ಕುಡಿತ - ವಿಶಾಖಳಿಗೆ ನೀಡಿದ ಬೋಧನೆ:
ಒಮ್ಮೆ ಭಗವಾನರು ಜೇತವನ ವಿಹಾರದಲ್ಲಿ ತಂಗಿದ್ದರು. ಆ ಸಮಯದಲ್ಲಿ ಮದ್ಯಪಾನ ಮಾಡುವ ಹಬ್ಬವು ಇತ್ತು. ಅದನ್ನು ಡಂಗೂರ ಸಾರಿಸಿ ಜನರು ಮಾದಕ ಪಾನೀಯಗಳಲ್ಲಿ ನಿರತರಾಗುವಂತೆ ಮಾಡುತ್ತಿದ್ದರು. ಸುಮಾರು 500 ಸ್ತ್ರೀ ಬಂಧುಗಳು ವಿಶಾಖಳಿಗೆ ಮದ್ಯಪಾನದ ಹಬ್ಬಕ್ಕೆ ಆಹ್ವಾನಿಸಿದರು. ಆದರೆ ಆಕೆ ಅದನ್ನು ನಿರಾಕರಿಸಿದಳು ಹಾಗು ಮದ್ಯಪಾನದ ದುಷ್ಪರಿಣಾಮಗಳನ್ನು ಹೇಳಿದಳು. ಆಗ ಅವರು ಆಕೆಗೆ ಬುದ್ಧರಲ್ಲಿಗೆ ಹೋಗಿ ಅವರಿಗೆ ದಾನ ನೀಡಿ ಅವರಿಂದ ಧಮರ್ೊಪದೇಶ ಕೇಳುವಂತೆ ಹೇಳಿ ತಮ್ಮ ಮನರಂಜನೆಯ ಕಡೆ ಹೊರಟರು. ವಿಶಾಖಳು ಪರಮಶ್ರೇಷ್ಠ ಸ್ತ್ರೀ ಉಪಾಸಕಿಯಾಗಿದ್ದಳು. ಆಕೆ ವಿಹಾರಗಳಿಗೆ ಭಿಕ್ಷುಗಳ ಪಾಲನೆಗೆ, ಧರ್ಮದ ಕ್ಷೇಮಾಭಿವೃದ್ಧಿಗಳಿಗೆ ಅಪಾರ ಹಣವನ್ನು ಬಳಸಿದ್ದಳು. ಆಕೆ ಬುದ್ಧರಿಗೆ ದಾನವನ್ನು ಹಗಲಿನಲ್ಲಿ ನೀಡುತ್ತಿದ್ದಳು. ಹಾಗು ಸಂಜೆ ವಿಹಾರಕ್ಕೆ ಹೂ ಹಾಗು ಶುದ್ಧ ಗಂಧಗಳಿಂದ ಹೋಗಿ ಪ್ರವಚನ ಕೇಳುತ್ತಿದ್ದಳು.
ಆಕೆ ತಥಾಗತರಲ್ಲಿ ಹೋದ ಕೆಲವು ಸಮಯದ ನಂತರ ಆಕೆಯ ಐನೂರು ಸ್ತ್ರೀ ಬಂಧುಗಳು ಮತ್ತೆ ಹಿಂತಿರುಗಿ ಬಂದರು. ವಿಶಾಖಳು ಬುದ್ಧರಿಗೆ ಗಂಧ ಹಾಗು ಸುಪುಷ್ಪಗಳನ್ನು ಅಪರ್ಿಸಿದ ನಂತರ ಆಕೆಯೊಂದಿಗೆ ಅವರು ಸೇರಿದರು. ಆಗ ವಿಶಾಖಳು ಅವರಿಗೆ ಧರ್ಮ ಬೋಧನೆ ಕೇಳುವಂತೆ ಸ್ಫೂತರ್ಿ ನೀಡಿದಳು. ಹಾಗೆಯೇ ಅವರು ಹೋದ ನಂತರ ಆ ಐನೂರರಲ್ಲಿ ಕೆಲವರು ಕುಡಿತದ ಪರಿಣಾಮದಿಂದ ಬುದ್ಧರ ಎದುರಿನಲ್ಲೇ ಹಾಡುಗಳನ್ನು ಹಾಡುವುದು ಹಾಗು ಕುಣಿಯುವುದು ಪ್ರಾರಂಭ ಮಾಡಿದರು. ಮತ್ತೆ ಕೆಲವರು ತಮ್ಮಲ್ಲೇ ಜಗಳವಾಡಲು ಪ್ರಾರಂಭಿಸಿದರು. ಆಗ ದಯಮಯ ಬುದ್ಧ ಭಗವಾನರು ತಮ್ಮ ಶರೀರದಿಂದ ಪ್ರಕಾಶಮಯ ಕಿರಣಗಳನ್ನು ಪ್ರಕಾಶಿಸಿದರು. ಅದರಿಂದ ಅವರು ಹೆದರುವಂತಾಯಿತು. ಹಾಗೆಯೇ ಆ ಕಿರಣಗಳು ಇಡೀ ಪ್ರದೇಶವನ್ನು ಕತ್ತಲೆಯನ್ನಾಗಿ ಪರಿವರ್ತನೆ ಮಾಡಿದವು. ಆ ಪ್ರದೇಶವೆಲ್ಲಾ ಲೋಕಂತರಿಯ ನರಕದಲ್ಲಿ ಇರುವಂತೆ ಗಾಢ ಕತ್ತಲೆಯಿಂದ ಆವರಿಸಿತು. ಈ ಭಯಾನಕ ಕತ್ತಲೆಯಿಂದ ಅವರಲ್ಲಿ ಭೀತಿ ಆವರಿಸಿ ಅಳುವುದಕ್ಕೆ ಪ್ರಾರಂಭಿಸಿದರು.
ಅದೇ ಸಮಯದಲ್ಲಿ ಬುದ್ಧ ಭಗವಾನರು ತಮ್ಮ ಪೀಠದಿಂದ ಮಾಯವಾದರು. ಹಾಗು ಸಮೀಪದ ಬೆಟ್ಟದ ಉನ್ನತದಲ್ಲಿ ಪ್ರತ್ಯಕ್ಷರಾಗಿ ಅಲ್ಲಿಂದ ಪರಮ ತೇಜಸ್ಸಿನಿಂದ ಇಡೀ ಲೋಕವೇ ಬೆಳಕಾಗುವಂತೆ, ಸೂರ್ಯನನ್ನು ಮೀರಿದ ವರ್ಣದ, ಆನಂದದಿಂದ ಕೂಡಿದ ಹೊಳಪಿನಿಂದ ಪ್ರಕಾಶಿಸಿದರು. ಆಗಲೇ ಮತ್ತು ಇಳಿದ ಆ ಸ್ತ್ರೀಯರಿಗೆ ಈ ಗಾಥೆ ಹೇಳಿದರು:
ಈ ನಗು ಏತಕ್ಕಾಗಿ (ಯಾವ ಮಟ್ಟದ್ದು) ಇಡೀ ಜಗತ್ತೇ ನಿರಂತರ ಸುಡುತ್ತಿರುವಾಗ? ಅಂಧಕಾರದಲ್ಲಿ ಆವೃತವಾಗಿರುವ ನೀವು ಮಹಾ (ಅಮರತ್ವದ) ಬೆಳಕನ್ನು ಹುಡುಕುವುದಿಲ್ಲವೆ?
