Wednesday, 13 November 2019

ಸೀಲಬ್ಬತ ಪಾರಮಾಸ (ದುಃಖವಿಮುಕ್ತಿಗೆ ಮೂಢ ಮಾರ್ಗಗಳು):silabbata paramasa

ಸೀಲಬ್ಬತ ಪಾರಮಾಸ (ದುಃಖವಿಮುಕ್ತಿಗೆ ಮೂಢ ಮಾರ್ಗಗಳು):

ಒಮ್ಮೆ ಭಗವಾನರು ಪಾವದಲ್ಲಿನ ಮಾವಿನ ತೋಪಿನಲ್ಲಿ ತಂಗಿದ್ದರು. ಅಲ್ಲಿಗೆ ಅಕ್ಕಸಾಲಿಗನ ಮಗನಾದ ಚುಂದನು ಭಗವಾನರನ್ನು ಕಾಣಲು ಬಂದನು. ಅಲ್ಲಿಗೆ ಬಂದು ವಂದಿಸಿ ಗೌರವದಿಂದ ಒಂದೆಡೆ ಕುಳಿತನು. ಆಗ ಆತನಿಗೆ ಭಗವಾನರು ಈ ರೀತಿಯಾಗಿ ಪ್ರಶ್ನಿಸಿದರು:
ಚುಂದ ಯಾರ ಪರಿಶುದ್ಧತೆಯ ಆಚರಣೆಗಳು ನಿನಗೆ ತೃಪ್ತಿಯನ್ನು ಕೊಟ್ಟಿವೆ?
ಭಗವಾನ್ ಪಶ್ಚಿಮದಲ್ಲಿನ ಬ್ರಾಹ್ಮಣರು ನೀರಿನ ಬಿಂದಿಗೆಗಳನ್ನು ತಂದು, ಕಮಲದ ಹೂಗಳ ಹಾರಗಳನ್ನು ಹಾಕಿಕೊಂಡು, ಅಗ್ನಿಯನ್ನು ಪೂಜಿಸುತ್ತ, ನೀರನ್ನು ಹಾಕಿಕೊಳ್ಳುತ್ತ ಆಚರಣೆಗಳನ್ನು ಮಾಡುತ್ತಾರೆ. ಅವರ ಬಗ್ಗೆ ನನಗೆ ತೃಪ್ತಿಯಿದೆ.
ಓ ಚುಂದ, ಆ ಬ್ರಾಹ್ಮಣರು ನೀರಿನ ಬಿಂದಿಗೆಗಳನ್ನು ತಂದು ಯಾವರೀತಿಯಲ್ಲಿ ಆಚರಣೆ ಮಾಡುತ್ತಾರೆ?
ಭಗವಾನ್, ಅವರು ನೀರಿನ ಬಿಂದಿಗೆಗಳನ್ನು ತಂದು ಈ ರೀತಿ ಹಿಂಬಾಲಕರಿಗೆ ಆಜ್ಞಾಪಿಸುತ್ತಾರೆ. ಬಾ ಇಲ್ಲಿ ಸೋದರ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳು, ಭೂಮಿಗೆ ವಂದಿಸು, ಭೂಮಿಗೆ ತಲೆಬಾಗಿ ವಂದಿಸದಿದ್ದರೆ ಒದ್ದೆಯಾದ ಸಗಣಿಯನ್ನು ಸ್ಪಶರ್ಿಸು,  ಅದನ್ನು ಮುಟ್ಟದಿದ್ದರೆ ಹಸಿರು ಹುಲ್ಲನ್ನು ಸ್ಪಶರ್ಿಸು, ಹೀಗೂ ಮಾಡಲು ಸಾಧ್ಯವಾಗದಿದ್ದರೆ ಅಗ್ನಿಪೂಜೆಯನ್ನು ಮಾಡು, ಹಾಗು ಮಾಡಲು ಸಾಧ್ಯವಾಗದಿದ್ದರೆ ಸೂರ್ಯನಿಗೆ ನಮಸ್ಕರಿಸು, ಇದು ಸಾಧ್ಯವಾಗದಿದ್ದರೆ ನೀನು ಸಂಜೆ ವೇಳೆ ನೀರಿನಲ್ಲಿ ಮೂರುಬಾರಿ ಮುಳುಗಿ ಏಳು. ಹೀಗೆ ಭಂತೆ, ಬ್ರಾಹ್ಮಣರು ನೀರಿನ ಬಿಂದಿಗೆಗಳಿಂದ ನೀರನ್ನು ಹಾಕಿಕೊಂಡು ಆಚರಣೆಗಳನ್ನು ಮಾಡುತ್ತಾರೆ. ಇದರಲ್ಲಿ ನನಗೆ ತೃಪ್ತಿಯಿದೆ.
