ದಾನ ರತ್ನಗಳು
ಶ್ರೇಷ್ಠವಾದುದರಲ್ಲಿ ಶ್ರೇಷ್ಠ
ಶ್ರೇಷ್ಠವಾದುದರಲ್ಲಿ ಶ್ರೇಷ್ಠವೆಂದರೆ ದಾನ ಹೃದಯವೇ ಆಗಿದೆ.
- ಬೋಧಿಸತ್ವ
ಮೌಲ್ಯಾತೀತವಾದುದು
ದಾನವು ಮೌಲ್ಯಾತೀತವಾದುದು. ಆದರೆ ಉಚಿತವಾಗಿಯೇ ನೀಡುವಂತಹುದು. ತನ್ನದೆಲ್ಲವನ್ನು ನೀಡುವಂತಹುದು. ತನ್ನದು ಎಂಬ ಬಂಧನದಿಂದ ವಿಮುಕ್ತನಾಗಿಸುವಂತಹುದು. ಹೀಗಾಗಿ ದುಃಖದಿಂದ ವಿಮುಕ್ತನಾಗಿಸುವಲ್ಲಿ ಅತಿ ಮಹತ್ತರ ಪಾತ್ರವಹಿಸುತ್ತದೆ. ನಿಮ್ಮಲ್ಲಿ ದಾನ ನೀಡಲು ಏನೂ ಇಲ್ಲದಿದ್ದರೂ ಚಿಂತೆಯಿಲ್ಲ. ಆದರೆ ದಾನ ಹೃದಯವಿರಬೇಕಷ್ಟೆ. ಪರರಿಗಾಗಿ ಅಪರ್ಿಸಲು ಹೃದಯವು ಮಿಡಿಯುತ್ತಿರಬೇಕಷ್ಟೆ. ದಾನ ನೀಡುವಂತಹ ಅಪಾರ ಇಚ್ಛೆಗಳು ನಿಮ್ಮ ಮನದಲ್ಲಿ ತುಂಬಿರಬೇಕು. ಅಷ್ಟು ಸಾಕು, ಮಿಕ್ಕೆಲ್ಲಾ ಕಾರ್ಯವನ್ನು ಆ ಇಚ್ಛೆಗಳು ತಾವೇ ಮಾಡುತ್ತವೆ.
ಅಪಾರ ಲಾಭ
ಸ್ವೀಕರಿಸುವವನಿಗಿಂತಲೂ ಅಪಾರ ಪಟ್ಟು ಲಾಭ ನೀಡುವವನಿಗೆ ದಾನದಿಂದ ಲಭಿಸುತ್ತದೆ.
ಬೋಧಿಸತ್ವ ಹೃದಯ
ಯಾರಿಗಾದರೂ ನನ್ನ ಹೃದಯ ಬೇಕಿದ್ದರೆ ನಾನು ಎದೆಬಗೆದು ಅಪರ್ಿಸುವೆನು. ಯಾರಿಗಾದರೂ ಕಣ್ಣುಗಳು ಬೇಕಿದ್ದರೆ ನಾನು ಕಣ್ಣು ಕಿತ್ತು ನೀಡುವೆನು. ಯಾರಿಗಾದರೂ ನನ್ನ ಮಾಂಸ ಬೇಕಿದ್ದರೆ ನಾನು ನನ್ನ ದೇಹದಿಂದ ಕತ್ತರಿಸಿ ಕೊಡುವೆನು.