ನಂತರ... ಹೀಗೆಯೇ ಬೋಧಿಸಿದರು. ಆ ಸುತ್ತದ ಅಂತಿಮ ಹಂತದಲ್ಲಿ ಅವರೆಲ್ಲರೂ ಸೋತಾಪತ್ತಿಯ ಫಲವನ್ನು ಪಡೆದರು. ನಂತರ ಭಗವಾನರು ತಮ್ಮ ಸ್ಥಾನಕ್ಕೆ ಹಿಂದಿರುಗಿದರು. ಆಗ ವಿಶಾಖಳು ಭಗವಾನರಿಗೆ ಅತಿ ಪೂಜ್ಯನಿಯವಾಗಿ ವಂದಿಸಿ, ಈ ರೀತಿ ಕೇಳಿದಳು: ಭಗವಾನ್, ಜನರಿಗೆ ಪಾಪಲಜ್ಜೆ ಹಾಗು ಪಾಪಭಯದಿಂದ ದೂರ ಮಾಡುವ ಈ ಸುರ ಹಾಗು ವರುಣ (ಮಾದಕ ಪಾನೀಯ) ಗಳ ಉದ್ಭವ ಹೇಗಾಯಿತು, ಭಗವಾನರು ನಮಗೆ ಹೇಳಬೇಕು, ನಾನು ಹೀಗೆ ಪ್ರಾಥರ್ಿಸಿಕೊಳ್ಳುತ್ತೇನೆ ಎಂದು ಕೇಳಿದಾಗಿ ಭಗವಾನರು ಹೀಗೆ ನುಡಿದರು:
ಅತಿ ಹಿಂದೆ ಬ್ರಹ್ಮದತ್ತ ರಾಜನು ಬನಾರಸ್ನ್ನು ಆಳುತ್ತಿದ್ದಾಗ, ಸುರನೆಂಬ ಬೇಟೆಗಾರನಿದ್ದ. ಅವನು ಯುವಕನಾಗಿದ್ದ. ಅವನು ಹೊಸ ಆಟ ಹುಡುಕಲು ಹಿಮಾಲಯ ಪರ್ವತಗಳ ಪ್ರಾಂತ್ಯಕ್ಕೆ ಹೋದನು. ಅಲ್ಲಿ ಅರಣ್ಯದಲ್ಲಿ ಮೂರು ಜನಗಳ ಎತ್ತರದ ವಿಶಾಲ ಮರವಿತ್ತು. ಅಲ್ಲಿ ಮುಗುವು ಕವಲೊಡೆದು ಅದರಿಂದ ಮೂರು ಶಾಖೆಗಳು ಹರಡಿದ್ದವು ಮತ್ತು ಆ ಕವಲೊಡೆದ ಶಾಖೆಯಲ್ಲಿ ಒಂದು ಹಳ್ಳವಿತ್ತು. ಅಲ್ಲಿ ಮಳೆ ಬಿದ್ದಾಗ ಆ ಹಳ್ಳ ತುಂಬಿಕೊಳ್ಳುತ್ತಿತ್ತು. ಅಲ್ಲಿ ಆ ಮರವೇ ಅಲ್ಲದೆ ಅಳಲೆಕಾಯಿ, ನೆಲ್ಲಿಕಾಯಿಯ ಮರಗಳು ಮತ್ತು ಮೆಣಸಿನ ಬಳ್ಳಿಗಳು ಆ ಮರವನ್ನು ಸುತ್ತಿರುತ್ತಿತ್ತು. ಕೆಲವೊಮ್ಮೆ ಈ ಕಾಯಿಗಳು ಸಣ್ಣದಾಗಿ ಆ ಫಲಗಳು ಉದುರಿ ಈ ಹಳ್ಳಕ್ಕೆ ಬೀಳುತ್ತಿತ್ತು. ಸಮೀಪದಲ್ಲೇ ಪ್ರಾಂತ್ಯದವರು ಭತ್ತವನ್ನು ಬೆಳೆಯುತ್ತಿದ್ದರು. ಅಲ್ಲಿ ವಾಸವಾಗಿದ್ದ ಗಿಣಿಗಳು ಆ ಭತ್ತದ ಗೊಂಚಲನ್ನು ಕತ್ತಿ ಸೀಳಾಗಿರುವ ಮರದ ಮೇಲೆ ಕುಳಿತು ತಿನ್ನುತ್ತಿದ್ದವು. ಹಾಗೆ ತಿನ್ನುವಾಗ ಕೆಲವೊಮ್ಮೆ ಭತ್ತದ ಗೊಂಚಲುಗಳೇ ಹಳ್ಳದಲ್ಲಿ ಬೀಳುತ್ತಿತ್ತು. ಹಾಗೆಯೇ ಅವು ಕೆಲವು ಕಾಳುಗಳು, ಬೇಳೆಗಳು, ಧಾನ್ಯಗಳನ್ನು ತಿನ್ನುವಾಗ ಅವು ಸಹಾ ಹಳ್ಳದಲ್ಲಿ ಬೀಳುತ್ತಿತ್ತು. ಹಾಗೆಯೇ ಸೂರ್ಯನ ಕಿರಣಗಳಿಂದ ಆ ನೀರು ಬಿಸಿಯಾಗುತ್ತಿತ್ತು. ನಂತರ ಆ ಹಳ್ಳವು ನೀರು ಮೂಲದ ರಕ್ತದ ಹಾಗೆ ಕೆಂಪಾಗಿ ಕಾಣುತ್ತಿತ್ತು.
ಬೇಸಿಗೆಯ ಕಾಲದಲ್ಲಿ ಗಿಳಿಗಳು, ಗುಬ್ಬಚ್ಚಿಗಳು, ಪಾರಿವಾಳಗಳು, ಮೈನಾಹಕ್ಕಿಗಳು ಬಾಯಾರಿಕೆಯಾದಾಗ ಆ ಹಳ್ಳದಲ್ಲಿ ನೀರು ಕುಡಿದು ಮತ್ತೇರಿ ಆ ಮರದ ಬುಡದಲ್ಲಿ ಬೀಳುತ್ತಿತ್ತು. ಅಮಲು ಇಳಿದ ನಂತರ ಪುನಃ ಹಾರಿಹೋಗುತ್ತಿತ್ತು. ಕೋತಿಗಳು ಸಹಾ ನೀರು ಕುಡಿದು ಅವು ಸಹಾ ಮತ್ತೇರಿ ಬಿದ್ದು ಅಮಲಿಳಿದ ನಂತರ ಅವು ಹೊರಟು ಹೋಗುತ್ತಿದ್ದವು. ಈ ದೃಶ್ಯವು ಬೇರೆಗಾರ ಸುರನ ಗಮನ ಸೆಳೆಯಿತು. ಆಗ ಆತ ಹೀಗೆ ಚಿಂತಿಸಿದನು: ಒಂದುವೇಳೆ ಇದು ವಿಷವೇ ಆಗಿದ್ದರೆ ಇವೆಲ್ಲಾ ಪುನಃ ಪುನಃ ಜೀವಂತ ಆಗುತ್ತಿರಲಿಲ್ಲ. ಆದರೆ ಇವುಗಳ ಪ್ರಜ್ಞೆ ಮಾತ್ರ ಕೆಲವುಕಾಲ ತಪ್ಪಿಸುತ್ತದೆ. ಆದರೆ ಪುನಃ ಎದ್ದಾಗ ಉತ್ಸಾಹದಿಂದ ಹಾರಿ ಹೋಗುತ್ತವೆ ಆದ್ದರಿಂದ ಇವು ವಿಷವಲ್ಲವೆಂದು ನಿರ್ಧರಿಸಿದನು. ಆತನು ಸಹಾ ಅದನ್ನು ಕುಡಿದನು. ಅಮಲೇರಿದಾಗ ಮಾಂಸ ತಿನ್ನುವ ಬಯಕೆಯಾಯಿತು. ಹಾಗೆಯೇ ಆತನು ಮರದ ಬಳಿ ಬೆಂಕಿ ಹಚ್ಚಿದನು ಮತ್ತು ಆತನು ಪಕ್ಷಿಗಳನ್ನು, ಪ್ರಾಣಿಗಳನ್ನು ಹಿಡಿದು ಅದನ್ನು ಬೆಂಕಿಯಿಂದ ಸುಟ್ಟು ತಿನ್ನುತ್ತಿದ್ದನು. ಆತನು ಒಂದು ಕೈಯಲ್ಲಿ ಹಿಡಿದು ತಿನ್ನುತ್ತಾ, ಮತ್ತೊಂದು ಕೈಯನ್ನು ತಲೆಯ ಬಳಿ ಆಡಿಸುತ್ತಿದ್ದನು. ಆಗ ಆ ತುಚ್ಚ ಆನಂದ ಅನುಭವಿಸುತ್ತಿದ್ದನು. ಹೀಗೆಯೇ ತಿನ್ನುತ್ತಾ, ಕುಡಿಯುತ್ತಾ ಮೂರು ದಿನಗಳನ್ನು ಆ ಬುಡದಲ್ಲಿ ಕಳೆದನು. ಈ ಮರದ ಸ್ವಲ್ಪ ದೂರದಲ್ಲೇ ವರುಣನೆಂಬ ಕಪಟ ಸನ್ಯಾಸಿಯಿದ್ದನು. ಆತನಿಗೆ ಸುರನು ಮಧ್ಯವನ್ನು ಹಾಗು ಮಾಂಸವನ್ನು ತೆಗೆದುಕೊಂಡು ಅದರ ವರ್ಣನೆ ಮಾಡಿ ನೀಡಿದನು. ಇಬ್ಬರೂ ಅದರಿಂದ ಆನಂದಿಸಿದರು. ಇದನ್ನು ಮೊದಲು ಸುರನು ಗಮನಿಸಿದ್ದರಿಂದ ಹಾಗು ವರುಣನಿಂದ ಮೊದಲು ನೋಡಲ್ಪಟ್ಟಿದ್ದರಿಂದ ಇದರ ಹೆಸರು ಸುರ ಹಾಗು ವರುಣನೆಂದು ಈ ಮಾದಕ ಪಾನಿಯಗಳು ಪ್ರಸಿದ್ಧಿಯಾಯಿತು.
