Sunday, 8 November 2015

ಅತಿರೇಕದ ದೃಷ್ಟಿಕೋನಗಳು extreme views

ಅತಿರೇಕದ ದೃಷ್ಟಿಕೋನಗಳು:

                ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿರುವಾಗ ಬ್ರಾಹ್ಮಣನೊಬ್ಬನು ಭಗವಾನರಲ್ಲಿಗೆ ಬಂದು ವಂದಿಸಿ, ಕುಶಲಗಳನ್ನು ವಿನಿಮಯ ಮಾಡಿಕೊಂಡ ನಂತರ ಒಂದೆಡೆ ಕುಳಿತು ಈ ರೀತಿ ಪ್ರಶ್ನಿಸುತ್ತಾನೆ:
                ಭಗವಾನ್ ಕರ್ಮ ಮಾಡುವವನೇ ಅದರ ಫಲವನ್ನು ಅನುಭವಿಸುತ್ತಾನೆಯೇ?
                ಓ ಬ್ರಾಹ್ಮಣ, ಇದು ಒಂದು ಅತಿರೇಕವಾಗಿದೆ.
                ಹಾಗಾದರೆ ಭಗವಾನ್ ಕರ್ಮ ಮಾಡುವವನೇ ಬೇರೆ ಮತ್ತು ಅದರ ಫಲವನ್ನು ಅನುಭವಿಸುವವನು ಬೇರೆಯೇ?
                ಓ ಬ್ರಾಹ್ಮಣ, ಇದು ಒಂದು ಅತಿರೇಕವಾಗಿದೆ.
                 ಓ ಬ್ರಾಹ್ಮಣ, ತಥಾಗತರು ಅತಿರೇಕಗಳನ್ನು ಮೀರಿದ್ದಾರೆ, ಅತಿರೇಕಗಳು ಮೀರಿದ ಸತ್ಯದ ಮಧ್ಯಮ ಮಾರ್ಗವನ್ನು ಬೋಧಿಸುತ್ತೇನೆ. ನಿನಗೆ ಇದು ಪೂರ್ಣವಾಗಿ ಅರ್ಥವಾಗಬೇಕಾದರೆ ಗಮನವಿಟ್ಟು ಆಲಿಸು ಎಂದು ಪಟಿಚ್ಚಸಮುಪ್ಪಾದ ಬೋಧಿಸಿದರು.
                ಅಜ್ಞಾನದಿಂದ ಸಂಖಾರಗಳು (ಚಿತ್ತದ ಚಟುವಟಿಕೆಗಳು) ಉಂಟಾಗುತ್ತದೆ. ಸಂಖಾರಗಳಿಂದ ವಿಞ್ಞಾನ (ಅರಿವು) ಉಂಟಾಗುತ್ತದೆ. ವಿಞ್ಞಾನದಿಂದ ನಾಮರೂಪಗಳು (ಮನಸ್ಸು ಮತ್ತು ದೇಹ) ಉಂಟಾಗುತ್ತದೆ. ನಾಮರೂಪದಿಂದ ಆರು ಇಂದ್ರೀಯ ಆಧಾರಗಳು ಉಂಟಾಗುತ್ತದೆ. ಆರು ಇಂದ್ರೀಯ ಆಧಾರಗಳಿಂದ ಸ್ಪರ್ಶ ಉಂಟಾಗುತ್ತದೆ, ಸ್ಪರ್ಶದಿಂದ ವೇದನೆಗಳು ಉಂಟಾಗುತ್ತದೆ. ವೇದನೆಗಳಿಂದ ತನ್ಹಾ ಉಂಟಾಗುತ್ತದೆ, ತನ್ಹಾದಿಂದ ಅಂಟುವಿಕೆ ಉಂಟಾಗುತ್ತದೆ, ಅಂಟುವಿಕೆಯಿಂದ ಭವ ಉಂಟಾಗುತ್ತದೆ. ಭವದಿಂದ ಜನ್ಮ ಉಂಟಾಗುತ್ತದೆ. ಜನ್ಮದಿಂದ ದುಃಖರಾಶಿ ಉಂಟಾಗುತ್ತದೆ.
                ಆದರೆ ಅಜ್ಞಾನದ ನಿರೋಧದಿಂದ ಸಂಖಾರಗಳ ನಿರೋಧವಾಗುತ್ತದೆ, ಸಂಖಾರಗಳ ನಿರೋಧದಿಂದ ವಿಞ್ಞಾನದ ನಿರೋಧವಾಗುತ್ತದೆ, ವಿಞ್ಞಾನದ ನಿರೋಧದಿಂದ ನಾಮರೂಪದ ನಿರೋಧವಾಗುತ್ತದೆ. ನಾಮರೂಪದ ನಿರೋಧದಿಂದ ಆರು ಇಂದ್ರೀಯಗಳ ಆಧಾರಗಳು ನಿರೋಧವಾಗುತ್ತದೆ, ಆರು ಇಂದ್ರೀಯಗಳ ನಿರೋಧದಿಂದ ಸ್ಪರ್ಶವು ನಿರೋಧವಾಗುತ್ತದೆ, ಸ್ಪರ್ಶದ ನಿರೋಧದಿಂದ ವೇದನೆಗಳ ನಿರೋಧ ಆಗುತ್ತವೆ, ವೇದನೆಗಳ ನಿರೋಧದಿಂದ ತನ್ಹಾದ ನಿರೋಧವಾಗುತ್ತದೆ, ತನ್ಹಾದ ನಿರೋಧದಿಂದ ಅಂಟುವಿಕೆಯ ನಿರೋಧವಾಗುತ್ತದೆ, ಅಂಟುವಿಕೆಯ ನಿರೋಧದಿಂದ ಭವದ ನಿರೋಧವಾಗುತ್ತದೆ, ಭವದ ನಿರೋಧದಿಂದ ಜನ್ಮದ ನಿರೋಧವಾಗುತ್ತದೆ, ಜನ್ಮದ ನಿರೋಧದಿಂದ ದುಃಖರಾಶಿಯ ನಿರೋಧವಾಗುತ್ತದೆ
                ಇದನ್ನು ಆಲಿಸಿದ ಬ್ರಾಹ್ಮಣ ಅನುಮೋದನೆ ಮಾಡಿ ತ್ರಿರತ್ನಗಳಿಗೆ ಶರಣಾದನು.
ಲೋಕಾಯತಿಕಾ ಬ್ರಾಹ್ಮಣರ ಪ್ರಶ್ನೆಗಳು
                ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ವಿಹರಿಸುತ್ತಿದ್ದಾಗ, ಲೋಕ ಜ್ಞಾನವುಳ್ಳ ಬ್ರಾಹ್ಮಣನು ಅಲ್ಲಿಗೆ ಬಂದು ಭಗವಾನರಿಗೆ ವಂದಿಸಿ, ಕುಶಲ ವಿಚಾರಿಸಿ ನಂತರ ಹೀಗೆ 4 ಪ್ರಶ್ನೆ ಹಾಕಿದನು:
