ಶೀಲವಿಶುದ್ದಿ
" ಯಾರು ನಿರಂತರ ಶೀಲಾಚಾರಿಯೋ, ಪ್ರಾಜ್ಞನೋ, ಸಮಾಧಿಸಿದ್ಧನೋ ಅಂತಹ ಪರಿಶ್ರಮಿ ಪರಾಕ್ರಮಿ ಮಾತ್ರ ದಾಟಲು ಕಡುಕಷ್ಟವಾಗಿರುವಂತಹ ಪ್ರವಾಹವನ್ನು ದಾಟುತ್ತಾನೆ."
ಶೀಲವಿಶುದ್ದಿಯು ನಿಬ್ಬಾಣ ಸಾಧಿಸುವಿಕೆಯಲ್ಲಿನ ಸಪ್ತವಿಶುದ್ದಿಯಲ್ಲಿ ಪ್ರಥಮ ವಿಶುದ್ದಿಯಾಗಿದೆ. ಹೀಗಾಗಿ ಯಾರು ದುಃಖವನ್ನು ಬಯಸುವುದಿಲ್ಲವೋ ಅವರು ಕಡ್ಡಾಯವಾಗಿ ಶೀಲವನ್ನು ಪಾಲಿಸಬೇಕಾಗಿದೆ. ನಾವಿಂದು ಈ ಜನ್ಮದಲ್ಲಿ ಅನುಭವಿಸುತ್ತಿರುವ ಕೆಲವು ದುಃಖಗಳಿಗೆ ನಮ್ಮ ಹಿಂದಿನ ಜನ್ಮದ ಪಾಪಗಳೇ ಕಾರಣವಾಗಿದೆ.
ಶೀಲವೆಂದರೆ ಪಾಪಗಳಿಂದ ದೂರವಾಗುವುದು, ವಿರತನಾಗುವುದು. ಇಚ್ಛಾಪೂರ್ವಕವಾಗಿ ಶರೀರದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪಾಪ ಮಾಡದಿರುವುದೇ ಆಗಿದೆ. ಹಾಗೆಯೇ ಶೀಲವೆಂದರೆ ಪುಣ್ಯವನ್ನು ಆಚರಿಸುವುದು. ಇಚ್ಛಾಪೂರ್ವಕವಾಗಿ ಒಳಿತನ್ನು ಶರೀರದಿಂದ, ಮಾತಿನಿಂದ ಮತ್ತು ಮನಸ್ಸನಿಂದ ಮಾಡುವುದೇ ಆಗಿದೆ. ಎಲ್ಲಾ ಸುಕರ್ಮಗಳು ಶೀಲವೆನಿಸುತ್ತದೆ.
ಶೀಲವು ಅಗೌರವವನ್ನು ತೆಗೆದು ಶಾಂತತೆಯನ್ನು ನಿಮರ್ಾಣ ಮಾಡುತ್ತದೆ. ಪಾಪವಿರತೆಯ ಕಾರ್ಯ ಮಾಡುತ್ತದೆ. ಪರಿಶುದ್ಧತೆಯಿಂದ ಶೀಲವು ವ್ಯಕ್ತವಾಗುತ್ತದೆ.
ಭಿಕ್ಷುಗಳಲ್ಲಿ ಶೀಲವು ಈ ರೀತಿ ಲಕ್ಷಣಗಳಿಂದ ಕೂಡಿರುತ್ತದೆ. ಹೇಗೆಂದರೆ ಪರಿಶುದ್ಧತೆ, ಪೂರ್ಣ ಬ್ರಹ್ಮಚರ್ಯೆ, ಇಚ್ಛಾಪೂರ್ವಕ ಬಡತನ, ವಿಧೇಯತೆ, ಸರಳತೆ, ನಿಸ್ವಾರ್ಥಸೇವೆ, ಸ್ವನಿಯಂತ್ರಣ, ಸಹನೆ, ಕರುಣೆ ಮತ್ತು ಅಹಿಂಸೆ.
ಶೀಲ ವಿಶುದ್ದಿಯಲ್ಲಿ 4 ಅಂಗಗಳು ಕೂಡಿರಲೇಬೇಕು. ಅದೆಂದರೆ ಪಾತಿಮೋಕ್ಖ ಶೀಲ, ಇಂದ್ರೀಯ ಸಂಯಮ, ಸಮ್ಮಾಜೀವನ ಮತ್ತು ಅವಶ್ಯಕ ವಸ್ತುಗಳನ್ನು ಚೆನ್ನಾಗಿ ಚಿಂತಿಸಿ ಅಂಟದೆ ಬಳಕೆ ಮಾಡುವುದು.