ಈ ಇಬ್ಬರು ಸ್ನೇಹಿತರು ಆ ಮರದ ಬಳಿ ಕೆಲವುಕಾಲ ಕಳೆದನಂತರ ಹಳ್ಳಿಗೆ ಹೋಗಲು ಇಚ್ಛಿಸಿದರು. ಹಾಗೆ ಜೊತೆಗೆ ಈ ಪಾನೀಯಗಳನ್ನು ತೆಗೆದುಕೊಂಡು ಹೋಗಲು ಇಚ್ಛಿಸಿದರು. ಅದಕ್ಕಾಗಿ ಅವರು ಬಿದಿರುಗಳಲ್ಲಿ ಅದನ್ನು ತುಂಬಿಸಿ, ಹಳ್ಳಿಗಳನ್ನು ದಾಟಿ ನಗರಕ್ಕೆ ಬಂದರು ಹಾಗು ರಾಜನಿಗೆ ತಾವು ಸ್ವಾದಿಷ್ಟ ಪೇಯವನ್ನು ತಂದಿರುವುದಾಗಿ ಹೇಳಿ ಕಳುಹಿಸಿದರು.
ಆಗ ರಾಜನು ಅವರಿಗೆ ಪ್ರವೇಶ ನೀಡಲು ಆಜ್ಞಾಪಿಸಿದನು. ಆಗ ಅವರು ರಾಜನಿಗೆ ತಾವು ತಂದಿದ್ದನ್ನು ತೋರಿಸಿದರು. ಆಗ ರಾಜನು ಅವರಿಂದ ಮಾದಕ ಪಾನೀಯ ತೆಗೆದುಕೊಂಡು ಕುಡಿದು ಮೂರುದಿನ ಅಮಲಿನಲ್ಲಿದ್ದನು, ಪ್ರಜ್ಞೆ ತಪ್ಪಿದ್ದನು. ನಂತರ ರಾಜನು ಅವರಿಗೆ ಹೆಚ್ಚು ಮದ್ಯ ತರಲು ಹೇಳಿದನು. ಆಗ ಅವರು ರಾಜನಿಗೆ ಅದು ಹಿಮಾಲಯದ ಅರಣ್ಯದಲ್ಲಿ ದೊರೆಯುವಂತಹುದು ಎಂದು ಹೇಳಿದರು. ಆಗಲೂ ರಾಜನು ಅವರಿಗೆ ಹೆಚ್ಚು ತರಲು ಆಜ್ಞಾಪಿಸಿದನು. ಅವರು ಅದರಂತೆ ಸಾಗಾಣಿಕೆ ಮಾಡತೊಡಗಿದರು. ಅವರು ಮೂರುಬಾರಿ ಹಾಗೆ ಸಾಗಾಣಿಕೆ ಮಾಡಿ ಮುಂದೆ ಹಾಗೆ ಮಾಡುವುದು ಅತ್ಯಂತ ಕಷ್ಟಕರ ಎಂದು ಹೇಳಿದರು. ಆದರೆ ತಾವು ಹೇಳುವ ಸರಕು ಕೊಟ್ಟರೆ ನಗರದಲ್ಲೇ ಅದನ್ನು ತಯಾರು ಮಾಡುತ್ತೇವೆ ಎಂದು ಹೇಳಿದರು. ಆಗ ರಾಜನು ಹಾಗೆಯೇ ಅವರು ಹೇಳಿದ್ದೆಲ್ಲಾ ಕೊಡಿಸಿದನು. ಆನಂತರ ಕೆಲವು ಸೇವಕರೊಂದಿಗೆ ಮರದ ಹಳ್ಳದಲ್ಲಿ ದೊರೆಯುವಂತಹ ಎಲ್ಲಾ ಸಾಮಗ್ರಿಯನ್ನು ಏಪರ್ಾಟು ಮಾಡಿದನು. ಅಳಲೇಕಾಯಿ, ನೆಲ್ಲಿಕಾಯಿ, ಭತ್ತ, ಧಾಯ, ಮರದ ಕಾಂಡ ಇತ್ಯಾದಿಗಳನ್ನು ದೊಡ್ಡ ಪಾತ್ರೆಗೆ ತುಂಬಿದರು. ನಂತರ ಮೊದಲಬಾರಿಗೆ ನಗರದಲ್ಲೇ ಅದನ್ನು ತಯಾರಿಸಿದರು. ಆ ದಿನ ನಗರದಲ್ಲಿ ಸರ್ವರೂ ಅದನ್ನು ಸೇವಿಸಿ ಮತ್ತರಾದರು.
ಕೆಲವು ಕಾಲದ ನಂತರ ಅವರು ಕುಡಿತವನ್ನೇ ಅವಲಂಬಿಸಿ ತಮ್ಮ ದೈನಂದಿನ ಕಾರ್ಯ ಮಾಡುವುದನ್ನು ಬಿಟ್ಟರು. ಹೀಗೆಯೇ ಅವರು ಸೋಮಾರಿಗಳಾಗಿ ದರಿದ್ರರಾದರು. ಅವರ ಆರೋಗ್ಯ ಕೆಟ್ಟು ರೋಗಿಗಳಾದರು ಮತ್ತು ಕುರೂಪಿಗಳಾದರು. ನಂತರ ಆ ನಗರ ಕೆಲವೇ ಕಾಲದಲ್ಲಿ ಪ್ರೇತಗಳ ನಗರಗಳ ಹಾಗೆ ಅಂತ್ಯಗೊಂಡಿತು.