                ಭಗವಾನ್ ಸರ್ವವೂ ಇದೆಯೇ?
                ಭಗವಾನ್ ಸರ್ವವೂ ಇಲ್ಲವೇ?
                ಭಗವಾನ್ ಸರ್ವವೂ ಏಕವೇ?
                ಭಗವಾನ್ ಸರ್ವವೂ ಬಹುವೇ?
                ಆಗ ಭಗವಾನರು ಇವೆಲ್ಲವೂ ಅತಿರೇಕಕ್ಕೆ ಕೊಂಡೊಯ್ಯುತ್ತದೆ, ಪಕ್ಷಪಾತಕ್ಕೆ, ಪೂವರ್ಾಗ್ರಹ ಪೀಡಿತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿ ನಿಜ ಧಮ್ಮವಾದ ಪಟಿಚ್ಚ ಸಮುಪ್ಪಾದವನ್ನು ಆತನಿಗೆ ವಿವರಿಸಿದರು.
                ಅಜ್ಞಾನದಿಂದ ಸಂಖಾರಗಳು ಉಂಟಾಗುತ್ತದೆ.          
..............             ಹೀಗೆ ದುಃಖರಾಶಿಯ ನಿರೋಧವಾಗುತ್ತದೆ.
                ಆಗ ಆ ಬ್ರಾಹ್ಮಣನು ಆನಂದಭರಿತನಾದನು, ಸತ್ಯವನ್ನು ಗ್ರಹಿಸಿದನು. ಅನುಮೋದನೆ ಮಾಡುತ್ತ ತ್ರಿರತ್ನಗಳಿಗೆ ಶರಣು ಹೋದನು.
ಬಲವೇ ಸತ್ಯವಲ್ಲ; ಸತ್ಯವೇ ಬಲ
                ಭಿಕ್ಷುಗಳೇ, ಇವು 3 ಪಾಪದ ಬೇರುಗಳಾಗಿವೆ. ಯಾವುದವು? ಲೋಭ, ದ್ವೇಷ ಮತ್ತು ಮೋಹ.
                ಲೋಭವು ಪಾಪವಾಗಿದೆ, ಲೋಭದಿಂದ ಮಾಡುವಂತಹ ಕಾರ್ಯ, ಮಾತು ಮತ್ತು ಯೋಚನೆಯು ಪಾಪವಾಗಿದೆ. ಒಬ್ಬನು ಲೋಭಯುಕ್ತನಾದರೆ ಅನಿಯಂತ್ರಿತನಾಗುತ್ತಾನೆ, ಆತನು ಅನ್ಯಾಯವಾಗಿ ಪರರಿಗೆ ನೋವುಂಟು ಮಾಡುತ್ತಾನೆ, ಶಿಕ್ಷೆ ನೀಡುತ್ತಾನೆ, ಬಂಧನವನ್ನುಂಟು ಮಾಡುತ್ತಾನೆ, ಐಶ್ವರ್ಯ ಹಾನಿ ಮಾಡುತ್ತಾನೆ, ನಿಂದಿಸುತ್ತಾನೆ, ಗಡಿಪಾರು ಮಾಡುತ್ತಾನೆ. ಏಕೆಂದರೆ ಆತನು ಬಲವೇ ಸತ್ಯ ಎಂಬ ಮಿಥ್ಯಾದೃಷ್ಟಿಯಿಂದ ಕೂಡಿರುತ್ತಾನೆ. ಅದು ಪಾಪದೃಷ್ಟಿಕೋನವಾಗಿದೆ. ಹೀಗಾಗಿ ಲೋಭದಿಂದ ಪಾಪದ ಸ್ಥಿತಿಗಳು ಉಂಟಾಗಿ ದುಃಖಕ್ಕೆ ಎಡೆಮಾಡುತ್ತದೆ. ಅದೇರೀತಿಯಲ್ಲಿ ದ್ವೇಷವು ನಾಶವಾಗಿದೆ... ಅದೇರೀತಿಯಲ್ಲಿ ಮೋಹವು ಪಾಪವಾಗಿದೆ... ಬಲವೇ ಸತ್ಯ ಎಂಬ ಮಿಥ್ಯಾದೃಷ್ಟಿಯಿಂದ ದುಃಖಕ್ಕೆ ಎಡೆಮಾಡುತ್ತದೆ.
                ಭಿಕ್ಷುಗಳೇ, ಅಂತಹವನು ಭಾಷಣಕಾರನಾದರೆ ದುರಾದೃಷ್ಟಕರ ಸಂಗತಿಯಾಗುತ್ತದೆ. ಆತನು ಸುಳ್ಳನ್ನೇ, ಮಿಥ್ಯವನ್ನೇ, ಪ್ರತಿಪಾದಿಸುತ್ತಾನೆ. ಅಸಂಬದ್ಧವನ್ನು ಮತ್ತು ಧಮ್ಮಕ್ಕೆ ವಿರುದ್ಧವಾದುದನ್ನು, ವಿನಯಕ್ಕೆ ಶಿಸ್ತಿಗೆ ವಿರುದ್ಧವಾದುದನ್ನೇ ಹೇಳುತ್ತಾನೆ, ಏಕೆ ಹೀಗೆ? ಏಕೆಂದರೆ ಆತನ ಪಾಪವೆಲ್ಲಾ ಬಲವೇ ಸತ್ಯ ಎಂಬುದರ ಮೇಲೆ, ಆ ಮಿಥ್ಯಾದೃಷ್ಟಿಯ ಆಧಾರದ ಮೇಲೆ ನಿಂತಿದೆ... ಅಂತಹ ಮಾನವ ಸಾವಿನ ನಂತರ ದುರ್ಗತಿಯಲ್ಲಿ ಹುಟ್ಟುತ್ತಾನೆ, ಅತಿ ದುಃಖಕ್ಕೆ ಸಿಲುಕುತ್ತಾನೆ.
                ಆದರೆ ಸತ್ಯವೇ ಬಲ ಎಂಬ ಸಮ್ಮಾದೃಷ್ಟಿ ಹೊಂದಿರುವವನು ಆರ್ಯ ಸತ್ಯಗಳನ್ನು ಅರಿಯುತ್ತಾನೆ. ಆತನು ಲೋಭದಿಂದ, ದ್ವೇಷದಿಂದ ಮತ್ತು ಮೋಹದಿಂದ ಕೂಡಿರುವುದಿಲ್ಲ ಅವುಗಳಿಂದ ಮುಕ್ತನಾಗಿರುತ್ತಾನೆ. ಈ ಜನ್ಮದಲ್ಲೇ ಮುಕ್ತನಾಗುತ್ತಾನೆ.

