Sunday, 14 January 2018

the consequences of lying ಸುಳ್ಳಾಡುವಿಕೆ - ಮೀನಿನ ಪ್ರಸಂಗ

ಸುಳ್ಳಾಡುವಿಕೆ - ಮೀನಿನ ಪ್ರಸಂಗ

ಕಶ್ಶಪ ಬುದ್ಧರ ಕಾಲದಲ್ಲಿ ಇಬ್ಬರು ಸಹೋದರರು ಭಿಕ್ಷುಗಳಾಗಿ ಸಂಘದಲ್ಲಿ ಸೇರಿದರು. ಅವರಲ್ಲಿ ಹಿರಿಯನ ಹೆಸರು ಸೊದನ ಮತ್ತು ಕಿರಿಯನ ಹೆಸರು ಕಪಿಲನೆಂದಾಗಿತ್ತು. ಅವರ ತಾಯಿ ಸೋದನಿ ಹಾಗು ಸೋದರಿ ತಪನ ಕೂಡ ಭಿಕ್ಷುಣಿಗಳಾಗಿ ಸಂಘದಲ್ಲಿದ್ದರು.
ಸೊದನ ಹಾಗು ಕಪಿಲರು ಅಲ್ಲಿ ಎಷ್ಟು ವಿಧದ ದೂರ (ಭಿಕ್ಷುವಿನ ವಿವಿಧ ಜೀವನದ ವಿಧಾನ) ಎಂದು ವಿಚಾರಿಸಿದರು. ನಂತರ ಸೊದನ ಗುರುಗಳೊಂದಿಗೆ ಐದು ವರ್ಷ ವಾಸಿಸಿ ಮರುಭೂಮಿಗೆ ಹೋಗಿ ಅಲ್ಲಿ ನಿರಂತರ ದೃಢಪ್ರಯತ್ನಶೀಲತೆಯಿಂದ ಅರಹಂತನಾದನು (ನಿಬ್ಬಾಣ ಸಾಕ್ಷಾತ್ಕಾರ, ವಿಮುಕ್ತಿ (ಸಜೀವ) ಪಡೆದನು). ಆದರೆ ಕಪಿಲ ಗ್ರಂಥಾದೂರ ಭಿಕ್ಷುವಾಗಿ ತಿಪಿಟಕದಲ್ಲಿ ನಿಷ್ಣಾತ ವಾಗ್ಮಿಯಾದನು. ಆತನ ಆಳವಾದ ಜ್ಞಾನದಿಂದ ಆತನಿಗೆ ಅಪಾರ ಸಂಖ್ಯೆಯ ಹಿಂಬಾಲಕರು ದೊರೆತರು. ಅದರಿಂದ ಆತನಿಗೆ ಅಪಾರ ಲಾಭವಾಯಿತು. ಇದರಿಂದ ಅವನಿಗೆ ಅಹಂ ಹೆಚ್ಚಾಯಿತು ಮತ್ತು ಆತನು ಪರರ ಹೇಳಿಕೆಗಳನ್ನು ವಿರೋಧಿಸುತ್ತಿದ್ದನು. ಪರರ ಒಂದು ವಿಷಯವನ್ನು ತಪ್ಪು ಎಂದು ಹೇಳಿದರೆ, ಈತನು ಅದನ್ನು ಸರಿಯೆಂದು ವಾದಿಸುತ್ತಿದ್ದನು. ಪರರು ಒಂದು ವಿಷಯವನ್ನು ಸರಿ ಎಂದು ಹೇಳಿದರೆ, ಈತನು ಅದನ್ನು ತಪ್ಪೆಂದು ವಾದಿಸುತ್ತಿದ್ದನು. ಹೀಗೇ ನಡೆಯುತ್ತಿತ್ತು. ಹಿರಿಯ ಸ್ಥವಿರರು ಆತನಿಗೆ ಹೀಗೆ ಮಾಡಕೂಡದೆಂದು ಪದೇ ಪದೇ ಬುದ್ಧಿವಾದ ಹೇಳಿದರು. ಆದರೆ ಆತನು ಅವರ ಮಾತನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಆಗ ಥೇರರು ಅವರ ಅಣ್ಣನಾದ ಸೊದನನಿಗೆ ಬುದ್ಧಿವಾದ ಹೇಳಲು ಕೇಳಿಕೊಂಡರು. ಸೊದನ ಥೇರನು ಕಿರಿಯನಿಗೆ ಹೀಗೆ ಮಾಡಕೂಡದೆಂದು ಬುದ್ಧಿವಾದ ಮಾಡಿದರೂ ಸಹಾ ಆತನು ಅಲಕ್ಷಿಸಿದನು. ಆಗ ಅರ್ಹಂತನಾದ ಸೋದನನು ಹೀಗೆ ಹೇಳಿದನು: ನೀನು ನಿನ್ನ ಕ್ರಿಯೆಗೆ ದುಃಖ ಫಲ ಪಡೆಯುವೆ ಎಂದು ಹೇಳಿ ಹೊರಟು ಹೋದನು.