ನಂತರ ಸುರ ಬೇಟೆಗಾರ ಹಾಗು ವರುಣ ಸನ್ಯಾಸಿಯು ಆ ನಗರವನ್ನು ತೊರೆದು, ಬನಾರಸ್ಗೆ ಹೊರಟರು. ಆಗ ರಾಜನಿಗೆ ಇಬ್ಬರು ವರ್ತಕರು ಬಂದಿರುವುದಾಗಿ, ಹಾಗು ಹಿಂದೆಂದೂ ಕಾಣದ, ಕೇಳದ ಸ್ವಾದಿಷ್ಟ ಪಾನೀಯ ತಂದಿರುವುದಾಗಿ ಹೇಳಿ ಕಳುಹಿಸಿದರು. ಆಗ ರಾಜನು ಭೇಟಿಯಾಗಿ ಅವರಿಗೆ ಅವನು ಹೇಳಿದ ಸಾಮಗ್ರಿ ಒದಗಿಸಿದನು. ಆಗ ರಾಜನು ಮತ್ತು ಪ್ರಜೆಗಳು ಅದನ್ನು ಸ್ವಾದಮಾಡಿ ಅದಕ್ಕೆ ಅಂಟಿಕೊಂಡರು. ಪ್ರಜೆಗಳು ಮತ್ತೆ ಮತ್ತೆ ಮದ್ಯ ಸೇವಿಸಿ ತೃಪ್ತರಾಗದೆ, ಅದಕ್ಕೆ ಬದ್ಧರಾಗಿ ತಮ್ಮ ಕೆಲಸ ಕಾರ್ಯ ಬಿಟ್ಟರು. ಹೀಗೆ ಸೋಮಾರಿಗಳಾಗಿ ದರಿದ್ರರಾದರು ಮತ್ತು ನಾಗರಿಕರು ರೋಗಿಷ್ಟರಾಗಿ ಆ ನಗರವು ಭ್ರಷ್ಟವಾಯಿತು, ನಾಶವಾಯಿತು.
ನಂತರ ಆ ಇಬ್ಬರು ವರ್ತಕರು ಬನಾರಸನ್ನು ವಜರ್ಿಸಿ ಸಾಕೇತು ನಗರಕ್ಕೆ ಬಂದರು. ಅಲ್ಲಿಯೂ ಹಾಗೆಯೇ ಮದ್ಯಪಾನ ಪರಿಚಯಿಸಿ ಆ ನಗರವನ್ನು ಹಾಳು ಮಾಡಿದರು.
ಆ ನಗರವನ್ನು ಬಿಟ್ಟು ಶ್ರಾವತ್ತಿ ನಗರಕ್ಕೆ ಬಂದರು. ಅಲ್ಲಿ ಸಬ್ಬಮಿತ್ತ (ಸರ್ವಮಿತ್ರ) ರಾಜ್ಯವಾಳುತ್ತಿದ್ದನು. ಸುರ ಮತ್ತು ವರುಣರಿಗೆ ಏನೇನು ಬೇಕೋ ಅದೆಲ್ಲವನ್ನು ನೀಡಿದರು. ರಾಜನಿಂದ ನೆಲ್ಲಿಕಾಯಿ, ಅಳಲೆಕಾಯಿ, ಭತ್ತ ಹಾಗು ಇನ್ನಿತರ ಸಾಮಗ್ರಿ ತರಿಸಿಕೊಂಡು ಐನೂರು ದೊಡ್ಡ ಮಡಿಕೆಗಳಷ್ಟು ಮದ್ಯ ತಯಾರಿಸಿದರು. ಪ್ರತಿಯೊಂದು ಮಡಿಕೆಯ ಹತ್ತಿರ ಒಂದು ಬೆಕ್ಕನ್ನು ಕಟ್ಟಿಹಾಕಿದರು. ನಂತರ ಆ ಮಡಿಕೆಗಳು ಉಕ್ಕಿ ನೊರೆಗೂಡಿ ಚೆಲಲ್ಪಟ್ಟವು. ಆಗ ಹತ್ತಿರದಲ್ಲಿದ್ದ ಬೆಕ್ಕುಗಳು ಆ ದ್ರವವನ್ನು ನೆಕ್ಕಿ ಕುಡಿದು ಮತ್ತೇರಿ ಪ್ರಜ್ಞೆ ತಪ್ಪಿದವು. ಅವು ಆ ಸ್ಥಿತಿಯಲ್ಲಿದ್ದಾಗ ಇಲಿಗಳು ಬಂದು ಆ ಬೆಕ್ಕುಗಳಿಗೆ ಕಿವಿ ಹಾಗು ಮೂಗನ್ನು ಕಡಿದವು, ಕೂದಲನ್ನು ಕಿತ್ತವು, ಹೊಪ್ಪಳವನ್ನು ಹರಿದವು. ಇದನ್ನು ಗಮನಿಸಿದ ಸೇವಕರು ಆ ಕ್ಷಣವೇ ರಾಜನಿಗೆ ಸಂದೇಶ ಕಳುಹಿಸಿದರು. ಆಗ ರಾಜನಿಗೆ ಈ ವರ್ತಕರು ತಯಾರಿಸಿರುವುದು ವಿಷವೇ ಎಂದು ನಿಧರ್ಾರಿತವಾಯಿತು. ಆಗ ಅವರಿಬ್ಬರಿಗೆ ಗಲ್ಲಿಗೇರಿಸಲು ಆಜ್ಞಾಪಿಸಿದನು. ಅವರಿಗೆ ಗಲ್ಲಿಗೇರಿಸುವ ಮುಂಚೆ ಅವರು ಆ ಮಾದಕ ಪಾನೀಯಗಳಿಗೆ ತೀವ್ರ ಆಕ್ಷೇಪಪಟ್ಟರು. ನಂತರ ರಾಜನು ಆ 500 ಮಡಿಕೆಗಳನ್ನು ಒಡೆಯಲು ಆಜ್ಞಾಪಿಸಿದನು. ಅದನ್ನು ಸೇವಕರು ಮಾಡುತ್ತಿದ್ದಾಗ ಆ ಬೆಕ್ಕುಗಳು ಮತ್ತೆ ಎಚ್ಚರಗೊಂಡವು. ಅಮಲಿನಿಂದ ಎದ್ದು ಅವನ್ನು ಕಂಡು ಆಶ್ಚರ್ಯಗೊಂಡ ಸೇವಕರು ಮತ್ತೆ ರಾಜರಿಗ ಇದನ್ನು ತಿಳಿಸಿದರು. ಆಗ ರಾಜನಿಗೆ ಹೀಗೆ ಅನಿಸಿತು. ಇದು ವಿಷವೇ ಆಗಿದ್ದರೆ ಬೆಕ್ಕುಗಳು ಮರಣ ಪಡೆಯಬೇಕಾಗಿತ್ತು. ಆದರೆ ಇವು ಮತ್ತೆ ಜಾಗೃತಗೊಂಡಿರುವುದು ಖಂಡಿತವಾಗಿಯೂ ಇದು ಸ್ವಾದಿಷ್ಟ ಪೇಯವೆಂದು ಆಲೋಚಿಸಿದನು. ಆಗ ಆತನು ಇದನ್ನು ಸೇವಿಸಲು, ಪಡೆಯಲು ನಿರ್ಧರಿಸಿದನು. ನಂತರ ರಾಜನು ಇಡೀ ನಗರವನ್ನು ಶೃಂಗಾರಗೊಳಿಸುವಂತೆ ಆಜ್ಞಾಪಿಸಿದನು. ನಂತರ ವಿಶೇಷ ಸಭಾಂಗಣದಲ್ಲಿ ಎಲ್ಲಾ ಮಂತ್ರಿಗಳನ್ನು, ನಾಗರಿಕರನ್ನು ಆಹ್ವಾನಿಸಿದನು. ತಾನು ಸಹ ಎತ್ತರವಾದ ಪೀಠದಲ್ಲಿ ಕುಳಿತನು. ನಂತರ ಎಲ್ಲರಿಗೂ ಹೊಸದಾದ ಪೇಯ ಸೃಷ್ಟಿಯಾಗಿದೆ, ಇದು ಎಲ್ಲರೂ ಸೇವಿಸಿ ಎಂದು ಹೇಳಿದನು.