- ಬೋಧಿಸತ್ವ ವೆಸ್ಸಂತರ
ಪರಹಿತಕ್ಕಾಗಿ ನಾನು ದುಡಿಯಲೇಬೇಕು. ಸರ್ವಜೀವಿಗಳಲ್ಲೂ ದಯೆಯಿಂದ ನಾನು ತುಂಬಿರಲೇಬೇಕು. ಸಹಾಯ ಬಯಸುವವರಿಗೆ ಸೇವೆ ಸಲ್ಲಿಸುವುದು ನನ್ನ ಆದ್ಯಕರ್ತವ್ಯವಾಗಿದೆ. ನನ್ನ ಕಲುಶಿತವಾದ ದೇಹವನ್ನು ನಾನು ಈ ಹುಲಿಗೆ ಅಪರ್ಿಸಿ, ಅದನ್ನು ಅದರ ಮರಿಗಳನ್ನು ರಕ್ಷಿಸುವೆನು. ನಾನು ದಾನ ಫಲದಿಂದಾಗಿ ಸಮ್ಮಾಸಂಬೋದಿ ಯನ್ನು ಪ್ರಾಪ್ತಿಮಾಡುವಂತಾಗಲಿ, ಅದರ ಫಲದಿಂದಾಗಿ ಸರ್ವ ಜೀವಿಗಳನ್ನು ಸಂಸಾರದಿಂದ ವಿಮುಕ್ತನನ್ನಾಗಿಸಲಿ. ಸರ್ವಜೀವಿಗಳೂ ಸುಖದಿಂದ ಮತ್ತು ಕ್ಷೇಮದಿಂದ ಇರಲಿ.
- ಬೋಧಿಸತ್ವ ಮಹಾಸತ್ವ
ದಾನಿಯಾಗಿರುವುದು ಮಂಗಳಕರ
ಯೋಗ್ಯವಾದ ಸ್ಥಳಗಳಲ್ಲಿ ವಾಸಿಸುವುದು,
ಹಿಂದೆ (ದಾನದಿಂದ) ಪುಣ್ಯ ಮಾಡಿರುವುದು,
ತನ್ನನ್ನು ಸರಿಹಾದಿಯಲ್ಲಿ ನಡೆಸಿಕೊಂಡು ಹೋಗುವುದು
ಇವು ಮಂಗಳಗಳಲ್ಲಿ ಉತ್ತಮವಾಗಿವೆ.
ದಾನಿಯಾಗಿರುವುದು, ಸಚ್ಚಾರಿತ್ರ್ಯದಿಂದ ಕೂಡಿರುವುದು, ಬಂಧುಗಳಿಗೆ ಸಹಾಯ ಮಾಡುವುದು ಮತ್ತು ನಿಂದಾತೀತವಾದ ಕಾರ್ಯಗಳಲ್ಲಿ ತೊಡಗುವುದು ಇವು ಮಂಗಳಗಳಲ್ಲಿ ಉತ್ತಮವಾಗಿವೆ.
- ಭಗವಾನ್ ಬುದ್ಧರು
ದಾನದ ಐಶ್ವರ್ಯ ಭಂಡಾರ ಎಂದರೇನು?
ಇಲ್ಲಿ ಆರ್ಯರ ಶಿಷ್ಯನು ಲೋಭ ಜಿಪುಣತೆಯನ್ನು ತನ್ನ ಸಮ್ಮಾಸ್ಮೃತಿಯಿಂದಾಗಿ ಶುಚಿಗೊಳಿಸುತ್ತಾನೆ, ಶುದ್ಧಿಗೊಳಿಸುತ್ತಾನೆ. ಆತ ಗೃಹ ಜೀವನದಲ್ಲಿದ್ದರೂ, ತೆರೆದ ಹಸ್ತದವನಾಗಿರುತ್ತಾನೆ, ಪರಹಿತದಲ್ಲಿ ಆನಂದಿಸುವವನಾಗಿರುತ್ತಾನೆ, ಅವಶ್ಯಕತೆಗಳಿಗೆ ಸ್ಪಂದಿಸುವವನಾಗಿರುತ್ತಾನೆ, ಆಹಾರ ದಾನಗಳಲ್ಲಿ ಆನಂದಿಸುವವನಾಗಿರುತ್ತಾನೆ. ಇದೇ ದಾನದ ಐಶ್ವರ್ಯ ಭಂಡಾರವಾಗಿದೆ.