ಕಪಿಲನು ಸಂಘದಲ್ಲಿರುವ ಥೇರರನ್ನು ಬೇರ್ಪಡಿಸಿದನು. ತನಗೆ ಇಚ್ಛೆಬಂದಂತೆ ವತರ್ಿಸಿದನು. ಧಮ್ಮದಲ್ಲಿರುವ ಸತ್ಯವನ್ನು ಮುಚ್ಚಿಟ್ಟನು. ಧಮ್ಮದಲ್ಲಿಲ್ಲದ ಮಿಥ್ಯವನ್ನು ಸತ್ಯವೆಂಬಂತೆ ಪ್ರಕಟಿಸಿದನು. ಭಿಕ್ಷುಗಳು ಸಭೆಯಲ್ಲಿ ಸೇರಿ ನಿವೇದನೆ ಮಾಡಲು ಸೇರಿರುವಾಗ ಗದ್ದುಗೆಯಲ್ಲಿ ಕುಳಿತ ಕಪಿಲನು ಭಿಕ್ಷುಗಳಿಗೆ ಅವರೆಲ್ಲರೂ ನಿಯಮ ಪಾಲನೆಯಲ್ಲಿರುವರೇ ಎಂದು ಕೇಳಿದನು. ಯಾರೊಬ್ಬರು ಉತ್ತರಿಸದಿದ್ದಾಗ ಹಾಗಾದರೆ ಮುಂದೆ ನಾನು ಈ ನಿಯಮಗಳೆಲ್ಲವೂ ಪಾಲಿಸಬೇಕಾಗಿಲ್ಲ ಎಂದು ಹೇಳಿ ಧರ್ಮವನ್ನು, ವಿನಯವನ್ನು ಭ್ರಷ್ಟಗೊಳಿಸಿದನು. ಅದೇದಿನವೇ ಸೊದನ ಅರಹಂತರು ನಿಬ್ಬಾಣವನ್ನು ಪಡೆದರು. ಕೆಲವು ಕಾಲದ ನಂತರ ಕಪಿಲನು ಸತ್ತುಹೋದನು ಹಾಗು ನರಕದಲ್ಲಿ ಹುಟ್ಟಿದನು. ಆತನ ತಾಯಿ, ತಂಗಿ ಮತ್ತು ಆತನನ್ನು ಅನುಸರಿಸಿದವರೆಲ್ಲರೂ ಕಾಲನಂತರ ತೀರಿಹೋಗಿ ನರಕದಲ್ಲಿ ಹುಟ್ಟಿದರು.