ಅದೇಕಾಲಕ್ಕೆ ತಾವತಿಂಸ ಲೋಕದ ಅಧಿಪತಿ ಸಕ್ಕದೇವ ಪೃಥ್ವಿಯ ಕಡೆಗೆ ವೀಕ್ಷಿಸುತ್ತಿದ್ದನು. ಯಾರು ತನ್ನ ತಂದೆ-ತಾಯಿಗಳನ್ನು, ಸೋದರ-ಸೋದರಿಯರನ್ನು, ಬಂಧುಬಳಗವನ್ನು ಸಲಹುತ್ತಿದ್ದಾರೆ ಎಂದು ಗಮನಿಸುತ್ತಿದ್ದನು. ಹಾಗು ಯಾರು ಕರುಣಾಮಯಿಗಳು ಹಾಗು ಸಂತತ್ವದ ರೀತಿ ಇದ್ದಾರೆ, ಯಾರು ಕಾಯ, ವಾಚಾ, ಹೃದಯದಿಂದ ಶೀಲವನ್ನು ಪಾಲಿಸುತ್ತಿದ್ದಾರೆ, ಅಲ್ಲದೆ ಯಾರು ದಾನವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ, ಇದನ್ನು ಆತನು ಸಹಸ್ರ ರೀತಿಯಿಂದ ಕಾಣುತ್ತಿದ್ದನು. ಆಗ ಆತನಿಗೆ ಸರ್ವಮಿತ್ರ ರಾಜನು ಕಾಣಿಸಿದನು ಹಾಗು ಆತನು ಮದ್ಯಪಾನವನ್ನು ಸೇವಿಸಲು ಸಿದ್ಧನಾಗಿರುವುದು ಕಂಡನು. ಆಗ ಆತನಿಗೆ ಈ ರೀತಿಯ ಅರಿವಾಯಿತು. ಏನೆಂದರೆ ಸರ್ವಮಿತ್ರ ಪಾನೀಯವನ್ನು ಸೇವಿಸಿದರೆ ಇದರಿಂದ ಇಡೀ ಜಂಭುದ್ವೀಪವೇ (ಭಾರತ) ಹಾಳಾಗುತ್ತದೆ ಎಂದು ಅರಿವಾಯಿತು. ನಂತರ ಆತನು ಆ ಪಾನಿಯಗಳ ನಿರೋಧ ಮಾಡಲು ಬ್ರಾಹ್ಮಣ ವೇಷಧರಿಸಿ ರಾಜನ ಮುಂದೆ ಶೂನ್ಯ ಆಕಾಶದಲ್ಲಿ ನಿಂತನು. ಆತನ ಕೈಯಲ್ಲಿ ಹೆಂಡದ ಕುಡಿಕೆಯಿತ್ತು. ನಂತರ ರಾಜನಿಗೆ ಹೀಗೆ ಹೇಳಿದನು: ನೋಡಿಲ್ಲಿ, ನನ್ನ ಅಂಗೈಯಲ್ಲಿರುವ ಪಾತ್ರೆ ಮಾರಾಟಕ್ಕಿದೆ.
ರಾಜನು ಬ್ರಾಹ್ಮಣ ವೇಷಧಾರಿ ಸಕ್ಕನನ್ನು ನೋಡಿದನು. ನಂತರ ಹೀಗೆ ವಿಚಾರಿಸಿದನು. ಬ್ರಾಹ್ಮಣರೆ, ನೀವು ಎಲ್ಲಿಂದ ಬಂದಿರುವಿರಿ, ಓ ಬ್ರಾಹ್ಮಣ ನೀವು ಆಕಾಶದಲ್ಲಿ ಪೂರ್ಣ ಚಂದಿರನಿಗಿಂತಲೂ ಚೆನ್ನಾಗಿ ಪ್ರಕಾಶಿಸುತ್ತಿದ್ದೀರಿ, ನಿಮ್ಮ ಶರೀರದಿಂದ ಕಿರಣಗಳು ಮಿಂಚಿಗಿಂತಲೂ ಚೆನ್ನಾಗಿ ಪ್ರತಿಫಲಿಸುತ್ತಿವೆ, ನೀವೇನಾದರೂ ತಾವತಿಂಸ ಸುಗತಿಯಿಂದ ಬಂದಿರುವ ದೇವತೆಯೇ? ಇದನ್ನು ನೀವು ಮರೆಮಾಚದೆ ಹೇಳಿ, ನೀವು ಗಾಳಿಯಲ್ಲಿ ಹೇಗೆ ನಿಂತಿರುವಿರಿ ಎಂದರೆ ಮೋಡವು ಆಕಾಶದಲ್ಲಿ ನಿಂತಹಾಗೆ ನಿಂತಿರುವಿರಿ, ನೀವು ದೇವತೆಗಳ ಋದ್ದಿಶಕ್ತಿಯನ್ನು ಪ್ರಕಾಶಿಸಿರುವಿರಿ?
ಆಗಲು ಸಹ ಬ್ರಾಹ್ಮಣ ಮತ್ತೆ ಗಾಳಿಯಲ್ಲಿ ನಡೆದಾಡುತ್ತಾ ಮತ್ತೆ ಹೀಗೆ ಹೇಳಿದನು: ಇಲ್ಲಿದೆ ಈ ಕುಡಿಕೆ, ಮಾರಟಕ್ಕೆ ಕೊಳ್ಳುವೆಯಾ?
ಆಗ ರಾಜನು ಈ ರೀತಿ ಪ್ರಕಾಶಿಸಿದನು: ನೀವು ಯಾರು, ಯಾವರೀತಿಯ ದೇವತೆ ನೀವು? ಈ ಕುಡಿಕೆಯಲ್ಲಿ ಏನಿದೆ?