ಅಂತಗಹಿಕಾ ಮಿಥ್ಯಾದೃಷ್ಟಿಗಳು Buddha was beyond to views


ಅಂತಗಹಿಕಾ ಮಿಥ್ಯಾದೃಷ್ಟಿಗಳು

                ಒಮ್ಮೆ ಪರಿವ್ರಾಜಕ ವಚ್ಛಗೊತ್ತನು ಆಗ ಪ್ರಚಲಿತವಾಗಿದ್ದ ದೃಷ್ಟಿಗಳ ಬಗೆಗಳನ್ನು ಭಗವಾನರಿಗೆ ತಿಳಿಸಿ ಇವುಗಳಲ್ಲಿ ಯಾವುದಾದರೂ ಭಗವಾನರು ಹೊಂದಿದ್ದಾರೆಯೆ? ಎಂದು ಕೇಳಿದನು.
                ಆಗ ಭಗವಾನರು ಅಂತಹ ದೃಷ್ಟಿಗಳು ಹೊಂದಿಲ್ಲವೆಂದರು.
ಅವೆಂದರೆ:
1.            ಲೋಕವು ಶಾಶ್ವತ ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
2.            ಲೋಕವು ಅಶಾಶ್ವತ ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
3.            ಲೋಕವು ಅಂತ್ಯವುಳ್ಳದ್ದು ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
4.            ಲೋಕವು ಅನಂತವಾದದ್ದು, ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
5.            ಜೀವ ಮತ್ತು ಶರೀರ ಒಂದೇ, ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
6.            ಜೀವ ಮತ್ತು ಶರೀರ ಬೇರೆ ಬೇರೆ, ಇದು ಸತ್ಯ, ಮಿಕ್ಕೆಲ್ಲಾ ಮಿಥ್ಯಾ.
7.            ತಥಾಗತರು ಸಾವಿನ ನಂತರ ಇರುತ್ತಾರೆ
8.            ತಥಾಗತರು ಸಾವಿನ ನಂತರ ಇರುವುದಿಲ್ಲ.
9.            ತಥಾಗತರು ಸಾವಿನ ನಂತರ ಇರುತ್ತಾರೆ ಮತ್ತು ಇಲ್ಲ.
10.          ತಥಾಗತರು ಸಾವಿನ ನಂತರ ಇರುವುದಿಲ್ಲ ಮತ್ತು ಇಲ್ಲದೆಯೂ ಇಲ್ಲ.
                ಆಗ ವಚ್ಚಗೊತ್ತ ಹೀಗೆ ಕೇಳಿದನು: ಪೂಜ್ಯ ಗೋತಮರು ಈ ದೃಷ್ಟಿಗಳಲ್ಲಿ ಯಾವ ಅಪಾಯಗಳನ್ನು ಕಂಡವರಾಗಿ ಇವನ್ನು ತೊರೆದಿರುವರು?
                ಆಗ ಭಗವಾನರು ಅದಕ್ಕೆ ಹೀಗೆ ಉತ್ತರಿಸಿದರು:
                ವಚ್ಚಗೊತ್ತ, ಇವೆಲ್ಲವೂ ಕಲ್ಪನಾತ್ಮಕ ದೃಷ್ಟಿಕೋನಕ್ಕೆ ಹೋಗುತ್ತದೆ. ಸತ್ಯವಲ್ಲ, ಪೂರ್ಣ ಸತ್ಯವಲ್ಲ, ಅಂಟುವಿಕೆಗೆ ಹೋಗುತ್ತದೆ. ಇವೆಲ್ಲವೂ ಹಾದಿ ತಪ್ಪಿಸುವ ಕಾಡಿನಂತಹವು ಆಗಿದೆ, ತಿರುಚಿಸಲ್ಪಟ್ಟಿವೆ. ದೃಷ್ಟಿಗಳ ಬಂಧನಗಳಾಗಿವೆ, ದುಃಖವನ್ನು ತರುವಂತಹವು ಆಗಿವೆ, ವ್ಯಥೆಯನ್ನು ತರುತ್ತದೆ. ಕ್ಷೊಭೆಯನ್ನುಂಟು ಮಾಡುತ್ತವೆ. ಇವು ವಿಕರ್ಷಣೆಗೆ, ವಿರಾಗಕ್ಕೆ, ನಿರೋಧಕ್ಕೆ, ಉಪಶಮನಕ್ಕೆ, ಅಭಿಜ್ಞಾಗೆ, ಸಂಭೋಧಿಗೆ ಮತ್ತು ನಿಬ್ಬಾಣಕ್ಕೆ ಸ್ವಲ್ಪವೂ ಸಹಕಾರಿಯಾಗಿಲ್ಲ. ಈ ಎಲ್ಲಾ ಅಪಾಯಗಳನ್ನು ಕಂಡು ನಾನು ಈ ದೃಷ್ಟಿಗಳಿಂದ ಪೂರ್ಣವಾಗಿ ದೂರವಾಗಿದ್ದೇನೆ.
                ಆಗ ಬುದ್ಧಿವಂತ ವಚ್ಚ ಅಸಾಧಾರಣ ಪ್ರಶ್ನೆ ಹಾಕುತ್ತಾನೆ: ಪೂಜ್ಯ ಭಗವಾನರಿಗೆ ಯಾವುದಾದರೂ ದೃಷ್ಟಿಕೋನ (ಸಿದ್ಧಾಂತ/ಕಲ್ಪನಾತ್ಮಕ ಅಭಿಪ್ರಾಯ/ಸಾಕ್ಷಾತ್ಕಾರವಲ್ಲದ ಕೇವಲ ತಿಳುವಳಿಕೆ) ಇದೆಯೇ?
                ಆಗ ಭಗವಾನರು ಈ ರೀತಿ ಉತ್ತರಿಸುತ್ತಾರೆ: ವಚ್ಚ, ದೃಷ್ಟಿಕೋನ ಇದು ತಥಾಗತರಿಗೆ ಸಂಬಂಧಪಡುವುದಿಲ್ಲ. ವಚ್ಚ, ತಥಾಗತರಿಗೆ ಸಾಕ್ಷಾತ್ಕಾರವಾಗಿರುವುದು ಏನೆಂದರೆ ದೇಹದ ಉದಯಿಸುವಿಕೆ ಮತ್ತು ಅದರ ನಾಶ. ವೇದನೆಗಳ ಉದಯಿಸುವಿಕೆ ಮತ್ತು ಅದರ ಅಳಿಯುವಿಕೆ. ಸನ್ಯಾ (ಗ್ರಹಿಕೆ)ಗಳ ಉದಯಿಸುವಿಕೆ ಮತ್ತು ಅದರ ಅಳಿಯುವಿಕೆ ಮತ್ತು ಸಂಖಾರ ಮತ್ತು ವಿಞ್ಞಾನದ ಉದಯಿಸುವಿಕೆ ಮತ್ತು ಅದರ ಅಳಿಯುವಿಕೆ. ಓ ವಚ್ಚ, ಇವುಗಳ ಪ್ರತಿ ಹಂತವನ್ನು ಸ್ಪಷ್ಟವಾಗಿ ಅರಿತಿರುವುದರಿಂದಲೇ ತಥಾಗತರು ಎಲ್ಲಾ ಬಗೆಯ ದೃಷ್ಟಿಕೋನಗಳನ್ನು, ಅಹಂಕಾರಗಳನ್ನು, ಪ್ರವೃತ್ತಿಗಳನ್ನು ಕ್ಷಯಿಸಿ, ವಿರಾಗ, ನಿರೋಧ, ತ್ಯಾಗ, ವಿಮುಕ್ತಿಯನ್ನು ಹೊಂದಿದ್ದಾರೆ

