ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿರುವಾಗ ಬ್ರಾಹ್ಮಣನೊಬ್ಬನು
ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಗಳನ್ನು
ವಿನಿಮಯ ಮಾಡಿಕೊಂಡ ನಂತರ ಒಂದೆಡೆ ಕುಳಿತು ಈ ರೀತಿ ಪ್ರಶ್ನಿಸುತ್ತಾನೆ:
ಭಗವಾನ್ ಕರ್ಮ ಮಾಡುವವನೇ ಅದರ ಫಲವನ್ನು ಅನುಭವಿಸುತ್ತಾನೆಯೇ?
ಓ ಬ್ರಾಹ್ಮಣ, ಇದು ಒಂದು
ಅತಿರೇಕವಾಗಿದೆ.
ಹಾಗಾದರೆ ಭಗವಾನ್ ಕರ್ಮ ಮಾಡುವವನೇ ಬೇರೆ ಮತ್ತು ಅದರ ಫಲವನ್ನು
ಅನುಭವಿಸುವವನು ಬೇರೆಯೇ?
ಓ ಬ್ರಾಹ್ಮಣ, ಇದು ಒಂದು
ಅತಿರೇಕವಾಗಿದೆ.
ಓ ಬ್ರಾಹ್ಮಣ,
ತಥಾಗತರು ಅತಿರೇಕಗಳನ್ನು ಮೀರಿದ್ದಾರೆ, ಅತಿರೇಕಗಳು ಮೀರಿದ ಸತ್ಯದ ಮಧ್ಯಮ ಮಾರ್ಗವನ್ನು ಬೋಧಿಸುತ್ತೇನೆ. ನಿನಗೆ ಇದು ಪೂರ್ಣವಾಗಿ
ಅರ್ಥವಾಗಬೇಕಾದರೆ ಗಮನವಿಟ್ಟು ಆಲಿಸು ಎಂದು ಪಟಿಚ್ಚಸಮುಪ್ಪಾದ ಬೋಧಿಸಿದರು.
ಅಜ್ಞಾನದಿಂದ ಸಂಖಾರಗಳು (ಚಿತ್ತದ ಚಟುವಟಿಕೆಗಳು) ಉಂಟಾಗುತ್ತದೆ.
ಸಂಖಾರಗಳಿಂದ ವಿಞ್ಞಾನ (ಅರಿವು) ಉಂಟಾಗುತ್ತದೆ. ವಿಞ್ಞಾನದಿಂದ ನಾಮರೂಪಗಳು (ಮನಸ್ಸು ಮತ್ತು
ದೇಹ) ಉಂಟಾಗುತ್ತದೆ. ನಾಮರೂಪದಿಂದ ಆರು ಇಂದ್ರೀಯ ಆಧಾರಗಳು ಉಂಟಾಗುತ್ತದೆ. ಆರು ಇಂದ್ರೀಯ
ಆಧಾರಗಳಿಂದ ಸ್ಪರ್ಶ ಉಂಟಾಗುತ್ತದೆ, ಸ್ಪರ್ಶದಿಂದ
ವೇದನೆಗಳು ಉಂಟಾಗುತ್ತದೆ. ವೇದನೆಗಳಿಂದ ತನ್ಹಾ ಉಂಟಾಗುತ್ತದೆ, ತನ್ಹಾದಿಂದ ಅಂಟುವಿಕೆ ಉಂಟಾಗುತ್ತದೆ, ಅಂಟುವಿಕೆಯಿಂದ ಭವ
ಉಂಟಾಗುತ್ತದೆ. ಭವದಿಂದ ಜನ್ಮ ಉಂಟಾಗುತ್ತದೆ. ಜನ್ಮದಿಂದ ದುಃಖರಾಶಿ ಉಂಟಾಗುತ್ತದೆ.