ಪರಮಾರ್ಥ ಜೀವನಕ್ಕೆ ಅತ್ಯಮೂಲ್ಯ
ಇವು ಐದನ್ನು ವಜರ್ಿಸದೆ ಒಬ್ಬನು ಪ್ರಥಮ ಸಮಾಧಿ ಪ್ರವೇಶಿಸಲು ಆಗಲಿ ಅಥವಾ ಅದರಲ್ಲೇ ನೆಲೆಸುವುದಾಗಲಿ ಸಾಧ್ಯವಿಲ್ಲ. ಹಾಗೆಯೇ ದ್ವಿತೀಯ, ತೃತಿಯ, ಚತುರ್ಥ ಸಮಾಧಿಯನ್ನು ಪ್ರವೇಶಿಸಲು ಆಗಲಿ ಅಥವಾ ಅದರಲ್ಲೇ ನೆಲೆಸುವುದಾಗಲಿ ಸಾಧ್ಯವಿಲ್ಲ.
ಹಾಗೆಯೇ ಇವು ತಾನು ವಜರ್ಿಸದೆ ಒಬ್ಬನು ಸೋತಪನ್ನ ಫಲವನ್ನು ಸಾಕ್ಷಾತ್ಕರಿಸಲು ಅಸಮರ್ಥನಾಗುತ್ತಾನೆ. ಹಾಗೆಯೇ ಸಕದಾಗಾಮಿ, ಅನಾಗಾಮಿ ಮತ್ತು ಅರಹಂತ ಫಲವನ್ನು ಸಾಕ್ಷಾತ್ಕರಿಸಲು ಅಸಮರ್ಥನಾಗುತ್ತಾನೆ.
ವಜರ್ಿಸಲೇಬೇಕಾದ ಆ ಐದು ಯಾವುವು? ಅವೆಂದರೆ : ವಾಸಸ್ಥಳದ ಲೋಭ, ಕುಟುಂಬದ ಲೋಭ, ಗಳಿಕೆಯ ಲೋಭ, ಅಂತಸ್ತಿನ ಲೋಭ ಮತ್ತು ಕೃತಘ್ನತೆ.
ಇವನ್ನು ವಜರ್ಿಸದೆ ಧ್ಯಾನ ಲಾಭಗಳಾಗಲಿ ಅಥವಾ ಲೋಕೋತ್ತರ ಫಲಗಳಾಗಲಿ ದೊರೆಯಲಾರವು.
ದಾನವಾಗಿ ನೀಡಿದ್ದು ನಿಷ್ಫಲವಲ್ಲ
ಯಾವಾಗ ಜಗತ್ತು ಜರಾಮೃತ್ಯುವಿನ
ಅಗ್ನಿಯಿಂದ ಉರಿಯುತಿಹುದೋ
ಆಗ ಒಬ್ಬನು ದಾನದಿಂದಲೇ
ತನ್ನನ್ನು ಕಾಪಾಡಿಕೊಳ್ಳಬೇಕು
ದಾನ ನೀಡಿದ್ದು ಸುರಕ್ಷಿತವಾಗಿರುತ್ತದೆ
ನಿಷ್ಫಲವಲ್ಲ.
ದಾನವಾಗಿ ನೀಡದ್ದು ಸುಖಫಲಕಾರಿ,
ನೀಡದೇ ಹೋಗಿದ್ದು ನಿಷ್ಫಲ
ಅವನ್ನು ಕಳ್ಳಲು ಅಪಹರಿಸಬಹುದು
ಅಥವಾ ರಾಜಾಧಿಕಾರಿಗಳು ವಶಪಡಿಸಬಹುದು.
ಅಥವಾ ಅಗ್ನಿಗೆ ಆಹುತಿಯಾಗಬಹುದು ಅಥವಾ
ಕಳೆದು ಹೋಗಬಹುದು.
