Sunday, 14 January 2018

THE EVIL FRIENDS ಕೆಟ್ಟ ಸಂಗಾತಿಗಳು - ದೇವದತ್ತನ ವೃತ್ತಾಂತ

                     ಕೆಟ್ಟ ಸಂಗಾತಿಗಳು - ದೇವದತ್ತನ ವೃತ್ತಾಂತ


ಬುದ್ಧ ಭಗವಾನರು ಮಲ್ಲರ ಪ್ರಾಂತ್ಯವಾದ ಅನುಪಿಯದಲ್ಲಿ ಮಾವಿನ ತೋಪಿನಲ್ಲಿ ತಂಗಿದ್ದಾಗ, ಶಾಕ್ಯಕುಲದ ಆರು ರಾಜಕುಮಾರರು ಸಂಘಕ್ಕೆ ಸೇರಲು ಬಂದರು. ಅವರು ಯಾರೆಂದರೆ: ಭದ್ದಿಯ, ಆನಂದ, ಅನುರುದ್ದ, ಭಗು, ಕಿಂಬಿಲ ಮತ್ತು ದೇವದತ್ತ. ಅವರು ಭಗವಾನರಿಂದ ಸಂಘ ಸೇರಿದರು. ದೇವದತ್ತನ ಹೊರತಾಗಿ ಬೇರೆಯವರು ಚಿತ್ತ ಪರಿಶುದ್ಧತೆಗೆ ಒತ್ತುಕೊಟ್ಟು ಸಂತರಾಗುವ ಹಾದಿಯಲ್ಲಿದ್ದರೆ ದೇವದತ್ತನು ಮಂತ್ರಗಳನ್ನು ಆಶ್ರಯಿಸಿ ಪವಾಡಗಳನ್ನು ಸಾಧಿಸಲು ನಿರತನಾಗುತ್ತಿದ್ದನು. ಕೆಲವು ಪವಾಡಗಳನ್ನು ಸಿದ್ಧಿಸಿದನು.
ಅದೇ ವೇಳೆಯಲ್ಲಿ ವಿಹಾರದಲ್ಲಿ ಬುದ್ಧ ಭಗವಾನರಿಗೆ ಹಾಗು ಅವರ ಶಿಷ್ಯರನೇಕರಿಗೆ ನಾನಾರೀತಿಯ ಗೌರವ, ಸತ್ಕಾರ, ಪೂಜೆ ನಡೆಯುತ್ತಿದ್ದನ್ನು ಕಂಡ ದೇವದತ್ತನಿಗೆ ಮತ್ಸರ ಹಾಗು ಚಿಂತೆ ಉತ್ಪತ್ತಿಯಾಯಿತು. ತನ್ನ ಹೆಸರು ಯಾರಿಗೂ ತಿಳಿದಿಲ್ಲವಲ್ಲ, ತನಗೆ ಸತ್ಕಾರವಿಲ್ಲವಲ್ಲ ಎಂದು ಕೊರಗಿದನು. ಆತನಿಗೆ ಉಪಾಯ ಹೊಳೆದು ರಾಜಕುಮಾರ ಅಜಾತಶತ್ರುವನ್ನು ಬಲೆಗೆ ಹಾಕಿಕೊಳ್ಳಲು ನಿರ್ಧರಿಸಿದನು. ಅಜಾತಶತ್ರುವು ರಾಜ ಬಿಂಬಿಸಾರನ ಮಗನಾಗಿದ್ದನು. ಒಮ್ಮೆ ದೇವದತ್ತನು ಸರ್ಪಗಳಿಂದ ಅಲಂಕೃತನಾಗಿ ಶಿಶುವಿನ ರೂಪತಾಳಿ ಗಾಳಿಯಲ್ಲಿ ಹಾರಿ ಅಜಾತಶತ್ರುವಿನ ಮಡಿಲಲ್ಲಿ ಕುಳಿತನು. ಇದರಿಂದ ಅತ್ಯಂತ ಭಯಭೀತನಾದ ಅಜಾತಶತ್ರು ನೀನು ಯಾರು? ಎಂದು ಕೇಳಿದಾಗ ನಾನು ದೇವದತ್ತ ಎಂದು ಉತ್ತರಿಸಿ ಮತ್ತೆ ತನ್ನ ಭಿಕ್ಷು ರೂಪದಲ್ಲಿ ಕಾಣಿಸಿದನು. ಆಗ ಅಜಾತಶತ್ರುವಿಗೆ ದೇವದತ್ತನ ಮೇಲೆ ಅತೀವ ಭಯಭಕ್ತಿ ಉಂಟಾಯಿತು. ಅವನು ದೇವದತ್ತನಿಗೆ ಅನೇಕ ಸತ್ಕಾರ ಮಾಡಿದನು. ಆಗ ದೇವದತ್ತನಿಗೆ ಭಿಕ್ಷುಗಳ ನಾಯಕತ್ವ ವಹಿಸಬೇಕೆಂದು ಇಚ್ಛೆಯಾಯಿತು. ಯಾವಾಗ ಆತನಿಗೆ ಈ ಪಾಪ ಇಚ್ಛೆ ಉಂಟಾಯಿತೋ ಆಗ ಆತನು ಪವಾಡಶಕ್ತಿಯನ್ನು ಕಳೆದುಕೊಂಡನು.
ಒಮ್ಮೆ ಬುದ್ಧ ಭಗವಾನರು ವಿಶಾಲ ಜನರಿಗೆ ಧಮರ್ೊಪದೇಶ ಮಾಡುತ್ತಿದ್ದರು. ಅವರಲ್ಲಿ ರಾಜರು, ರಾಜಕುಮಾರರು ಮತ್ತು ಇತರ ಜನರಿದ್ದರು. ದೇವದತ್ತನು ಬುದ್ಧ ಭಗವಾನರ ಬಳಿಗೆ ಬಂದು ಮೊಣಕಾಲು ಬಾಗಿಸಿ ಕುಳಿತು, ಕೈಜೋಡಿಸಿ ಈ ರೀತಿ ಕೇಳಿಕೊಂಡನು: ಭಗವಾನ್, ತಮಗೆ ಈಗ ವೃದ್ಧಾಪ್ಯ ಬರುತ್ತಿದೆ, ನೀವು ಹೆಚ್ಚು ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ. ನಾನು ಭಿಕ್ಷು ಸಂಘವನ್ನು ನೋಡಿಕೊಳ್ಳುತ್ತೇನೆ. ಆದ್ದರಿಂದ ನೀವು ನನಗೆ ಭಿಕ್ಷುಗಳನ್ನು ವಹಿಸಬೇಕು. ಆದರೆ ಅದಕ್ಕೆ ಸಂಪೂರ್ಣ ಅನರ್ಹನಾಗಿದ್ದ ದೇವದತ್ತನ ಸಲಹೆ ಭಗವಾನರು ನಿರಾಕರಿಸಿದರು. ಇದರಿಂದ ದೇವದತ್ತನು ಅತಿಯಾಗಿ ಕೆರಳಿದನು, ಬಾಧೆಗೊಳಗಾದನು. ನಂತರ ಅಲ್ಲಿಂದ ಹೊರಟುಬಿಟ್ಟನು. ಬುದ್ಧ ಭಗವಾನರು ದೇವದತ್ತನ ಕ್ರಿಯೆಗೆ ತಾವಾಗಲಿ ಅಥವಾ ಸಂಘವಾಗಲಿ ಹೊಣೆಯಲ್ಲ ಎಂದು ತಿಳಿಸಿದರು.