ಬುದ್ಧರ ವಿಷಾಧ :

ದೇವದಹ ಸುತ್ತದಲ್ಲಿ ಭಗವಾನರು ಸಹಾ ದೇಹದಂಡನೆ ಮಾಡುತ್ತಿರುವ ಪಂಥಿಯರನ್ನು ಕುರಿತು ಈ ರೀತಿ ಹೇಳುತ್ತಾರೆ: ಓ ಭಿಕ್ಷುಗಳೇಜೀವಿಗಳು ಅನುಭವಿಸುತ್ತಿರುವ ಸುಖಕ್ಕೆ ಮತ್ತು ದುಃಖಕ್ಕೆ ಸೃಷ್ಟಿಕರ್ತನ ಸೃಷ್ಟಿಯ ಪರಿಣಾಮವೆಂದು ತಿಳಿಯಬಹುದಾದರೆಆಗ ಖಂಡಿತವಾಗಿಯು ಈ ನಗ್ನ ಸಾಧುಗಳು ಪಾಪದಿಂದ ಕೂಡಿದ ದೇವರಿಂದಲೇ ಸೃಷ್ಟಿಯಾಗಿರಬೇಕು. ಏಕೆಂದರೆ ಅವರು ಅಂತಹ ಭಯಾನಕ ದುಃಖ ಅನುಭವಿಸುತ್ತಿದ್ದಾರೆ.

