡಿ ಅವರು ಅದನ್ನು ಹಿಡಿದು ಅದಕ್ಕೆ ಹೋಗಲು ಬಿಟ್ಟರು. ಆ ದನಗಾಹಿಗಳು ಅದನ್ನು ಕೊಲ್ಲದಿದ್ದರಿಂದ ಅವರು ನರಕಕ್ಕೆ ಬೀಳಲಿಲ್ಲ. ಆದರೆ ಅವರು ಮುಂದಿನ ಹದಿನಾಲ್ಕು ಜನ್ಮಗಳಲ್ಲಿ ಆ ಏಳು ದನಗಾಹಿಗಳು ಏಳೇಳು ದಿನ ಹಸಿದು ದುಃಖ ಅನುಭವಿಸಿದರು. ಭಿಕ್ಷುಗಳೇ ನೀವೇ ಆಗ ದನಗಾಹಿಗಳಾಗಿದ್ದಿರಿ. ಉಡಕ್ಕೆ ಹಸಿವು ಉಂಟುಮಾಡಿದ ಕಾರಣ ನೀವು ಸದಾ ದುಃಖ ಅನುಭವಿಸಿದಿರಿ.
ಆ ಬೋಧನೆಯನ್ನು ಅಂತ್ಯ ಮಾಡುವ ವೇಳೆಯಲ್ಲಿ ಅವರಲ್ಲಿ ಒಬ್ಬ ಭಿಕ್ಷು ಈ ರೀತಿ ಕೇಳಿದನು: ಓ ಭಗವಾನ್, ಯಾರಾದರೂ ತಮ್ಮ ಪಾಪದ ಪರಿಣಾಮವನ್ನು ಆಕಾಶದಲ್ಲಿಯಾಗಲಿ, ಸಮುದ್ರದ ಮಧ್ಯೆಯಾಗಲಿ ಅಥವಾ ಗುಹೆಯಲ್ಲಿದ್ದು ಪಾರಾಗಬಹುದೇ?
ಆಗ ಬುದ್ಧ ಭಗವಾನರು ಹೀಗೆ ಗಾಥೆಯನ್ನು ನುಡಿದರು:
ಆಕಾಶದಲ್ಲಿಯಾಗಲಿ, ಸಾಗರದ ಮಧ್ಯೆಯಾಗಲಿ ಅಥವಾ ಗುಹೆಯಲ್ಲಾಗಲಿ ಅಂತಹ ಯಾವ ಸ್ಥಳವೂ ಇಲ್ಲ. ಯಾರೊಬ್ಬನು ತನ್ನ ಪಾಪದ ಪರಿಣಾಮ (ಫಲ) ದಿಂದ ಪಾರಾಗಲು ಸಾಧ್ಯವಿಲ್ಲ.
No comments:
Post a Comment