ಅದೇವೇಳೆಯಲ್ಲಿ 500 ದರೋಡೆಕೋರರು ಅಪಾಯದಲ್ಲಿ ಸಿಲುಕಿ ಅವರನ್ನು ಭಟರು ಬೆನ್ನಟ್ಟಿ ಬಂದಾಗ ಅವರು ರಕ್ಷಣೆಗೆ ಮರುಭೂಮಿಗೆ ಓಡಿದರು. ಅಲ್ಲಿ ಗುಹೆಯಲ್ಲಿ ಭಿಕ್ಷು ಇರುವುದನ್ನು ಕಂಡು ಅವರಲ್ಲಿ ರಕ್ಷಣೆ ಕೇಳಿಕೊಂಡರು. ಆ ಮಹಾಭಿಕ್ಷುವು ಅವರಿಗೆ : ನಿಮಗೆ ಈಗ ಯಾವುದೂ ರಕ್ಷಣೆ ನೀಡಲಾರದು, ಆದ್ದರಿಂದ ನನ್ನ ಮಿತ್ರರೇ, ನೀವು ತ್ರಿಸರಣಗಳನ್ನು ಹಾಗು ಪಂಚಶೀಲಗಳನ್ನು ನಿಮ್ಮ ಮಾರ್ಗದಶರ್ಿಯನ್ನಾಗಿ ಹಾಗು ಸಹಾಯವನ್ನಾಗಿ ಪಡೆಯಿರಿ. ಅವರು ಅದರಂತೆಯೇ ನಡೆದುಕೊಂಡರು. ಆದರೆ ಆ ಹಳ್ಳಿಗರು ಅವರಿಂದ ಬಹಳಷ್ಟು ನರಳಿದ್ದರು. ಅವರು ಬಂದು ಆ ಡಕಾಯಿತರನ್ನು ಕೊಂದು ಹಾಕಿದರು. ಅವರೆಲ್ಲರೂ ಕಾಮವಚರ ದೇವಲೋಕದಲ್ಲಿ ಜನಿಸಿದರು. ಗೌತಮ ಬುದ್ಧರ ಕಾಲದಲ್ಲಿ ಆ ಡಕಾಯಿತರ ನಾಯಕನು ಶ್ರಾವಸ್ತಿಯ ಪ್ರಧಾನ ಮೀನುಗಾರನ ಮಗನಾಗಿ ಹುಟ್ಟಿದನು. ಮಿಕ್ಕವರು ಸಹಾ ಅದೇ ನಗರದಲ್ಲಿ ಹುಟ್ಟಿದರು. ಆ ಐನೂರು ಜನರು ಸಹಾ ಬೆಳೆದು ಅವರೆಲ್ಲರು ಉತ್ತಮ ಮಿತ್ರರಾದರು.
ಕಪಿಲನು ನರಕದಲ್ಲಿ ದುಃಖ ಅನುಭವಿಸಿದ ನಂತರ ಅಚಿರವತಿ ನದಿಯಲ್ಲಿ ದೊಡ್ಡ ಮೀನಾಗಿ ಹುಟ್ಟಿದನು. ಆ ಮೀನು ಹೊಂಬಣ್ಣದ ವರ್ಣದಲ್ಲಿತ್ತು. ಆದರೆ ಬಾಯಿಂದ ಅತಿ ಅಸಹ್ಯಕರ ದುವರ್ಾಸನೆಯಿಂದ ಕೂಡಿತ್ತು.
ಒಂದುದಿನ ಮೀನುಗಾರರ ಗುಂಪು ಮೀನುಗಳನ್ನು ಹಿಡಿಯಲು ಬಲೆಯನ್ನು ಹಾಕಿದಾಗ ಕಪಿಲನು ಸಿಕ್ಕಿಬಿದ್ದನು. ಆ ಮೀನುಗಾರರಿಗೆ ಮೊದಲ ಪ್ರಯತ್ನಕ್ಕೆ ಇಂತಹ ದೊಡ್ಡ ಮೀನು ಬಿದ್ದಿತ್ತು. ಅವರು ಅದನ್ನು ರಾಜನ ಬಳಿ ತಂದು ಒಪ್ಪಿಸಿದರು. ಆ ರಾಜನು ಮೀನನ್ನು ತೆಗೆದುಕೊಂಡು ಜೇತವನ ವಿಹಾರದಲ್ಲಿ ಬುದ್ಧರ ಬಳಿ ತಂದನು. ಆಗ ಮೀನು ಬಾಯಿ ತೆಗೆದಾಗ ಇಡೀ ವಿಹಾರವೇ ದುವರ್ಾಸನೆಯಿಂದ ತುಂಬಿತು. ಆಗ ರಾಜನು ಭಗವಾನರಿಗೆ ಕೇಳಿಕೊಂಡನು. ಭಗವಾನ್, ಏತಕ್ಕಾಗಿ ಈ ಮೀನು ಇಂತಹ ಚಿನ್ನದ ವರ್ಣದಿಂದ ಕೂಡಿದ್ದರೂ ಬಾಯಿಂದ ಇಂತಹ ದುವರ್ಾಸನೆ ಇದೆ?