ಒಳ್ಳೆಯದು ಚುಂದ, ಈ ಬ್ರಾಹ್ಮಣರ ಶುದ್ಧೀಕರಣ ಆಚರಣೆಯು ಆರ್ಯ ವಿಶುದ್ಧಿಗಿಂತ ಭಿನ್ನವಾಗಿದೆ.
ಭಗವಾನ್, ಆರ್ಯರ ವಿಶುದ್ಧಿ ಹೇಗಿರುತ್ತದೆ?
ಹಾಗಾದರೆ ಚುಂದ, ನಾನು ವಿವರಿಸುವೆ, ಗಮನವಿಟ್ಟು ಆಲಿಸು.
ಸರಿ ಭಂತೆ.
ಓ ಚುಂದ, ಶರೀರದಿಂದ ಮೂರು ಬಗೆಯಲ್ಲಿ ಕಲುಷಿತ ಕಾರ್ಯವಾಗುತ್ತದೆ. ಮಾತಿನಲ್ಲಿ ನಾಲ್ಕುಬಗೆಯ ಕಲುಷಿತವಾಗುತ್ತದೆ. ಯೋಚನೆಗಳಿಂದ ಮೂರುಬಗೆಯಲ್ಲಿ  ಕಲುಷಿತವಾಗುತ್ತದೆ ಮತ್ತು ಹೇಗೆ ಶರೀರದಿಂದ ಮೂರುಬಗೆಯಲ್ಲಿ ಕಲುಶಿತತೆಯಾಗುತ್ತದೆ? ಇಲ್ಲಿ ಚುಂದ, ಒಬ್ಬನು ಜೀವಹತ್ಯೆ ಮಾಡುತ್ತಾನೆ, ಬೇಟೆಗಾರನಾಗಿರುತ್ತಾನೆ, ರಕ್ತವುಳ್ಳ ಕೈಗಳುಳ್ಳವನು ಆಗುತ್ತಾನೆ. ಜೀವಿಗಳ ದಯೆಯಿಲ್ಲದೆ ಕೊಲ್ಲುತ್ತಲೇ ಇರುತ್ತಾನೆ. ಹಾಗೆಯೇ ಒಬ್ಬನು ತನಗೆ ನೀಡದುದನ್ನು ತೆಗೆದುಕೊಳ್ಳುತ್ತಾನೆ. ಆತನು ತನಗೆ ನೀಡದ ಎಲ್ಲವನ್ನು ಕಳ್ಳತನ ಮಾಡುತ್ತಾನೆ. ಪರರಿಗೆ ಸೇರಿದ ಆಸ್ತಿಯನ್ನು ಕಬಳಿಸುತ್ತಾನೆ. ಹಾಗೆಯೇ ಒಬ್ಬನು ವ್ಯಭಿಚಾರಿಯಾಗುತ್ತಾನೆ. ಆತನು ತಂದೆ-ತಾಯಿಗಳ, ಸೋದರರ, ಬಂಧುಗಳಲ್ಲಿ ಸುರಕ್ಷಿತವಾದ ಕನ್ಯೆ ಅಥವಾ ಸ್ತ್ರೀಯಲ್ಲಿ ಅನಾಚಾರ ಮಾಡುತ್ತಾನೆ, ಇದು ದೇಹದಲ್ಲಿನ ಕಲುಶಿತತೆಯಾಗಿದೆ.