ಇದರಿಂದ ದೇವದತ್ತನಿಗೆ ಬುದ್ಧ ಭಗವಾನರ ಮೇಲೆ ಅತೀವ ಸೇಡು ಭಾವನೆ ತುಂಬಿಕೊಂಡನು. ಆತನು ಅಜಾತಶತ್ರುವಿನ ಬಳಿ ಹೋಗಿ ತನ್ನ ತಂದೆಯಾದ ಬಿಂಬಿಸಾರನನ್ನು ರಾಜ್ಯಕ್ಕಾಗಿ ಕೊಲ್ಲಲು ಪ್ರೇರೇಪಿಸಿ, ತಾನು ಬುದ್ಧರನ್ನು ಕೊಲ್ಲಿಸಲು ನಿರ್ಧರಿಸಿದನು. ದೇವದತ್ತನು ಇದರ ಫಲಿತಾಂಶ ಹೀಗೆ ಹೇಳಿದರು. ಅಜಾತಶತ್ರುವು ತಂದೆಯನ್ನು ಕೊಂದು ತಾನೇ ರಾಜನಾಗುವುದು ಹಾಗು ದೇವದತ್ತನು ಬುದ್ಧರನ್ನು ಕೊಲ್ಲಿಸಿ ತಾನೇ ಭಿಕ್ಷು ಸಂಘದ ನಾಯಕನಾಗುವುದಾಗಿ ಹೇಳಿದನು. ಆ ಮೂರ್ಖ ಅಜಾತಶತ್ರು ಹಾಗೆಯೇ ತಂದೆಯನ್ನು ಕೊಲ್ಲಿಸಿ ರಾಜನಾದನು. ಹಾಗು ದೇವದತ್ತ ಬುದ್ಧರನ್ನು ಕೊಲ್ಲಲು ಕೊಲೆಗಡುಕರ ಗುಂಪನ್ನು ಕಳುಹಿಸಿದನು. ಆ ಕೊಲೆಗಡುಕರು ಪ್ರತ್ಯೇಕವಾಗಿ ಬುದ್ಧರನ್ನು ಕೊಲ್ಲಲು ಬಂದು ಅವರ ಉಪದೇಶ ಕೇಳಿ ಸೋತಪತ್ತಿ ಫಲ (ಶೀಲವಂತರಾಗಿ, ಮುಕ್ತಿಗೆ ಅರ್ಹ ವ್ಯಕ್ತಿಗಳಾಗಿ) ಪಡೆದು ತಮ್ಮ ಮನೆಗಳಿಗೆ ಹೊರಟರು. ಆಗ ದೇವದತ್ತನು ತಾನೇ ಕೊಲ್ಲಲು ನಿರ್ಧರಿಸಿದನು. ಅದರಂತೆಯೇ ಆತನು ಗಿಜ್ಝಕೂಟ ಪರ್ವತದ ಮೇಲೆ ಹತ್ತಿ ಅಲ್ಲಿಂದ ದೊಡ್ಡ ಬಂಡೆಯೊಂದನ್ನು ಭಗವಾನರು ಕುಳಿತಿರುವ ಸ್ಥಳದಲ್ಲಿ ಅವರ ಮೇಲೆ ಬೀಳುವಂತೆ ತಳ್ಳಿದನು. ಆದರೆ ಅದು ಬುದ್ಧ ಬಲದಿಂದ ಪಕ್ಕಕ್ಕೆ ಬಿದ್ದಿತು. ಕೇವಲ ಒಂದು ಚೂರು ಸಿಡಿದು ಅದು ಬುದ್ಧರ ಕಾಲಿಗೆ ಚುಚ್ಚಿತು. ಈ ರೀತಿಯಾಗಿ ಅಸಫಲನಾದ ಮೇಲೆ ದೇವದತ್ತನು ಮತ್ತೊಂದು ಉಪಾಯ ಮಾಡಿದನು. ರಾಜನ ಪ್ರಧಾನ ಆನೆಯನ್ನು (ನಾಲಾಗಿರಿ) ಅತಿಯಾಗಿ ಮದ್ಯಪಾನ ಮಾಡಿಸಿ, ಅದನ್ನು ಹಾಗೆ ಸ್ವೇಚ್ಛೆಯಾಗಿ ಬುದ್ಧರು ಇರುವ ಕಡೆ ಬಿಟ್ಟನು. ಆ ಆನೆಯು ಅತ್ಯಂತ ಭೀಷಣವಾಗಿ ರೌದ್ರಾವತಾರ ತಾಳಿ ನುಗ್ಗಿಬಂದುದನ್ನು ಕಂಡು ಗಾಬರಿಯಾದ ಆನಂದ ಥೇರರಂತು ಬುದ್ಧರ ಮುಂದೆ ರಕ್ಷಣಾಯುತವಾಗಿ ನಿಂತರು. ಆದರೆ ಅರಹಂತರಾದ ಶಾಂತ ಸ್ವರೂಪರಾದ ಭಗವಾನರು ಅಣುಮಾತ್ರವೂ ವಿಚಲಿತರಾಗದೆ ಅಪಾರ ಮೈತ್ರಿಯಿಂದ ಮಗುವನ್ನು ಸ್ಪಶರ್ಿಸುವ ಹಾಗೆ ಆನೆಯ ಸೊಂಡಿಲನ್ನು ಸ್ಪಶರ್ಿಸಿ ಅದನ್ನು ಪರಿಪೂರ್ಣವಾಗಿ ನಿಯಂತ್ರಿಸಿದರು. ನಂತರ ವಿಹಾರಕ್ಕೆ ಹೊರಟರು.