ಶೀಲದಲ್ಲಿ ಆರ್ಯ ಅಷ್ಟಾಂಗ ಮಾರ್ಗದ 3 ಅಂಗಗಳು ಇರುತ್ತದೆ. ಅವೆಂದರೆ:
1. ಸಮ್ಮಾ ವಾಚಾ (ಸಮ್ಯಕ್ ಸಂಭಾಷಣೆ)
2. ಸಮ್ಮಾ ಕಮ್ಮಂತ (ಸಮ್ಯಕ್ ಕರ್ಮ)
3. ಸಮ್ಮಾ ಅಜೀವೋ (ಸಮ್ಯಕ್ ಜೀವನೋಪಾಯ)
1. ಸಮ್ಮಾ ವಾಚಾ
ಸಮ್ಮಾ ವಾಚಾದಲ್ಲಿ ಸಂಭಾಷಣೆ ಯಾವರೀತಿ ಇರಬೇಕೆಂದು ಭಗವಾನರು ಹೀಗೆ ವಿವರಿಸುತ್ತಾರೆ.
ಸುಳ್ಳಿನಿಂದ ವಿರತನಾಗುವುದು, ಚಾಡಿಯಿಂದ ವಿರತನಾಗುವುದು, ಕಟು ನಿಂದೆಗಳಿಂದ ವಿರತನಾಗುವುದು ಮತ್ತು ಸೋಮಾರಿತನದ ಹರಟೆಗಳಿಂದ ವಿರತನಾಗುವುದು ಇದೇ ಯೋಗ್ಯವಾದ ಸಂಭಾಷಣೆಯಾಗಿದೆ. ಸಾಧಕನು ಸುಳ್ಳನ್ನು ತ್ಯಜಿಸಿ ಆತನು ಸತ್ಯವನ್ನೇ ಹೇಳುತ್ತಾನೆ. ಸತ್ಯವನ್ನೇ ಹಿಡಿಯುತ್ತಾನೆ. ದೃಢವಾಗಿರುತ್ತಾನೆ, ನಂಬಿಕೆಗೆ ಅರ್ಹನಾಗಿರುತ್ತಾನೆ. ಜಗತ್ತಿಗೆ ಮೋಸ ಮಾಡುವುದಿಲ್ಲ. ಚಾಡಿಯಿಂದ ಜನರನ್ನು ಬೇರ್ಪಡಿಸುವುದಿಲ್ಲ. ಬದಲಾಗಿ ಜನರನ್ನು ಐಕ್ಯತೆವುಂಟು ಮಾಡುವ ಮಾತುಗಳನ್ನು ಆಡುತ್ತಾನೆ. ಐಕ್ಯತೆಯಲ್ಲಿ ಆನಂದಿಸಿ ಐಕ್ಯತೆಯನ್ನು ಸೃಷ್ಠಿಸುತ್ತಾನೆ.ಸಾಧಕನು ಕಟು ಮಾತುಗಳನ್ನು ತ್ಯಜಿಸುತ್ತಾನೆ, ಕಿವಿಗೆ ಇಂಪಾದ ಮಾತುಗಳನ್ನು ಆಡುತ್ತಾನೆ, ಪ್ರೀತಿಯುತ, ಹೃದಯಕ್ಕೆ ಸುಸ್ಪರ್ಶ-ನಾಟುವಂತಹ, ನಮ್ರವಾದ, ಜನರಿಗೆ ಹಿತಕ್ಕಾಗಿಯೇ ಮಧುರ ಮಾತುಗಳನ್ನು ಆಡುತ್ತಾನೆ.
ಸೋಮಾರಿತನದ ಹರಟೆಯನ್ನು ವಜರ್ಿಸುತ್ತಾನೆ. ಕಾಲ ಯೋಗ್ಯವಾದ ಮಾತುಗಳನ್ನು ಆಡುತ್ತಾನೆ, ವಾಸ್ತವವನ್ನು ನುಡಿಯುತ್ತಾನೆ, ಗುರಿಗೆ ಸಂಬಂಧಿಸುವುದನ್ನು ಹೇಳುತ್ತಾನೆ. ಧಮ್ಮವನ್ನು, ವಿನಯವನ್ನು ನುಡಿಯುತ್ತಾನೆ. ಸಂಗ್ರಹ ಯೋಗ್ಯ ಮಾತುಗಳನ್ನು ಆಡುತ್ತಾನೆ. ವಿಚಾರಭರಿತ, ಮೌಲ್ಯಯುತ, ನಿಯಂತ್ರಿತ ಮಾತುಗಳನ್ನು ಆಡುತ್ತಾನೆ. ವ್ಯರ್ಥವಾದ, ಲೋಭಪ್ರೇರಿತ, ದ್ವೇಷಪ್ರೇರಿತ, ಮೋಹಪ್ರೇರಿತ ಮಾತುಗಳನ್ನು ಆಡುವುದಿಲ್ಲ.