ಮತ್ತೆ ಚುಂದ, ಆತನು ಮಾತಿನಲ್ಲಿ ಹೇಗೆ ಕಲುಷಿತನಾಗುತ್ತಾನೆ? ಇಲ್ಲಿ ಚುಂದ, ಒಬ್ಬನು ಸುಳ್ಳುಗಾರನಾಗುತ್ತಾನೆ, ಆತನು ಸಭಾ ಮಧ್ಯೆ ಅಥವಾ ನ್ಯಾಯಾಚರಣೆಯ ಸಮಯದಲ್ಲಿ ಸುಳ್ಳು ಸಾಕ್ಷಿ ನುಡಿಯುತ್ತಾನೆ. ಗೊತ್ತಿರುವುದನ್ನು ಗೊತ್ತಿಲ್ಲವೆಂದು, ಗೊತ್ತಿಲ್ಲದಿರುವುದನ್ನು ಗೊತ್ತು ಎಂದು ಕಂಡಿಲ್ಲದಿರುವುದನ್ನು ಕಂಡೆ ಎಂದೂ, ಕಂಡಿರುವುದನ್ನು ಕಂಡಿಲ್ಲ ಎಂದು ಸುಳ್ಳು ಹೇಳುತ್ತಾನೆ. ಹೀಗೆ ಆತನು ತನಗಾಗಿ ಅಥವಾ ಪರರಿಗಾಗಿ ಅಥವಾ ಲೌಕಿಕ ಲಾಭಕ್ಕಾಗಿ ಅಥವಾ ಪರರ ಲೌಕಿಕ ಲಾಭಕ್ಕಾಗಿ ಸುಳ್ಳು ಹೇಳುತ್ತಾನೆ.
ಹಾಗೆಯೇ ಒಬ್ಬನು ಚಾಡಿಕೋರನಾಗಿರುತ್ತಾನೆ. ಇಲ್ಲಿ ಕೇಳಿದ್ದನ್ನು ಅಲ್ಲಿ ಹೇಳಿ ಅಥವಾ ಅಲ್ಲಿ ಕೇಳಿದ್ದನ್ನು ಇಲ್ಲಿ ಹೇಳಿ ಜಗಳಗಳನ್ನು ತರುತ್ತಾನೆ. ಹೀಗೆ ಆತನು ವ್ಯಕ್ತಿಗಳಲ್ಲಿ ಅಥವಾ ಸಮೂಹಗಳಲ್ಲಿ ಜಗಳಗಳನ್ನು ತರುತ್ತಾನೆ. ಹೀಗೆ ಆತನು ಐಕ್ಯತೆ ಭಂಗಮಾಡುತ್ತದೆ, ಸಾಮರಸ್ಯಕ್ಕೆ ಸೌಹಾರ್ದತೆಗೆ ಭಂಗ ತರುತ್ತಾನೆ. ಹೀಗೆ ಆತನು ಸ್ನೇಹ ಭಂಗದಲ್ಲೇ ಆನಂದಿಸುತ್ತಾನೆ.
ಹಾಗೆಯೇ ಒಬ್ಬನು ಕಟುವಾಗಿ ಒರಟಾಗಿ ಮಾತನಾಡುವವನಾಗಿರುತ್ತಾನೆ. ತನ್ನ ಮಾತಿನಿಂದ ಪರರಿಗೆ ನೋವಾಗುವಂತೆ, ಕೋಪ ಬರುವಂತೆ, ದುಃಖ ತರುವಂತೆ ಚಿತ್ತ ಕ್ಷೊಭೆ ತರುವಂತಹ ಮಾತುಗಳನ್ನು ಆಡುತ್ತಾನೆ.