ಇಲ್ಲಿಯತನಕ ಜನರಿಗೆ ದೇವದತ್ತನ ದುಷ್ಕೃತ್ಯಗಳ ಅರಿವು ಇರಲಿಲ್ಲ. ಆದರೆ ಈಗ ಜನರು ಸ್ಪಷ್ಟವಾಗಿ ಅರಿತರು. ದೇವದತ್ತನಿಂದಲೇ ಅಜಾತಶತ್ರುವು ತಂದೆಯನ್ನು ಕೊಂದಿದ್ದು, ತಥಾಗತರನ್ನು ಕೊಲೆಗಡುಕರಿಂದ ಕೊಲ್ಲಲು ಪ್ರಯತ್ನಿಸಿದ್ದು, ದೇವದತ್ತ ಸ್ವತಃ ಬಂಡೆ ದೂಡಿ ಹತ್ಯೆಗೆ ಪ್ರಯತ್ನಿಸಿದ್ದು, ಈಗ ಪಟ್ಟದ ಆನೆ ನಾಲಾಗಿರಿಯನ್ನು ಬಿಟ್ಟು ಭಗವಾನರ ಹತ್ಯೆಗೆ ಪ್ರಯತ್ನಿಸಿದ್ದು ಜನರಿಗೆ ಸ್ಪಷ್ಟವಾಗಿ ಅರಿವಾಯಿತು. ಹಾಗು ಜನರಲ್ಲಿ ಅಪಾರ ಗಾಬರಿ ಉಂಟಾಯಿತು. ಜನರ ತಿಳುವಳಿಕೆಯನ್ನು ಅರಿತ ಅಜಾತಶತ್ರುವು ಮುಂದೆ ದೇವದತ್ತನಿಗೆ ಸಹಾಯ ಮಾಡುವುದನ್ನು ನಿಲ್ಲಿಸಿದನು. ನಾಗರಿಕರು ಸಹಾ ಆತನಿಗೆ ಭಿಕ್ಷಾಟನೆಗೆ ಬಂದಾಗ ಆಹಾರ ನೀಡಲು ನಿರಾಕರಿಸಿದರು.
