Wednesday, 20 November 2019

ತಥಾಗತರು ಸಾವಿನ ಬಳಿಕ ಏನಾಗುತ್ತಾರೆ?

ತಥಾಗತರು ಸಾವಿನ ಬಳಿಕ ಏನಾಗುತ್ತಾರೆ?

ಆಗ ಪ್ರಚಲಿತವಾಗಿದ್ದ ಪ್ರಶ್ನೆಯಿದು. ಆದರೆ ಇಲ್ಲಿ ತಥಾಗತರ ಅರ್ಥ ನುಡಿದಂತೆ ನಡೆದವರು, ನಡೆದಂತೆ ನುಡಿಯುವವರು ಯಾರೂ ಈ ಸತ್ಯಪಥದಲ್ಲಿ ಚಲಿಸಿರುವವರೋ ಅವರು ಸಾವಿನ ನಂತರ ಏನಾಗುವರು? ಆಗ ತರ್ಕದಿಂದ ಮತ್ತು ಹಲವರು ಬೋಧಿಸುವಂತೆ ಈ ನಾಲ್ಕು ಗತಿಗಳಿದ್ದವು. (1) ಇರುವರು (2) ಇರುವುದಿಲ್ಲ (3) ಇದ್ದು ಇರುವುದಿಲ್ಲ (4) ಇರುವುದಿಲ್ಲ, ಇಲ್ಲವೆಂದೂ ಅಲ್ಲ. ಆದರೆ ಭಗವಾನರು ಈ ನಾಲ್ಕು ಉತ್ತರವನ್ನು ಒಪ್ಪುವುದಿಲ್ಲ, ನಿರಾಕರಿಸುತ್ತಾರೆ. ಏಕೆಂದರೆ ಸತ್ಯವು ಇಲ್ಲಿ ತರ್ಕವನ್ನು ಮೀರಿದೆ ಅಥವಾ ಅರಿಯಲು ಕಡುಕಷ್ಟಕರವಾಗಿದೆ.
ಒಮ್ಮೆ ಅಗ್ಗಿ ವಚ್ಚಗೊತ್ತನು ಇದೇ ಪ್ರಶ್ನೆ ಕೇಳಿದಾಗ, ಭಗವಾನರು ಈ ನಾಲ್ಕು ಗತಿಗಳ ಉತ್ತರವನ್ನು ನಿರಾಕರಿಸಿದರು. ಆಗ ವಚ್ಚನು ಹೀಗೆ ನಿರಾಶನಾಗಿ ಉತ್ತರಿಸಿದನು: ಈ ಅಂಶದಲ್ಲಿ ನಾನು ಕಳೆದುಕೊಂಡೆನು ಭಗವಾನ್, ನಾನು ದಿಗ್ಭ್ರಮೆಗೊಂಡಿರುವೆನು. ನನಗೆ ಹಿಂದೆ ನಿಮ್ಮ ಬೋಧನೆಯಲ್ಲಿ ಸಿಕ್ಕಿದ ತೃಪ್ತಿ ನಾನು ಈಗ ಕಳೆದುಕೊಂಡಿರುವೆನು.
ಆಗ ಭಗವಾನರು ಹೀಗೆ ಉತ್ತರಿಸುತ್ತಾರೆ: ಓ ವಚ್ಚ, ನೀನು ಅತೃಪ್ತನಾಗಿರುವುದು ಆಶ್ಚರ್ಯಕರ ಸಂಗತಿಯೇನಲ್ಲ. ಏಕೆಂದರೆ ವಚ್ಚ ಈ ಧಮ್ಮವು ಅತ್ಯಂತ ಆಳವಾದದ್ದು, ಅರಿಯಲು ಕಷ್ಟಕರವಾದದ್ದು, ವಿಶ್ಲೇಷಿಸಲು ಕಷ್ಟಕರವಾಗಿರುವುದು, ಶಾಂತವಾದುದು, ಉತ್ಕೃಷ್ಟವಾದುದು, ಚಚರ್ೆಗೆ, ತರ್ಕಕ್ಕೆ ಮೀರಿದ್ದು, ಪರಮಸೂಕ್ಷ್ಮವಾದದ್ದು, ಕೇವಲ ಪ್ರಜ್ಞಾವಂತರು ಅರಿಯುವಂತಹುದು. ಆದರೆ ಇದು