ಹಾಗೆಯೇ ಒಬ್ಬನು ಸೋಮಾರಿತನದ ಹರಟೆಗಳಲ್ಲಿ ತಲ್ಲೀನನಾಗುತ್ತಾನೆ. ಸಮಯೋಚಿತವಲ್ಲದ ಮಾತುಗಳನ್ನು ಆಡುತ್ತಾನೆ. ಅವಾಸ್ತವಿಕ ಮಾತುಗಳನ್ನು ಆಡುತ್ತಾನೆ, ಅನರ್ಥಕಾರಿ ಮಾತುಗಳನ್ನು ಆಡುತ್ತಾನೆ, ಧರ್ಮವಲ್ಲದ, ವಿನಯವಲ್ಲದ ಮಾತುಗಳನ್ನು ಆಡುತ್ತಾನೆ, ಶೇಖರಣೆಗೆ ಯೋಗ್ಯವಾದ ಮಾತುಗಳನ್ನು ಆಡುವುದಿಲ್ಲ, ವಿಚಾರಪೂರಿತ ವಲ್ಲದ ಮಾತುಗಳನ್ನು ಆಡುತ್ತಾನೆ. ಕೇಳಲು ಅರ್ಹವಾದ, ವಿವೇಚನೆಯಿಲ್ಲದ ಮತ್ತು ಲಾಭವಿಲ್ಲದ ಮಾತುಗಳನ್ನೇ ಆಡುತ್ತಾನೆ. 
ಹೀಗೆ ಚುಂದ, ಈ ನಾಲ್ಕು ರೀತಿಯಲ್ಲಿ ಮಾತು ಕಲುಶಿತದಿಂದ ಕೂಡಿರುತ್ತದೆ.
ಮತ್ತು ಹೇಗೆ ಮನಸ್ಸು ಮೂರು ವಿಧದಲ್ಲಿ ಕಲುಷಿತದಿಂದಿರುತ್ತದೆ?
ಚುಂದ, ಇಲ್ಲಿ ಒಬ್ಬನು ದುರಾಸೆಯಿಂದ ಕೂಡಿರುತ್ತಾನೆ. ಆತನು ಮತ್ತೊಬ್ಬರ ಆಸ್ತಿಯ ಬಗ್ಗೆ ದುರಾಸೆಯಿಂದ ಕೂಡಿರುತ್ತಾನೆ. ಆತನು ಹೀಗೆ ಯೋಚಿಸುತ್ತಾನೆ: ಓ ಆತನ ಆಸ್ತಿ ನನ್ನದಾಗಿದ್ದರೆ! ಹಾಗೆಯೇ ಒಬ್ಬನು ದ್ವೇಷವುಳ್ಳ ಚಿತ್ತದಿಂದ ಕೂಡಿರುತ್ತಾನೆ, ಆತ ಹೀಗೆ ಪರರ ಬಗ್ಗೆ ಹಾನಿ ಯೋಚಿಸುತ್ತಾನೆ: ಈ ಜೀವಿಗಳು ನಾಶವಾಗಲಿ, ಕೊಲ್ಲಲ್ಪಡಲಿ, ಇರದೆ ಇರಲಿ, ಹಾಗೆಯೇ ಆತನು ಮಿಥ್ಯಾ ದೃಷ್ಟಿಗಳಿಂದ ಕೂಡಿರುತ್ತಾನೆ. ಹೇಗೆಂದರೆ: ದಾನಕ್ಕೆ, ಸೇವೆಗೆ, ಅರ್ಪಣೆಗೆ ಲಾಭವಿಲ್ಲ. ಸುಕರ್ಮ ಅಥವಾ ಕುಕರ್ಮಗಳಿಗೆ ಫಲವಿಲ್ಲ. ಈ ಲೋಕದಲ್ಲೂ ಫಲವಿಲ್ಲ, ಪರಲೋಕವೇ ಇಲ್ಲ. ತಾಯ್ತಂದೆಗಳಿಗೆ ಮಾಡುವ ಸೇವೆಯು ಲಾಭವಲ್ಲ. ತಾವಾಗಿಯೇ ಹುಟ್ಟುವ ಜೀವಿಗಳಿಲ್ಲ, ಶೀಲವಂತರಾದ ಅಭಿಜ್ಞಾ ಸಂಪನ್ನರಾದ, ಪ್ರಜ್ಞಾರಾದ, ಸಾಕ್ಷಾತ್ಕರಿಸಿದ ಸಮಣ ಬ್ರಾಹ್ಮಣರು ಯಾರೂ ಇಲ್ಲ.
ಹೀಗೆ ಚುಂದ, ಇವು ಮನಸ್ಸಿನ ಮೂರು ಕಲುಷಿತಗಳಾಗಿವೆ.
ಚುಂದ, ಈ ಹತ್ತುಬಗೆಯ ಮಿಥ್ಯಾ ಕರ್ಮಗಳಿಂದ ಕಲುಷಿತನಾಗಿರುವವನು ಭೂಮಿಗೆ ನಮಸ್ಕರಿಸಿದರೂ, ಅಶುದ್ಧನಾಗಿಯೇ ಇರುತ್ತಾನೆ, ಹಾಗೆಯೇ ಒದ್ದೆ ಗೊಬ್ಬರವನ್ನು ಸ್ಪಶರ್ಿಸಿದರೂ ಅಶುದ್ಧನಾಗಿಯೇ ಇರುತ್ತಾನೆ, ಹಸಿರು ಹುಲ್ಲುಗಳನ್ನು ಸ್ಪಶರ್ಿಸಿದರೂ ಅಶುದ್ಧನಾಗಿಯೇ ಇರುತ್ತಾನೆ, ಅಗ್ನಿಪೂಜೆಯನ್ನು ಆತ ಮಾಡಿದರೂ ಅಶುದ್ಧನಾಗಿಯೇ ಇರುತ್ತಾನೆ, ಸೂರ್ಯನಿಗೆ ವಂದಿಸಿದರೂ, ನಮಸ್ಕರಿಸಿದರೂ ಅಶುದ್ಧನಾಗಿಯೇ ಇರುತ್ತಾನೆ, ನೀರಿನಲ್ಲಿ ಎಷ್ಟುಬಾರಿ ಮುಳುಗಿದರೂ, ಸ್ನಾನ ಮಾಡಿದರೂ ಅಶುದ್ಧವಾಗಿ ಇರುತ್ತಾನೆ, ಏಕೆ ಹೀಗೆ? ಏಕೆಂದರೆ ಈ 10 ಬಗೆಯ ಮಿಥ್ಯಾಕರ್ಮಗಳಿಂದ ಕಲುಷಿತನಾಗಿರುವವನು, ಕಲುಷಿತಕ್ಕೆ ಕಾರಣಕರ್ತನಾಗಿದ್ದಾನೆ, ಅಂತಹವನು ನಿರಯಗಳಲ್ಲಿ, ಪ್ರಾಣಿಗಳಲ್ಲಿ ಹುಟ್ಟುತ್ತಾನೆ, ಪ್ರೇತವಾಗುತ್ತಾನೆ ಅಥವಾ ಕೆಟ್ಟ ಪರಿಸ್ಥಿತಿಗಳಲ್ಲಿ ಹುಟ್ಟುತ್ತಾನೆ.
ಆದರೆ ಚುಂದ, ನಾಲ್ಕುವಿಧದ ಕಾಯದಿಂದ ನಾಲ್ಕು ವಿಧದ ಮಾತಿನಿಂದ ಮತ್ತು ಮೂರುಬಗೆಯ ಚಿತ್ತದಿಂದಲೂ ಪರಿಶುದ್ಧನಾಗುವ ಬಗೆಯಿದೆ.
ಹೇಗೆಂದರೆ ಇಲ್ಲಿ ಚುಂದ, ಒಬ್ಬನು ಜೀವಹತ್ಯೆ ಮಾಡುವುದರಿಂದ ದೂರಾಗುತ್ತಾನೆ, ದಂಡಶಸ್ತ್ರಗಳನ್ನು ಎಸೆದು, ಸಭ್ಯನಾಗಿ, ದಾನಿಯಾಗಿ, ಸರ್ವಜೀವಿಗಳಲ್ಲಿ ಕರುಣೆಯಿಂದ ಕೂಡಿರುತ್ತಾನೆ. ಹಾಗೆಯೇ ತನಗೆ ಸೇರದುದನ್ನು ತೆಗೆದುಕೊಳ್ಳದೆ, ಪರವಸ್ತು, ಪರಧನ ಮುಟ್ಟದೆ ಪ್ರಾಮಾಣಿಕನಾಗಿರುತ್ತಾನೆ. ಹಾಗೆಯೇ ಅನೀತಿಯುತ ಕಾಮದಲ್ಲಿ ತೊಡಗದೆ, (ಪತ್ನಿಯ ವಿನಃ) ಯಾವ ಸ್ತ್ರೀಯಲ್ಲಿ ಅನುರಕ್ತನಾಗದೆ, ಪರಸ್ತ್ರೀಯನ್ನು ಮುಟ್ಟದೆ, ಪರಿಶುದ್ಧವಾಗಿರುತ್ತಾನೆ. ಇದರಿಂದ ದೇಹವನ್ನು ಶುದ್ಧೀಕರಿಸುತ್ತಾನೆ. ಹಾಗೆಯೇ ಆತನು ಚಾಡಿ ಹೇಳುವಿಕೆಯಿಂದ ವಿರತನಾಗುತ್ತಾನೆ. ಆತನು ಇಲ್ಲಿ ಕೇಳಿದ ಅಥವಾ ಅಲ್ಲಿ ಕೇಳಿದ ಮಾತುಗಳನ್ನು ಯಾರಲ್ಲಿ ಹೇಳಿ ಐಕ್ಯತೆ ಭಂಗ ಮಾಡುವುದಿಲ್ಲ. ಆತ ಸದಾ ಸೌಹಾರ್ದತೆಯ, ಸಾಮರಸ್ಯ ಉಂಟುಮಾಡುವ ಮಾತುಗಳನ್ನೇ ಆಡುತ್ತಾನೆ. ಅಂತಹುದರಲ್ಲೇ ಆನಂದಿಸುತ್ತಾನೆ. ಹಾಗೆಯೇ ಆತನು ಕಟುವಾದ ಒರಟು ಭಾಷೆಯಿಂದ ವಿರತನಾಗುತ್ತಾನೆ. ಆತನು ಕಿವಿಗಳಿಗೆ ಇಂಪಾದ, ಮಧುರವಾದ, ಹೃದಯಕ್ಕೆ ಸ್ಪಶರ್ಿಸುವಂತಹ, ಸರ್ವರೂ ಒಪ್ಪುವಂತಹ, ಆನಂದ ನೀಡುವಂತಹ ಮಾತುಗಳನ್ನೇ ಆಡುತ್ತಾನೆ. ಹಾಗೆಯೇ ಒಬ್ಬನು ಸೋಮಾರಿತನದ ಹರಟೆಯಿಂದ ವಿರತನಾಗುತ್ತಾನೆ. ಆತನು ಸಮಯೋಚಿತ ಮಾತುಗಳನ್ನೇ ಆಡುತ್ತಾನೆ. ವಾಸ್ತವಿಕ ಸತ್ಯಗಳ ಮಾತುಗಳನ್ನು, ಆಡುತ್ತಾನೆ. ಗುರಿಗೆ ಸಂಬಂಧಿಸಿದಂತೆ ಮಾತುಗಳನ್ನು ಆಡುತ್ತಾನೆ. ಧರ್ಮಕ್ಕೆ ಸಂಬಂಧಪಟ್ಟ ಶಿಸ್ತಿಗೆ ಸಂಬಂಧಪಟ್ಟ, ಶೇಖರಣೆಗೆ ಯೋಗ್ಯ ಮಾತುಗಳನ್ನು ಆಡುತ್ತಾನೆ. ಕೇಳಲು ಅರ್ಹವಾದ, ವಿವೇಚನಾಭರಿತ, ಅರ್ಥಕಾರಿ, ಲಾಭಕಾರಿ ಮಾತುಗಳನ್ನೇ ಆಡುತ್ತಾನೆ.