ಯಾವುದು ವಾಸ್ತವವೋ, ಸತ್ಯವೋ, ಹಿತವೋ, ಪ್ರಿಯವೋ ಒಪ್ಪುವಂತಹುದೋ, ಕಾಲಯೋಗ್ಯವೋ ಅಂತಹ ಮಾತುಗಳನ್ನು ಆಡುತ್ತಾನೆ.
2. ಸಮ್ಮಾ ಕಮ್ಮಂತ (ಯೋಗ್ಯವಾದ ಕರ್ಮ)
ಇಲ್ಲಿ ಸಾಧಕ ಜೀವಹತ್ಯೆಯಿಂದ ವಿರತನಾಗುವುದು, ಕಳ್ಳತನದಿಂದ ವಿರತನಾಗುವುದು ಮತ್ತು ಅನೀತಿಯುತವಾದ ಕಾಮದಿಂದ ವಿರತನಾಗುತ್ತಾನೆ (ಭಿಕ್ಷುವಾಗಿದ್ದರೆ ಪೂರ್ಣ ಬ್ರಹ್ಮಚರ್ಯೆ ಪಾಲಿಸುವುದು).ಇಲ್ಲಿ ಸಾಧಕ ಲೋಕಾನುಕಂಪದಿಂದ, ಜೀವಹತ್ಯೆಯಿಂದ ವಿರತನಾಗುತ್ತಾನೆ. ದಂಡಶಸ್ತ್ರಗಳನ್ನು ತ್ಯಜಿಸುತ್ತಾನೆ. ಹಾಗೆಯೇ ತನಗೆ ನೀಡದುದನ್ನು ತೆಗೆದುಕೊಳ್ಳುವುದಿಲ್ಲ.
ಎಲ್ಲಾರೀತಿಯ ಕಳ್ಳತನ, ಮೋಸ, ವಂಚನೆಯಿಂದ ಮುಕ್ತನಾಗುತ್ತಾನೆ. ಹಾಗೆಯೇ ಪರಸ್ತ್ರೀಯರನ್ನು ಮಾತೆಯರಂತೆ, ಸೋದರಿಯಂತೆ ಮತ್ತು ಮಕ್ಕಳಂತೆ ಕಾಣುತ್ತಾನೆ. ಹಾಗು ಅನೀತಿಯುತ ಸಂಬಂಧಗಳಲ್ಲಿ ತೊಡಗುವುದಿಲ್ಲ. ಹೀಗೆ ಆತನು ಕಾಯದಲ್ಲಿ ಯೋಗ್ಯವಾದ ಕರ್ಮಗಳಿಂದ ಕೂಡಿರುತ್ತಾನೆ.
ಅದಕ್ಕಾಗಿಯೇ ಭಗವಾನರು ಗ್ರಹಸ್ಥರಿಗೆ ಪಂಚಶೀಲಗಳನ್ನು ಬೋಧಿಸುತ್ತಾರೆ. ಅನ್ಯ ಧರ್ಮಗಳಲ್ಲಿ ಪೂಜೆ, ಪ್ರಾರ್ಥನೆಗಳಿಗೆ ಮೊದಲ ಸ್ಥಾನವಾದರೆ ಬೌದ್ಧರಲ್ಲಿ ಪಂಚಶೀಲಕ್ಕೆ ಪ್ರಥಮ ಆದ್ಯತೆಯಿದೆ. ಇದರಿಂದಾಗಿ ವ್ಯಕ್ತಿ ಸಮಾಜ ಮತ್ತು ಎಲ್ಲರ ಹಿತವಿದೆ.
ಪಂಚಶೀಲವೆಂದರೆ : 1) ಜೀವಹತ್ಯೆಯಿಂದ 2) ಕಳ್ಳತನದಿಂದ 3) ವ್ಯಭಿಚಾರದಿಂದ 4) ಸುಳ್ಳಿನಿಂದ ಮತ್ತು 5) ಮಾದಕ ದ್ರವ್ಯಗಳಿಂದ ಇಚ್ಛಾಪೂರ್ವಕವಾಗಿ ವಿರತನಾಗುವುದು. ಇದಕ್ಕೆ ಪ್ರತಿಯಾಗಿ, ಕರುಣೆಯಿಂದ, ಪ್ರಮಾಣಿಕತೆಯಿಂದ, ಬ್ರಹ್ಮಚಯರ್ೆಯಿಂದ, ಸತ್ಯದಿಂದ ಮತ್ತು ಸಂಯಮದಿಂದ ಜೀವಿಸುವುದು ಆಗಿದೆ.