ಆನಂತರ ದೇವದತ್ತನು ಸಂಘಬೇಧ ಮಾಡಲು ನಿರ್ಧರಿಸಿದನು. ಆತನು 500 ಭಿಕ್ಷುಗಳಿಗೆ ಮತಿಗೆಡಿಸಿ ತನ್ನೊಂದಿಗೆ ಗಯಾಸಿಸಗೆ ಕರೆದೊಯ್ಯದನು. ಕೆಲವು ಸಮಯದ ನಂತರ ಆ ಎಲ್ಲರೂ ಮತ್ತೆ ಹಿಂದಿರುಗಿ ಭಗವಾನರಲ್ಲಿ ಕ್ಷಮೆಯಾಚಿಸಿ ಮತ್ತೆ ಸಂಘವನ್ನು ಸೇರಿದರು. ಆದರೆ ಕೋಕಾಲಿಕ ಒಬ್ಬನು ಮಾತ್ರ ಸೇರಲಿಲ್ಲ, ಅವನು ದೇವದತ್ತನ ಮಿತ್ರನಾಗಿದ್ದನು. ಅವನು ದೇವದತ್ತನಿಗೆ ಕೋಪದಿಂದ ಒಮ್ಮೆ ತನ್ನ ಮೊಣಕಾಲಿನಿಂದ ದೇವದತ್ತನ ಎದೆಗೆ ಬಲವಾಗಿ ಹೊಡೆದನು. ಅದರ ಪರಿಣಾಮವಾಗಿ ದೇವದತ್ತನು ಒಂಬತ್ತು ತಿಂಗಳಕಾಲ ಕಾಯಿಲೆ ಬಿದ್ದನು.
ನಂತರ ಆತನಿಗೆ ಆತನ ಕೃತ್ಯಗಳ ಬಗ್ಗೆ ತೀವ್ರ ಪಶ್ಚಾತ್ತಾಪ ಉಂಟಾಯಿತು. ಆತನು ಬುದ್ಧ ಭಗವಾನರನ್ನು ನೋಡಲು ತೀವ್ರವಾಗಿ ಬಯಸಿದನು. ದೇವದತ್ತನು ಹೀಗೆಲ್ಲಾ ಹೇಳಿಕೊಳ್ಳುತ್ತಿದ್ದನು: ಆ ಮಹಾ ಕರುಣಾಮಯಿಗಳು ಎಂದಿಗೂ ಕ್ಷಣಮಾತ್ರಕ್ಕೂ ದ್ವೇಷಿಸಲಿಲ್ಲ, ಆದರೆ ಪರಮನೀಚನಾದ ನಾನೇ ಅವರಿಗೆ ಮಾಡಬಾರದ್ದನ್ನೆಲ್ಲಾ ಮಾಡಿದೆ.
ದೇವದತ್ತನಿಗೆ ಪಲ್ಲಕ್ಕಿಯಲ್ಲಿರಿಸಿಕೊಂಡು ಬುದ್ಧರನ್ನು ಕಾಣಲು ಕರೆದುಕೊಂಡು ಹೋದರು. ಆದರೆ ಮಾರ್ಗ ಮಧ್ಯದಲ್ಲೇ ಆತನು ಮರಣ ಹೊಂದಿದನು. ಆತನ ಶವದ ಪಲ್ಲಕ್ಕಿ ಕೆಳಗೆ ಇಳಿಸಿದಾಗ ಭೂಮಿಯೇ ತೆರೆದುಕೊಂಡು ಆತನನ್ನು ಅಗ್ನಿಸಮೇತ ಅವೀಚಿ ನರಕಕ್ಕೆ ಕರೆದೊಯ್ಯಿತು.
ರಾಜಕುಮಾರ ಅಜಾತಶತ್ರುವು ನಂತರ ಭಗವಾನರ ಅತಿ ಶ್ರದ್ಧಾಳು ಪರಮ ಭಕ್ತನಾದನು. ಧಮ್ಮಕ್ಕೆ, ಸಂಘಕ್ಕೆ ಮಹಾ ಸಹಾಯಕನಾದನು. ಆದರೂ ಸಹಾ ಕೆಟ್ಟ ಗೆಳೆತನದಿಂದ ತನ್ನ ತಂದೆಯ ಹತ್ಯೆಯ ಪ್ರತಿಫಲವಾಗಿ ಆತನು ಸಹಾ ತನ್ನ ಮಗನಿಂದ ಕೊಲ್ಲಲ್ಪಟ್ಟು, ಮರಣದ ನಂತರ ಅವೀಚಿ ನರಕದಲ್ಲಿ ಹುಟ್ಟಿದನು.
- ಧಮ್ಮಪದ ಅಟ್ಠಕಥಾ

No comments:

Post a Comment