ಆದರೆ ಅಜ್ಞಾನದ ನಿರೋಧದಿಂದ ಸಂಖಾರಗಳ ನಿರೋಧವಾಗುತ್ತದೆ, ಸಂಖಾರಗಳ ನಿರೋಧದಿಂದ ವಿಞ್ಞಾನದ ನಿರೋಧವಾಗುತ್ತದೆ, ವಿಞ್ಞಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ. ನಾಮರೂಪದ
ನಿರೋಧದಿಂದ ಆರು ಇಂದ್ರೀಯಗಳ ಆಧಾರಗಳು ನಿರೋಧವಾಗುತ್ತದೆ, ಆರು ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ, ಸ್ಪರ್ಶದ ನಿರೋಧದಿಂದ ವೇದನೆಗಳ ನಿರೋಧ ಆಗುತ್ತವೆ, ವೇದನೆಗಳ ನಿರೋಧದಿಂದ ತನ್ಹಾದ ನಿರೋಧವಾಗುತ್ತದೆ, ತನ್ಹಾದ ನಿರೋಧದಿಂದ ಅಂಟುವಿಕೆಯ ನಿರೋಧವಾಗುತ್ತದೆ, ಅಂಟುವಿಕೆಯ ನಿರೋಧದಿಂದ ಭವದ ನಿರೋಧವಾಗುತ್ತದೆ, ಭವದ ನಿರೋಧದಿಂದ ಜನ್ಮದ ನಿರೋಧವಾಗುತ್ತದೆ, ಜನ್ಮದ ನಿರೋಧದಿಂದ
ದುಃಖರಾಶಿಯ ನಿರೋಧವಾಗುತ್ತದೆ
ಇದನ್ನು ಆಲಿಸಿದ ಬ್ರಾಹ್ಮಣ ಅನುಮೋದನೆ ಮಾಡಿ ತ್ರಿರತ್ನಗಳಿಗೆ
ಶರಣಾದನು.
ಲೋಕಾಯತಿಕಾ
ಬ್ರಾಹ್ಮಣರ ಪ್ರಶ್ನೆಗಳು
ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ವಿಹರಿಸುತ್ತಿದ್ದಾಗ, ಲೋಕ ಜ್ಞಾನವುಳ್ಳ ಬ್ರಾಹ್ಮಣನು ಅಲ್ಲಿಗೆ ಬಂದು ಭಗವಾನರಿಗೆ ವಂದಿಸಿ,
ಕುಶಲ ವಿಚಾರಿಸಿ ನಂತರ ಹೀಗೆ 4 ಪ್ರಶ್ನೆ ಹಾಕಿದನು:
ಭಗವಾನ್ ಸರ್ವವೂ ಇದೆಯೇ?
ಭಗವಾನ್ ಸರ್ವವೂ ಇಲ್ಲವೇ?
ಭಗವಾನ್ ಸರ್ವವೂ ಏಕವೇ?
ಭಗವಾನ್ ಸರ್ವವೂ ಬಹುವೇ?
ಆಗ ಭಗವಾನರು ಇವೆಲ್ಲವೂ ಅತಿರೇಕಕ್ಕೆ ಕೊಂಡೊಯ್ಯುತ್ತದೆ, ಪಕ್ಷಪಾತಕ್ಕೆ, ಪೂವರ್ಾಗ್ರಹ
ಪೀಡಿತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿ ನಿಜ ಧಮ್ಮವಾದ ಪಟಿಚ್ಚ ಸಮುಪ್ಪಾದವನ್ನು ಆತನಿಗೆ
ವಿವರಿಸಿದರು.
ಅಜ್ಞಾನದಿಂದ ಸಂಖಾರಗಳು ಉಂಟಾಗುತ್ತದೆ.
.............. ಹೀಗೆ ದುಃಖರಾಶಿಯ ನಿರೋಧವಾಗುತ್ತದೆ.
ಆಗ ಆ ಬ್ರಾಹ್ಮಣನು ಆನಂದಭರಿತನಾದನು, ಸತ್ಯವನ್ನು ಗ್ರಹಿಸಿದನು. ಅನುಮೋದನೆ ಮಾಡುತ್ತ ತ್ರಿರತ್ನಗಳಿಗೆ ಶರಣು ಹೋದನು.
ಬಲವೇ ಸತ್ಯವಲ್ಲ; ಸತ್ಯವೇ ಬಲ
ಭಿಕ್ಷುಗಳೇ, ಇವು 3 ಪಾಪದ ಬೇರುಗಳಾಗಿವೆ. ಯಾವುದವು? ಲೋಭ, ದ್ವೇಷ ಮತ್ತು ಮೋಹ.