ಮಿಥ್ಯಾ ದೃಷ್ಟಿಗಳಿಗೆ ಬೋಧಿಸತ್ವರ ಖಂಡನೆ the bodhisatta's refute on wrong views

ಮಿಥ್ಯಾ ದೃಷ್ಟಿಗಳಿಗೆ ಬೋಧಿಸತ್ವರ ಖಂಡನೆ


                ಮಿಥ್ಯಾದೃಷ್ಟಿಗಳನ್ನು ಕೇವಲ ಬುದ್ಧರು ಮಾತ್ರವಲ್ಲ, ತಮ್ಮ ಹಿಂದಿನ ಜನ್ಮಗಳಲ್ಲಿ ಬೋಧಿಸತ್ವರಾಗಿದ್ದಾಗ ಸಹಾ ಖಂಡಿಸಿದ್ದರು. ಆಗ ಪ್ರಚಲಿತವಾಗಿದ್ದ ಅಹೇತುವಾದಿ (ಕಾರಣವೇ ಇಲ್ಲ ಎನ್ನುವ ಮತ), ಇಸ್ಸರ ಕತೃವಾದಿ (ಎಲ್ಲದಕ್ಕೂ ದೇವರೇ ಕಾರಣ ಎನ್ನುವ ಮತ) ಪೂರ್ವಕೃತವಾದಿ (ಎಲ್ಲದಕ್ಕೂ ಹಿಂದಿನ ಜನ್ಮದ ಕರ್ಮಗಳೇ ಕಾರಣವೆನ್ನುವ ಮತ), ಉಚ್ಛೇದವಾದಿ (ಪರಲೋಕವಿಲ್ಲ, ಎಲ್ಲವೂ ಸತ್ತನಂತರ ನಾಶ ಎನ್ನುವ ಮತ) ಮತ್ತು ಕ್ಷತವಿಧವಾದಿಗಳಿದ್ದರು. ಅವರಿಗೆ ಬೋಧಿಸತ್ತ ಈ ಕೆಳಕಂಡಂತೆ ಖಂಡಿಸಿದ್ದರು. ಈ ಘಟನೆಯು ಮಹಾಬೋಧಿ ಜಾತಕದಲ್ಲಿ ಕಂಡುಬರುತ್ತದೆ.
ಅಹೇತುವಾದದ ಖಂಡನೆ : ಎಲ್ಲವೂ ಸ್ವಭಾವದಿಂದಲೋ, ಅನಿಚ್ಚೆಯಿಂದಲೋ, ಕಾರಣರಹಿತದಿಂದಲೋ, ಹೇತುವಿಲ್ಲದೆಯೇ ನಡೆಯುವುದಾದರೆ ಹತ್ಯೆಯು ಅಪರಾಧವಲ್ಲ ಎಂದಾಯಿತು, ಏಕೆಂದರೆ ಅದು ಆಕಸ್ಮಿಕ, ಇಲ್ಲಿ ಯಾರು ದೋಷಿಯಲ್ಲ.
ಇಸ್ಸರ ಕತೃವಾದಿಯ ಖಂಡನೆ : ಇಡೀ ಲೋಕದ ವ್ಯವಸ್ಥೆಯು ಸರ್ವಶಕ್ತ ದೇವರಿಂದಲೇ ಆಗಿದ್ದರೆ, ಆತನ ಇಚ್ಛೆಯಂತೆಯೇ ಸೌಭಾಗ್ಯ ಮತ್ತು ವಿಪತ್ತು ಬರುವುದಾದರೆ, ಒಳ್ಳೆಯದು, ಕೆಟ್ಟದ್ದು ಎಲ್ಲಕ್ಕೂ, ಪ್ರತಿಜೀವಿಯ ಸುಖ-ದುಃಖಕ್ಕೂ ಆತನೇ ಕಾರಣವೆನ್ನುವದಾಗಿದ್ದರೆ, ಮಾನವ ಕೇವಲ ನಿಮತ್ತ ಮಾತ್ರ, ಕೇವಲ ಆಜ್ಞಾ ಪರಿಪಾಲಕನಾಗಿದ್ದಾನೆ. ಆ ದೇವರೇ ಪಾಪದ ಕಲೆಯನ್ನು ಹೊಂದಿ ದೋಷಿಯಾಗುತ್ತಾನೆ.
ಪೂರ್ವಕೃತವಾದಿಯ ಖಂಡನೆ: ಪೂರ್ವಜನ್ಮದ ಕರ್ಮದ ಕಾರಣದಿಂದಲೇ ಇಲ್ಲೂ ಸುಖ-ದುಃಖಗಳು ಉಂಟಾಗುತ್ತಿದ್ದರೆ, ಇಲ್ಲಿನ ಪಾಪಕರ್ಮವೂ ಸಹಾ, ಹಿಂದಿನ ಕರ್ಮಕ್ಕೆ ಋಣಮುಕ್ತವಾಗಲು ಕಾರಣವಾಗುತ್ತದೆ. ಹೀಗಿರುವಾಗ ಇಲ್ಲಿಯ ಪಾಪ ಯಾರನ್ನು ಯಾರಿಗೆ ಸ್ಪಶರ್ಿಸುತ್ತದೆ?
ಉಚ್ಛೇದವಾದಿಯ ಖಂಡನೆ : ನಾಲ್ಕು ಮಹಾಭೂತಗಳಿಂದ ಜೀವೋತ್ಪತ್ತಿ ಆಗುವುದು. ಇಲ್ಲಿ ಬದುಕಿರುವತನಕ ಜೀವನ, ಪರಲೋಕವಿಲ್ಲ. ಹಾಗಿರುವಾಗ ಪಾಪಫಲವಿಲ್ಲದಿರುವಾಗ ಪಾಪ ಮಾಡಿದರೂ ತಪ್ಪಿಲ್ಲದಿರುವಾಗ ಇಲ್ಲಿ ಪಾಪವು ಯಾರನ್ನು ಮುಟ್ಟುತ್ತದೆ.
ಕ್ಷತವಿಧಿವಾದಿಯ ಖಂಡನೆ : ಪರಲೋಕವಿಲ್ಲದಿರುವಾಗ ಬುದ್ಧಿವಂತನು ತನ್ನ ಸ್ವಾರ್ಥ ಸಾಧನೆಗೆ, ಪ್ರಯೋಜನವಿದ್ದಲ್ಲಿ ಯಾರಿಗೆ ಬೇಕಾದರೂ ಕೊಲ್ಲಬಹುದು ಎಂದು ಹೇಳುವ ಪಾಪ ಪ್ರಚೋದಕ ಸಿದ್ಧಾಂತಕ್ಕೆ ಧಿಕ್ಕಾರವಿರಲಿ ಎಂದು ಖಂಡಿಸಿ ತಮ್ಮ ಸಿದ್ಧಾಂತ ಹೀಗೆ ಹೇಳುತ್ತಾರೆ.
ಬೋಧಿಸತ್ವರ ಸಿದ್ಧಾಂತ : ಯಾವ ಮರದ ನೆರಳಿನಲ್ಲಿ ಕುಳಿತುಕೊಳ್ಳುತ್ತೇವೆಯೋ ಅಥವಾ ಮಲಗಿರುತ್ತೇವೆಯೋ ಆ ವೃಕ್ಷದ ಕೊಂಬೆಯನ್ನು ಸಹಾ ಮುರಿಯಬಾರದು. ಮಿತ್ರದ್ರೋಹಪಾತಕವಾದುದು.
ಭೂರಿದತ್ತ ಜಾತಕದಲ್ಲೂ ಬೋಧಿಸತ್ವರ ಖಂಡನೆ
                ಯಾರಿಗೆ ಕಣ್ಣಿದೆಯೋ, ಆತನು ರೋಗಗ್ರಸ್ಥ ದೃಶ್ಯಗಳನ್ನು ಕಾಣುತ್ತಾನೆ. ಏತಕ್ಕಾಗಿ ಸೃಷ್ಟಿಕರ್ತನು ತನ್ನ ಜೀವಿಗಳನ್ನು ಸರಿಯಾಗಿ ಸ್ಥಾಪಿಸಲಿಲ್ಲ?
                ಏತಕ್ಕಾಗಿ ಆತನ ಮಿತಿಯೇ ಇಲ್ಲದ ವಿಶಾಲ ಶಕ್ತಿಯು ಕುಂಠಿತಗೊಂಡಿದೆ. ಏಕೆ ಆತನ ಕೈಯು ಹಾರೈಸಲು ಅಪರೂಪಕ್ಕೊಮ್ಮೆ ಮುಂದಾಗುವುದು?
                ಏತಕ್ಕಾಗಿ ಎಲ್ಲಾ ಜೀವಿಗಳು ನೋವುಗಳಿಗೆ ಬಲಿಯಾಗುತ್ತವೆ? ಏಕೆ ಆತನು ಎಲ್ಲರಿಗೂ ಸುಖವನ್ನು ನೀಡಬಾರದು?
                ಏತಕ್ಕಾಗಿ ಮೋಸಗಾರರು, ಸುಳ್ಳುಗಾರರು ಮತ್ತು ಮೂರ್ಖರು ಉನ್ನತಿ ಪಡೆಯುತ್ತಾರೆ? ಏಕೆ ಮಿಥ್ಯವೇ ಜಯಗಳಿಸುತ್ತದೆ ಮತ್ತು ಸತ್ಯ ಹಾಗು ನ್ಯಾಯ ಸೋಲುತ್ತದೆ?