ನಂತರ ಸಕ್ಕದೇವ ಈ ರೀತಿಯಾಗಿ ಉತ್ತರಿಸಿದನು: ರಾಜ, ಈ ಕುಡಿಕೆಯು ತುಪ್ಪದಿಂದ ಕೂಡಿಲ್ಲ ಅಥವಾ ಅತ್ಯುತ್ತಮ ಎಣ್ಣೆಯಿಂದಲೂ ಕೂಡಿಲ್ಲ ಅಥವಾ ಜೇನು-ಬೆಲ್ಲದಿಂದಲೂ ಕೂಡಿಲ್ಲ ಅಥವಾ ಅತ್ಯುತ್ತಮ ಮಧುವಿನಿಂದಲೂ ಕೂಡಿಲ್ಲ. ಈ ಮಡಿಕೆಯು ಪಾಪವನ್ನು ಪ್ರವದರ್ಿಸುವುದಂತಾಗಿದೆ, ಕೇಳು ಹಾಗು ಅಥರ್ೈಸಿಕೋ. ಆ ಮಡಿಕೆಯಲ್ಲಿರುವುದರ ಅನರ್ಥಗಳು ಎಂದು ಹೇಳಿ ಮದ್ಯಪಾನದ ದುಷ್ಪರಿಣಾಮಗಳನ್ನು ಮೊದಲಿನ ಗಾಥೆಗಳಿಂದ ಆ ಸಕ್ಕದೇವ ಹೇಳಿದನು:
1)
ರಾಜನೇ, ಒಮ್ಮೆ ಈ ಮದ್ಯವನ್ನು ಸೇವಿಸಿದಾಗ ಆತನು ಸಮತಲ ನೆಲದಲ್ಲಿಯೂ ನಡೆಯುತ್ತಾನೆ, ಹಾಗೆಯೇ ಹೊಯ್ದಾಡಿ ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುತ್ತಾನೆ, ಆತನು ಹಳ್ಳದಲ್ಲಿ ಬೀಳುತ್ತಾನೆ, ಮುಳ್ಳಿನ ಮೇಲಿನ ಮಲದಲ್ಲಿ, ಪ್ರಾಣಿಗಳ ಗಲೀಜಿನಲ್ಲಿ ಬೀಳುತ್ತಾನೆ. ಯಾವುದು ತಿನ್ನಲು ಅತಿ ಅಯೋಗ್ಯವೋ ಅದನ್ನೆಲ್ಲಾ ತಿನ್ನುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
2)
ರಾಜನೇ, ಇದನ್ನು ಸೇವಿಸಿ ಮತ್ತನಾದವನು ತನ್ನ ಮನಸ್ಸಿನ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಾನೆ ಹಾಗು ಆತನು ಪಶುಗಳ ಹಾಗೆ ನೀರಿನಲ್ಲಿ, ಹುಲ್ಲಿನಲ್ಲಿ ಸುತ್ತಾಡುತ್ತಾನೆ, ಆತನು ನಿಸ್ಸಹಾಯಕನಾಗುತ್ತಾನೆ, ಆತನು ಅರ್ಥ, ಕಾಲವ್ಯರ್ಥ ಮಾಡುವ ನೃತ್ಯ, ಗೀತೆ ಹಾಗು ಸಂಗೀತಗಳ ಕೂಟದಲ್ಲಿ ಭಾಗಿಯಾಗುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
3)
ರಾಜನೇ, ಇದನ್ನು ಸೇವಿಸಿ ಅಮಲೇರಿದವನು ತನ್ನ ವಸ್ತ್ರವನ್ನು ವಜರ್ಿಸಿ ನಗ್ನನಾಗುತ್ತಾನೆ. ಹೀಗೆಯೇ ಆತನು ಪಾಪಲಜ್ಜೆ ಹಾಗು ಪಾಪಭಯರಹಿತನಾಗಿ ಹಳ್ಳಿಯಲ್ಲಿ, ನಗರದಲ್ಲಿ, ಹೆದ್ದಾರಿಗಳಲ್ಲಿ ನಡೆದಾಡುತ್ತಾನೆ. ಹೀಗೆಯೇ ಆತನು ದಾರಿಗಳಲ್ಲಿ ಎಲ್ಲೆಂದರಲ್ಲಿ ಪ್ರಜ್ಞೆತಪ್ಪಿ ಬಿದ್ದು ನಿದ್ರಿಸುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
4)
ರಾಜನೇ, ಒಮ್ಮೆ ಮದ್ಯವನ್ನು ಸೇವಿಸಿದವನು ಆತನು ಹಾಗೆ ಬಿದ್ದಿರುವಾಗ ಮರದ ಕೊಂಬೆಯ ಹಾಗೆ ಬಿದ್ದಿರುತ್ತಾನೆ. ನಂತರವೂ ಆ ಸ್ಥಿತಿಯಿಂದ ಎದ್ದಾಗ ಆತನು ನಗ್ನಾವಸ್ಥೆಯಲ್ಲಿಯೇ ನಾಚಿಕೆರಹಿತವಾಗಿ ನೃತ್ಯ ಮಾಡುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
5)
ರಾಜನೇ, ಈ ಪಾನೀಯವನ್ನು ಸೇವಿಸಿದವನು ಮತ್ತನಾಗಿ ಉರಿಯುತ್ತಿರುವ ಕೆಂಡದ ಮೇಲೆ ಬೀಳುತ್ತಾನೆ, ಆತನ ಶರೀರವನ್ನು ನರಿಗಳು ತಿನ್ನುತ್ತವೆ. ಆದರೂ ಅದರ ಬಗ್ಗೆ ಅವನಿಗೆ ಅರಿವಿರುವುದಿಲ್ಲ, ಅವನಿಗೆ ಮತ್ತೆ ಪ್ರಜ್ಞೆ ಬರುವುದು ಕಷ್ಟವಾಗುತ್ತದೆ. ಆಗ ಆತನು ಮಾಡಬಾರದ್ದನ್ನು ಮಾಡಿ, ಬಂಧಿಖಾನೆಗೆ ಹೋಗಬೇಕಾಗುತ್ತದೆ. ಆತನು ಸಂಪತ್ತು ಕಳೆದುಕೊಂಡು ಗೋಳಾಡುತ್ತಾನೆ. ರಾಜನೇ ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
6.
ರಾಜನೇ, ಒಮ್ಮೆ ಒಬ್ಬನು ಪಾನೀಯವನ್ನು ಸೇವಿಸಿ ಮತ್ತನಾಗಿರುವಾಗ ಆತನು ಸಭೆಗೆ ಹೋದರೆ ಅಲ್ಲಿ ಹೇಳಬಾರದ್ದನ್ನು ಮಾತನಾಡುತ್ತಾನೆ. ಅದ್ಯಾವುದು ಸಹಾ ಆತನಿಗೆ ಅರಿವಿರುವುದಿಲ್ಲ ಮತ್ತು ಆತನು ತಾನು ವಸ್ತ್ರವನ್ನು ಹೊಂದಿರಬೇಕೆ ಅಥವಾ ಬೇಡವೇ ಇದ್ಯಾವುದರ ಬಗ್ಗೆಯೂ ಅತನಿಗೆ ಎಚ್ಚರವಿರುವುದಿಲ್ಲ. ಆತನು ತಾನು ಮಾಡಿದ ವಾಂತಿಯ ಮೇಲೆಯೇ ಕುಳಿತುಕೊಳ್ಳುತ್ತಾನೆ. ಆತನು ತಾನು ಮಾಡಿದ ವಾಂತಿ ಹಾಗು ಲಾಲಾರಸ ಎಂಜಿಲು ತುಂಬಿದ ಶರೀರದಿಂದಲೆ ನಡೆದಾಡುತ್ತಾನೆ. ಅದು ಅತ್ಯಂತ ಅಸಹ್ಯಕರ ದೃಶ್ಯವಾಗಿರುತ್ತದೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
7.
ರಾಜನೇ ಒಮ್ಮೆ ಈ ಪಾನೀಯ ಸೇವಿಸಿ ಮತ್ತನಾಗಿ ಆತನು ಅತಿ ಮೂರ್ಖನಾಗಿದ್ದರೂ ಸಹ ಅತಿ ಗವರ್ಿಯಾಗುತ್ತಾನೆ: ನನ್ನ ಸಮಾನರೂ ಈ ಜಗತ್ತಿನಲ್ಲಿ ಯಾರಿದ್ದಾರೆ? ಎಂದು ಬೀಗುತ್ತಾನೆ. ಆತನು ಕಣ್ಣಿನಲ್ಲಿ ಕಿಡಿಕಾರಿ ಈ ರೀತಿ ಚಿಂತಿಸುತ್ತಾನೆ: ನಾನೇ ಏಕೈಕ ಚಕ್ರವತರ್ಿಗಿಂತ ಶ್ರೇಷ್ಠ, ನನ್ನ ಹೋಲಿಕೆ ಯಾರಿಗೂ ಮಾಡಲು ಅಸಾಧ್ಯ ಎಂದು ಭಾವಿಸುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
8.
ರಾಜನೇ, ಈ ಪಾನೀಯ ಸೇವಿಸಿದವನು ಗವರ್ಿಯಾಗುತ್ತಾನೆ, ಅಹಂಕಾರಿ ಯಾಗುತ್ತಾನೆ, ಜಗಳಗಂಟನಾಗುತ್ತಾನೆ, ಕಾಡುಹರಟೆ ಮಾಡುವವನಾಗುತ್ತಾನೆ, ಕುರೂಪಿಯಾಗಿ ಕಾಣುತ್ತಾನೆ. ನಗ್ನವಾದರೂ ಅಲಕ್ಷದಿಂದಿರುತ್ತಾನೆ, ಕಾರಣವಿಲ್ಲದೆ ಹುಚ್ಚನಂತೆ ಓಡಿ ದಣಿಯುತ್ತಾನೆ. ಆತನು ಏನೇ ಹೇಳಲಿ ಅದಕ್ಕೆ ಮೌಲ್ಯವಿರದೆ ಅದು ಕುಡುಕನ ಅಥವಾ ಜೂಜಾಟದವನ ಮಾತು ಎಂದು ಪರಿಗಣಿಸಲ್ಪಡುತ್ತದೆ. ಆತನು ಅನೇಕ ಪಾಪಕಾರ್ಯ ಮಾಡುವುದಕ್ಕೆ ಕಾರಣಕರ್ತನಾಗುತ್ತಾನೆ. ಆತನು ನಿಂದಾಸ್ಪದ ಪ್ರದೇಶಗಳಿಗೆ ಅಡ್ಡಾಡಿ ಪಾಪಕರ್ತನಾಗುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
9.