ಲೋಭವು ಪಾಪವಾಗಿದೆ, ಲೋಭದಿಂದ ಮಾಡುವಂತಹ
ಕಾರ್ಯ, ಮಾತು ಮತ್ತು ಯೋಚನೆಯು ಪಾಪವಾಗಿದೆ. ಒಬ್ಬನು
ಲೋಭಯುಕ್ತನಾದರೆ ಅನಿಯಂತ್ರಿತನಾಗುತ್ತಾನೆ, ಆತನು ಅನ್ಯಾಯವಾಗಿ
ಪರರಿಗೆ ನೋವುಂಟು ಮಾಡುತ್ತಾನೆ, ಶಿಕ್ಷೆ
ನೀಡುತ್ತಾನೆ, ಬಂಧನವನ್ನುಂಟು ಮಾಡುತ್ತಾನೆ,
ಐಶ್ವರ್ಯ ಹಾನಿ ಮಾಡುತ್ತಾನೆ, ನಿಂದಿಸುತ್ತಾನೆ, ಗಡಿಪಾರು ಮಾಡುತ್ತಾನೆ.
ಏಕೆಂದರೆ ಆತನು ಬಲವೇ ಸತ್ಯ ಎಂಬ ಮಿಥ್ಯಾದೃಷ್ಟಿಯಿಂದ ಕೂಡಿರುತ್ತಾನೆ. ಅದು
ಪಾಪದೃಷ್ಟಿಕೋನವಾಗಿದೆ. ಹೀಗಾಗಿ ಲೋಭದಿಂದ ಪಾಪದ ಸ್ಥಿತಿಗಳು ಉಂಟಾಗಿ ದುಃಖಕ್ಕೆ ಎಡೆಮಾಡುತ್ತದೆ.
ಅದೇರೀತಿಯಲ್ಲಿ ದ್ವೇಷವು ನಾಶವಾಗಿದೆ... ಅದೇರೀತಿಯಲ್ಲಿ ಮೋಹವು ಪಾಪವಾಗಿದೆ... ಬಲವೇ ಸತ್ಯ ಎಂಬ
ಮಿಥ್ಯಾದೃಷ್ಟಿಯಿಂದ ದುಃಖಕ್ಕೆ ಎಡೆಮಾಡುತ್ತದೆ.
ಭಿಕ್ಷುಗಳೇ, ಅಂತಹವನು
ಭಾಷಣಕಾರನಾದರೆ ದುರಾದೃಷ್ಟಕರ ಸಂಗತಿಯಾಗುತ್ತದೆ. ಆತನು ಸುಳ್ಳನ್ನೇ, ಮಿಥ್ಯವನ್ನೇ, ಪ್ರತಿಪಾದಿಸುತ್ತಾನೆ.
ಅಸಂಬದ್ಧವನ್ನು ಮತ್ತು ಧಮ್ಮಕ್ಕೆ ವಿರುದ್ಧವಾದುದನ್ನು, ವಿನಯಕ್ಕೆ ಶಿಸ್ತಿಗೆ ವಿರುದ್ಧವಾದುದನ್ನೇ ಹೇಳುತ್ತಾನೆ, ಏಕೆ ಹೀಗೆ? ಏಕೆಂದರೆ ಆತನ ಪಾಪವೆಲ್ಲಾ
ಬಲವೇ ಸತ್ಯ ಎಂಬುದರ ಮೇಲೆ, ಆ ಮಿಥ್ಯಾದೃಷ್ಟಿಯ ಆಧಾರದ
ಮೇಲೆ ನಿಂತಿದೆ... ಅಂತಹ ಮಾನವ ಸಾವಿನ ನಂತರ ದುರ್ಗತಿಯಲ್ಲಿ ಹುಟ್ಟುತ್ತಾನೆ, ಅತಿ ದುಃಖಕ್ಕೆ ಸಿಲುಕುತ್ತಾನೆ.
ಆದರೆ ಸತ್ಯವೇ ಬಲ ಎಂಬ ಸಮ್ಮಾದೃಷ್ಟಿ ಹೊಂದಿರುವವನು ಆರ್ಯ
ಸತ್ಯಗಳನ್ನು ಅರಿಯುತ್ತಾನೆ. ಆತನು ಲೋಭದಿಂದ, ದ್ವೇಷದಿಂದ ಮತ್ತು
ಮೋಹದಿಂದ ಕೂಡಿರುವುದಿಲ್ಲ ಅವುಗಳಿಂದ ಮುಕ್ತನಾಗಿರುತ್ತಾನೆ. ಈ ಜನ್ಮದಲ್ಲೇ ಮುಕ್ತನಾಗುತ್ತಾನೆ.