ಕಷ್ಟಕರವಾಗಿರುವುದು ಏಕೆಂದರೆ ಪರಸಿದ್ಧಾಂತಕ್ಕೆ ಅಂಟಿರುವುದು, ಪೂರ್ವಗ್ರಹ ಪೀಡಿತವಾಗಿರುವುದು, ಬೇರೊಂದು ದೃಷ್ಟಿಕೋನಗಳಿಗೆ ಅಂಟಿರುವುದು. ಬೇರೆ ಸಿದ್ಧಾಂತಕ್ಕೆ ನಿಷ್ಟನಾಗಿರುವುದು, ಬೇರೊಂದು ಗುರಿಯನ್ನು ಹೊಂದಿರುವುದು, ಬೇರೆಯದನ್ನು ಪಾಲಿಸುತ್ತಿರುವುದು ಮತ್ತು ಬೇರೆ ಗುರುವನ್ನು ಹೊಂದಿರುವುದು ಆಗಿದೆ. ಸರಿ ವಚ್ಚ, ನಾನು ಒಂದು ಪ್ರಶ್ನೆಯನ್ನು ಕೇಳುವೆ, ಅದರ ಬಗ್ಗೆ ನಿನಗೆ ಸರಿ ಎನಿಸುವಂತೆ ಉತ್ತರಿಸು. ನಿನ್ನ ಮುಂದೆ ಅಗ್ನಿಯು ಉರಿಯುತ್ತಿರುವುದು ಎಂದು ಭಾವಿಸು, ಅದು ಯಾವುದನ್ನು ಆಧರಿಸಿ ಉರಿಯುತ್ತಿರುವುದು?
ಅದು ಹುಲ್ಲು ಮತ್ತು ಕಟ್ಟಿಗೆಗಳನ್ನು ಆಧರಿಸಿ ಉರಿಯುತ್ತಿರುವುದು.
ವಚ್ಚ, ಈಗ ಆ ಅಗ್ನಿಯು ಆರಿಹೋಗುವುದು, ಈಗ ನಿನಗೆ ಯಾರಾದರು ಈ ರೀತಿ ಪ್ರಶ್ನಿಸುತ್ತಾರೆ, ಏನೆಂದರೆ ಆ ಅಗ್ನಿಯು ಪೂರ್ವಕ್ಕೆ ಹೋಯಿತೆ? ಅಥವಾ ದಕ್ಷಿಣಕ್ಕೆ ಅಥವಾ ಪಶ್ಚಿಮಕ್ಕೆ ಅಥವಾ ಉತ್ತರಕ್ಕೆ ಹೋಯಿತೆ? ಎಂದು ಪ್ರಶ್ನಿಸಿದರೆ ಏನೆಂದು ಉತ್ತರಿಸುವೆ?
ಭಗವಾನ್ ಇಲ್ಲಿ ಈ ಪ್ರಶ್ನೆಯೇ ಹೊಂದಿಕೆಯಾಗದು, ಏಕೆಂದರೆ ಹುಲ್ಲು, ಕಟ್ಟಿಗೆಗಳನ್ನು ಆಧರಿಸಿ ಉರಿಯುತ್ತಿತ್ತು. ಇಂಧನ ಮುಗಿದನಂತರ ಆರಿಹೋಯಿತು ಎಂದಷ್ಟೇ ಹೇಳಬಹುದು.
ಅದೇರೀತಿಯಲ್ಲಿ ವಚ್ಚ, ಇಲ್ಲಿ ತಥಾಗತರವನ್ನು ಕಾಯದಿಂದ, ಅನುಭವಗಳಿಂದ, ಗ್ರಹಿಕೆಗಳಿಂದ, ಚಿತ್ತದ ಚಟುವಟಿಕೆಗಳಿಂದ ಅರಿವುಗಳಿಂದ (ಒಟ್ಟಾರೆ ದೇಹ ಮತ್ತು ಮನಸ್ಸಿನಿಂದ) ಗುತರ್ಿಸುತ್ತಾರೆ. ಆದರೆ ಅವೆಲ್ಲವೂ ಭವದಲ್ಲಿ ಬೆಳೆಯದಂತೆ, ತಾಳೆ ಮರವನ್ನು ಬುಡದ ಬಳಿ ಕತ್ತರಿಸುವಂತೆ, ತೆಗೆದುಹಾಕಲಾಗಿದೆ. ಹೀಗಿರುವಾಗ ಅವರು