ರಾಜನೇ, ಈ ಪಾನೀಯವನ್ನು ಸೇವಿಸಿದಂತಹ ಸಾವಿರಾರು ಕುಟುಂಬಗಳು ಅಗತ್ಯವಿರುವ ಪ್ರತಿಯೊಂದನ್ನು ಕಳೆದುಕೊಂಡಿದೆ. ಅಪಾರ ವಸ್ತ್ರಗಳು ಹಾಗು ಅಪಾರ ಸುಖ ಸೌಲಭ್ಯಗಳು ಪ್ರತಿಯೊಂದು ನಷ್ಟಪಡಿಸಿಕೊಂಡಿವೆ, ಅವರ ಸಂಪತ್ತು ನಾಶವಾಗಿದೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
10.
ರಾಜನೇ, ಈ ಪಾನೀಯವನ್ನು ಸೇವಿಸಿದಂತಹವನು ತನ್ನನ್ನು ಹಾಳು ಮಾಡಿಕೊಂಡು ಮತ್ತು ಬೆಳ್ಳಿ, ಚಿನ್ನ, ವಸ್ತ್ರ, ಆಭರಣಗಳು, ಧಾನ್ಯಗಳು, ಉದ್ಯಾನಗಳು, ಹಸುಗಳು, ಎತ್ತುಗಳು ಮತ್ತು ವಿವಿಧಬಗೆಯ ಸಂಪತ್ತುಗಳು ಹಾಳು ಮಾಡಿಕೊಂಡಿದ್ದಾರೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
11.
ರಾಜನೇ, ಈ ಪಾನೀಯವನ್ನು ಸೇವಿಸಿ ಆತನು ಅತಿ ಗವರ್ಿಯಾಗಿ, ತನ್ನ ತಂದೆ-ತಾಯಿಗಳಿಗೆ ಬಯ್ಯುತ್ತಾನೆ ಹಾಗು ಅಲ್ಪವು ಲಜ್ಜೆಯಿಲ್ಲದೆ ಆತನು ತನ್ನ ಚಿಕ್ಕಮ್ಮ ಅಥವಾ ದೊಡ್ಡಮ್ಮನನ್ನು ಮತ್ತು ಸೋದರ ಅಥವಾ ಸೋದರಿಯ ಮಗಳ ಕೈಹಿಡಿಯುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
12.
ರಾಜನೇ, ಇದನ್ನು ಸೇವಿಸಿದ ಸ್ತ್ರೀಯು ಮತ್ತಳಾಗಿ ತನ್ನ ಸೋದರನನ್ನು, ಪತಿಯನ್ನು ನಿಂದಿಸುತ್ತಾಳೆ ಹಾಗು ತನ್ನ ಸೇವಕನೊಂದಿಗೆ ಪಾಪಯುತ ಯೋಚನೆಯಿಂದ ಕೂಡಿ ಆತನ ಕೈಹಿಡಿಯುತ್ತಾಳೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
13.
ರಾಜನೇ, ಈ ಪಾನೀಯವನ್ನು ಸೇವಿಸಿದವನು ಶ್ರಮಣ ಬ್ರಾಹ್ಮಣರಿಗೆ ಅಪಹಾಸ್ಯ ಮಾಡುತ್ತಾನೆ ಹಾಗು ಅವರಿಗೆ ಕಿರುಕುಳ ಕೊಡುತ್ತಾನೆ. ಹಾಗೆ ನೀತಿಯುತರಿಗೆ ಹಿಂಸಿಸಿ, ಆ ಪಾಪಕರ್ಮದ ಫಲವಾಗಿ ನರಕದಲ್ಲಿ ಬೀಳುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
14.
ರಾಜನೇ, ಈ ಪಾನೀಯವನ್ನು ಸೇವಿಸಿದವನು ಕಾಯ-ವಾಚಾ-ಮನಸಾ ಪಾಪಮಾಡಿ ನರಕದಲ್ಲಿ ಹುಟ್ಟುತ್ತಾನೆ. ಅಂತಹ ಅನರ್ಥವಾದುದು. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
15.
ರಾಜನೇ, ಈ ಪಾನೀಯವನ್ನು ಸೇವಿಸಿದವನು ಸುಳ್ಳಾಡುತ್ತಾನೆ. ಅದಕ್ಕೆ ಮೊದಲು ಆತನಿಗೆ ಅಪಾರ ಐಶ್ವರ್ಯ ನೀಡಿದ್ದರೂ ಸುಳ್ಳಾಡದವನು ಪಾನಮತ್ತನಾಗಿ ಸುಳ್ಳಾಡುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
16.
ರಾಜನೇ, ಒಬ್ಬ ಮಾಲಿಕನು ಸೇವಕನಿಗೆ ಒಂದು ಸಂದೇಶವನ್ನು ನೀಡಿ ಕಳುಹಿಸಿದರೆ ಆತನು ಪಾನಮತ್ತನಾಗಿ ಕರ್ತವ್ಯ ಭ್ರಷ್ಟನಾಗಿ ನೆನಪು ಬಾರದೆ ಸಂದೇಶರಹಿತನಾಗುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
17.
ರಾಜನೇ, ಒಬ್ಬಾತನು ಶೀಲವಂತನಾಗಿದ್ದು ಅತಿ ಪಾಪಲಜ್ಜೆ ಹಾಗು ಪಾಪಭಯದಿಂದ ಕೂಡಿದ್ದು ಒಂದು ಪಕ್ಷದಲ್ಲಿ ಪಾನೀಯ ಸೇವಿಸಿದರೆ, ಆತನು ತನ್ನ ವರ್ತನೆಯಲ್ಲಿ ಬದಲಾಗಿ ಲಜ್ಜೆ ಭಯರಹಿತನಾಗುತ್ತಾನೆ. ಆತನು ಜ್ಞಾನಿಯಾಗಿದ್ದು, ಅತಿ ಅರಿತವನಾಗಿದ್ದರೂ ಆತನು ಕ್ಷುಲ್ಲುಕ ವಿಷಯಗಳನ್ನು ಮಾತನಾಡುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
18.
ರಾಜನೇ, ಈ ಪಾನೀಯವನ್ನು ಸೇವಿಸಿದವನು ತನಗಿಂತ ಅತಿ ಹೀನರ ಜೊತೆ ಸೇರುತ್ತಾನೆ ಹಾಗು ಎಲ್ಲೆಂದರಲ್ಲಿ ಬಿದ್ದುಕೊಳ್ಳುತ್ತಾನೆ. ಆತನಿಗೆ ಯಾವ ಮಲದ ಗಮನವಿಲ್ಲದೆ ಹಂದಿಯಂತೆ ಆತನ ಸ್ಮರಣಶಕ್ತಿ ಕುಂಠಿತವಾಗುತ್ತದೆ. ಹಾಗು ಆತನ ಶರೀರ ಅಪ್ರಿಯವಾಗಿ ಕಾಣುತ್ತದೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
19.
ರಾಜನೇ, ಮಹಾ ಗೂಳಿಯೊಂದಕ್ಕೆ ಸುತ್ತಿಗೆ ಪೆಟ್ಟು ಬಿದ್ದು ನೆಲದಲ್ಲಿ ಹೇಗೆ ಬಿದ್ದಿರುವುದೋ ಹಾಗೆಯೇ ಕುಡುಕ ನೆಲದಲ್ಲಿ ಬಿದ್ದು ತನ್ನ ಬುದ್ಧಿ ಭ್ರಮಣವನ್ನು ನಿಯಂತ್ರಿಸದೆ ಹೋಗುತ್ತಾನೆ. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
20.