ಜಿಪುಣನನ್ನು ದಾನದಿಂದ ಜಯಿಸಿ
ಕ್ರೋಧವನ್ನು ಅಕ್ರೋಧದಿಂದ ಜಯಿಸಿ
ಕೆಡಕನ್ನು ಒಳಿತಿನಿಂದ ಜಯಿಸಿ
ಲೋಭಿಯನ್ನು ದಾನದಿಂದ ಜಯಿಸಿ
ಮತ್ತು ಸುಳ್ಳುಗಾರನನ್ನು ಸತ್ಯದಿಂದ ಜಯಿಸಿ.
ದಾನವೇ ಅಭಯ
ಯಾವುದಕ್ಕಾಗಿ ಹೆದರಿ ಲೋಭಿಯು
ದಾನ ನೀಡದೆ ಹೋಗುವನೋ
ಅದೇ ಅಪಾಯ, ದಾನ
ನೀಡದೆ ಇರುವುದರಿಂದಾಗಿ
ಬರುವುದು.
ಜಿಪುಣರು ಸುಗತಿ ತಲುಪಲಾರರು
ಲೋಭಿಗಳು ಸ್ವರ್ಗಕ್ಕೆ ಹೋಗಲಾರರು
ದಾನವನ್ನು ಪ್ರಶಂಸಿಸದವರು ಮೂರ್ಖರು,
ಜ್ಞಾನಿಗಳು ದಾನದಲ್ಲೇ ಅನುಮೋದನೆ (ಆನಂದಿಸು)
ಮಾಡುವರು. ಅದರಿಂದಾಗಿಯೇ
ಮುಂದೆ ಪರಲೋಕದಲ್ಲಿಯೂ ಸುಖಿಸುವರು.
ಹಂಚಿಕೊಂಡು ಜೀವಿಸಿ
ದಾನದ ಮತ್ತು ಹಂಚಿಕೊಂಡು ಜೀವಿಸುವಿಕೆಯಲ್ಲೇ ನಾನು ಅರಿತಂತೆಯೇ, ಜೀವಿಗಳೂ ಅರಿತಿದ್ದರೆ ಅವರು ಹಂಚಿಕೊಂಡಲ್ಲದೆ ತಿನ್ನುತ್ತಿರಲಿಲ್ಲ. ಲೋಭದ ಕಲ್ಮಶವನ್ನು ಚಿತ್ತದಲ್ಲಿ ಉದಯಿಸಲು ಬಿಡುತ್ತಿರಲಿಲ್ಲ. ಯಾರಿಗಾದರೂ ಆಹಾರ ಬೇಕಾಗಿಯೇ ಇದ್ದರೆ ಅವರು ಕೊನೆಯ ತುತ್ತನ್ನೇ ಆಗಲಿ ಹಂಚಿ ತಿನ್ನುತ್ತಿದ್ದರು.
ನೀಡುವ ವಸ್ತುವಿಗಿಂತ ದಾನ ಹೃದಯ ಪ್ರಧಾನ
ಭಗವಾನರು ಒಮ್ಮೆ ಮಹಾಕರುಣೆಯಿಂದಾಗಿ ಪುಟ್ಟ ಬಡ ಬಾಲಕನು ನೀಡಿದ ಮುಷ್ಠಿ ಮಣ್ಣನ್ನು ಸ್ವೀಕರಿಸಿದರು. ಇದರಿಂದಾಗಿ ತಿಳಿಯುವುದು ಏನೆಂದರೆ ಏನು ನೀಡಿದರೋ ಅದು ಮುಖ್ಯವಲ್ಲ, ಬದಲಾಗಿ ದಾನ ಹೃದಯ ಅತ್ಯಂತ ಪ್ರಧಾನಕರ ವಿಷಯವಾಗಿದೆ. ಆ ಬಾಲಕನು ಮುಂದಿನ ಜನ್ಮದಲ್ಲಿ ಅಶೋಕ ಸಾಮ್ರಾಟನಾಗಿ ಹುಟ್ಟುತ್ತಾನೆ.
