ಸೋತಪನ್ನ ಯಾರು?
ಸಮುದ್ರದಲ್ಲಿ ರಾತ್ರಿ ಪ್ರಯಾಣ ಮಾಡುವ ಪ್ರಯಾಣಿಕನು ದೂರದಿಂದ ಭೂ ಪ್ರದೇಶದ ಬೆಳಕನ್ನು ಕಂಡು ಮರೆಯಾದಂತೆ ಧ್ಯಾನಿಗೆ ಇಲ್ಲಿ ನಿಬ್ಬಾಣದ ದರ್ಶನವಾಗುತ್ತದೆ. ಮೊದಲಬಾರಿಗೆ ನಿಬ್ಬಾಣ ಸಾಕ್ಷಾತ್ಕರಿಸುವುದರಿಂದ, ನಿಬ್ಬಾಣದ ಹೊಳೆಯಲ್ಲಿ ಪ್ರವೇಶಿಸುವುದರಿಂದಾಗಿ ಆತನಿಗೆ ಸೋತಾಪನ್ನ ಎನ್ನುತ್ತಾರೆ.ಈ ಹೊಳೆಯಲ್ಲಿ ಗೆದ್ದ ವಿಜಯಶಾಲಿ (ಸೋತಾಪನ್ನ) ಈಗ ಪ್ರಾಪಂಚಿಕನಲ್ಲ (ಪುತುಜ್ಜನ) ಬದಲಾಗಿ ಆರ್ಯನಾಗಿರುತ್ತಾನೆ (ಶ್ರೇಷ್ಠ).
ಆತನಲ್ಲಿ 3 ಸಂಕೋಲೆಗಳು ಕತ್ತರಿಸಲ್ಪಟ್ಟಿರುತ್ತದೆ. ಅವೆಂದರೆ :
1. ಸಕ್ಕಾಯದಿಟ್ಟಿ - ಅಂದರೆ ಆತ್ಮ ಇದೆ ಎನ್ನುವ ದೃಷ್ಟಿ ಮತ್ತು ಸಾವೇ ದೇಹದ ಕೊನೆ ಎಂಬ ದೃಷ್ಟಿಗಳು ನಾಶವಾಗುತ್ತದೆ.
2. ಸಂಶಯಗಳು - ತ್ರಿರತ್ನದಲ್ಲಿ ಮತ್ತು 3 ಕಾಲದಲ್ಲಿರುವ ಸಂಶಯಗಳೆಲ್ಲಾ ಆತನಲ್ಲಿ ನಾಶವಾಗುತ್ತದೆ.
3. ಸೀಲಬ್ಬತ ಪರಾಮಾಸ : ಅಂದರೆ ಮಿಥ್ಯಾ ಆಚರಣೆಗಳಿಗೆ ಮತ್ತು ಮಿಥ್ಯಾ ಸಮಾರಂಭಗಳಿಗೆ ಅಂಟಿರುವುದು.
ಇವೆಲ್ಲವೂ ಸೋತಾಪನ್ನಾನಲ್ಲಿ ಕತ್ತರಿಸಲ್ಪಟ್ಟಿರುತ್ತದೆ.
ಸೋತಾಪನ್ನರವರು ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ ಅಪಾರ ಅಚಲ ಶ್ರದ್ಧೆಯಿಂದ ಕೂಡಿರುತ್ತಾರೆ.
ಸೋತಾಪನ್ನರವರು ಎಂದಿಗೂ ಪಂಚಶೀಲವನ್ನು ಭಂಗ ಮಾಡುವುದಿಲ್ಲ ಮತ್ತು ಅವರು ಅಪಾಯ ಲೋಕಗಳಾವುದರಲ್ಲೂ ಜನಿಸುವುದಿಲ್ಲ ಮತ್ತು ಅವರು ಬೋಧಿಗೆ ವಾಲಿರುವುದರಿಂದಾಗಿ ಹೆಚ್ಚೆಂದರೆ 7 ಜನ್ಮಗಳನ್ನು ಹೊಂದಿರುತ್ತಾರೆ. ಅದರ ಒಳಗೆಯೇ ನಿಬ್ಬಾಣವನ್ನು ಪಡೆಯುತ್ತಾರೆ ಮತ್ತು ಅವರಿಗೆ 7 ಸಂಕೋಲೆಗಳು ಮಾತ್ರ ಉಳಿದಿರುತ್ತದೆ. ಮೆತ್ತಾ ಕರುಣೆಯಿಂದ ಕೂಡಿರುವ ಅವರು ಪರರನ್ನು ಸೋತಾಪನ್ನ ಮಾಡಲು ಸದಾ ಪ್ರಯತ್ನಶೀಲರಾಗಿರುತ್ತಾರೆ
ಸೋತಾಪನ್ನರಲ್ಲಿ ಈ 5 ದೋಷಗಳು ಇರುವುದಿಲ್ಲ.