ಮರುಹುಟ್ಟುವರೆ, ಇರುವುದಿಲ್ಲವೆ, ಇರುತ್ತಾರೆ ಹಾಗೆ ಇರುವುದಿಲ್ಲವೆ, ಇರುವುದಿಲ್ಲ ಹಾಗೆ ಇಲ್ಲವೆಂದು ಅಲ್ಲ ಎಂಬುದು ಅನ್ವಯಿಸುವುದಿಲ್ಲ. ಏಕೆಂದರೆ ತಥಾಗತರನ್ನು ಗುತರ್ಿಸಬಹುದಾದ ದೇಹ ಮತ್ತು ಮನಸ್ಸನ್ನು ತಾಳೆ ಮರವನ್ನು ಬುಡದಲ್ಲಿ ಕತ್ತರಿಸಿ ಅದು ಮೊಳೆಯದಂತೆ ಮಾಡಿರುವರೋ ಹಾಗೆಯೇ ತಥಾಗತರು ನಿಬ್ಬಾಣ ಸಾಧಿಸಿದ್ದಾರೆ. ಅವರು ಇರುತ್ತಾರೆ, ಇರುವುದಿಲ್ಲ ಇಂತಹ ಪ್ರಶ್ನೆಗಳು ಅವರಿಗೆ ಅನ್ವಯಿಸುವುದಿಲ್ಲ.
ಆಗ ವಚ್ಚನಿಗೆ ಸತ್ಯಗೋಚರವಾಗಿ ಆತನು ತಿಸರಣ ಪಡೆದು ನಿಷ್ಠ ಉಪಾಸಕನಾಗುತ್ತಾನೆ.
*  *  *
ಇದೇ ವಿಷಯದ ಬಗ್ಗೆ ಅನಿರುದ್ಧರು ವಿಚಾರಿಸಿದಾಗ ಭಗವಾನರು ಹೀಗೆ ಆತನಿಗೆ ಪ್ರಶ್ನಿಸುತ್ತಾರೆ: ಅನಿರುದ್ಧ ದೇಹ ಮತ್ತು ಮನಸ್ಸು (ವೇದನ, ಸಞ್ಞ, ಸಂಖಾರ ಮತ್ತು ವಿಞ್ಞಾನ) ಅನಿತ್ಯವೋ ಅಥವಾ ನಿತ್ಯವೋ?
ಅನಿತ್ಯ ಭಗವಾನ್.
ಅನಿರುದ್ಧ ತಥಾಗತರ ಶರಿರವನ್ನು ತಥಾಗತರೆಂದು ಪರಿಗಣಿಸಿದೆಯೇನು?
ಖಂಡಿತ ಇಲ್ಲ ಭಗವಾನ್.
ಹಾಗಾದರೆ ತಥಾಗತರ ಮನಸ್ಸನ್ನು (ವೇದನ, ಸಞ್ಞ, ಸಂಖಾರ ಮತ್ತು ವಿಞ್ಞಾನ) ತಥಾಗತರೆಂದು ಪರಿಗಣಿಸಿದೆಯೇನು?
ಖಂಡಿತ ಇಲ್ಲ ಭಗವಾನ್.
ಹಾಗಾದರೆ ಅನಿರುದ್ಧ ಈ ಜನ್ಮದಲ್ಲೇ ಈ ದೇಹ ಮತ್ತು ಮನಸ್ಸು ತಥಾಗತರು ಅಲ್ಲವೆಂದು ಪರಿಗಣಿಸಿರುವಾಗ ತಥಾಗತರು ಸಾವಿನ ಬಳಿಕ ಇರುವರೇ, ಇರುವುದಿಲ್ಲವೇ ಇತ್ಯಾದಿ ಪ್ರಶ್ನೆಗಳು ಉಚಿತವೇ?
ಖಂಡಿತ ಇಲ್ಲ ಭಗವಾನ್.
ಸರಿಯಾಗಿ ಹೇಳಿದೆ, ಅನಿರುದ್ಧ, ಸರಿಯಾಗಿಯೇ ಗ್ರಹಿಸಿರುವೆ. ಹಿಂದೆಯು ಮತ್ತು ಈಗಲು ಸಹಾ ಅನಿರುದ್ಧ, ನಾನು ದುಃಖವನ್ನು ಮತ್ತು ಅದರ ನಿರೋಧವನ್ನು ಬೋಧಿಸುತ್ತೇನೆ.

No comments:

Post a Comment