ಪುಣ್ಯ ಸಂಗ್ರಹ ಅಪಾರ ಸುಖಕರ
ಒಬ್ಬನು ಒಳ್ಳೆಯದನ್ನು ಮಾಡಿದರೆ
ಅದನ್ನು ಪುನಃ ಪುನಃ ಮಾಡಲಿ.
ಅದರಲ್ಲೇ ಆನಂದಿಸಲಿ. ಏಕೆಂದರೆ
ಪುಣ್ಯದ ಸಂಗ್ರಹದಿಂದಲೇ ಸುಖ ಉಂಟಾಗುತ್ತದೆ.
ಅತಿಯಾದ ಆನಂದಕರ
ಪುಣ್ಯ ಕಾರ್ಯ ಮಾಡಿರುವವನು ಇಲ್ಲಿಯೂ
ಆನಂದಿಸುತ್ತಾನೆ. ಮುಂದೆಯೂ ಆನಂದಿಸುತ್ತಾನೆ.
ಇಹಪರಗಳೆರಡರಲ್ಲೂ ಆನಂದಿಸುತ್ತಾನೆ. ತಾನು
ಮಾಡಿದ ಪುಣ್ಯಕಾರ್ಯಗಳನ್ನು ನೆನೆಯುತ್ತಾ
ಅವುಗಳಿಂದಾದ ವಿಶುದ್ಧಿಯನ್ನು ಗ್ರಹಿಸುತ್ತ
ಅತಿಯಾಗಿ ಆನಂದಿಸುತ್ತಾನೆ.
ಅಪಾರ ಕುಶಲ ಕಾರ್ಯಗಳನ್ನು ಮಾಡಬಹುದು
ಹೂವಿನ ರಾಶಿಯಿಂದ ಹೇಗೆ
ಅನೇಕ ಬಗೆಯ ಹಾರಗಳನ್ನು ಮಾಡಬಹುದೋ,
ಹಾಗೆಯೇ ಮರ್ತನು ಸಹಾ
ಮಾಡಬಹುದಾದ ಕುಶಲ ಕಾರ್ಯಗಳು ಅನೇಕ.
ಪಾಪವನ್ನು ಪುಣ್ಯದಿಂದ ಮುಚ್ಚು
ಯಾರು ತಾವು ಮಾಡಿದ ಪಾಪವನ್ನು
ತಾವು ಮಾಡಿದ ಪುಣ್ಯದಿಂದ ಮುಚ್ಚವರೋ
ಅಂತಹವರು ಮರೆಯಾಗಿರುವ ಚಂದ್ರ,
ಮೋಡ ಸರಿದಾಗ ಬೆಳಗುವಂತೆ ಈ
ಲೋಕಕ್ಕೆ ಪ್ರಕಾಶ ನೀಡುವರು.
ದಾನದಿಂದ ದೇವತೆಗಳ ಬಳಿಗೆ
ಸತ್ಯವನ್ನು ನುಡಿ,
ಕೋಪಕ್ಕೆ ವಶನಾಗಬೇಡ.
ಬೇಡಿದವನಿಗೆ ಸ್ವಲ್ಪವಾದರೂ ದಾನ ನೀಡು
ಈ ಮೂರರಿಂದ ಒಬ್ಬನು ದೇವತೆಗಳ ಬಳಿ ಹೋಗುವನು.
ಸ್ವಾರ್ಥವು ದಾನಿಗೆ ಮಲ
ದುಚ್ಚರಿತವು ಸ್ತ್ರೀಗೆ ಮಲ
ಸ್ವಾರ್ಥವು ದಾನಿಗೆ ಮಲ
ಎಲ್ಲಾ ಪಾಪ ಧಮ್ಮಗಳು ಇಹಪರಗಳೆರಡರಲ್ಲೂ ಮಲ.
ಈ ಲೋಕದಲ್ಲಿ ಯಾವುದು ಸುಖ?