3. ಸಮ್ಮಾ ಜೀವನ (ಯೋಗ್ಯವಾದ ಜೀವನೋಪಾಯ) :
ಇಲ್ಲಿ ಸಾಧಕನು ಪರರಿಗೆ ಅಹಿತವಾಗುವಂತಹ ಯಾವುದೇ ವೃತ್ತಿಯಲ್ಲಿ ತೊಡಗುವುದಿಲ್ಲ. ಉದಾಹರಣೆಗೆ: 1) ಶಸ್ತ್ರಗಳ 2) ಜೀವಿಗಳ ಮಾರಾಟ 3) ಮಾಂಸದ ಮಾರಾಟ 4) ಮದ್ಯಪಾನದ ಮಾರಾಟ 5) ವಿಷವಸ್ತುಗಳ ಮಾರಾಟ ಇವುಗಳಿಂದ ವಿರತನಾಗುತ್ತಾನೆ.ನಾವೇಕೆ ಶೀಲವಂತರಾಗಬೇಕು?
1. ಶೀಲದಿಂದ ನಾವು ಮನಸ್ಸನ್ನು ನಿಯಂತ್ರಿಸುವುದು ಕಲಿಯುತ್ತೇವೆ. ಇಲ್ಲಿ ಸೂಕ್ಷ್ಮವಾಗಿ ಮನಸ್ಸನ್ನು ನಿಯಂತ್ರಿಸುವುದಕ್ಕಿಂತ ಮೊದಲು ಸ್ಥೂಲವಾದ ಶರೀರ, ಇಂದ್ರೀಯಗಳ ಮತ್ತು ಮಾತುಗಳನ್ನು ನಿಯಂತ್ರಿಸುತ್ತೇವೆ. ಹೀಗಾಗಿ ಬಹುಪಾಲು ಮನಸ್ಸಿನ ನಿಯಂತ್ರಣ ನಾವು ಶೀಲವಂತರಾದಲ್ಲಿ ಸಾಧಿಸಬಹುದು.
2. ನಾವು ಶೀಲವಂತರಾದಷ್ಟು ಪ್ರಜ್ಞಾವಂತರಾಗಬಹುದು. ಇಲ್ಲಿ ನಾವು ನಮ್ಮನ್ನು ವೀಕ್ಷಿಸುತ್ತಿರುತ್ತೇವೆ. ನಮ್ಮ ಯೋಚನೆಗಳು, ಕ್ರಿಯೆಗಳು, ಮಾತುಗಳು ಸರ್ವವನ್ನು ವೀಕ್ಷಿಸಿ, ನಿಯಂತ್ರಿಸಿ, ಕಾರ್ಯತತ್ಪರರನ್ನಾಗಿ ಮಾಡುತ್ತೇವೆ.
3. ನಾವು ಶೀಲವಂತರಾದಷ್ಟು ನಮಗೆ ಪಶ್ಚಾತ್ತಾಪವಿರುವುದಿಲ್ಲ. ಭವಿಷ್ಯದ ಭಯವಿರುವುದಿಲ್ಲ. ಈ ರೀತಿಯಾಗಿ ಪಶ್ಚಾತ್ತಾಪ, ಭಯ, ಚಿಂತೆಗಳಿಂದ ಮುಕ್ತರಾಗಿ ಶಾಂತತೆಯಿಂದ ಇರಬಲ್ಲೆವು. ಪರಲೋಕವನ್ನು ಧೈರ್ಯವಾಗಿ ಎದುರಿಸಬಲ್ಲೆವು (ಹೋಗಬಲ್ಲೆವು).
4. ನಾವು ಶೀಲವಂತರಾದಷ್ಟು ನಾವು ದಯೆಯಿಂದ ಕೂಡಿರುತ್ತೇವೆ. ಪರರ ನೋವನ್ನು ನಮ್ಮ ನೋವಿನಂತೆ ಸಂವೇದಿಸಬಲ್ಲೆವು. ಪರರ ಹಿತವನ್ನು ನಮ್ಮ ಹಿತದಂತೆ ಕಾಣಬಲ್ಲೆವು. ನಿಜವಾದ ಅರ್ಥದಲ್ಲಿ ಮಾನವರಾಗಿರುತ್ತೇವೆ.