1. ಬೇರೆಯವರು ಬೋಧನೆ ಮಾಡಿದರೆ ಬೇಸರಪಡುವುದು (ಮಾಕ್ಕೋ)2. ತನ್ನನ್ನು ಶ್ರೇಷ್ಠರಿಗೆ ಹೋಲಿಸಿಕೊಳ್ಳುವುದು (ಫಲಿಸೋ)
3. ಅಸೂಯೆ (ಇಸ್ಸಾ)
4. ಸ್ವಾರ್ಥ (ಮಚ್ಚರಿಯ)
5. ಮಾಯಾವಿಯತೆ (ಮಾಯಾ) ಅಂದರೆ ಮೋಸ, ವಂಚನೆ.
ಭಿಕ್ಷುಗಳೇ, ಯಾರೆಲ್ಲಾ ಅವಿಚಲಿತ ಶ್ರದ್ಧೆಯನ್ನು ನನ್ನಲ್ಲಿ ಇರಿಸಿದ್ದಾರೋ ಅವರು ಸೋತಪನ್ನರಾಗುತ್ತಾರೆ. ಸೋತಪನ್ನರು ಇಲ್ಲಿಯೇ 5 ವಿಜಯಗಳನ್ನು ಪಡೆಯುತ್ತಾರೆ ಮತ್ತು ಪರಲೋಕದಲ್ಲೂ 5 ವಿಜಯಗಳನ್ನು ಪಡೆಯುತ್ತಾರೆ. ಯಾವುವವು?
ಆತನಿಗೆ ಹೆಚ್ಚೆಂದರೆ 7 ಜನ್ಮಗಳು ಮಾತ್ರ ಇರುತ್ತದೆ. ಒಳ್ಳೆಯ ಶುದ್ಧ ವಂಶದಲ್ಲಿ ಹುಟ್ಟುತ್ತಾನೆ. ಆತನ ಪ್ರಜ್ಞಾಹರಿತವಾಗಿರುತ್ತದೆ. ಈ ಜನ್ಮದಲ್ಲೇ ಅರಹಂತವಾಗುವ ಸಾಧ್ಯತೆಯಿರುತ್ತದೆ.
ಪರಲೋಕದಲ್ಲಿ ಪಡೆಯುವ ವಿಷಯಗಳೆಂದರೆ: ಮಧ್ಯದಲ್ಲೇ ಆತನು ವಿಮುಕ್ತನಾಗಬಹುದು, ಕಾಲಕ್ಕೆ ಮೊದಲೇ ವಿಮುಕ್ತನಾಗಬಹುದು, ಹೆಚ್ಚು ಕಷ್ಟಗಳಿಲ್ಲದೆ ಅಥವಾ ಅಲ್ಪ ಕಷ್ಟಗಳಿಂದ ವಿಮುಕ್ತನಾಗಬಹುದು ಮತ್ತು ಹಿರಿಯ ಅರಹಂತರಂತೆ ವಿಮುಕ್ತನಾಗುತ್ತಾನೆ.
ಸೋತಪನ್ನ ಹೇಗಾಗುತ್ತಾನೆ?
ಭಿಕ್ಷುಗಳೇ, ಯಾವಾಗ ಆರ್ಯಶ್ರಾವಕನು ಪಂಚ ಉಪಾದಾನ ಖಂಧಗಳಿಗೆ (ದೇಹ ಮತ್ತು ಮನಸ್ಸುಗಳ ಅಂಟುವಿಕೆಯನ್ನು) ಅವು ಹೇಗಿದೆಯೋ ಹಾಗೆಯೇ ಅರಿಯುತ್ತಾನೋ, ಅವುಗಳ ಉದಯವನ್ನು ಅರಿಯುತ್ತಾನೋ ಮತ್ತು ಅವುಗಳು ಅಳಿಯುವಿಕೆ ಅರಿಯುತ್ತಾನೋ, ಉದಯವಯಗಳೆರಡನ್ನು ಅರಿಯುತ್ತಾನೋ, ಅವುಗಳ ಸ್ವಾದವನ್ನು, ಅವುಗಳ ಅಪಾಯವನ್ನು ಅವುಗಳಿಂದ ಪಾರಾಗುವಿಕೆಯನ್ನು ಯತಾಭೂತವಾಗಿ ಅರಿಯುತ್ತಾನೋ ಅಂತಹ ಆರ್ಯಶ್ರಾವಕನಿಗೆ ಸೋತಪನ್ನ (ಶೋಕವನ್ನು ಗೆದ್ದಿರುವವನು) ಎನ್ನುತ್ತಾರೆ. ಆತನು ಎಲ್ಲಾ ಅಪಾಯಗಳಿಂದ ಪಾರಾಗಿದ್ದಾನೆ, ಅಂತಹವನು ಬೋಧಿಯನ್ನು ಖಚಿತವಾಗಿ ಪಡೆಯುತ್ತಾನೆ.
No comments:
Post a Comment