ಈ ಲೋಕದಲ್ಲಿ ತಾಯಿಯ ಸೇವೆ ಸುಖ
ತಂದೆಯ ಸೇವೆ ಸುಖ
ಸಮಣರ ಸೇವೆ ಸುಖ
ಬ್ರಾಹ್ಮಣರ (ಶ್ರೇಷ್ಠರ) ಸೇವೆ ಸುಖ.
ಧಮ್ಮ ದಾನವೇ ಶ್ರೇಷ್ಠ
ಧಮ್ಮದಾನವು ಸರ್ವ ದಾನಗಳಿಗಿಂತ ಶ್ರೇಷ್ಠವು
ಧಮ್ಮರಸವು ಸರ್ವ ರಸಗಳಿಗಿಂತ ಶ್ರೇಷ್ಠವು
ಧಮ್ಮಾನಂದವು ಸರ್ವ ಆನಂದಗಳಿಗಿಂತ ಶ್ರೇಷ್ಠವು
ದಾಹದ ಕ್ಷಯದಿಂದಾಗಿಯೇ ಸರ್ವ ದುಃಖಗಳನ್ನು ಜಯಿಸಬಹುದು.
ದೇವಲೋಕಕ್ಕೆ ಹೆದ್ದಾರಿ
ಶ್ರದ್ಧೆ, ಪಾಪಲಜ್ಜೆ ಮತ್ತು
ದೋಷರಹಿತ ದಾನವನ್ನು
ವಿವೇಕಿಯು ಅನುಸರಿಸಿದರೆ ಅದೇ
ದಿವ್ಯತೆಗೆ ಮಾರ್ಗವಾಗಿದೆ. ಇದೇ
ದೇವಲೋಕಕ್ಕೆ ಹೆದ್ದಾರಿಯಾಗಿದೆ.
ಪುಣ್ಯಕಾಮಿ ದಾನ ನೀಡಲಿ
ಅಡುಗೆ ಮಾಡದ ಭಿಕ್ಷುಗಳು ಸಹಾ ಭೋಜನ ಪಡೆದು ಪರರಿಗೆ ದಾನ ನೀಡುತ್ತಾರೆ. ಅಡುಗೆ ಮಾಡುವವನಾಗಿದ್ದು, ಕೊಡದಿರುವುದು ಸರಿಯಲ್ಲ. ದಾನ ನೀಡದಿರುವುದಕ್ಕೆ ಸ್ವಾರ್ಥ ಮತ್ತು ಎಚ್ಚರಿಕೆಯ ಹೀನತೆಯೇ ಕಾರಣವಾಗಿದೆ. ಪುಣ್ಯವನ್ನು ಬಯಸುವವರು ದಾನ ನೀಡಲೇಬೇಕು.
ಲೋಭಿಯು ಮುಂದೆ ಪ್ರೇತವಾಗುವನು
ಯಾವ ಭಯಕ್ಕೆ ಹೆದರಿ ಲೋಭಿಯು ದಾನ ನೀಡಲು ನಿರಾಕರಿಸುತ್ತಾನೋ ಆತನಿಗೆ ಅಂತಹುದೇ ಭಯ ಉಂಟಾಗುತ್ತದೆ. ಸ್ವಾಥರ್ಿ ಯಾವ ಹಸಿವು ಮತ್ತು ದಾಹಕ್ಕೆ ಹೆದರುತ್ತಾನೋ ಅಂತಹ ದಡ್ಡನು ಪರಲೋಕದಲ್ಲಿ ಅವನ್ನೇ ಪಡೆಯುತ್ತಾನೆ.
ಸ್ವಾರ್ಥವೇ ದಾನಕ್ಕೆ ಶತ್ರು
ಸ್ವಾರ್ಥವನ್ನು ಶಮನಗೊಳಿಸು. ಸ್ವಾರ್ಥವನ್ನು ನಾಶಮಾಡುವಂತಹ ದಾನ ನೀಡುವಂತಾಗು ಪುಣ್ಯವೇ ಪರಲೋಕದಲ್ಲಿ ಸಹಕಾರಿ.