5. ನಾವು ಶೀಲವಂತರಾದಷ್ಟು ನಮ್ಮ ಲೋಭ, ದ್ವೇಷ, ಮೋಹ ಮತ್ತು ಭಯಗಳು ಕ್ಷೀಣಿಸುತ್ತಿರುತ್ತವೆ. ಈ ರೀತಿಯಾಗಿ ಸಾಧನೆಯಂತೆ ಮುಂದಿನ ಜನ್ಮದಲ್ಲಿ ಸುಗತಿ, ಬ್ರಹ್ಮಲೋಕ ಇಲ್ಲವೆ ನಿಬ್ಬಾಣ ಸಿಗುತ್ತದೆ.
6. ಈ ಜನ್ಮದಲ್ಲಿ ಗೌರವ, ಧೈರ್ಯ, ನಿಯಂತ್ರತೆ, ಶಾಂತತೆ, ಸುಖ, ಸೌಲಭ್ಯವೆಲ್ಲವೂ ಸಿಗುತ್ತದೆ.
7. ಸೋತಪನ್ನ ಅಥವಾ ಅರಹತ್ವಕ್ಕೆ ಸ್ಥಿತಿಗೆ ಸಹಾಯ
8. ಸಮಾಧಿ ಪ್ರಾಪ್ತಿಗೆ ಸಹಾಯ ಸಿಗುತ್ತದೆ.
9. ಸುಖ್ಯಾತಿಯು ಸಿಗುತ್ತದೆ. ಇತ್ಯಾದಿ...
ಲೋಕದಲ್ಲಿ ಶೀಲವು ಅನುತ್ತರವಾದುದು
ಶೀಲವು ಕಲ್ಯಾಣವನ್ನುಂಟು ಮಾಡುತ್ತದೆ. ಲೋಕದಲ್ಲಿ ಶೀಲವು ಅನುತ್ತರವಾದುದು.ಈ ಗಾಥೆಯನ್ನು ಬೋಧಿಸತ್ವರು ಹೇಳಿದ್ದಾರೆ. ಬುದ್ಧರು ಹಿಂದಿನ ಜನ್ಮದಲ್ಲಿ ಬೋಧಿಸತ್ವರಾಗಿದ್ದಾಗ, ವಾರಣಾಸಿಯನ್ನು ಬ್ರಹ್ಮದತ್ತನು ಆಳುತ್ತಿದ್ದನು. ಆತನ ಪುರೋಹಿತರೇ ಬೋಧಿಸತ್ವರು. ಮಹಾ ಶೀಲವಂತರು ಮತ್ತು ಜ್ಞಾನಿಗಳು ಆಗಿದ್ದರು. ರಾಜನು ಬೋಧಿಸತ್ವರಿಗೆ ಅಪಾರ ಗೌರವ ನೀಡುತ್ತಿದ್ದರು.
ಒಂದುದಿನ ಬೋಧಿಸತ್ವರಿಗೆ ವಿಚಿತ್ರ ಚಿಂತನೆ ಉಂಟಾಯಿತು. ಅದೆಂದರೆ ಈ ರಾಜ ನನ್ನಲ್ಲಿ ಏನನ್ನು ಕಂಡು ಗೌರವಿಸುತ್ತಿರಬಹುದು, ನನ್ನ ಉತ್ತಮ ಕುಲಕ್ಕೆ ಅಥವಾ ವಿದ್ಯಾಸಂಪನ್ನತೆಗೆ ಅಥವಾ ಉತ್ತಮ ಚಾರಿತ್ರ್ಯಕ್ಕೆ (ಶೀಲ) ಯಾವುದಕ್ಕಾಗಿ ?
ಕೊನೆಗೆ ಆತ ಪರೀಕ್ಷಿಸಲು ಮುಂದಾದರು. ಒಂದುದಿನ ಚಿನ್ನದ ಅಂಗಡಿಯಿಂದ ಒಂದು ನಾಣ್ಯ ಎತ್ತಿಕೊಂಡು ಬಂದರು. ಇವರ ಬಗ್ಗೆ ಗೌರವ ಇದ್ದುದರಿಂದಾಗಿ ಅಂಗಡಿಯವ ಸುಮ್ಮನಿದ್ದನು. ಎರಡನೆಯ ದಿನದಂದು 2 ನಾಣ್ಯಗಳನ್ನು ಎತ್ತಿಕೊಂಡು ಬಂದರು. ಅಂಗಡಿಯವ ಈಗಲೂ ಸುಮ್ಮನಿದ್ದನು. ಮಾರನೆಯದಿನ ಬೋಧಿಸತ್ವರು ಒಂದು ಹಿಡಿ ಚಿನ್ನದ ನಾಣ್ಯಗಳನ್ನು ಎತ್ತಿಕೊಂಡು ಬರುವಾಗ ಆತನು ಇವರನ್ನು ಹಿಡಿದು ಕಳ್ಳತನದ ಆರೋಪ ಹೊರಿಸಿದನು. ರಾಜನ ಬಳಿ ಕರೆತರಲಾಯಿತು.