                ನಾನು ನಿಮ್ಮ ಸೃಷ್ಟಿಕರ್ತ ದೇವರನ್ನು ಅನ್ಯಾಯಿಗಳಲ್ಲಿ ಒಬ್ಬರೆಂದು ತೀಮರ್ಾನಿಸುತ್ತೇನೆ. ಏಕೆಂದರೆ ಈ ಜಗತ್ತು ತಪ್ಪಾದ ರಕ್ಷಣೆಯಲ್ಲಿ ಇರುವಂತೆ ಸೃಷ್ಟಿಸಿದ್ದಾನೆ.

ಮೂರು ಬಗೆಯ ಮಿಥ್ಯಾ ಸಿದ್ಧಾಂತಗಳು 3 types of wrong theories

ಮೂರು ಬಗೆಯ ಮಿಥ್ಯಾ ಸಿದ್ಧಾಂತಗಳು

                ಭಿಕ್ಷುಗಳೇ ಮೂರು ಬಗೆಯ ಮಿಥ್ಯಾ ಸಿದ್ಧಾಂತಗಳಿವೆ. ಅವುಗಳನ್ನು ಪ್ರಾಜ್ಞರು ಗಂಭೀರವಾಗಿ ಪ್ರಶ್ನಿಸಿದಾಗ, ಪರಿಶೀಲಿಸಿದಾಗ ಮತ್ತು ಚಚರ್ಿಸಿದಾಗ, ಪಟ್ಟು ಹಿಡಿದಾಗ ಅವುಗಳ ಟೊಳ್ಳು ದೃಢೀಕೃತವಾಯಿತು. ಯಾವುದವು ಮೂರು ?
ಪುಚ್ಚೇಕತ ಹೇತು : (1) ಕೆಲವು ಸಮಣ ಬ್ರಾಹ್ಮಣರಿದ್ದಾರೆ. ಅವರು ಈ ರೀತಿಯ ದೃಷ್ಟಿಯನ್ನು ಹೊಂದಿರುತ್ತಾರೆ. ಯಾವುದೆಲ್ಲವು ಸುಖ ಅಥವಾ ದುಃಖ ಅಥವಾ ತಟಸ್ಥ ವೇದನೆಗಳನ್ನು ವ್ಯಕ್ತಿಯೊಬ್ಬನು ಅನುಭವಿಸುತ್ತಾನೋ ಅದೆಲ್ಲವೂ ಆತನ ಹಿಂದಿನ ಕರ್ಮಗಳಿಂದಲೇ ಆಗುತ್ತಿವೆ.
ಇಸ್ಸರ ನಿಮ್ಮಾನಹೇತು : (2) ಮತ್ತೆ ಕೆಲವು ಸಮಣ ಬ್ರಾಹ್ಮಣರಿದ್ದಾರೆ ಅವರು ಈ ರೀತಿಯ ಮಿಥ್ಯಾದೃಷ್ಟಿಯನ್ನು ಬೋಧಿಸುತ್ತಾರೆ: ಯಾವುದೆಲ್ಲವು ಸುಖ ಅಥವಾ ದುಃಖ ಅಥವಾ ತಟಸ್ಥ ವೇದನೆಗಳನ್ನು ವ್ಯಕ್ತಿಯೊಬ್ಬನು ಅನುಭವಿಸುತ್ತಿದ್ದಾನೋ ಅವೆಲ್ಲವೂ ಈಸ್ಸರ ನಿಮರ್ಾಣ ಹೇತು (ಸೃಷ್ಟಿಕರ್ತನಿಂದ) ಅಗಿದೆ.
ಅಹೇತು : (3) ಮತ್ತೆ ಕೆಲವು ಸಮಣ ಬ್ರಾಹ್ಮಣರು ಈ ರೀತಿಯ ಮಿಥ್ಯಾದೃಷ್ಟಿಯನ್ನು ಹೊಂದಿದಾರೆ. ಯಾವುದೆಲ್ಲವೂ ಸುಖ ಅಥವಾ ದುಃಖ ಅಥವಾ ತಟಸ್ಥತೆಯನ್ನು ವ್ಯಕ್ತಿಗಳು ಅನುಭವಿಸುತ್ತಿರುವರೋ ಅವೆಲ್ಲಕ್ಕೆ ಕಾರಣವಿಲ್ಲವಾಗಿದೆ. (ಅಕಾರಣೀಯ/ಅಹೇತುಕ ದಿಟ್ಟಿ).
                ಭಿಕ್ಷುಗಳೇ, ನಾನು ಹಿಂದಿನ ಜನ್ಮದ ಕರ್ಮಗಳೇ ಕಾರಣ ಎನ್ನುವವರ ಬಳಿಗೆ ಹೋದೆನು ಮತ್ತು ಹೀಗೆ ಹೇಳಿದೆನು: ಇದು ನಿಜವೇ, ನೀವು ಬೋಧಿಸುವ ಪ್ರಕಾರ ವ್ಯಕ್ತಿಯೊಬ್ಬನ ಎಲ್ಲಾ ಸುಖ ಅಥವಾ ದುಃಖಗಳಿಗೆ ಹಿಂದಿನ ಜನ್ಮಗಳೇ ಕಾರಣ ಎಂದು ಹೇಳಿರುವಿರಿ ಎಂದು ಕೇಳಿದ್ದೇನೆ. ಇದು ನಿಜವೇ?
                ಅವರು ಹೌದು ಎಂದು ಉತ್ತರಿಸಿದರು.