ಇಲ್ಲದಿರುವಾಗಲು ದಾನ ನೀಡಿದವನೇ ಶ್ರೇಷ್ಠ
ಕೆಲವರಲ್ಲಿ ಅಲ್ಪವಾಗಿ ಇದ್ದರೂ ದಾನ ನೀಡುತ್ತಾರೆ. ಇನ್ನೂ ಕೆಲವರಲ್ಲಿ ಬಹಳಷ್ಟು ಇದ್ದರೂ ದಾನ ಮಾಡುವುದಿಲ್ಲ. ಅಲ್ಪವಾಗಿ ಇದ್ದರೂ ದಾನ ಮಾಡುವವನನ್ನು ಸಹಸ್ರದಾನಿಗೆ ಸಮ ಎನ್ನುತ್ತಾರೆ. ಅಂತಹವವನ್ನು ಸಾವಿರಾರು ಯಜ್ಞ ಮಾಡಿದವರು ಸಮಬರಲಾರರು.
ಯಜ್ಞಕ್ಕಿಂತ ದಾನ ಲೇಸು
ಕೆಲವರು ಪಾಪಕೃತ್ಯದಲ್ಲಿ ತೊಡಗಿ, ಹೊಡೆದು ಹಿಂಸೆಮಾಡಿ, ಪರರನ್ನು ದುಃಖದಲ್ಲಿ ದೂಡಿ, ಯಜ್ಞ ಮಾಡುತ್ತಾರೆ. ಆ ದಕ್ಷಣೆಯು ಆಶ್ರುಮುಖದಿಂದ ದಂಡನೆಯಿಂದ ಕೂಡಿರುತ್ತದೆ, ಅದು ದಾನಕ್ಕೆ ಸಮವಲ್ಲ. ಈ ರೀತಿಯ ಯಜ್ಞಿಕರ ಲಕ್ಷ ಜನರು ದಾನಿಯನ್ನು ಸರಿಗಟ್ಟಲಾರರು.
ಯುದ್ಧ ವಿಜಯಿಗಿಂತ ದಾನಿಯ ಗಳಿಗೆ ಅಪಾರ
ದಾನ ಮತ್ತು ಯುದ್ಧ ಇವೆರಡು ಸಮಾನ ಎಂದು ಜ್ಞಾನಿಗಳು ಹೇಳುತ್ತಾರೆ. ಯುದ್ಧದಲ್ಲಿ ಧೀರರಾದ ಕೆಲವರು ಸಹಾ ಹಲವರನ್ನು ಗೆದ್ದುಬಿಡುತ್ತಾರೆ. ಗೆದ್ದು ಸರ್ವಭೋಗವನ್ನು ಪಡೆಯುತ್ತಾರೆ. ಆದರೆ ಶ್ರದ್ಧಾವಂತನು ಅಲ್ಪದಾನ ಮಾಡಿದ್ದರಿಂದಲೇ ಸುಗತಿಯನ್ನು ಪಡೆದು ಸರ್ವಸುಖಿಯಾಗುತ್ತಾನೆ.
ದಾನಿಗೆ ಮಹತ್ಫಲ
ವಿಚಾರಪೂರ್ವಕವಾಗಿ ನೀಡಲ್ಪಟ್ಟ ದಾನವನ್ನು ಸುಗತರು ಪ್ರಶಂಸಿದರು, ಈ ಲೋಕದಲ್ಲಿ ದಾನ ಯೋಗ್ಯರಿಗೆ ದಾನ ನೀಡಿದರೆ, ಫಲವತ್ತಾದೆಡೆ ಬೀಜವು ಫಲ ನೀಡುವಂತೆ ಮಹತ್ಫಲವು ಸಿಗುವುದು.