ರಾಜ : ಬ್ರಾಹ್ಮಣ ಏಕೆ ಇಂತಹ ಕಾರ್ಯ ಮಾಡಿದೆ?
ಬೋಧಿಸತ್ವ : ರಾಜ ನಾನು ಕಳ್ಳನಲ್ಲ.
ರಾಜ : ಹಾಗಾದರೆ ಚಿನ್ನದ ನಾಣ್ಯಗಳನ್ನು ಅಪಹರಿಸಿದ್ದು ಸುಳ್ಳೇ?
ಬೋಧಿಸತ್ವ : ರಾಜ ನೀವು ನನಗೆ ನೀಡುತ್ತಿರುವ ಗೌರವ ನನ್ನ ಚಾರಿತ್ರ್ಯಕ್ಕೋ ಅಥವಾ ಪಾಂಡಿತ್ಯಕ್ಕೋ ಅಥವಾ ಉತ್ತಮ ಕುಲಕ್ಕೋ ಅಥವಾ ನನ್ನ ಸೌಂದರ್ಯಕ್ಕೋ ಸ್ಪಷ್ಟವಾಗಿ ತಿಳಿಯಬೇಕಿತ್ತು.
ರಾಜ : ಓಹ್ ಬ್ರಾಹ್ಮಣ, ನಿನಗೆ ನೀಡುವ ಗೌರವ ಕೇವಲ ನಿನ್ನ ಶೀಲಕ್ಕಾಗಿಯೇ, ನಂತರ ಪಾಂಡಿತ್ಕ್ಕೆ ಮಿಕ್ಕವು ನಮಗೆ ಲೆಕ್ಕಕ್ಕಿಲ್ಲ.
ಬೋಧಿಸತ್ವ : ನನಗೂ ಈಗ ಸ್ಪಷ್ಟವಾಗಿ ತಿಳಿಯಿತು ರಾಜ. ಲೋಕದಲ್ಲಿ ಶೀಲವೇ ಸವರ್ೊತ್ತಮವಾದುದು, ಪ್ರಧಾನವಾದುದು ಎಂದು ತಿಳುವಳಿಕೆ ಮೂಡಿದೆ.
ರಾಜ : ಹಾಗಾದರೆ ನೀನು ಅಪರಾಧಿಯಲ್ಲ. ಹಿಂದಿನಂತೆಯೆ ಯೋಗ್ಯವಾಗಿ ಕೆಲಸ ಮಾಡಿಕೊಂಡಿರು.
ಬೋಧಿಸತ್ವ : ಇಲ್ಲ ಮಹಾರಾಜ, ನಾನು ಗೃಹಸ್ಥನಾಗಿದ್ದು ಪರಿಶುದ್ಧವಾದ, ಪರಿಪೂರ್ಣವಾದ ಸದಾಚಾರ ಪಾಲಿಸಲಾಗುವುದಿಲ್ಲ. ಆದ್ದರಿಂದ ನಾನು ಪಬ್ಬಜಿತನಾಗಲು ಇಚ್ಛಿಸುತ್ತೇನೆ. ನನಗೆ ಅಪ್ಪಣೆ ನೀಡಿ.
ರಾಜನು ದುಃಖದಿಂದ ಕಳುಹಿಸಿಕೊಟ್ಟನು. ಹಿಮಾಲಯಕ್ಕೆ ಹೋಗಿ ದೀರ್ಘಕಾಲ ಶೀಲ, ಸಮಾಧಿ ಪಾಲನೆ ಮಾಡಿದರು. ಎಂಟು ಸಮಾಪತ್ತಿ ಮತ್ತು ಪಂಚ ಅಭಿಜ್ಞಾ ಪ್ರಾಪ್ತಿಮಾಡಿದರು. ನಂತರ ಬ್ರಹ್ಮಲೋಕ ಗಾಮಿಯಾದರು.
ನಮಗೆ ಶೀಲವಂತರಾಗಲು ಅಡ್ಡಿಗಳೇನು?
1. ನಮಗೆ ಯೋಗ್ಯ ಜ್ಞಾನ ಸಿಗದಿರುವುದೇ ಪ್ರಥಮ ಅಡ್ಡಿಯಾಗಿದೆ. ಯಾವಾಗ ನಾವು ಶೀಲದ ಮಹತ್ವತೆ ಮತ್ತು ಪಾಪದ ಭೀಕರತೆ ತಿಳಿಯುವೆವು ಆಗ ನಮಗೆ ಶೀಲದ ಬಗ್ಗೆ ಸಮ್ಮಾಸಂಕಲ್ಪ ಮೂಡುತ್ತದೆ.