ಹೀಗೆ ಚುಂದ, ಇವು ನಾಲ್ಕುರೀತಿಯಲ್ಲಿ ಮಾತನ್ನು ಶುದ್ಧೀಕರಿಸುತ್ತವೆ ಮತ್ತು ಹೇಗೆ ಮನಸ್ಸನ್ನು ಮೂರು ವಿಧದಿಂದ ಶುದ್ಧೀಕರಿಸಬಹುದು? ಇಲ್ಲಿ ಒಬ್ಬನು ದುರಾಸೆ ಪೀಡಿತನಾಗುವುದಿಲ್ಲ. ಪರರ ಸ್ವತ್ತಿಗೆ ಆಸೆಪಡುವುದಿಲ್ಲ. ಅವು ನನ್ನದಾಗಲಿ ಎಂದು ಯೋಚಿಸುವುದಿಲ್ಲ. ಹಾಗೆಯೇ ಆತನು ದ್ವೇಷಿಸುವವನು ಆಗಿರುವುದಿಲ್ಲ, ಆತನ ಚಿತ್ತವು ಕಲುಶಿತವಾಗುವುದಿಲ್ಲ. ಆತನು ಹೀಗೆ ಹಾರೈಸುತ್ತಾನೆ: ಎಲ್ಲಾ ಜೀವಿಗಳು ಸುಖವಾಗಿರಲಿ, ಶಾಂತತೆಯಿಂದಿರಲಿ, ಕ್ಷೇಮವಾಗಿರಲಿ, ದ್ವೇಷದಿಂದ ದೂರವಾಗಿರಲಿ, ದುಃಖದಿಂದ ಪೂರ್ಣವಾಗಿ ಪಾರಾಗಲಿ.
ಹಾಗೆಯೇ ಆತನು ಸಮ್ಮಾದೃಷ್ಟಿಕೋನದಿಂದ ಕೂಡಿರುತ್ತಾನೆ. ಆತನು ವಿಶಾಲವಾದ ದೃಷ್ಟಿಕೋನದಿಂದ ಕೂಡಿರುತ್ತಾನೆ, ದಾನಕ್ಕೆ ಫಲವಿದೆ, ಶೀಲಕ್ಕೆ ಫಲವಿದೆ, ತಂದೆ-ತಾಯಿಗಳಿಗೆ ಮಾಡುವ ಸೇವೆ, ಪರಮ ಲಾಭಕಾರಿ, ಸ್ತುತಾರ್ಹ. ಸ್ವಯಂ ಹುಟ್ಟುವ ಪ್ರೇತ, ದೇವತೆಗಳು, ಧ್ಯಾನ ಜೀವಿಗಳಾದ ಬ್ರಹ್ಮರು ಇದ್ದಾರೆ. ಶೀಲವಂತರು, ಧ್ಯಾನಿಗಳು, ಜ್ಞಾನಿಗಳು, ಅಭಿಜ್ಞಾ ಸಂಪನ್ನರಾದ ಸಮಣ ಬ್ರಾಹ್ಮಣರು (ವ್ಯಕ್ತಿಗಳು) ಇದ್ದಾರೆ ಎಂಬಂತಹ ಸಮ್ಮಾದೃಷ್ಟಿಯನ್ನು ಹೊಂದಿರುತ್ತಾನೆ.
ಹೀಗೆ ಚುಂದ, ತ್ರಿವಿಧದಲ್ಲಿ ಚಿತ್ತವಿಶುದ್ಧಿಯಾಗುತ್ತದೆ. ಪರಿಶುದ್ಧತೆಯು ಹೀಗೆ ಆಗುವುದೇ ಹೊರತು ಭೂಮಿಗೆ, ಅಗ್ನಿಗೆ, ಸೂರ್ಯನಿಗೆ ಪೂಜಿಸುವುದರಿಂದಲ್ಲ. ಸಗಣಿಯನ್ನು,ಹುಲ್ಲನ್ನು, ಮುಟ್ಟುವುದರಿಂದಲ್ಲ, (ಸ್ನಾನ ಮಾಡುವುದರಿಂದ ಚಿತ್ತ ಶುದ್ಧಿಯಾಗದು, ದೇಹ ಶುದ್ಧಿಯಾಗುತ್ತದೆಯಷ್ಟೇ) ನೀರನ್ನು ಸ್ಪಶರ್ಿಸುವುದರಿಂದಲ್ಲ.
ಹೀಗೆ ಚುಂದ 10 ರೀತಿಯ ಕುಶಲ ಕರ್ಮದಿಂದಾಗಿ ಪರಿಶುದ್ಧತೆ ಲಭಿಸುವುದು, ಸುಖ ಲಭಿಸುವುದು.
ಹೀಗೆ ಅದನ್ನು ಆಲಿಸಿದ ಚುಂದ ಅನುಮೋದನೆ ಮಾಡಿ ತ್ರಿರತ್ನಗಳಿಗೆ ಶರಣಾಗತನಾದನು.



No comments:

Post a Comment