ದಾನಕ್ಕಿಂತ ಧಮ್ಮಪದ ಉತ್ತಮ
ಸಂದೇಹವಿಲ್ಲದೆ ದಾನ ಪ್ರಶಂಸೆಯು ಬಹಳ ನಡೆದಿದೆ. ದಾನಕ್ಕಿಂತಲೂ ಧಮ್ಮಪದವೇ ಶ್ರೇಷ್ಠ. ಏಕೆಂದರೆ ಹಿಂದೆ ಸಂತರು ಪ್ರಜ್ಞೆಯಿಂದಲೇ ನಿಬ್ಬಾಣವನ್ನು ಪಡೆದಿದ್ದಾರೆ.
ಒಟ್ಟಿನಲ್ಲಿ ದಾನ ನೀಡು
ಬಹಳವಾಗಿ ಇದ್ದರೆ ಜಾಸ್ತಿ ಕೊಡು. ಮಧ್ಯಮ ಪ್ರಮಾಣದಲ್ಲಿದ್ದರೆ ಅದಕ್ಕೆ ಅನುಗುಣವಾಗಿ ನೀಡು. ಅಲ್ಪವಿದ್ದರೆ ಕೊಂಚವೇ ನೀಡು, ನೀಡುವಂತಾಗು, ದಾನಿಯಾಗು, ಆದರೆ ಒಂಟಿಯಾಗಿಯೇ ತಿನ್ನುತ್ತ ಎಲ್ಲವನ್ನೂ ಅನುಭವಿಸಬೇಡ.
ಅತಿಥಿಗಳ ಮುಂದೆ ಒಬ್ಬನೆ ತಿನ್ನದಿರಲಿ
ನಾನಾ ಯಜ್ಞಗಳಿಗಿಂತ ದಾನವೇ ಅತ್ಯುತ್ತಮ. ಅತಿಥಿಯಿರುವಾಗ ಒಬ್ಬನೇ ತಿನ್ನುವುದು ಸರಿಯಲ್ಲ, ಅದರಿಂದ ಸುಖವು ಸಿಗುವುದಿಲ್ಲ.
ಸ್ವಾರ್ಥವು ದುರ್ಗತಿಗೆ ಮೂಲ
ಜಿಪುಣರು, ಸ್ವಾಥರ್ಿಗಳು ಮತ್ತು ಶ್ರಮಣ ಬ್ರಾಹ್ಮಣರನ್ನು ಅಪಹಾಸ್ಯ ಮಾಡುವವರು ಸಾವಿನ ನಂತರ ನರಕಕ್ಕೆ ಹೋಗುವರು.
ಸುಗತಿಯನ್ನು ಬಯಸುವೆಯಾದರೆ ದಾನ ನೀಡು
ಸುಗತಿಯನ್ನು ಬಯಸುವವರು ಧಮರ್ಾಚಾರಣೆ ಮಾಡುತ್ತಾರೆ, ಸಂಯಮಿಗಳಾಗಿರುತ್ತಾರೆ, ದಾನ ಮಾಡುತ್ತಾರೆ, ಸಾವಿನ ನಂತರ ಸುಗತಿಯು ಪಡೆಯುತ್ತಾರೆ.
ಸ್ವಾರ್ಥಯುತರು ಅಧಮರೇ ಆಗಿದ್ದಾರೆ
ಸ್ತ್ರೀಪಾತುಕರು, ಪರಸ್ತ್ರೀ ಗಮನವನ್ನು ಮಾಡುವವರು, ಸತ್ಪುರುಷರ ನಿಂದೆ ಮಾಡುವವರು, ಮಿತ್ರ ದ್ರೋಹಿಗಳು ಮತ್ತು ಸ್ವಾರ್ಥಯುತ ಲೋಭಿಗಳು ಇವರೆಲ್ಲಾ ಅಧಮರಾಗಿದ್ದಾರೆ. ನಾನು ಮಾತ್ರ ದಾನ ನೀಡದೆ ನೀರನ್ನು ಕುಡಿಯಲಾರೆ. - ಬೋಧಿಸತ
No comments:
Post a Comment