2. ನಮ್ಮಲ್ಲಿರುವ ದ್ವೇಷ, ಗುಣ ಅಡ್ಡಿಯಾಗುತ್ತದೆ. ದ್ವೇಷದಿಂದ ಸೇಡು, ಅಸೂಯೆ, ಹಿಂಸೆ, ಅಸಹನೆ, ಕ್ರೂರತ್ವ ಇವುಗಳಿರುವುದರಿಂದಲೇ ನಾವು ಪಾಲಿಸಲು ಸಾಧ್ಯವಾಗುತ್ತಿಲ್ಲ. ಸಮ್ಮಾದೃಷ್ಟಿ, ಮೆತ್ತಾ ಧ್ಯಾನದಿಂದ ಇವನ್ನು ದಾಟಬಹುದು.
3. ನಮ್ಮಲ್ಲಿರುವ ಲೋಭ ಇದರಿಂದಲೇ ನಾವು ಪ್ರಾಣಿಹತ್ಯೆ, ಕಳ್ಳತನ, ವ್ಯಭಿಚಾರ, ಸುಳ್ಳು, ಮಾದಕ ವಸ್ತುಗಳ ಸೇವನೆ ಎಲ್ಲವನ್ನು ಮಾಡಿಬಿಡುತ್ತೇವೆ. ನಮಗೆ ಲೋಭ ಕಡಿಮೆಯಾದಷ್ಟು ನಾವು ಶೀಲವಂತರಾಗುತ್ತೇವೆ. ಪೂರ್ಣವಾಗಿ ಲೋಭರಹಿತರಾದರೆ ಅರಹಂತ ಅಥವಾ ಅನಾಗಾಮಿಗಳಾಗುತ್ತೇವೆ.
4. ಕೆಲವೊಮ್ಮೆ ಸಾಮಾಜಿಕ ವ್ಯವಸ್ಥೆಯು ಕಾರಣವಾಗುತ್ತದೆ. ಭಯದಿಂದ, ಒತ್ತಡದಿಂದ, ವಿವಶತೆಯಿಂದಲೂ ನಾವು ದುಶ್ಶೀಲರಾಗುತ್ತೇವೆ.
5. ನಮ್ಮಲ್ಲಿ ಪಾಪಭೀತಿ ಮತ್ತು ಪಾಪಲಜ್ಜೆಯ ಕೊರತೆಯಿದೆ. ಇದು ತಪ್ಪು ಮಾಡಬಾರದು, ನನ್ನಂತೆ ಪರರು, ಇದನ್ನು ಮಾಡಿದರೆ ದುಃಖವುಂಟಾಗುತ್ತದೆ, ನಿಂದೆ ಸಿಗುತ್ತದೆ, ಶಿಕ್ಷೆಯಾಗುತ್ತದೆ, ದುರ್ಗತಿ ಸಿಗುತ್ತದೆ, ಮತ್ತೆ ಮಾನವ ಜನ್ಮ ಸಿಗಲಾರದು, ಸುಗತಿಯೇ ಸಿಗಲಾರದು, ಜನ್ಮಗಳಿಂದ ಮುಕ್ತನಾಗಲಾರೆ, ಶ್ರೇಷ್ಠ ಪುರುಷನಾಗಲಾರೆ ಈ ರೀತಿಯ ಚಿಂತನೆ ಮಾಡಿದಾಗ ಪಾಪಲಜ್ಜೆ ಮತ್ತು ಪಾಪಭೀತಿ ಮೂಡಿ ಅತನು ಶೀಲವಂತನಾಗುತ್ತಾನೆ.