                ಆಗ ನಾನು ಅವರಿಗೆ ಹೀಗೆ ಹೇಳಿದೆನು: ಹಾಗಿದ್ದರೆ ಹಿಂದಿನ ಜನ್ಮದ ಕರ್ಮಫಲದಿಂದಲೇ ಮಾನವನು ಕೊಲೆಗಾರ, ಕಳ್ಳ, ವ್ಯಭಿಚಾರಿ, ಸುಳ್ಳ, ಮದ್ಯವ್ಯಸನಿ, ಚಾಡಿಕೋರ, ಒರಟ, ಕಾಡುಹರಟೆಗಾರ, ದುರಾಸೆಪೀಡಿತ, ದ್ವೇಷಿ ಮತ್ತು ಮಿಥ್ಯಾದೃಷ್ಟಿ ಉಳ್ಳವನಾಗುತ್ತಾನೆ. ಹೀಗಾಗಿ ಯಾರು ಕೆಲವು ಕಾರಣಗಳಿಂದಾಗಿ ಹಿಂದಿನ ಜನ್ಮದಲ್ಲಿ ಹಿಂದೆ ಬಿದ್ದಿದ್ದರೋ ಅವರಿಗೆ ಈಗಲೂ ಕಾರ್ಯ ಮಾಡುವ ಇಚ್ಛೆಯಿರುವುದಿಲ್ಲ. ಅವರು ಕಾರ್ಯಗಳನ್ನು ಮಾಡುವುದಿಲ್ಲ. ಅವರಿಗೆ ಇದು ಮಾಡಲು ಅಥವಾ ಅದು ವಜರ್ಿಸಲು ಅಗತ್ಯವೇ ಕಾಣಿಸುವುದಿಲ್ಲ. ಹೀಗಾಗಿ ನಿಮ್ಮ ಸತ್ಯದ ಪ್ರಕಾರ ಏನೂ ಸಾಧಿಸಲು ಅಥವಾ ವಜರ್ಿಸಲು ಪ್ರಯತ್ನಪಡುವ ಹಾಗೇ ಇಲ್ಲ. ಏಕೆಂದರೆ ಎಲ್ಲವೂ ಹಿಂದಿನ ಕರ್ಮದಂತೆ ನಿಗಧಿತವಾಗುತ್ತದೆ. ಹೀಗಿರುವಾಗ ನಿಮಗೆ ಶ್ರಮಣ ಜೀವನವು ಅನ್ವಯವಾಗುವುದಿಲ್ಲ. ನೀವೇ ದ್ವಂದ್ವದಲ್ಲಿ, ಅವ್ಯವಸ್ಥಿತ ಚಿತ್ತದಿಂದ (ಜೀವನದಿಂದ) ಕೂಡಿರುವಿರಿ.
                ಮತ್ತು ಭಿಕ್ಷುಗಳೇ, ಯಾರು ಇಂತಹ ಮಿಥ್ಯಾ ದೃಷ್ಟಿಗಳನ್ನು ಹೊಂದಿದ್ದರೂ ಅವರಿಗೆ ಇದು ನನ್ನ ವಿಚಾರಪೂರಿತವಾದ ಖಂಡನೆಯಾಗಿತ್ತು.
                ಮತ್ತೆ ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು ಎಲ್ಲದಕ್ಕೂ ದೇವರೇ ಕಾರಣ ಎಂದು ಪ್ರತಿಪಾದಿಸುತ್ತಿದ್ದರೊ ಅವರ ಬಳಿಗೆ ನಾನು ಹೋದೆನು ಮತ್ತು ಹೀಗೆ ಕೇಳಿದೆನು: ಇದು ನಿಜವೇ? ನೀವುಗಳು ಯಾವುದೆಲ್ಲವೂ ಸುಖ-ದುಃಖಗಳನ್ನು ವ್ಯಕ್ತಿಯು ಅನುಭವಿಸುತ್ತಿರುವನೋ ಅದೆಲ್ಲವೂ ದೇವರಿಂದ (ಸೃಷ್ಟಿಕರ್ತನಿಂದ) ಆಗುತ್ತಿವೆ ಎಂದು ಹೇಳುವಿರಿ ಎಂದು ಕೇಳಿದ್ದೇನೆ. ಇದು ನಿಜವೇ? ಅವರು ಅದಕ್ಕೆ ಹೌದೆಂದರು.
                ಆಗ ನಾನು ಅವರಿಗೆ ಹೀಗೆ ಹೇಳಿದೆನು: ನಿಮ್ಮ ಸಿದ್ಧಾಂತದ ಪ್ರಕಾರ ಮಾನವ ಕೊಲೆಗಾರನಾಗುವುದು, ಕಳ್ಳನಾಗುವುದು, ವ್ಯಭಿಚಾರಿಯಾಗುವುದು, ಸುಳ್ಳುಗಾರನಾಗುವುದು, ಮದ್ಯವ್ಯಸನಿಯಾಗುವುದು... ಇವೆಲ್ಲಕ್ಕೂ ದೇವರೇ ಕಾರಣಕರ್ತನಾಗುತ್ತಾನೆ. ಮತ್ತು ಯಾರೆಲ್ಲರೂ ದುಃಖಿತರೋ (ಹಿಂದೆ ಬಿದ್ದಿರುವರೋ) ಅದಕ್ಕೂ ದೇವರೇ ಕಾರಣಕರ್ತ ನಾಗುತ್ತಾನೆ. ನಿಮ್ಮ ಸಿದ್ಧಾಂತದ ಪ್ರಕಾರ ಇಲ್ಲಿ ಯಾರು ಇಚ್ಛೆಪಡಲಾರರು. ಪ್ರಯತ್ನವನ್ನು ಪಡಲಾರರು. ಹಾಗೆಯೇ ಅವರಿಗೆ ಪ್ರಯತ್ನದ ಅಗತ್ಯವಾಗಲಿ ಅಥಾ ವಜರ್ಿಸುವ ಅಗತ್ಯವಾಗಲಿ ಇಲ್ಲವೇ ಇಲ್ಲ. ನಿಮ್ಮ ವಾದದ ಪ್ರಕಾರ ನೀವು ಸಮಣ ಬ್ರಾಹ್ಮಣರಾಗುವುದು ನಿಮಗೆ ಅನ್ವಯವಾಗುವುದಿಲ್ಲ. ಏಕೆಂದರೆ ನೀವೇ ದ್ವಂದ್ವದಲ್ಲಿ ಸಿಲುಕಿರುವಿರಿ. ದಿಗ್ಭ್ರಮೆಯಲ್ಲಿ ಸಿಲುಕಿರುವಿರಿ. ಏನು ಮಾಡಬೇಕು, ಏನು ಮಾಡಬಾರದು ಎಂಬ ದ್ವಂದ್ವದಲ್ಲಿ ಸಿಲುಕಿ ಕಳೆದುಹೋಗಿರುವಿರಿ.