ರಾಜನೇ, ಈ ಪಾನೀಯವನ್ನು ವಿಷಪೂರಿತ ಸರ್ಪದಂತೆ ವಜರ್ಿಸು. ಯಾರೊಬ್ಬರೂ ಸಹಾ ಇದನ್ನು ಸೇವಿಸುವ ಇಚ್ಛೆ ವ್ಯಕ್ತಪಡಿಸದಿರಲಿ, ಅಂತಹ ಕಾಲಕೂಟ ವಿಷವಿದು. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
21.
ರಾಜನೇ, ಹತ್ತು ಅಂದಕ ವೇಣುರಾಜರು ಆಟವಾಡುತ್ತಿದ್ದರು. ಆದರೆ ಅವರು ಪಾನಮತ್ತರಾಗಿ ಅವರು ಅವರೊಂದಿಗೆ ದಂಡಶಸ್ತ್ರಗಳಿಂದ ಕಾದಾಡಿ ಮರಣ ಹೊಂದಿದರು. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
22.
ರಾಜನೇ ದೇವಲೋಕದಲ್ಲಿಯೂ ಮಾದಕ ಪಾನೀಯ ಸೇವನೆ ಪಾನಮತ್ತರಾದವರಿಗೆ ಅಸುರ ದೇವರೆಂದು ಸ್ವರ್ಗದಿಂದ ಹೊರಗಟ್ಟುತ್ತಾರೆ. ಆದ್ದರಿಂದ ಯಾವ ಮಾನವರು ಇದನ್ನು ಬಯಸದಿರಲಿ. ಇದರ ಕೆಟ್ಟ ಪರಿಣಾಮ ಅರಿಯಲಿ, ಅಂತಹ ಪಾಪವರ್ಧಕ ಪಾನೀಯವಿದು. ರಾಜನೇ, ಈ ಪಾತ್ರೆಯಲ್ಲಿರುವುದು ಅಂತಹ ಅನರ್ಥ ಪಾಪ ಪಾನೀಯ, ಮಾರಾಟಕ್ಕಿದೆ ಕೊಂಡುಕೊಳ್ಳುವೆಯಾ?
23.
ರಾಜನೇ, ಈ ಪಾತ್ರೆಯಲ್ಲಿ ಮೊಸರಿಲ್ಲ, ಮಧುವೂ ಇಲ್ಲ. ನಾನು ನಿನಗೆ ಇದರ ದುಷ್ಪರಿಣಾಮ ಹೇಳಿದ್ದೇನೆ. ರಾಜ ಸಬ್ಬಮಿತ್ತ, ಇದನ್ನು ಚೆನ್ನಾಗಿ ಅರಿತುಕೋ.
ಆಗ ರಾಜ ಸರ್ವಮಿತ್ರ ಈ ದುಷ್ಪರಿಣಾಮಗಳನ್ನು ಕೇಳಿ, ಸಕ್ಕದೇವರೊಂದಿಗೆ ಅತಿ ಭಕ್ತಿಯಿಂದ ಕೂಡಿ ಆನಂದಿತನಾಗಿ ಕೃತಜ್ಞತಾಪೂರ್ವಕವಾಗಿ ಹೀಗೆ ಹೇಳಿದನು:
ಓಹ್! ಬ್ರಾಹ್ಮಣರೇ, ನೀವು ನನ್ನ ಸ್ವಯಂ ತಂದೆಯ ರೀತಿ ನನಗೆ ಕರುಣೆಯಿಂದ ಬುದ್ಧಿವಾದ ನೀಡಿದ್ದೀರಿ. ಅದರಿಂದ ನನಗೆ ಈಗಲೂ ಹಾಗು ಪರಲೋಕದಲ್ಲೂ ಅಪಾರ ಲಾಭವಾಗಿದೆ. ನಾನು ತಮ್ಮ ಬೋಧನೆಯನ್ನು ಹೃತ್ಪೂರ್ವಕವಾಗಿ ಪಾಲಿಸುತ್ತೇನೆ. ನಾನು ಇದಕ್ಕೆ ಪ್ರತಿಯಾಗಿ ನಿಮಗೆ ಈ ಕೆಲವೊಂದು ನೀಡುತ್ತೇನೆ. ತಾವು ದಯೆಯಿಟ್ಟು ಸ್ವೀಕರಿಸಿಬೇಕು. ಐದು ಹಳ್ಳಿಗಳು, ದಾಸ್ಯ, ಉದ್ಯಾನ, ವಸ್ತ್ರಗಳು, ಇನ್ನೂರು ಬಾಲಕರು, ಇನ್ನೂರು ಬಾಲಕಿಯರು, ಏಳುನೂರು ಪ್ರಧಾನ ಹಸುಗಳು ಹಾಗು ಹತ್ತು ಶ್ರೇಷ್ಠ ಅಶ್ವದಳ ರಥಗಳನ್ನು ನೀಡುತ್ತೇನೆ.
ಆಗ ಬ್ರಾಹ್ಮಣ ರೂಪದಲ್ಲಿನ ಸಕ್ಕದೇವ ನಿಜ ಸ್ವರೂಪದಲ್ಲಿ ಪ್ರಕಟಗೊಂಡರು. ಆಕಾಶದಲ್ಲಿ ನಿಂತು ಈ ರೀತಿ ಹೇಳಿದರು: ರಾಜ, ಐದು ಹಳ್ಳಿಗಳನ್ನು ಇನ್ನೂರು ಬಾಲಕ, ಬಾಲಕಿಯರನ್ನು, ರಥಗಳನ್ನು, ಕುದುರೆಗಳನ್ನು ಹಿಂದಕ್ಕೆ ತೆಗೆದುಕೋ. ರಾಜನೇ ಆದರೆ ನಾನು ಹೇಳಿದಂತೆ ಮದ್ಯಪಾನ ವಜರ್ಿಸಿ ನಿನ್ನ ರಾಜ್ಯವನ್ನು ಸತ್ಯದಿಂದ ಧರ್ಮದಿಂದ ಆಡಳಿತ ಮಾಡು. ಚೆನ್ನಾಗಿ ತಿನ್ನು, ಚೆನ್ನಾಗಿ ವಸ್ತ್ರಧರಿಸಿ ಮತ್ತು ಪುಣ್ಯಕಾರ್ಯಗಳನ್ನು ಮಾಡುತ್ತಲೇ ಇರು ಎಂದು ಹೇಳಿ ತಮ್ಮ ದಿವ್ಯವಾದ ವಾಸಕ್ಕೆ ಹಿಂತಿರುಗಿದರು.
ರಾಜ ಸರ್ವಮಿತ್ರ ಹಾಗು ಆತನ ನಾಗರಿಕರೆಲ್ಲರೂ ಆ ಪಾನೀಯಗಳನ್ನು ನಾಶಪಡಿಸಿದರು. ಸರ್ವಮಿತ್ರ ರಾಜನು ಧರ್ಮದಿಂದ ರಾಜ್ಯವಾಳಿದನು. ತನ್ನ ಅನೇಕ ಪುಣ್ಯಕಾರ್ಯದಿಂದ ಸತ್ತಮೇಲೆ ಸುಗತಿಗೆ ಹೋದನು.
ಈ ರೀತಿಯಾಗಿ ಭಗವಾನರು ವಿಶಾಖಳಿಗೆ ಬೋಧಿಸಿದರು. ಆಗ ಸರ್ವಮಿತ್ರರಾಗಿ ಆನಂದರಾಗಿದ್ದರು. ಬುದ್ಧ ಭಗವಾನರೇ ಆಗ ಸಕ್ಕದೇವರಾಗಿದ್ದರು.
- ಕುಂಭ ಜಾತಕ