ಕಾಡಾಗ್ನಿಯಂತೆ ದಹಿಸು ನೀ ಎಲ್ಲಾ ಬಂಧನಗಳನ್ನು
ಒಮ್ಮೆ ಒಬ್ಬ ಭಿಕ್ಷು ಬುದ್ಧರಿಂದ ಧ್ಯಾನದ ವಿಷಯವನ್ನು ಪಡೆದು ಅರಣ್ಯದಲ್ಲಿ ಧ್ಯಾನ ಮಾಡತೊಡಗಿದನು. ಆತನು ಕಠಿಣವಾಗಿಯೆ ಪರಿಶ್ರಮಿಸಿ ಧ್ಯಾನಿಸಿದನು. ಆದರೂ ಧ್ಯಾನದಲ್ಲಿ ಅತ್ಯಲ್ಪ ಲಾಭವನ್ನು ಗಳಿಸಿದನು. ಪರಿಣಾಮವಾಗಿ ಕುಗ್ಗಿದ ಆತನು ನಿರಾಶನಾದನು. ಆತನು ಬುದ್ಧರಿಂದ ಮತ್ತಷ್ಟು ಮಾಹಿತಿ ಪಡೆಯುವ ಉದ್ದೇಶದಿಂದ ಜೇತವನ ವಿಹಾರಕ್ಕೆ ಬರತೊಡಗಿದನು. ದಾರಿಯಲ್ಲಿ ದೊಡ್ಡ ಕಾಡ್ಗಿಚ್ಚು ಹಬ್ಬಿತ್ತು. ಆತನು ಒಂದು ದೊಡ್ಡ ಬೆಟ್ಟವೇರಿದನು. ಅಲ್ಲಿಂದ ಬೆಂಕಿಯನ್ನು ವೀಕ್ಷಿಸಿದನು. ಆ ಬೆಂಕಿಯು ಸಣ್ಣದನ್ನು, ದೊಡ್ಡದನ್ನು, ಯಾವುದನ್ನೂ ಬಿಡದೆ ದಹಿಸುತ್ತಿತ್ತು. ಇದನ್ನು ಕಂಡ ಆತನು ಚಿಂತನೆಗೆ ಜಾರಿದನು. ಹೇಗೆ ಬೆಂಕಿಯು ಎಲ್ಲವನ್ನು ದಹಿಸುತ್ತಿದೆಯೋ ಹಾಗೆಯೇ ನಾನು ಸಹಾ ನನ್ನ ಪ್ರಜ್ಞಾಶಕ್ತಿಯಿಂದ, ವೀರ್ಯಬಲದಿಂದ ಸಣ್ಣ ಮತ್ತು ದೊಡ್ಡ ಬಂಧನಗಳನ್ನೆಲ್ಲಾ ಸುಟ್ಟು ಹಾಕಿದರೆ ಹೇಗೆ?ಆ ಕ್ಷಣದಲ್ಲೇ ಆತನ ಉದಾತ್ತ ಯೋಚನೆಯು ಬುದ್ಧರಿಗೆ ಗೊತ್ತಾಯಿತು. ಅವರು ತಕ್ಷಣ ತೇಜೋಸ್ವರೂಪಿಯಾಗಿ ಆತನ ಮುಂದೆ ಪ್ರತ್ಯಕ್ಷರಾದರು ಮತ್ತು ಹೀಗೆ ಹೇಳಿದರು: ನೀನು ನಿಜವಾಗಿಯೂ ಯೋಗ್ಯವಾದ ಹಾದಿಯಲ್ಲೇ ಇದ್ದೀಯೆ. ಅದೇರೀತಿ ಚಿಂತಿಸು, ಮುಂದುವರೆಸು, ಹಾಗೇ ಮಾಡು. ಹೇಗೆ ಬೆಂಕಿಯು ಚಿಕ್ಕ ಮತ್ತು ದೊಡ್ಡದೆನ್ನದೆ ಎಲ್ಲವನ್ನು ಸುಟ್ಟು ಹಾಕುವುದೋ ಹಾಗೆಯೇ ಓ ಭಿಕ್ಷು ನೀನು ಹಾಗೇ ಮಾಡು. ಜಾಗರೂಕತೆಯಲ್ಲಿ ಭಯಪಡುವ ಭಿಕ್ಷುವು ಎಲ್ಲಾ ಬಂಧನಗಳನ್ನು ಸುಟ್ಟುಹಾಕುತ್ತಾನೆ.
ಆ ಭಿಕ್ಷು ಸ್ಫೂತರ್ಿ ಹೊಂದಿ, ಧ್ಯಾನಿಸಿ, ಜ್ಞಾನೋದಯ ಹೊಂದಿ ಅರಹಂತತ್ವ ಪಡೆದನು. ಆ ಬುದ್ಧರು ಹೇಳುವ ಗಾಥೆಯಿದು.
ಅಪ್ರಮಾದದಲ್ಲಿ (ಜಾಗರೂಕತೆ) ನಿರತನಾಗರುವ ಭಿಕ್ಷುವು ಪ್ರಮಾದದಲ್ಲಿ (ಅಲಕ್ಷ) ಭಯಪಡುತ್ತಾನೆ.
ಸಂಯೋಜನಗಳು ಅಣುವಷ್ಟೇ ಇರಲಿ, ಸ್ಥೂಲವಾಗಿಯೇ ಇರಲಿ ಅಗ್ನಿಯಂತೆ ದಹಿಸುತ್ತಾನೆ.
(ಧಮ್ಮಪದ 31)
No comments:
Post a Comment