ಆಗ ಭಗವಾನರು ಉತ್ತರಿಸಿದರು: ಮಹಾರಾಜ, ಈ ಮೀನು ಹಿಂದೆ ಕಶ್ಶಪ ಬುದ್ಧರ ಕಾಲದಲ್ಲಿ ಭಿಕ್ಷುವಾಗಿತ್ತು. ಧರ್ಮದಲ್ಲಿ ಅತಿ ಪಾಂಡಿತ್ಯ ಪಡೆದಿದ್ದರೂ ಸಹಾ ಸತ್ಯವನ್ನು ಮಿಥ್ಯಮಾಡಿ, ಹಿಂದಿನ ಭಿಕ್ಷುಗಳ ಬುದ್ಧಿವಾದ ಧಿಕ್ಕರಿಸಿ ಧಮ್ಮವನ್ನು ಭ್ರಷ್ಟಗೊಳಿಸಿದ್ದರಿಂದ ಅಲ್ಲಿಂದ ನರಕದಲ್ಲಿ ಹುಟ್ಟಿ, ಈಗ ಮೀನಾಗಿ ಹುಟ್ಟಿದ್ದಾನೆ. ಆಗ ಭಿಕ್ಷುವಾಗಿ ಶೀಲಗಳನ್ನು ಪಾಲಿಸಿದ್ದರಿಂದ ಆ ಸುಕೃತ ಫಲದಿಂದ ಚಿನ್ನದ ವರ್ಣದಿಂದ ಕೂಡಿದೆ. ಆದರೆ ಸತ್ಯವನ್ನು ಮಿಥ್ಯ ಮಾಡಿದ್ದರ ಫಲವಾಗಿ ಹಾಗು ಹಿರಿಯ ಭಿಕ್ಷುಗಳಿಗೆ ನಿಂದಿಸಿದ್ದರ ಫಲವಾಗಿ ಈ ಹೀನಾಯ ದುವರ್ಾಸನೆಯನ್ನು ಹೊಂದಿದೆ. ಮಹಾರಾಜ ನಾನು ಈ ಮೀನನ್ನು ಮಾತನಾಡಿಸಲೇ? ಹಾಗೇ ಮಾಡಿ ಭಗವಾನ್ ಎಂದು ರಾಜನು ಉತ್ತರಿಸಿದಾಗ ಭಗವಾನರು  ಮೀನನ್ನು ಮಾತನಾಡಿಸಿದರು.
ಆ ಮೀನು ಓ ಭಗವಾನ್, ನಾನು ಕಪಿಲ.
ಎಲ್ಲಿಂದ ನೀನು ಬಂದಿರುವೆ?
ಅವೀಚಿ ನರಕದಿಂದ ಬಂದಿರುವೆ ಭಗವಾನ್.
ಅಲ್ಲಿ ಏತಕ್ಕೆ ಜನ್ಮಿಸಿದ್ದೆ ?
ಮಿಥ್ಯವನ್ನು ಸತ್ಯವೆಂದು ಪ್ರತಿಪಾದಿಸಿದ್ದಕ್ಕಾಗಿ ಭಗವಾನ್.
ನಿನ್ನ ಸೋದರ ಸೊದನ ಎಲ್ಲಿ?
ಆತನು ನಿಬ್ಬಾಣವನ್ನು ಪ್ರಾಪ್ತಿಮಾಡಿದನು ಭಗವಾನ್.
ನಿನ್ನ ಸೋದರಿ ತಪನಿ ಎಲ್ಲಿ ?
ನರಕದಲ್ಲಿದ್ದಾಳೆ ಭಗವಾನ್.
ನಿನ್ನ ತಾಯಿ ಸೊದನಿ ಎಲ್ಲಿ ?
ಆಕೆ ಮಹಾನರಕದಲ್ಲಿದ್ದಾಳೆ ಭಗವಾನ್.
ಇಲ್ಲಿಂದ ನೀನು ಎಲ್ಲಿ ಜನ್ಮಿಸಬೇಕಾಗುವುದು.
ಮಹಾ ನರಕದಲ್ಲೇ ಭಗವಾನ್.
ಹೀಗೆ ನುಡಿದ ಅಲ್ಪ ವೇಳೆಯಲ್ಲಿ ಅದು ತಲೆಯನ್ನು ಬಡಿಯುತ್ತಾ ಮೃತ್ಯುವಿನೊಂದಿಗೆ ಹೋರಾಡುತ್ತ ಮಡಿಯಿತು. ನಂತರ ಭಗವಾನರು ಸಭೆಗೆ ಸುತ್ತವನ್ನು ಬೋಧಿಸಿದರು. ಅದು ಮುಂದೆ ಕಪಿಲ ಸುತ್ತ ಎಂದು ಪ್ರಸಿದ್ಧಿಯಾಯಿತು.
- ಕಪಿಲ ಸುತ್ತ ಅರ್ಥ ವರ್ಣನಾ

No comments:

Post a Comment