                ಮತ್ತೆ ಭಿಕ್ಷುಗಳೇ, ಯಾವ ಸಮಣ ಬ್ರಾಹ್ಮಣರು, ವ್ಯಕ್ತಿಯೊಬ್ಬನು ಅನುಭವಿಸುವ ಸುಖ-ದುಃಖ ಎಲ್ಲಕ್ಕೂ ಕಾರಣವೇ ಇಲ್ಲ. ಆಕಸ್ಮಿಕ ಎಂದು ಪ್ರತಿಪಾದಿಸುತ್ತಿದ್ದರೋ ಅವರ ಬಳಿಗೆ ಹೋದೆನು ಮತ್ತು ಹೀಗೆ ಹೇಳಿದೆನು: ಇದು ನಿಜವೇ, ನೀವು ವ್ಯಕ್ತಿಯೊಬ್ಬನ ಸುಖ-ದುಃಖ ಎಲ್ಲಕ್ಕೂ ಕಾರಣವೇ ಇಲ್ಲ, ಎಲ್ಲಾ ಆಕಸ್ಮಿಕ ಎಂದು ಹೇಳುತ್ತಿರುವಿರಾ? ಅವರು ಹೌದೆಂದು ಪ್ರತಿಕ್ರಿಯಿಸಿದರು.
                ಆಗ ನಾನು ಅವರಿಗೆ ಹೀಗೆ ಹೇಳಿದೆನು: ನಿಮ್ಮ ವಾದದ ಪ್ರಕಾರ ಯಾರೆಲ್ಲರೂ ಕೊಲೆ ಮಾಡುವರೋ, ಕಳ್ಳತನ ಮಾಡುವರೋ, ವ್ಯಭಿಚಾರ ಮಾಡುವರೋ, ಸುಳ್ಳು ಹೇಳುವರೋ, ಮದ್ಯಸೇವಿಸುವರೋ... ಇವೆಲ್ಲಕ್ಕೂ ಕಾರಣವೇ ಇಲ್ಲವಾಗಿದೆ ಮತ್ತು ಯಾರೆಲ್ಲರೂ ಅವನತಿಗಿಳಿದಿದ್ದಾರೋ, ದುಃಖಿತರೋ ಅದಕ್ಕೂ ಕಾರಣವೇ ಇಲ್ಲವಾಗಿದೆ. ಹೀಗಿರುವಾಗ ಮಾನವ ಏಕೆ ಇಚ್ಛಿಸಬೇಕು, ಏಕೆ ಕಾರ್ಯ ಮಾಡಬೇಕು. ಮಾನವನು ಪ್ರಯತ್ನಪಡುವ ಹಾಗಿಲ್ಲ, ಹಾಗೆಯೇ ವಜರ್ಿಸುವ ಹಾಗಿಲ್ಲ. ನಿಮಗೂ ಸಹಾ ಸಮಣ ಬ್ರಾಹ್ಮಣರೆಂಬ ಪದ ಅನ್ವಯವಾಗುವುದಿಲ್ಲ. ಏಕೆಂದರೆ ನೀವು ದ್ವಂದ್ವಕ್ಕೆ ಸಿಲುಕಿ ಅಂತಹ ಮಿಥ್ಯಾದೃಷ್ಟಿ ಹೊಂದಿದಂತಹ ಸಮಣ ಬ್ರಾಹ್ಮಣರಿಗೆ ಅದು ನನ್ನ ವಿಚಾರಪೂರಿತವಾದ ಖಂಡನೆಯಾಗಿತ್ತು ಮತ್ತು ಇವೇ ಮೂರು ಮಿಥ್ಯಾ ಸಿದ್ಧಾಂತಗಳಾಗಿವೆ ಮತ್ತು ಪ್ರಾಜ್ಞರಿಂದ ಶಿಸ್ತಿನಿಂದ ಪ್ರಶ್ನಿಸಲ್ಪಟ್ಟಾಗ, ಪರಿಶೀಲನೆಗೊಳಿಸಲ್ಪಟ್ಟಾಗ, ಚಚರ್ಿಸಲ್ಪಟ್ಟಾಗ ಅವು ಟೊಳ್ಳೆಂದು ಸಾಬೀತಾಗುತ್ತದೆ.
                ಆದರೆ ಭಿಕ್ಷುಗಳೇ, ನಾನು ಬೋಧಿಸುವ ಧಮ್ಮವು ಖಂಡಿಸುವಂತಹುದು ಆಗಿಲ್ಲ, ನಿಂದನೀಯವಲ್ಲ. ಮಲಿನವಾದುದಲ್ಲ, ಕಳಂಕ ತರುವಂತಹುದಲ್ಲ, ಪ್ರಾಜ್ಞರಿಂದ ನಿರಾಕರಿಸುವಂತಹುದಲ್ಲ ಮತ್ತು ಯಾವುದದು ಆ ಧಮ್ಮ ?

                ದುಃಖ ಆರ್ಯಸತ್ಯ, ದುಃಖದ ಕಾರಣ ಆರ್ಯಸತ್ಯ, ದುಃಖ ನಿರೋಧ ಆರ್ಯಸತ್ಯ, ದುಃಖ ನಿರೋಧಕ್ಕೆ ಕೊಂಡೊಯ್ಯುವ ಮಾರ್ಗ ಆರ್ಯಸತ್ಯವಾಗಿದೆ.